
ಹಾಲಿವುಡ್‌ನ ಖ್ಯಾತ ಹಾರರ್ ಸಿನಿಮಾ 'ದಿ ರಿಂಗ್'ನಲ್ಲಿ ಸಮರಾ ಮಾರ್ಗನ್ ಎಂಬ ಭಯಾನಕ ಪಾತ್ರದ ಮೂಲಕ ಜಗತ್ತನ್ನೇ ನಡುಗಿಸಿದ್ದ ನಟಿ ಡೇವಿ ಎಲಿಜಬೆತ್ ಚೇಸ್ (35) ಇಹಲೋಕ ತ್ಯಜಿಸಿದ್ದಾರೆ. ಬಾಲನಟಿಯಾಗಿ ಮಿಂಚಿದ್ದ ಈ ಅದ್ಭುತ ಪ್ರತಿಭೆಯ ಅಕಾಲಿಕ ಸಾವು ಸಿನಿಮಾ ಪ್ರಿಯರಲ್ಲಿ ತೀವ್ರ ಆಘಾತ ಮತ್ತು ಚರ್ಚೆಯನ್ನು ಮೂಡಿಸಿದೆ.
ಕೇವಲ 4ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ಡೇವಿ, 2002ರಲ್ಲಿ ಬಿಡುಗಡೆಯಾದ 'ದಿ ರಿಂಗ್' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು. ಕೇವಲ ಹದಿಹರೆಯದಲ್ಲೇ ಎಂಟಿವಿ ಮೂವಿ ಅವಾರ್ಡ್ ಪಡೆಯುವ ಮೂಲಕ ಹಾಲಿವುಡ್‌ನ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದರು. ಆದರೆ, ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಅಂದರೆ 2016ರಲ್ಲಿ ಅವರು ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದರು.
ನಟನೆಯಿಂದ ದೂರಾದ ನಂತರ ಡೇವಿ ಅವರ ಜೀವನ ಹಾದಿ ಬದಲಾಯಿತು. ವರದಿಗಳ ಪ್ರಕಾರ, 13ನೇ ವಯಸ್ಸಿನಿಂದಲೇ ಅವರು ಮಾದಕ ವ್ಯಸನಕ್ಕೆ ತುತ್ತಾಗಿದ್ದರು. ಈ ದೀರ್ಘಕಾಲದ ಚಟವು ಅವರ ಆರೋಗ್ಯ, ಆರ್ಥಿಕ ಸ್ಥಿತಿ ಮತ್ತು ವೈಯಕ್ತಿಕ ಜೀವನವನ್ನು ಹದಗೆಡಿಸಿತ್ತು. ಜೀವನದ ಕೊನೆಯ ದಿನಗಳಲ್ಲಿ ಅವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬ ಕಹಿ ಸತ್ಯವೂ ಈಗ ಬಯಲಾಗಿದೆ.
ಆರಂಭದಲ್ಲಿ ಡೇವಿ ಅವರು ಮೆನಿಂಜೈಟಿಸ್ ಅಥವಾ ಸೆಪ್ಸಿಸ್‌ನಿಂದ ಮೃತಪಟ್ಟಿದ್ದಾರೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದರು. ಆದರೆ, ಇತ್ತೀಚೆಗೆ ಬಿಡುಗಡೆಯಾದ ವೈದ್ಯಕೀಯ ಪರೀಕ್ಷೆಯ ಅಧಿಕೃತ ವರದಿಯ ಪ್ರಕಾರ, ಅವರ ಸಾವಿಗೆ ಏಡ್ಸ್‌ಗೆ (AIDS) ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳೇ ಕಾರಣ ಎಂದು ತಿಳಿದುಬಂದಿದೆ. ಕೇವಲ 35ನೇ ವಯಸ್ಸಿಗೆ ಪ್ರತಿಭಾವಂತ ಕಲಾವಿದೆಯೊಬ್ಬರು ಈ ರೀತಿ ಕಮರಿ ಹೋದದ್ದು ಹಾಲಿವುಡ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.