ಪವನ್ ಕಲ್ಯಾಣ್‌ಗೆ ಸಂಬಂಧಿಸಿ ಅಮೇಜಾನ್, ಗೂಗಲ್, ಮೆಟಾ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ!

Published : Jan 02, 2026, 08:11 PM IST
Pawan Kalyan

ಸಾರಾಂಶ

ದೆಹಲಿ ಹೈಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ವಿಚಾರಣೆಯನ್ನು 2026ರ ಫೆಬ್ರವರಿ 9 ಮತ್ತು ಮೇ 12ಕ್ಕೆ ನಿಗದಿಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಪವನ್ ಕಲ್ಯಾಣ್ ಅವರಿಗೆ ಜನವರಿ 22ರವರೆಗೆ ಕಾಲಾವಕಾಶ ನೀಡಲಾಗಿದೆ. ಮುಂದೆ..?

ನವದೆಹಲಿ: ಟಾಲಿವುಡ್‌ನ ‘ಪವರ್ ಸ್ಟಾರ್’ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಕೆ. ಪವನ್ ಕಲ್ಯಾಣ್ (Pawan Kalyan) ಈಗ ನ್ಯಾಯಾಂಗದ ಅಂಗಳದಲ್ಲಿ ತಮ್ಮ ‘ಹಕ್ಕಿನ’ ಸಮರಕ್ಕೆ ಇಳಿದಿದ್ದಾರೆ. ತಮ್ಮ ಅನುಮತಿ ಇಲ್ಲದೆ ತಮ್ಮ ಹೆಸರು, ಧ್ವನಿ, ಮುಖದ ಛಾಯೆ ಅಥವಾ ವ್ಯಕ್ತಿತ್ವದ ಯಾವುದೇ ಅಂಶಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದನ್ನು ತಡೆಯಲು ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಪವನ್ ಕಲ್ಯಾಣ್ ಅವರ ವ್ಯಕ್ತಿತ್ವದ ಹಕ್ಕುಗಳ (Personality Rights) ಉಲ್ಲಂಘನೆಯಾಗುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಏನಿದು 'ಪರ್ಸನಾಲಿಟಿ ರೈಟ್ಸ್' ಸಮರ?

ಸಿನೆಮಾ ತಾರೆಯರು ಅಥವಾ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳಿಗೆ ಅವರದೇ ಆದ ‘ಬ್ರಾಂಡ್ ಇಮೇಜ್’ ಇರುತ್ತದೆ. ಅವರ ಅನುಮತಿ ಇಲ್ಲದೆ ಅವರ ಹೆಸರನ್ನಾಗಲಿ ಅಥವಾ ಫೋಟೋವನ್ನಾಗಲಿ ವ್ಯಾಪಾರಕ್ಕೆ ಬಳಸಿ ಹಣ ಮಾಡುವುದು ಕಾನೂನುಬಾಹಿರ. ಪವನ್ ಕಲ್ಯಾಣ್ ಅವರು ಸಲ್ಲಿಸಿರುವ ಅರ್ಜಿಯ ಪ್ರಕಾರ, ಅನೇಕ ಕಂಪನಿಗಳು ಮತ್ತು ವ್ಯಕ್ತಿಗಳು ಅವರ ಹೆಸರನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ. "ಒಬ್ಬ ಸೆಲೆಬ್ರಿಟಿಯಾಗಿ ಅವರ ವೈಯಕ್ತಿಕ ಇಮೇಜ್ ಮತ್ತು ವೈಶಿಷ್ಟ್ಯಗಳ ಮೇಲೆ ಅವರಿಗೆ ಸಂಪೂರ್ಣ ಮಾಲೀಕತ್ವವಿದೆ. ಅದನ್ನು ಅವರ ಒಪ್ಪಿಗೆಯಿಲ್ಲದೆ ಬಳಸುವ ಯಾವುದೇ ಪ್ರಯತ್ನವು ಅವರ ಹಕ್ಕುಗಳ ಉಲ್ಲಂಘನೆಯಾಗುತ್ತದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಕೋರ್ಟ್ ಕಟಕಟೆಯಲ್ಲಿ ಟೆಕ್ ದೈತ್ಯರು!

ಪವನ್ ಕಲ್ಯಾಣ್ ಅವರು ನೀಡಿರುವ ದೂರಿನಲ್ಲಿ ಕೇವಲ ಸಣ್ಣಪುಟ್ಟ ಸಂಸ್ಥೆಗಳಲ್ಲದೆ, ಜಾಗತಿಕ ಮಟ್ಟದ ಟೆಕ್ ದೈತ್ಯರ ಹೆಸರುಗಳೂ ಇವೆ. ಅಮೇಜಾನ್ (Amazon), ಫ್ಲಿಪ್‌ಕಾರ್ಟ್ (Flipkart), ಮೀಶೋ (Meesho), ಗೂಗಲ್ (Google), ಮತ್ತು ಮೆಟಾ (Meta) ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಪವನ್ ಕಲ್ಯಾಣ್ ಅವರ ಫೋಟೋ ಇರುವ ಟೀ-ಶರ್ಟ್‌ಗಳು, ಗಿಫ್ಟ್ ಐಟಂಗಳು ಮತ್ತು ಇತರ ಉತ್ಪನ್ನಗಳನ್ನು ಈ ಇ-ಕಾಮರ್ಸ್ ವೇದಿಕೆಗಳಲ್ಲಿ ಕಾನೂನುಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ ಎಂಬುದು ಮುಖ್ಯ ಆರೋಪವಾಗಿದೆ.

