ಮಲ್ಟಿಪ್ಲೆಕ್ಸ್​​ಗಳಲ್ಲಿ ಆಹಾರ ಬೆಲೆ ಇಳಿಕೆ; GST ದರ ಶೇಕಡ 18 ರಿಂದ 5ಕ್ಕೆ ಇಳಿಕೆ

By Shruthi KrishnaFirst Published Jul 12, 2023, 5:53 PM IST
Highlights

ಮಲ್ಟಿಪ್ಲೆಕ್ಸ್‌ಗಳಲ್ಲಿ ಆಹಾರ ಬೆಲೆ ಇಳಿಕೆಯಾಗಲಿದೆ. ಆಹಾರ ಮತ್ತು ಪಾನಿಯಗಳ ಮೇಲಿನ GST ದರವನ್ನು ಕೇಂದ್ರ ಸರ್ಕಾರ ಶೇಕಡ 18 ರಿಂದ 5ಕ್ಕೆ ಇಳಿಕೆ  ಮಾಡಿದೆ. 

ಚಿತ್ರಮಂದಿಗಳಿಗೆ ಜನರನ್ನು ಕರೆಸುವುದೇ ಒಂದು ದೊಡ್ಡ ಸಾಹಸ. ಇತ್ತೀಚಿನ ದಿನಗಳಲ್ಲಿ ಒಟಿಟಿಗಳ ಹವಾ, ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚಿದ ದರ ಸೇರಿದಂತೆ ಅನೇಕ ಕಾರಣಗಳಿಗೆ ಪ್ರೇಕ್ಷಕರು ಚಿತ್ರಮಂದಿರದ ಕಡೆ ಮುಖ ಮಾಡುತ್ತಿಲ್ಲ ಎನ್ನುವ ಚರ್ಚೆ ನಡೆಯುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚಿದ ದರದ ಬಗ್ಗೆ ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು ಜಿಎಸ್​ಟಿ ಕಡಿತ ಮಾಡುವ ಮೂಲಕ ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದೆ. ಇದರಿಂದ ಇನ್ಮುಂದೆ ಸಿನಿಮಾ ಹಾಲ್​ಗಳಲ್ಲಿ ತಿಂಡಿ-ತಿನಿಸು ಮತ್ತು ಪಾನೀಯಗಳ ಬೆಲೆ ತಗ್ಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿನ  ವ್ಯಾಪಾರ ವೃದ್ಧಿ ಆಗಲಿದೆ ಜೊತೆಗೆ  ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಹೊರೆ ಕಡಿಮೆ ಆಗಲಿದೆ. 

ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿಯ ಐವತ್ತನೇ ಸಭೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅನೇಕ ವಸ್ತುಗಳ ತೆರಿಗೆಯಲ್ಲಿ ಗಣನೀಯ ಇಳಿಕೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಜುಲೈ 11ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ.

Latest Videos

ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ಮತ್ತು ಪಾನೀಯದ ಬೆಲೆ ದುಬಾರಿ ಎಂಬ ದೂರು ಅನೇಕ ಸಮಯದಿಂದ ಕೇಳಿ ಬರುತ್ತಲೇ ಇತ್ತು. ಅದಕ್ಕೆ ಶೇಕಡ 18ರಷ್ಟು ಜಿಎಸ್​ಟಿ ಕೂಡ ಸೇರಿದ್ದರಿಂದ ಇನ್ನಷ್ಟು ದುಬಾರಿ ಆಗಿತ್ತು. ಇದು ಸಿನಿಮಾ ಪ್ರೇಕ್ಷಕರಿಗೆ ದೊಡ್ಡ ಹೊರೆಯಾಗಿತ್ತು. ಈಗ ಶೇಕಡ 5ಕ್ಕೆ ಜಿಎಸ್​ಟಿ ಇಳಿಕೆ ಆಗಿರುವುದರಿಂದ ಪಾಪ್​ ಕಾರ್ನ್​, ಕೂಲ್​ ಡಿಂಗ್ಸ್​ ಮುಂತಾದ ಪದಾರ್ಥಗಳ ಬೆಲೆ ತಗ್ಗಲಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಇದರಿಂದ ಅನುಕೂಲ ಆಗಲಿದೆ. ತೆರಿಗೆ ಪ್ರಮಾಣದಲ್ಲಿ ಇಳಿಕೆ ಆಗಿರುವುದನ್ನು ಮಲ್ಟಿಪ್ಲೆಕ್ಸ್‌ಗಳು ಸ್ವಾಗತಿಸಿವೆ.

