ರೈಲ್ವೆ ಗುಮಾಸ್ತನಿಂದ ಆ್ಯಕ್ಷನ್‌ ಹೀರೋ ತನಕ: ಡಾ.ರಾಜ್‌ರ ‘ಗಂಧದ ಗುಡಿ’ರೀಮೇಕ್ ಮಾಡಿದ್ದ ಧರ್ಮೇಂದ್ರ

Published : Nov 25, 2025, 09:39 AM IST
Dharmendra

ಸಾರಾಂಶ

ಚಿತ್ರರಂಗಕ್ಕೆ ಬರುವ ಮುನ್ನ ರೈಲ್ವೆ ಇಲಾಖೆಯಲ್ಲಿ ಗುಮಾಸ್ತರಾಗುವ ಜೊತೆಗೆ ಬೇರೆ ಬೇರೆ ಕೆಲಸಗಳನ್ನು ಮಾಡಿದವರು ಧರ್ಮೇಂದ್ರ. ಫಿಲಂಫೇರ್‌ ಆಯೋಜಿಸಿದ್ದ ಪ್ರತಿಭಾನ್ವೇಷಣೆಯ ಸ್ಪರ್ಧಿಯಾಗಿ ಪಂಜಾಬಿನಿಂದ ಬಂದು ಸ್ಪರ್ಧೆಯಲ್ಲಿ ಗೆದ್ದವರು.

ಬೆಂಗಳೂರು (ನ.25): ಶಾಲಾ ಶಿಕ್ಷಕನ ಮಗ, ರೈಲ್ವೆ ಇಲಾಖೆಯ ಗುಮಾಸ್ತ, ಅಲ್ಲಿಂದ ಸಿನಿಮಾ ನಂಟು. ಮುಂದೆ ಬಾಲಿವುಡ್‌ನ ಮೊದಲ ಆ್ಯಕ್ಷನ್‌ ಹೀರೋ, ನಂತರ ಎರಡು ಬಾರಿ ಎಂಪಿ, ಎರಡು ಮದುವೆ ಆಗಿ 89 ವರ್ಷಕ್ಕೆ ಅಗಲಿದ, ತೆರೆ ಮೇಲೆ ಹೀಮ್ಯಾನ್‌ ಇಮೇಜಿನ ನಟ ಧರ್ಮೇಂದ್ರ ಅವರ ಪೂರ್ಣ ಹೆಸರು ಧರ್ಮೇಂದ್ರ ಕೇವಲ್‌ ಕೃಷ್ಣ ಡಿಯೋಲ್‌. ಪಂಜಾಬ್‌ನ ಲೂದಿಯಾನ ಜಿಲ್ಲೆಯ ನಸ್ರಾನಿ ಗ್ರಾಮದಲ್ಲಿ ಡಿಸೆಂಬರ್ 8, 1935 ರಂದು ಜನಿಸಿದ ಧರ್ಮೇಂದ್ರ ಅವರು ಶಾಲಾ ಶಿಕ್ಷಕರಾಗಿದ್ದ ಕೇವಲ್‌ ಕ್ರಿಶನ್‌ ಹಾಗೂ ಸತ್ವಂತ್‌ ಕೌರ್‌ ದಂಪತಿಯ ಆರು ಮಕ್ಕಳಲ್ಲಿ ಒಬ್ಬರು.

ಚಿತ್ರರಂಗಕ್ಕೆ ಬರುವ ಮುನ್ನ ರೈಲ್ವೆ ಇಲಾಖೆಯಲ್ಲಿ ಗುಮಾಸ್ತರಾಗುವ ಜೊತೆಗೆ ಬೇರೆ ಬೇರೆ ಕೆಲಸಗಳನ್ನು ಮಾಡಿದವರು ಧರ್ಮೇಂದ್ರ. ಫಿಲಂಫೇರ್‌ ಆಯೋಜಿಸಿದ್ದ ಪ್ರತಿಭಾನ್ವೇಷಣೆಯ ಸ್ಪರ್ಧಿಯಾಗಿ ಪಂಜಾಬಿನಿಂದ ಮುಂಬೈಗೆ ಬಂದು ಸ್ಪರ್ಧೆಯಲ್ಲಿ ಗೆದ್ದವರು. ಅಲ್ಲಿಂದ ಚಿತ್ರರಂಗದ ಗಮನ ಸೆಳೆದ ಧರ್ಮೇಂದ್ರಗೆ 2 ವರ್ಷದ ಬಳಿಕ ಸಿನಿಮಾದಲ್ಲಿ ನಟಿಸುವ ಅವಕಾಶ ಬಂತು. ಆ ಮೊದಲ ಅವಕಾಶದ ಹೆಸರೇ ‘ದಿಲ್‌ ಭಿ ತೇರಾ ಹಮ್‌ ಭಿ ತೇರೆ’ ಚಿತ್ರ. ಈ ಚಿತ್ರವು 1960ರಲ್ಲಿ ಸೆಟ್ಟೇರಿದ್ದು, ಅರ್ಜುನ್‌ ಹಿಂಗೋರಾನಿ ನಿರ್ದೇಶಕರು.