ಎಐ (AI) ತಂತ್ರಜ್ಞಾನದ ದುರ್ಬಳಕೆ:

ಕೇವಲ ಫೋಟೋಗಳಷ್ಟೇ ಅಲ್ಲದೆ, ಆಧುನಿಕ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನವನ್ನು ಬಳಸಿ ಪವನ್ ಕಲ್ಯಾಣ್ ಅವರ ಧ್ವನಿ ಮತ್ತು ಮುಖವನ್ನು ಮ್ಯಾನಿಪ್ಯುಲೇಟ್ ಮಾಡಿ ವ್ಯಾಪಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ. ಕೆಲವು ವೆಬ್‌ಸೈಟ್‌ಗಳು ಅವರ ವ್ಯಕ್ತಿತ್ವದ ಅಂಶಗಳನ್ನು ತಮ್ಮ ಎಐ ಮಾಡೆಲ್‌ಗಳಲ್ಲಿ ಅಳವಡಿಸಿಕೊಂಡು ಹಣ ಮಾಡುತ್ತಿವೆ. ಇದು ಅವರ ಖಾಸಗಿತನಕ್ಕೆ ಮತ್ತು ಘನತೆಗೆ ಧಕ್ಕೆ ತರುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಾಲಯದ ಮುಂದಿನ ನಡೆ:

ದೆಹಲಿ ಹೈಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ವಿಚಾರಣೆಯನ್ನು 2026ರ ಫೆಬ್ರವರಿ 9 ಮತ್ತು ಮೇ 12ಕ್ಕೆ ನಿಗದಿಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಪವನ್ ಕಲ್ಯಾಣ್ ಅವರಿಗೆ ಜನವರಿ 22ರವರೆಗೆ ಕಾಲಾವಕಾಶ ನೀಡಲಾಗಿದೆ. ಅಲ್ಲದೆ, ಈ ಆದೇಶದಿಂದ ತೊಂದರೆಗೊಳಗಾದ ಸಣ್ಣ ವ್ಯಾಪಾರಿಗಳು ಅಥವಾ ವೆಬ್‌ಸೈಟ್‌ಗಳು ತಾವು ಇನ್ನು ಮುಂದೆ ಅಕ್ರಮವಾಗಿ ಪವನ್ ಅವರ ಹಕ್ಕುಗಳನ್ನು ಬಳಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಪ್ರಮಾಣ ಮಾಡಬೇಕಾಗುತ್ತದೆ. ಆ ಬಳಿಕವಷ್ಟೇ ನ್ಯಾಯಾಲಯ ಅವರಿಗೆ ಸಣ್ಣಪುಟ್ಟ ರಿಯಾಯಿತಿಗಳನ್ನು ನೀಡುವ ಬಗ್ಗೆ ಯೋಚಿಸಲಿದೆ.

Disclaimer (ಹಕ್ಕುತ್ಯಾಗ): ಈ ವರದಿಯು ಮೂರನೇ ವ್ಯಕ್ತಿಯ ಮೂಲಗಳು ನೀಡಿದ ಕಾನೂನು ವಿಚಾರಣೆಯ ಮಾಹಿತಿಯನ್ನು ಆಧರಿಸಿದೆ. ಇಲ್ಲಿರುವ ವಿವರಗಳು ಕೇವಲ ಆರೋಪಗಳಾಗಿದ್ದು, ನ್ಯಾಯಾಲಯದಿಂದ ಇನ್ನೂ ಅಂತಿಮ ತೀರ್ಪು ಬಂದಿಲ್ಲ.

ಪವನ್ ಕಲ್ಯಾಣ್ ಅವರ ಈ ಕಾನೂನು ಹೋರಾಟವು ಸದ್ಯ ಸಿನಿಮಾ ಮತ್ತು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಸೆಲೆಬ್ರಿಟಿಗಳ ಹಕ್ಕುಗಳ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚೀಪ್ ಗಿಮಿಕ್‌ ಮಾಡ್ತಿದ್ಯಾ ಬಾಲಿವುಡ್? ಭಯಬಿದ್ದು ಯಶ್ ಸಿನಿಮಾ ಬಗ್ಗೆ ಅಪಪ್ರಚಾರ ನಡಿತಿದೆಯಾ..?!
ಮತ್ತೊಂದು ಚಿತ್ರದಿಂದಲೂ ಔಟ್.. ವಿಜಯ್ ದೇವರಕೊಂಡ ಟೈಮ್ ಕೆಟ್ಟಿದ್ಯಾ? ಏನು ಆಟ ಆಡ್ತಿದೆ..?