
ಬೆಂಗಳೂರು (ಜೂ.02): ತಮಿಳು ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಈ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆಯಿಂದ ಉದ್ಭವಿಸಿದ ಹಿನ್ನೆಲೆಯಲ್ಲಿ ಅವರ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡುವುದನ್ನು ತಡೆಯುವಂತೆ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡ ಚಿತ್ರರಂಗದಿಂದ ನಿರ್ಣಯ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲಿಯೇ ತಮ್ಮ ಸಿನಿಮಾ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಯಾವುದೇ ವಿರೋಧ ಬಾರದಂತೆ ಕಾನೂನು ಆಶ್ರಯ ನೀಡುವಂತೆ ನಟ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇತ್ತೀಚೆಗೆ ಥಗ್ ಲೈಫ್ ಸಿನಿಮಾ ಈವೆಂಟ್‌ನಲ್ಲಿ ಭಾಗವಹಿಸಿದ್ದ ನಟ ಕಮಲ್ ಹಾಸನ್ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿಗೆ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಭಾರೀ ವಿವಾದ ಸೃಷ್ಟಿಯಾಗಿದೆ. ಈ ಬಗ್ಗೆ ಯಾವುದೇ ಇತಿಹಾಸ ಇಲ್ಲದಿದ್ದರೂ ಪದೇ ಪದೇ ತಮಿಳು ಭಾಷೆಯನ್ನು ಎತ್ತಿ ಮೇಲೆ ಕಟ್ಟುವ ಕೆಲಸ ಮಾಡಲಾಗುತ್ತಿದೆ. ತಮಿಳು ಕನ್ನಡ ಭಾಷೆಗಳು ದ್ರಾವಿಡಿಯನ್ ಭಾಷೆಗಳಾಗಿದ್ದರೂ ಎರಡೂ ವಿಭಿನ್ನ ಶೈಲಿಗಳನ್ನು ಹೊಂದಿದ್ದು, ಸಂಪೂರ್ಣ ಬೇರೆ ಬೇರೆಯಾಗಿವೆ. ಆದರೆ, ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದಾಗ್ಯೂ ಕ್ಷಮೆ ಕೇಳದೇ ಮೊಂಡು ವಾದವನ್ನು ನಿಜವೆಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಹಿನ್ನೆಲೆಯಲಲ್ಲಿ ರಾಜ್ಯದಾದ್ಯಂತ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಇದೀಗ ಈ ನಟನ ಹೊಸ ಸಿನಿಮಾ ಥಗ್ ಲೈಫ್ ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ನಿಷೇಧ ಹೇರಿ ಕನ್ನಡ ಚಿತ್ರರಂಗ ಮತ್ತು ಕನ್ನಡಪರ ಸಂಘಟನೆಗಳು ನಿರ್ಣಯ ಕೈಗೊಂಡಿವೆ.
ಕಲಮ್ ಹಾಸನ್ ತಮ್ಮ ಸಿನಿಮಾಗೆ ಕನ್ನಡಿಗರಿಂದ ತೀವ್ರ ವಿರೋಧ ಉಂಟಾಗಿರುವ ಹಿನ್ನೆಲೆಯಲ್ಲಿ, ತಮ್ಮ ಹೊಸ ಸಿನಿಮಾ 'ಥಗ್ ಲೈಫ್' ಬಿಡುಗಡೆಗೆ ಕಾನೂನು ಆಶ್ರಯವನ್ನು ಕೋರಿ ನಟ ಕಮಲ್ ಹಾಸನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಿನಿಮಾ 2025ರ ಜೂನ್ 5ರಂದು ರಾಜ್ಯಾದ್ಯಾಂತ ಬಿಡುಗಡೆಯಾಗಬೇಕಿದ್ದು, ಈಗಾಗಲೇ ಕರ್ನಾಟಕದಲ್ಲಿ ಹಲವಾರು ಕನ್ನಡ ಪರ ಸಂಘಟನೆಗಳು ಚಿತ್ರ ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಚಿತ್ರಮಂದಿರದ ಎದುರು ಪ್ರತಿಭಟನೆಗಳು ನಡೆಯುತ್ತಿದ್ದು, ಚಿತ್ರ ಪ್ರದರ್ಶನ ತಡೆಗೆ ಆಗ್ರಹ ಜೋರಾಗಿದೆ.
ಈ ಹಿನ್ನೆಲೆಯಲ್ಲಿ, ತಮಿಳು ನಟ ಕಮಲ್ ಹಾಸನ್ ಅವರು ತಮ್ಮ ಸಂಸ್ಥೆ ರಾಜ್ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್‌ನ ಸಿಇಒ ಮೂಲಕ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಸಿನಿಮಾಗೆ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರ ಪ್ರದರ್ಶನವನ್ನು ತಡೆಯದಂತೆ ನಿಷೇಧಾಜ್ಞೆ ತಡೆಯಬೇಕು. ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲದಂತೆ ಮತ್ತು ಸೂಕ್ತ ಭದ್ರತೆ ಒದಗಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ನಟ ಕಮಲ್ ಹಾಸನ್ ಅರ್ಜಿಯ ಮುಖ್ಯಾಂಶಗಳು ಹೀಗಿವೆ:
ಈ ಅರ್ಜಿ ಈಗ ವಿಚಾರಣೆಗೆ ಬರಬೇಕಿದ್ದು, ಮುಂದಿನ ಕೆಲವು ದಿನಗಳಲ್ಲಿ ಈ ಸಂಬಂಧ ಹೈಕೋರ್ಟ್ ತೀರ್ಪು ನಿರ್ಣಾಯಕವಾಗಲಿದೆ. ಒಂದು ಕಡೆ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ, ಮತ್ತೊಂದೆಡೆ ಕನ್ನಡ ಭಾಷಾ ಅಭಿಮಾನಿಗಳ ವಿರೋಧ ಮತ್ತು ಹೋರಾಟ ಮುಂದುವರಿದಿದೆ.
ಈ ವಿವಾದದಿಂದಾಗಿ 'ಥಗ್ ಲೈಫ್' ಬಿಡುಗಡೆಕ್ಕೆ ಕರ್ನಾಟಕದಲ್ಲಿ ಅನುಮತಿ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ಮುಂದಿನ ನ್ಯಾಯಾಲಯದ ತೀರ್ಪು ನಿರ್ಧರಿಸಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.