
ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಧುರಂಧರ್ 2'. ಈ ಹಿಂದೆ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ 'ಧುರಂಧರ್' ಚಿತ್ರದ ಎರಡನೇ ಭಾಗ ಇದಾಗಿದ್ದು, ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ಟ್ರೈಲರ್‌ಗೆ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಭಾಗಕ್ಕಿಂತಲೂ ದೊಡ್ಡ ಯಶಸ್ಸು ಗಳಿಸುವ ಎಲ್ಲ ಸೂಚನೆಗಳನ್ನು ಟ್ರೈಲರ್ ನೀಡಿದೆ. ಈ ಬಾರಿ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಸಿನಿಮಾ ತೆರೆಗೆ ಬರುತ್ತಿರುವುದರಿಂದ ಚಿತ್ರತಂಡ ದೊಡ್ಡ ಮಟ್ಟದ ಯಶಸ್ಸಿನ ನಿರೀಕ್ಷೆಯಲ್ಲಿದೆ.
ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಜಸ್‌ಕಿರತ್ ಸಿಂಗ್ ರಂಗಿ ಮತ್ತು ಹಂಸ ಎಂಬ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ 2026ರ ಮಾರ್ಚ್ 19 ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಅಚ್ಚರಿ ಅಂದ್ರೆ, ರಿಲೀಸ್‌ಗೆ ಇನ್ನೂ ಸಮಯವಿದ್ದರೂ, ಚಿತ್ರದ ಪೇಯ್ಡ್ ಪ್ರೀಮಿಯರ್‌ನ ಬರೋಬ್ಬರಿ ಎರಡು ಲಕ್ಷ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಈ ಮೂಲಕ 'ಧುರಂಧರ್ 2' ಬಿಡುಗಡೆಗೂ ಮುನ್ನವೇ 18 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ವರದಿಯಾಗಿದೆ.
ಹಿಂದಿ ಸಿನಿಮಾ ಇತಿಹಾಸದಲ್ಲೇ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾದ ಮೊದಲ ಭಾಗದ ನಂತರ ಬರುತ್ತಿರುವ 'ಧುರಂಧರ್ 2', ಸದ್ಯ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಾಗಿದೆ. ಟ್ರೈಲರ್‌ನಲ್ಲಿ ರಣವೀರ್ ಸಿಂಗ್ ಅವರ ಜಸ್‌ಕಿರತ್ ಸಿಂಗ್ ರಂಗಿ ಮತ್ತು ಹಂಸ ಎಂಬ ಎರಡು ಪಾತ್ರಗಳನ್ನು ಪರಿಚಯಿಸಲಾಗಿದೆ. ಚಿತ್ರದಲ್ಲಿ ಆರ್. ಮಾಧವನ್ ಅವರು ತಂತ್ರಗಾರಿಕೆಯ ಅಜಯ್ ಸನ್ಯಾಲ್ ಪಾತ್ರದಲ್ಲಿ, ಅರ್ಜುನ್ ರಾಂಪಾಲ್ ಐಎಸ್‌ಐ ಮೇಜರ್ ಇಕ್ಬಾಲ್ ಆಗಿ ಮತ್ತು ಸಂಜಯ್ ದತ್ ಎಸ್‌ಪಿ ಚೌಧರಿ ಅಸ್ಲಂ ಆಗಿ ಬಣ್ಣ ಹಚ್ಚಿದ್ದಾರೆ. ಭರ್ಜರಿ ಆ್ಯಕ್ಷನ್, ಖಡಕ್ ಡೈಲಾಗ್‌ಗಳು ಮತ್ತು ಸೀಟಿನ ತುದಿಯಲ್ಲಿ ಕೂರಿಸುವ ದೃಶ್ಯಗಳ ಮೂಲಕ ಇದೊಂದು ದೊಡ್ಡಮಟ್ಟದ ರಿವೇಂಜ್ ಸ್ಟೋರಿ ಎಂಬ ಸುಳಿವನ್ನು ಟ್ರೈಲರ್ ನೀಡಿದೆ.
ಜಸ್‌ಕಿರತ್ ಸಿಂಗ್ ರಂಗಿ ಎಂಬ ಮುಖ್ಯ ಪಾತ್ರ ಯಾವ ಪರಿಸ್ಥಿತಿಯಲ್ಲಿ ಹಂಸ ಅಲಿ ಮಸಾರಿ ಆಗಬೇಕಾಯಿತು? ಪಾಕಿಸ್ತಾನದಲ್ಲಿ ಭಾರತೀಯ ಗೂಢಚಾರನಾಗಿ ಕೆಲಸ ಮಾಡುವಾಗ ಆತನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದೇ ಈ ಚಿತ್ರದ ಕಥಾಹಂದರ. ಮೊದಲ ಭಾಗದಲ್ಲಿ ಪ್ರೇಕ್ಷಕರು ನೋಡಿದ್ದಕ್ಕಿಂತ ವಿಭಿನ್ನವಾಗಿ, ಹಂಸ ಅಲಿ ಮಸಾರಿಯ ಜೀವನದ ಇನ್ನೊಂದು ಮುಖವನ್ನು ಆ್ಯಕ್ಷನ್ ಮತ್ತು ಸಸ್ಪೆನ್ಸ್ ಮೂಲಕ ಕಟ್ಟಿಕೊಡಲಾಗಿದೆ.
ಧೈರ್ಯ, ಕಿಚ್ಚು ಮತ್ತು ಬದಲಾವಣೆಯ ಹಾದಿಯಲ್ಲಿ ಸಾಗುವ ಒಂದು ಸೇಡಿನ ಕಥೆಯನ್ನು ಟ್ರೈಲರ್ ಪರಿಚಯಿಸುತ್ತದೆ. ರಣವೀರ್ ಸಿಂಗ್ ಜೊತೆಗೆ ಅರ್ಜುನ್ ರಾಂಪಾಲ್, ಸಂಜಯ್ ದತ್, ಮಾಧವನ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ರಾಕೇಶ್ ಬೇಡಿ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. B62 ಸ್ಟುಡಿಯೋಸ್ ನಿರ್ಮಿಸಿ, ಜಿಯೋ ಸ್ಟುಡಿಯೋಸ್ ಅರ್ಪಿಸುತ್ತಿರುವ 'ಧುರಂಧರ್ 2' ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ನಿರ್ದೇಶಕ ಆದಿತ್ಯ ಧರ್ ಅವರೇ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಜ್ಯೋತಿ ದೇಶಪಾಂಡೆ, ಲೋಕೇಶ್ ಧರ್ ಮತ್ತು ಆದಿತ್ಯ ಧರ್ ಸೇರಿ ಈ ಮೆಗಾ ಮಾಸ್ ಆ್ಯಕ್ಷನ್ ಸ್ಪೈ ಥ್ರಿಲ್ಲರ್ ಅನ್ನು ನಿರ್ಮಿಸಿದ್ದಾರೆ. 2026ರ ಮಾರ್ಚ್ 19 ರಂದು ಈ ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.