ಭಾರತದ ನಟ ದೇವ್‌ ಜೋಶಿ ಸೇರಿ 8 ಕಲಾವಿದರಿಗೆ ಉಚಿತ ಚಂದ್ರ ಪ್ರವಾಸ..!

By Kannadaprabha News  |  First Published Dec 10, 2022, 12:02 PM IST

600 ಕೋಟಿ ಕೊಟ್ಟು ಕಳೆದ ವರ್ಷ ರಷ್ಯಾ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದ ಉದ್ಯಮಿ ಯುಸಾಕು ಈಗ ಚಂದ್ರನ ಸುತ್ತ 6 ದಿನ ಸುತ್ತಿ ಬರಲು ಯೋಜನೆ ಹೂಡಿದ್ದಾರೆ. ಇದಕ್ಕಾಗಿ ವಿವಿಧ ಕ್ಷೇತ್ರದ 8 ಮಂದಿ ಆಯ್ಕೆ ಮಾಡಿದ್ದು, ಎಲಾನ್‌ ಮಸ್ಕ್‌ ಅವರ ಸ್ಪೇಸ್‌ಎಕ್ಸ್‌ ರಾಕೆಟ್‌ನಲ್ಲಿ ಮುಂದಿನ ವರ್ಷ ಚಂದ್ರನ ಬಳಿಗೆ ಯಾತ್ರೆ ಹೊರಡಲಿದೆ. 


ನವದೆಹಲಿ: ನವದೆಹಲಿ: ಚಂದ್ರನ (Moon) ಸುತ್ತ ‘ಡಿಯರ್‌ ಮೂನ್‌’ (dear Moon) ಹೆಸರಿನಲ್ಲಿ ಬಾಹ್ಯಾಕಾಶ ಪ್ರವಾಸ ನಡೆಸಲು ಜಪಾನಿ ಕೋಟ್ಯಧೀಶರೊಬ್ಬರು ಸಜ್ಜಾಗಿದ್ದು, ಇದರಲ್ಲಿ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿರುವ 8 ಜನರನ್ನು ತಮ್ಮೊಟ್ಟಿಗೆ ಉಚಿತವಾಗಿ ಕರೆದೊಯ್ಯಲು ಆಯ್ಕೆ ಮಾಡಿಕೊಂಡಿದ್ದಾರೆ. ಇವರಲ್ಲಿ ಭಾರತೀಯ ನಟ (Indian Actor) ದೇವ್‌ ಜೋಶಿ (Dev Joshi) ಕೂಡ ಒಬ್ಬರು ಎಂಬುದು ವಿಶೇಷ. ಎಲಾನ್‌ ಮಸ್ಕ್‌ (Elon Musk) ಅವರ ಸ್ಪೇಸ್‌ಎಕ್ಸ್‌ ರಾಕೆಟ್‌ನಲ್ಲಿ (Space X Rocket) ಚಂದ್ರನ ಸುತ್ತ 6 ದಿನದ ಪ್ರವಾಸ ನಡೆಸಲು ಜಪಾನಿನ ಕೋಟ್ಯಧೀಶ ಯುಸಾಕು ಮೇಜಾವಾ (Yusaku Maezawa) ಮುಂದಾಗಿದ್ದಾರೆ. ಅವರು ದೇವ್‌ ಜೋಶಿ ಸೇರಿ ತಮ್ಮ 8 ಸಹ ಪ್ರಯಾಣಿಕರ ಹೆಸರನ್ನು ಶುಕ್ರವಾರ ಪ್ರಕಟಿಸಿದ್ದಾರೆ. ಮುಂದಿನ ವರ್ಷ ಯಾತ್ರೆ ನಡೆಯುವ ನಿರೀಕ್ಷೆಯಿದೆ.

