ನೋಟಿಸ್ ನೀಡಿದ್ದರೂ ಗುರುವಾರ ರಾಗಿಣಿ ಸಿಸಿಬಿ ವಿಚಾರಣೆಗೆ ಗೈರಾಗಿದ್ದಾರೆ. ವೈಯಕ್ತಿಕ ಕಾರಣ ನೀಡಿದ ಗೈರಾಗಿರುವ ನಟಿ, ಸೋಮವಾರ ವಿಚಾರಣೆಗೆ ಬರಲು ಬದ್ಧರಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಿಸಿಬಿ, 2ನೇ ಬಾರಿಗೆ ಸಿಸಿಬಿ ನೋಟಿಸ್ ನೀಡಿದ್ದು, ಮತ್ತೆ ಗೈರಾದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಕೂಡ ಕೊಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ಸೆ.04): ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಮಾರಾಟ ಜಾಲದ ನಂಟಿನ ಪ್ರಕರಣದಲ್ಲಿ ತಮ್ಮ ಆಪ್ತ ಗೆಳೆಯನ ಬಂಧನ ಬೆನ್ನೆಲ್ಲೇ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರಿಗೂ ಬಂಧನ ಭೀತಿ ಶುರುವಾಗಿದೆ.
ಈ ಪ್ರಕರಣ ಸಂಬಂಧ ನೋಟಿಸ್ ನೀಡಿದ್ದರೂ ಗುರುವಾರ ರಾಗಿಣಿ ಸಿಸಿಬಿ ವಿಚಾರಣೆಗೆ ಗೈರಾಗಿದ್ದಾರೆ. ವೈಯಕ್ತಿಕ ಕಾರಣ ನೀಡಿದ ಗೈರಾಗಿರುವ ನಟಿ, ಸೋಮವಾರ ವಿಚಾರಣೆಗೆ ಬರಲು ಬದ್ಧರಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಿಸಿಬಿ, 2ನೇ ಬಾರಿಗೆ ಸಿಸಿಬಿ ನೋಟಿಸ್ ನೀಡಿದ್ದು, ಮತ್ತೆ ಗೈರಾದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಕೂಡ ಕೊಟ್ಟಿದೆ. ಹೀಗಾಗಿ ಶುಕ್ರವಾರ, ತಪ್ಪಿದರೆ ಸೋಮವಾರ ಅವರು ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಬುಧವಾರ ವಶಕ್ಕೆ ಪಡೆಯಲಾಗಿದ್ದ ಆಕೆಯ ಗೆಳೆಯನೂ ಆಗಿರುವ ಸಾರಿಗೆ ಇಲಾಖೆ ದ್ವಿತೀಯ ದರ್ಜೆ ಸಹಾಯಕ ರವಿಶಂಕರ್‌ನನ್ನು 24 ತಾಸುಗಳ ಸುದೀರ್ಘ ವಿಚಾರಣೆ ಬಳಿಕ ಸಿಸಿಬಿ ಅಂತಿಮವಾಗಿ ಬಂಧನಕ್ಕೊಳಪಡಿಸಿದೆ. ಹಲವು ದಿನಗಳಿಂದ ರವಿಶಂಕರ್ ಹಾಗೂ ರಾಗಿಣಿ ಸ್ನೇಹಿತರಾಗಿದ್ದರು. ಈ ಆತ್ಮೀಯತೆಯಲ್ಲೇ ಪಬ್, ಪಂಚತಾರ ಹೋಟೆಲ್ ಹಾಗೂ ಹೊರವಲಯದ ರೆಸಾರ್ಟ್‌ಗಳಲ್ಲಿ ನಡೆದಿದ್ದ ಪಾರ್ಟಿಗಳಲ್ಲಿ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು. ದೇಶ-ವಿದೇಶಗಳಲ್ಲೂ ಸಹ ಗೆಳೆಯನ ಜತೆ ರಾಗಿಣಿ ಪ್ರವಾಸ ಮಾಡಿದ್ದಳು. ಇನ್ನು ರವಿಶಂಕರ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ನಡೆದಿರಬಹುದು ಎಂಬ ಶಂಕೆ ಮೇರೆಗೆ ರಾಗಿಣಿ ವಿಚಾರಣೆಗೆ ಸಿಸಿಬಿ ಮುಂದಾಗಿದೆ.
'ರಾಖಿ' ಅಣ್ಣ ರಾಹುಲ್ ಜೊತೆ ಸಂಜನಾ ಕ್ಲೋಸ್ ಆಗಿದ್ದಿದ್ದು ಹೀಗೆ!
ವಕೀಲರ ನೆರವು ಕೋರಿದ ರಾಗಿಣಿ:
ಅಲ್ಲದೆ 24 ತಾಸುಗಳ ವಿಚಾರಣೆ ವೇಳೆ ರಾಗಿಣಿ ಸ್ನೇಹದ ವಿಚಾರವಾಗಿ ರವಿಶಂಕರ್ ಕೆಲವು ಮಾಹಿತಿ ಬಹಿರಂಗಪಡಿಸಿದ್ದಾನೆ. ಆರೋಪಿ ಮೊಬೈಲ್‌ನಲ್ಲಿ ಕೆಲವು ಪೋಟೋ ಹಾಗೂ ವಿಡಿಯೋಗಳು ಪತ್ತೆಯಾಗಿವೆ. ಇತ್ತ ತನ್ನ ಗೆಳೆಯ ಸಿಸಿಬಿ ಬಲೆಗೆ ಬಿದ್ದ ಕೂಡಲೇ ಬಂಧನ ಭೀತಿಯಿಂದ ಅಜ್ಞಾತವಾಗಿರುವ ರಾಗಿಣಿ, ಮುಂದಿನ ಬೆಳವಣಿಗೆಗಳ ಬಗ್ಗೆ ವಕೀಲರನ್ನು ಸಂಪರ್ಕಿಸಿ ಸಲಹೆ ಪಡೆದಿದ್ದಾರೆ ಎನ್ನಲಾಗಿದೆ. ತನ್ನ ವಕೀಲರನ್ನು ಕರೆದುಕೊಂಡೇ ರಾಗಿಣಿ, ಸಿಸಿಬಿ ಎದುರು ಶುಕ್ರವಾರ ಅಥವಾ ಸೋಮವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಅಕ್ರಮ ಕೃತ್ಯದಲ್ಲಿ ಶಾಮೀಲಾಗಿಲ್ಲ
ನಾನೊಬ್ಬಳು ನಾಗರಿಕಳಾಗಿ ಪೊಲೀಸರ ವಿಚಾರಣೆಗೆ ಹಾಜರಾಗುವುದು ಕರ್ತವ್ಯವಾಗಿದೆ. ನಾನು ಸಿಸಿಬಿ ತನಿಖೆ ನಡೆಸುತ್ತಿರುವ ಕಾನೂನುಬಾಹಿರ ಕೃತ್ಯಗಳಿಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಬಚ್ಚಿಡುವುದಿಲ್ಲ. ನಾನು ಯಾವುದೇ ರೀತಿಯ ಅಕ್ರಮ ಕೃತ್ಯಗಳಲ್ಲಿ ಪಾಲ್ಗೊಂಡಿಲ್ಲ. ನಿಮ್ಮ ಕಾಳಜಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸೋಮವಾರ ವಿಚಾರಣೆಗೆ ಬರಲು ಬದ್ಧಳಾಗಿದ್ದೇನೆ.
- ರಾಗಿಣಿ, ನಟಿ (ಟ್ವೀಟರ್‌ನಲ್ಲಿ)