ತುಂಬಾ ನಿರೀಕ್ಷೆ, ಕನಸು ಕಟ್ಟಿಕೊಂಡು ಧರ್ಮೇಂದ್ರ ನಟಿಸಿದ ಮೊದಲ ಚಿತ್ರ ಬಾಕ್ಸ್‌ ಅಫೀಸ್‌ನಲ್ಲಿ ಮುಗ್ಗರಿಸಿತು. ಮೊದಲ ಹೆಜ್ಜೆಯಲ್ಲೇ ಸೋತ ವ್ಯಕ್ತಿಯೊಬ್ಬ ಮುಂದೆ ಬಾಲಿವುಡ್‌ ಬಹುಬೇಡಿಕೆಯ ನಟ ಆಗುತ್ತಾರೆ, ಆ್ಯಕ್ಷನ್‌ ಹೀರೋ ಆಗಿ ಬೆಳ್ಳಿತೆರೆಯ ಮೇಲೆ ರಾರಾಜಿಸುತ್ತಾರೆ ಎಂದು ಯಾರೂ ಊಹೆ ಮಾಡಿರಲಿಕ್ಕಿಲ್ಲ! ರಾಜೇಶ್‌ ಖನ್ನಾ, ಶಶಿ ಕಪೂರ್‌, ಜಿತೇಂದ್ರ ಸಾಲಿನಲ್ಲಿ ಬಾಲಿವುಡ್‌ಗೆ ಪ್ರವೇಶಿಸಿದ ಧರ್ಮೇಂದ್ರ. 60ರ ದಶಕದಲ್ಲಿ ನಟನೆ ಅಂಗಳಕ್ಕೆ ಬಂದು 70ರ ದಶಕದ ಹೊತ್ತಿಗೆ ಜನಪ್ರಿಯತೆಯ ಉತ್ತುಂಗಕ್ಕೇರಿ 300ಕ್ಕೂ ಹೆಚ್ಚು ಚಿತ್ರಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡವರು.

ಜನಪ್ರಿಯ ನಟರಾಗುವ ಹಾದಿಯಲ್ಲಿ ಫೂಲ್‌ ಔರ್‌ ಪತ್ತರ್‌, ಶೋಲೆ, ಧರಮ್‌ ವೀರ್‌, ದಿ ಬರ್ನಿಂಗ್‌ ಟ್ರೈನ್‌, ಜುಗುಲು, ಲೋಹ, ಮೇರಾ ಗಾಂವ್‌ ಮೇರಾ ದೇಶ್‌, ಮುಂತಾದ ಚಿತ್ರಗಳು ಧರ್ಮೇಂದ್ರ ಅವರಿಗೆ ಆ್ಯಕ್ಷನ್‌ ಇಮೇಜ್‌ ದಯಪಾಲಿಸಿದವರು. ‘ಶೋಲೆ’ ನಂತರ ಬಾಲಿವುಡ್‌ನ ಅತ್ಯಂತ ಬ್ಯುಸಿ ನಟರಾಗಿದ್ದ ಧರ್ಮೇಂದ್ರ ಅವರ ನಟನೆಯಲ್ಲಿ ವರ್ಷಕ್ಕೆ ಮೂರು- ನಾಲ್ಕು ಚಿತ್ರಗಳು ತೆರೆಗೆ ಬರುತ್ತಿದ್ದವು. ಕರ್ತವ್ಯ, ರಾಮ್‌ ಬಲರಾಮ್‌, ಆಲಿಬಾಬಾ ಚಾಲಿಸ್‌ ಚೋರ್‌, ಚುಪ್ಕೆ ಚುಪ್ಕೆ, ಡ್ರೀಮ್‌ ಗರ್ಲ್‌, ಅನುಪಮಾ, ಸತ್ಯಕಾಂ, ಶಾಲಿಮಾರ್‌, ಸೀತಾ ಔರ್‌ ಗೀತಾ, ರಾಜಾ ಜಾನಿ, ಸಮಾಧಿ, ಜುಗ್ನು, ಯಾದೋನ್‌ ಕಿ ಬಾರಾತ್‌ ಮುಂತಾದವು ಧರ್ಮೇಂದ್ರ ಅವರ ಕೀರ್ತಿಯನ್ನು ಎತ್ತರಿಸಿದ ಚಿತ್ರಗಳು.