ದೇವ್‌ ಜೋಶಿ ಹೊರತುಪಡಿಸಿದರೆ ಅಮೆರಿಕದ ಡಿಜೆ ಹಾಗೂ ನಿರ್ಮಾಪಕ ಸ್ಟೀವ್‌ ಔಕೆ, ಅಮೆರಿಕದ ಯುಟ್ಯೂಬರ್‌ ಟಿಮ್‌ ದೊಡ್‌, ಚೆಕ್‌ ಗಣರಾಜ್ಯದ ಕಲಾವಿದ ಯೇಮಿ ಎಡಿ, ಐರ್ಲೆಂಡಿನ ಫೋಟೋಗ್ರಾಫರ್‌ ರೊಯಾನ್ನನ್‌ ಆಡಮ್‌, ಬ್ರಿಟನ್‌ ಫೋಟೋಗ್ರಾಫರ್‌ ಕರೀಮ್‌ ಇಳಿಯಾ, ಅಮೆರಿಕನ್‌ ಚಿತ್ರ ನಿರ್ದೇಶಕ ಬ್ರೆಡ್ನಾನ್‌ ಹಾಲ್‌, ದಕ್ಷಿಣ ಕೊರಿಯಾದ ಕೆ-ಪಾಪ್‌ ಹಾಡುಗಾರ ಟೊಪ್‌ ಅವರು ಚಂದ್ರನ ಸುತ್ತ ಯಾತ್ರೆ ಕೈಗೊಳ್ಳಲಿರುವ ಇತರರು.

Tap to resize

Latest Videos

undefined

ಇದನ್ನು ಓದಿ: Artemis mission: 50 ವರ್ಷ ಬಳಿಕ ಮತ್ತೆ ಚಂದ್ರಯಾನದ ಕನಸಿಗೆ ಅಮೆರಿಕದ ನಾಸಾ ಯಶಸ್ವಿ ಮುನ್ನುಡಿ

ದೇವ್‌ ಜೋಶಿ ಅವರು ‘ಬಾಲ್‌ವೀರ್‌’ ಎಂಬ ಚಿಕ್ಕಮಕ್ಕಳ ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದರು.

ಡಿಯರ್‌ ಮೂನ್‌ ಮಿಷನ್‌:
ಈ ಮಿಷನ್‌ ಹೆಸರನ್ನು ‘ಡಿಯರ್‌ ಮೂನ್‌’ ಎಂದು ಕರೆಯಲಾಗಿದ್ದು, 2018ರಿಂದಲೂ ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ. ಮೇಜಾವಾ ತಮ್ಮ ಮೊಟ್ಟಮೊದಲ ಚಂದ್ರನ ಪ್ರವಾಸಕ್ಕಾಗಿ ಬಾಹ್ಯಾಕಾಶ ನೌಕೆಯ ಎಲ್ಲ ಸೀಟುಗಳನ್ನು ಖರೀದಿಸಿದ್ದಾರೆ.

ಇದನ್ನೂ ಓದಿ: Moon ಸೃಷ್ಟಿಯಾಗಿದ್ದು ಕೆಲವೇ ಗಂಟೆಗಳಲ್ಲಿ..! ಚಂದ್ರನ ಸೃಷ್ಟಿ ಕುರಿತು ಹೊಸ ವಾದ

ಮೊದಲು ಮೇಜಾವಾ ಮೊದಲು 6 ಕಲಾವಿದರೊಂದಿಗೆ ಚಂದ್ರನ ಸುತ್ತ ಪ್ರಯಾಣ ನಡೆಸಲು ಯೋಚಿಸಿದ್ದರು. ಬಳಿಕ ಅವರು ಆನ್‌ಲೈನ್‌ನಲ್ಲಿ ಸ್ಪರ್ಧೆ ಆಯೋಜಿಸಿ ಅದರಲ್ಲಿ ಆಯ್ದ ಕಲಾವಿದರನ್ನು ಮಾತ್ರ ತಮ್ಮೊಂದಿಗೆ ಚಂದ್ರನಲ್ಲಿ ಕರೆದೊಯ್ಯಲು ನಿರ್ಧರಿಸಿದರು. 10 ಲಕ್ಷಕ್ಕಿಂತಲೂ ಹೆಚ್ಚು ಕಲಾವಿದರು ಚಂದ್ರನ ಸುತ್ತ ಪ್ರವಾಸಕ್ಕೆ ಹೋಗಲು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಕೊನೆಗೆ 10 ಜನರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಅಂತರಿಕ್ಷಕ್ಕೆ 8 ಕಲಾವಿದರನ್ನು ಅವರು ತಮ್ಮೊಟ್ಟಿಗೆ ಕರೆದೊಯ್ಯಲಿದ್ದು, ಇತರ ಇಬ್ಬರಾದ ಅಮೆರಿಕದ ಸ್ನೋಬೋರ್ಡರ್‌ ಕೈಟ್ಲಿಯನ್‌ ಫೆರ್ರಿಂಗ್ಟನ್‌ ಹಾಗೂ ಜಪಾನಿನ ನರ್ತಕಿಯೊಬ್ಬರನ್ನು ಬ್ಯಾಕ್‌ಅಪ್‌ ಆಗಿ ಇಡಲಾಗಿದೆ. ಇವರೆಲ್ಲ ಪ್ರವಾಸ ಮುಗಿಸಿ ಬಂದ ಬಳಿಕ ತಮ್ಮ ಅನುಭವಗಳನ್ನು ವಿಶ್ವಾದ್ಯಂತ ಹಂಚಿಕೊಳ್ಳಲಿದ್ದಾರೆ.