ಮಲ್ಟಿಪ್ಲೆಕ್ಸ್‌ಗಳ ವ್ಯವಹಾರದ ಶೇಕಡ 35ರಷ್ಟು ಆದಾಯ ಬರುವುದೇ ತಿಂಡಿ ಮತ್ತು ಪಾನೀಯಗಳ ಮಾರಾಟದಿಂದ. ಆದರೆ ದುಬಾರಿ ಬೆಲೆ ಎಂಬ ಕಾರಣಕ್ಕೆ ಬಹುತೇಕ ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದರು. ಈಗ ತೆರಿಗೆ ಕಡಿತ ಆಗಿರುವುದರಿಂದ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಸ್ನೆಸ್​ ಹೆಚ್ಚುವ ಸೂಚನೆ ಸಿಕ್ಕಿದೆ. 2023ರ ದ್ವಿತೀಯಾರ್ಥದಲ್ಲಿ ಅನೇಕ ದೊಡ್ಡ ಬಜೆಟ್​ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಇದೀಗ ಜಿಎಸ್‌ಟಿ ಕಡಿಮೆ ಮಾಡಿರುವುದು ಈ ಎಲ್ಲಾ ಸಿನಿಮಾಗಳಿಗೆ ಮತ್ತಷ್ಟು ಅನುಕೂಲವಾಗಲಿದೆ.  

ನಷ್ಟದ ಸುಳಿಯಲ್ಲಿ PVR Inox;50 ಸಿನಿಮಾ ಹಾಲ್ ಗಳು ಬಂದ್!

ಕೊರೊನಾ ಲಾಕ್​ಡೌನ್​ನಿಂದ ಮಲ್ಟಿಫ್ಲೆಕ್ಸ್​ಗಳ ಬಿಸ್ನೆಸ್​ ಕುಸಿದಿತ್ತು. ಹಾಗಾಗಿ ಜನರನ್ನು ಸೆಳೆಯಲು ಕೆಲವು ಸಿನಿಮಾಗಳ ಟಿಕೆಟ್​ ಬೆಲೆ ತಗ್ಗಿಸಿತ್ತು. ಆದರೂ ಕೂಡ ಮೊದಲಿನ ರೀತಿಯಲ್ಲಿ ಜನರು ಸಿನಿಮಾ ನೋಡಲು ಬರುತ್ತಿಲ್ಲ ಎಂಬ ವಾದ ಕೇಳಿಬರುತ್ತಿತ್ತು. ಈಗ ತಿಂಡಿ, ಪಾನೀಯಗಳ ಮೇಲಿನ ಜಿಎಸ್​ಟಿ ಕಡಿಮೆ ಮಾಡಿರುವುದರಿಂದ ಇನ್ಮುಂದೆ ಹೆಚ್ಚಿನ ಜನರು ಮಲ್ಟಿಪ್ಲೆಕ್ಸ್‌ಗೆ  ಬರುವ ನಿರೀಕ್ಷೆ ಇದೆ. ಸದ್ಯ ಕಡಿಮೆಯಾಗಿರುವ ಬೆಲೆ ಪ್ರೇಕ್ಷಕರಿಗೆ ತೃಪ್ತಿ ತರುತ್ತಾ, ಹೆಚ್ಚಿನ ಸಂಖ್ಯೆಯಲ್ಲಿ ಜನ ಬರ್ತಾರಾ ಕಾದು ನೋಡುಬೇಕಿದೆ.  

click me!