ಗಂಧದ ಗುಡಿ ಚಿತ್ರದ ರೀಮೇಕ್‌

ವಿಶೇಷ ಎಂದರೆ ಧರ್ಮೇಂದ್ರ ಅವರ ‘ಕರ್ತವ್ಯ’ ಚಿತ್ರವು ಡಾ ರಾಜ್‌ಕುಮಾರ್‌ ಅವರ ‘ಗಂಧದ ಗುಡಿ’ ಚಿತ್ರದ ರೀಮೇಕ್‌. ‘ಶಾಲಿಮಾರ್‌’ ಚಿತ್ರವು ಆ ಕಾಲದಲ್ಲೇ ಬೆಂಗಳೂರಿನ ಅರಮನೆಯಲ್ಲಿ ಚಿತ್ರೀಕರಣಗೊಂಡ ಬಾಲಿವುಡ್‌ ಚಿತ್ರವಾಗಿತ್ತು. ಭಾರತ ಮತ್ತು ಅಮೆರಿಕದ ಎರಡು ಕಂಪನಿಗಳು ಜೊತೆಗೂಡಿ ನಿರ್ಮಿಸಿದ್ದ ಈ ಚಿತ್ರದಲ್ಲಿ ಘಟಾನುಘಟಿ ಕಲಾವಿದರೇ ನಟಿಸಿದ್ದರು. ಹಾಲಿವುಡ್‌ನ ನಟರು ಕೂಡ ಈ ಚಿತ್ರದಲ್ಲಿ ನಟಿಸಿದ್ದರು. ಇನ್ನೂ ಎಲ್ಲರಿಗೂ ಗೊತ್ತಿರುವಂತೆ ‘ಶೋಲೆ’ ಶೂಟಿಂಗ್‌ ಆಗಿದ್ದು ರಾಮನಗರ ಬೆಟ್ಟದಲ್ಲಿ. ಹೀಗೆ ಧರ್ಮೇಂದ್ರ ಅವರ ಜೀವನದ ಪ್ರಮುಖ ಮೂರು ಚಿತ್ರಗಳಿಗೆ ಕನ್ನಡದ ನೆಲದ ನಂಟು ಇದೆ.

1960ರಲ್ಲಿ ಚಿತ್ರರಂಗಕ್ಕೆ ಪ್ರವೇಶವಾಗಿ 1998ರ ವರೆಗೂ ನಾಯಕ ನಟರಾಗಿ ಬೆಳ್ಳಿಪರದೆ ಮೇಲೆ ಮಿಂಚಿದ ಧರ್ಮೇಂದ್ರ ‘ಪ್ಯಾರ್‌ ಕಿಯಾ ತೊ ಡರ್ನಾ ಕ್ಯಾ’ ಚಿತ್ರದ ಮೂಲಕ ಪೋಷಕ ಪಾತ್ರಗಳಿಗೆ ತಮ್ಮ ನಟನಾ ಪಯಣವನ್ನು ಬದಲಿಸಿಕೊಂಡರು. ಅಲ್ಲದೆ 90ರ ದಶಕದ ಹೊತ್ತಿಗೆ ಮತ್ತೊಂದು ತಲೆಮಾರು ಪ್ರವೇಶವಾಯಿತು. ಮೂವರು ಖಾನ್‌ಗಳು ಬಾಲಿವುಡ್‌ನ ಗಲ್ಲಾಪೆಟ್ಟಿಗೆಯನ್ನು ಆವರಿಸಿಕೊಳ್ಳುತ್ತಿರುವ ಹೊತ್ತಿಗೆ ಧರ್ಮೇಂದ್ರ ಅವರೊಳಗಿನ ನಟ, ಪೋಷಕ ಪಾತ್ರಗಳಿಗೆ ಮರಳಿದರು.

ಧರ್ಮೇಂದ್ರ ನಟನೆಯಲ್ಲಿ ತೆರೆಗೆ ಬಂದ ಕೊನೆಯ ಚಿತ್ರ ‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’. ಇನ್ನು ‘ಇಕ್ಕಿಸ್‌’ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ. 2012ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ನಟ ಧರ್ಮೇಂದ್ರ ಅವರನ್ನು ಗೌರವಿಸಲಾಗಿದೆ. ಆದರೆ, ಅವರ ನಟನೆಯನ್ನು ಗುರುತಿಸಿ ಯಾವುದೇ ಅತ್ಯುನ್ನದ ಗೌರವ- ಪ್ರಶಸ್ತಿಗಳು ಬಂದಿಲ್ಲ ಎಂಬುದು ವಿಪರ್ಯಾಸ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?