6 ದಿನದ ಪ್ರವಾಸ:
ಡಿಯರ್‌ ಮೂನ್‌ 6 ದಿನಗಳ ಪ್ರವಾಸವಾಗಿದ್ದು, ಇದರಲ್ಲಿ ಚಂದ್ರನ ಮೇಲೆ ಇಳಿಯದೇ ಅದರ ಸುತ್ತಲೂ ಪ್ರಯಾಣ ನಡೆಯಲಿದೆ. ಮಸ್ಕ್ ಕಂಪನಿ ಸ್ಪೇಸ್‌ಎಕ್ಸ್‌ ರಾಕೆಟ್‌ ಆಗಿರುವ ಸ್ಟಾರ್‌ಶಿಪ್‌ ಅನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಇದರ ಪರೀಕ್ಷಾರ್ಥ ಹಾರಾಟಗಳು ಈಗಾಗಲೇ ಯಶಸ್ವಿಗೊಂಡಿದ್ದು, 2022ರ ಕೊನೆಯಲ್ಲಿ ರಾಕೆಟ್‌ ಸಂಪೂರ್ಣವಾಗಿ ಸಿದ್ಧವಾಗಲಿದೆ. ಮುಂದಿನ ವರ್ಷ ಯಾತ್ರೆ ನಡೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ: Special 3 Circle: ಚಂದ್ರನಲ್ಲಿ ಇನ್ಮುಂದೆ ಬೆಳೆಯಲಿದೆ ತರಕಾರಿ ಹಣ್ಣು, ಹಂಪಲು!

ಬಾಹ್ಯಾಕಾಶ ಯಾನದಲ್ಲಿ ಅತೀವ ಆಸಕ್ತಿ ಹೊಂದಿದ ಉದ್ಯಮಿ ಮೇಜಾವಾ ಕಳೆದ ವರ್ಷ ಸುಮಾರು 600 ಕೋಟಿ ರೂ. ತೆತ್ತು ರಷ್ಯಾದ ಸೋಯುಜ್‌ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು.

ಮಾನವೀಯತೆಯ ಒಳಿತಿಗಾಗಿ:
ತಮ್ಮ ಸಹಪ್ರಯಾಣಿಕರ ಹೆಸರನ್ನು ಘೋಷಿಸಿದ ಬಳಿಕ ಮೇಜಾವಾ ‘ಆಯ್ಕೆಯಾದ ಪ್ರತಿಯೊಬ್ಬರೂ ಭೂಮಿಯನ್ನು ಬಿಟ್ಟು ಚಂದ್ರನಲ್ಲಿ ಹೋಗಿ ಮತ್ತೆ ಮರಳುವ ಜವಾಬ್ದಾರಿಯನ್ನು ಅರಿತುಕೊಂಡಿದ್ದಾರೆ ಎಂದು ನಂಬುತ್ತೇನೆ. ಈ ಪ್ರವಾಸದೊಂದಿಗೆ ನಿಮಗೆ ಸಾಕಷ್ಟು ಹೊಸ ಅನುಭವ ಸಿಗಲಿದ್ದು, ಈ ಅನುಭವವನ್ನು ನೀವು ಭೂಮಿ ಹಾಗೂ ಮಾನವೀಯತೆಯ ಒಳಿತಿಗಾಗಿ ಬಳಸಿಕೊಳ್ಳುತ್ತೀರಿ ಎಂದು ನಿರೀಕ್ಷಿಸುತ್ತೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇದು ಚಂದ್ರನ ಈವರೆಗಿನ ಅತ್ಯಂತ ಸ್ಪಷ್ಟ ಚಿತ್ರ, ಒಂದು ಚಿತ್ರಕ್ಕಾಗಿ ಎರಡು ವರ್ಷ ಶ್ರಮ!

click me!