
ಈ ಬಾರಿ ಭಾರತದಿಂದ ಆಸ್ಕರ್ ಅಂಗಳಕ್ಕೆ ಅಧಿಕೃತ ಎಂಟ್ರಿ ಕೊಟ್ಟಿರುವ ಚೆಲ್ಲೋ ಶೋ ಸಿನಿಮಾದ ಬಾಲನಟ ರಾಹುಲ್ ಕೊಲಿ ನಿಧನರಾಗಿದ್ದಾರೆ. ಆಸ್ಕರ್ ಗೆ ಎಂಟ್ರಿ ಕೊಟ್ಟ ಸಂಭ್ರಮದಲ್ಲಿದ್ದ ಚೆಲ್ಲೋ ಶೋ ತಂಡಕ್ಕೆ ರಾಹುಲ್ ನಿಧನ ಆಘಾತ ತಂದಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಹುಲ್ ಇಂದು (ಅಕ್ಟೋಬರ್ 11) ಅಹಮದಾಬಾದ್ ನಲ್ಲಿ ಇಹಲೋಕತ್ಯಜಿಸಿದರು. ಈ ನೋವಿನ ಸುದ್ದಿ ತಿಳಿದು ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಚೆಲ್ಲೋ ಶೋ ಸಿನಿಮಾದಲ್ಲಿ 10 ವರ್ಷದ ರಾಹುಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾಗುವ ಮೊದಲೇ ರಾಹುಲ್ ಬಾರದ ಲೋಕಕ್ಕೆ ಹೋಗಿರುವುದು ದುರಂತ.
ಮೂಲಗಳ ಪ್ರಕಾರ ರಾಹುಲ್ ರಕ್ತ ವಾಂತಿ ಮಾಡಿಕೊಂಡಿದ್ದ. ನಂತರ ಜ್ವರ ಕೂಡ ಬಂದಿತ್ತು. ಬಳಿಕ ಆತ ಕೊನೆಯುಸಿರೆಳೆದ. ಆತನ ನಿಧನದಿಂದ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ರಾಹುಲ್ ನಟನೆಯ ಚೆಲ್ಲೋ ಶೋ ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನವೇ ರಾಹುಲ್ ಕೊಲಿ ನಿಧನ ಹೊಂದಿದ್ದಾನೆ.
ಮಗನನ್ನು ಕಳೆದುಕೊಂಡ ನೋವಿನಲ್ಲೇ ರಾಹುಲ್ ಕೊಲಿ ಕುಟುಂಬದವರು ಚೆಲ್ಲೋ ಶೋ ಚಿತ್ರ ನೋಡುವುದಾಗಿ ತಿಳಿಸಿದ್ದಾರೆ. ರಾಹುಲ್ ತಂದೆ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಆದ ಬಳಿಕ ನಮ್ಮ ಬದುಕು ಬದಲಾಗುತ್ತದೆ ಎಂದು ಮಗ ಹೇಳಿದ್ದ ಎಂದು ರಾಹುಲ್ ತಂದೆ ಮಗನ ಮಾತು ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ರಾಹುಲ್, ಮನು ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ನಾಯಕನ ಕ್ಲೋಸ್ ಪ್ರೆಂಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆಸ್ಕರ್ ಜ್ಯೂರಿಯಲ್ಲಿ ಕನ್ನಡದ ನಿರ್ದೇಶಕ; ಮರೆಯಲಾರದ ಅನುಭವ ಎಂದ ಪವನ್ ಒಡೆಯರ್
ಚೆಲ್ಲೋ ಶೋ ಸಿನಿಮಾಗೆ ಪ್ಯಾನ್ ನಳಿನ್ ನಿರ್ದೇಶನ ಮಾಡಿದ್ದಾರೆ. ಚೆಲ್ಲೋ ಶೋ ಎಂದರೆ ಕೊನೆಯ ಸಿನಿಮಾ ಶೋ ಎಂದರ್ಥ. ನಿರ್ದೇಶಕರ ಬಾಲ್ಯದ ಅನುಭವಗಳನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಸಿನಿಮಾ ಬಗ್ಗೆ ಅಪಾರ ಆಸಕ್ತಿ ಹೊಂದಿರುವ 9ರ ಪ್ರಾಯದ ಬಾಲಕನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಚೆಲ್ಲೋ ಶೋ ಸಿನಿಮಾ ಪ್ರದರ್ಶನ ಕಂಡಿದೆ.
'ಚೆಲ್ಲೋ ಶೋ' ಭಾರತದ ಸಿನಿಮಾನೇ ಅಲ್ಲ; ಆಸ್ಕರ್‌ಗೆ ಎಂಟ್ರಿಯಾದ ಚಿತ್ರದ ಬಗ್ಗೆ ಕೇಳಿ ಬರ್ತಿದೆ ಹೊಸ ಆರೋಪ
ಅಂದಹಾಗೆ ಈ ಸಿನಿಮಾವನ್ನು ಲಾಕ್ ಡೌನ್‌ಗೂ ಮೊದಲೇ ಚಿತ್ರೀಕರಣ ಮಾಡಲಾಗಿದೆ. ಹಳ್ಳಿ ಮತ್ತು ರೈಲ್ವೇ ಜಂಕ್ಷನ್ನಲ್ಲಿ ಈ ಸಿನಿಮಾದ ಶೂಟಿಂಗ್ ನಡೆದಿದೆ. ಸ್ಥಳೀಯ ಬಾಲಕರೇ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಸದ್ಯ ರಿಲೀಸ್ ನ ಖುಷಿಯಲ್ಲಿದ್ದ ಸಿನಿಮಾತಂಡಕ್ಕೆ ರಾಹುಲ್ ಹಠಾತ್ ನಿಧನ ತೀವ್ರ ದುಃಖ ತಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.