ತೆಲುಗು ನಟ ರಾಣಾ ದಾಗ್ಗುಬಾಟಿ, ವೆಂಕಟೇಶ್ ದಾಗ್ಗುಬಾಟಿ ವಿರುದ್ಧ ಕೇಸ್‌

By Anusha Kb  |  First Published Jan 13, 2025, 2:21 PM IST

ಹೈದರಾಬಾದ್‌ನ ಫಿಲ್ಮ್ ನಗರದ ಡೆಕ್ಕನ್ ಕಿಚನ್ ಹೋಟೆಲ್ ಅಕ್ರಮ ಧ್ವಂಸದ ಆರೋಪದ ಮೇಲೆ ತೆಲುಗು ನಟರಾದ ರಾಣಾ ದಾಗ್ಗುಬಾಟಿ ಮತ್ತು ವೆಂಕಟೇಶ್ ದಾಗ್ಗುಬಾಟಿ ವಿರುದ್ಧ ಪ್ರಕರಣ ದಾಖಲಾಗಿದೆ. 


ದೃಶ್ಯಂ ನಟ ವೆಂಕಟೇಶ್ ದಗ್ಗುಬಾಟಿ ಹಾಗೂ ಅವರ ಸೋದರಳಿಯ ರಾಣಾ ದಾಗ್ಗುಬಾಟಿ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈದರಾಬಾದ್‌ನ ಫಿಲ್ಮ್ ನಗರದಲ್ಲಿರುವ ಡೆಕ್ಕನ್ ಕಿಚನ್ ಹೋಟೆಲ್ ಅನ್ನು ಅಕ್ರಮವಾಗಿ ಕೆಡವಿದ ಆರೋಪದ ಮೇಲೆ ಪ್ರಮುಖ ತೆಲುಗು ನಟರಾದ ವೆಂಕಟೇಶ್ ದಗ್ಗುಬಾಟಿ ಮತ್ತು ರಾಣಾ ದಗ್ಗುಬಾಟಿ ವಿರುದ್ಧ ಕೇಸು ದಾಖಲಾಗಿದೆ. ಆಂಗ್ಲ ಮಾಧ್ಯಮವೊಂದರ ವರದಿಯ ಪ್ರಕಾರ, ರಾಣಾ ದಾಗ್ಗುಬಾಟಿ,  ವೆಂಕಟೇಶ್ ದಗ್ಗುಬಾಟಿ ಮಾತ್ರವಲ್ಲದೇ ದಗ್ಗುಬಾಟಿ ಕುಟುಂಬದ ಇತರ ಇಬ್ಬರು ಸದಸ್ಯರು ಕೂಡ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಸ್ಥಳೀಯ ನ್ಯಾಯಾಲಯದ ನಿರ್ದೇಶನದಂತೆ ಕೇಸ್ ದಾಖಲಾಗಿದ್ದು, ಕುಟುಂಬದ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಕೋರ್ಟ್ ಆದೇಶಿಸಿತ್ತು.

ಜನವರಿ 2024 ರಲ್ಲಿ ಹೈದರಾಬಾದ್‌ನ ಫಿಲಂ ನಗರದಲ್ಲಿರುವ ಡೆಕ್ಕನ್ ಕಿಚನ್ ಹೋಟೆಲ್‌ನ್ನು ಧ್ವಂಸಗೊಳಿಸಲಾಗಿತ್ತು. ಈ ಆಸ್ತಿಯನ್ನು ನಂದ ಕುಮಾರ್ ಎಂಬ ವ್ಯಕ್ತಿಗೆ ಗುತ್ತಿಗೆ ನೀಡಲಾಗಿತ್ತು ಎಂದು ವರದಿಯಾಗಿದ್ದು, ಅವರು ಸಿಟಿ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೋರ್ಟ್‌ನ ಅಸ್ತಿತ್ವದಲ್ಲಿರುವ ತಡೆಯಾಜ್ಞೆಯ ಹೊರತಾಗಿಯೂ ಮತ್ತು ತೆಲಂಗಾಣ ಹೈಕೋರ್ಟ್‌ನ ಆದೇಶಗಳಿಗೆ ವಿರುದ್ಧವಾಗಿ ಡೆಕ್ಕನ್ ಕಿಚನ್ ಹೋಟೆಲನ್ನು ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿ ನಂದಕುಮಾರ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಹೊಟೇಲ್ ಕೆಡವಿದ್ದರಿಂದ  ತನಗೆ 20 ಕೋಟಿ ರೂ. ಆರ್ಥಿಕ ನಷ್ಟವಾಗಿದೆ ಎಂದು ನಂದ ಕುಮಾರ್ ಹೇಳಿಕೊಂಡಿದ್ದರು. ನಂದ ಕುಮಾರ್ ಅವರ ದೂರಿನ ಮೇರೆಗೆ ಸ್ಥಳೀಯ ನ್ಯಾಯಾಲಯವು ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

Tap to resize

Latest Videos

ಈ ದೂರು ದಾಖಲಿಸಿರುವ ನಂದ ಕುಮಾರ್ ಅವರಿಗೆ ಕಾನೂನು ವಿವಾದಗಳು ಹೊಸತೇನಲ್ಲ. 2022 ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ (ಈಗ ಭಾರತ ರಾಷ್ಟ್ರ ಸಮಿತಿ) ಶಾಸಕರನ್ನು ಕುದುರೆ ವ್ಯಾಪಾರ ಮಾಡಿದ ಆರೋಪದಲ್ಲಿ ಅವರು ಈ ಹಿಂದೆ ಭಾಗಿಯಾಗಿದ್ದರು. ಇದಕ್ಕೆ ಪ್ರತಿಯಾಗಿ 2022ರ ನವಂಬರ್‌ನಲ್ಲಿ ರಾಜಕೀಯ ಷಡ್ಯಂತ್ರವೋ ಏನೋ  ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ನಂದ ಕುಮಾರ್ ನಿರ್ಮಿಸಿದ ಡೆಕ್ಕನ್ ಕಿಚನ್ ಹೋಟೆಲ್‌ನ ಭಾಗ ಮತ್ತು ಅದಕ್ಕೆ ಅಂಟಿಕೊಂಡೆ ಇದ್ದ ಕೆಲ ಕಟ್ಟಡಗಳನ್ನು ಅನಧಿಕೃತ ಕಟ್ಟಡ ಎಂದು ತಿಳಿಸಿ ಕೆಡವಿ ಹಾಕಿತ್ತು. ಈ ಕ್ರಮದ ಬಗ್ಗೆ ವಿವರಣೆ ನೀಡುವಂತೆ ತೆಲಂಗಾಣ ಹೈಕೋರ್ಟ್ ಜುಲೈ 2023 ರಲ್ಲಿ  ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ವಿವರಣೆಯನ್ನು ಕೋರಿತು ಮತ್ತು ಈ ಆಸ್ತಿಯ ಮೇಲೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಾಗರಿಕ ಸಂಸ್ಥೆಗೆ ಆದೇಶಿಸಿತು. ಆದಾಗ್ಯೂ 2024ರ ಜನವರಿಯಲ್ಲಿ ಈ ಕಟ್ಟಡವನ್ನು ಸಂಪೂರ್ಣವಾಗಿ ಧ್ವಂಸ ಮಾಡಲಾಗಿದ್ದು, ದಗ್ಗುಬಾಟಿ ನಟರ ಕುಟುಂಬದ ಮೇಲೆ ಈ ಆರೋಪವಿದೆ. 

click me!