
ಮುಂಬೈ: ಬಾಲಿವುಡ್ನ 'ಜೋಶ್', 'ದಸ್ತಕ್' ಮತ್ತು 'ಲಕ್ಷ್ಯ' ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ನಟ ಶರದ್ ಕಪೂರ್ ಅವರ ದಯನೀಯ ಸ್ಥಿತಿಯನ್ನು ತೋರಿಸುವ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ತೀವ್ರ ಆರ್ಥಿಕ ಹಾಗೂ ಆರೋಗ್ಯ ಸಂಕಷ್ಟಕ್ಕೆ ಸಿಲುಕಿದ್ದ ನಟನ ಪರಿಸ್ಥಿತಿ ಕಂಡು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಮರುಗಿದ್ದರು.
ಕಷ್ಟದ ಸಮಯದಲ್ಲಿ ತಮ್ಮ ಕೈಹಿಡಿದ ಚಿತ್ರರಂಗದ ಸ್ನೇಹಿತರಿಗೆ ಶರದ್ ಕಪೂರ್ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ಚಿತ್ರರಂಗದ ಜನರು ನನ್ನ ಮೇಲೆ ತೋರುತ್ತಿರುವ ಪ್ರೀತಿ ನಿಜಕ್ಕೂ ದೊಡ್ಡದು. ನನ್ನ ಬಗ್ಗೆ ನಿಜವಾದ ಕಾಳಜಿ ಇರುವವರು ನನ್ನ ಬೆನ್ನಿಗೆ ನಿಂತಿದ್ದಾರೆ. ಹೇಮಾ ಚೌಧರಿ, ಕುನಿಕಾ ಜಿ ಮತ್ತು ಸೋನು ಸೂದ್ ಅವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ನನಗೆ ನೆರವಾಗುತ್ತಿದ್ದಾರೆ. ಸದ್ಯಕ್ಕೆ ನಾನು ಚೆನ್ನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ. .
ತಮ್ಮ ಆರೋಗ್ಯದ ಕುರಿತು ಮಾಹಿತಿ ನೀಡಿದ ಅವರು, "ಹೆಚ್ಚಿನ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ನಾನು ಹೇಮಾ ಜಿ ಅವರೊಂದಿಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಮುಂದಿನ 10 ದಿನಗಳ ಚಿಕಿತ್ಸೆಯ ಬಳಿಕ ನಾನು ಸಂಪೂರ್ಣವಾಗಿ ಗುಣಮುಖನಾಗಿ ಮರಳಲಿದ್ದೇನೆ. ಇದೇ ವೇಳೆ ಪ್ರಾಣಿಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಹೇಮಾ ಅವರ 'ಬೆಜುಬಾನ್' ಸಂಸ್ಥೆಗೆ ಸರ್ಕಾರ ಮತ್ತು ಸಾರ್ವಜನಿಕರು ಹೆಚ್ಚಿನ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಚಿತ್ರರಂಗದಿಂದ ದೀರ್ಘಕಾಲ ದೂರ ಉಳಿದಿದ್ದರ ಬಗ್ಗೆ ಸ್ಪಷ್ಟನೆ ನೀಡಿದ ಶರದ್, ಆಗ ನಾನು ಸಿನಿಮಾಗಳಲ್ಲಿ ಕೆಲಸ ಮಾಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ದೇಶ ಬಿಟ್ಟು ನ್ಯೂಯಾರ್ಕ್ಗೆ ತೆರಳಿದ್ದೆ ಮತ್ತು ಅಲ್ಲಿ ಸುಮಾರು ಮೂರರಿಂದ ನಾಲ್ಕು ವರ್ಷಗಳ ಕಾಲ ವಾಸವಿದ್ದೆ. ಆದರೆ ಈಗ ಅತ್ಯಂತ ಸಕಾರಾತ್ಮಕ ಮನೋಭಾವದೊಂದಿಗೆ ಮರಳಿದ್ದೇನೆ. ನನಗೆ ಮತ್ತೆ ನಟಿಸಬೇಕೆಂಬ ಹಂಬಲವಿದೆ, ಪ್ರೇಕ್ಷಕರು ಕೂಡ ನನ್ನನ್ನು ಪರದೆಯ ಮೇಲೆ ನೋಡಲು ಬಯಸುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ. ಈಗಾಗಲೇ ಕೆಲವು ನಿರ್ಮಾಪಕರು ತಮ್ಮೊಂದಿಗೆ ಕೆಲಸ ಮಾಡಲು ಆಸಕ್ತಿ ತೋರಿದ್ದು, ಚಿತ್ರರಂಗದ ಹಲವರು ಕಮ್ಬ್ಯಾಕ್ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದಾರೆ ಎಂದಿದ್ದಾರೆ.
ಮತ್ತೊಂದೆಡೆ, ನಾಯಿಗಳ ರಕ್ಷಣಾ ಸಂಸ್ಥೆ 'ಬೆಜುಬಾನ್ ಟ್ರಸ್ಟ್' ನಡೆಸುತ್ತಿರುವ ಹಾಗೂ ಶರದ್ ಅವರ ಆಪ್ತೆಯಾಗಿರುವ ಬಹುಭಾಷಾ ನಟಿ ಕನ್ನಡದ ಹೇಮಾ ಚೌಧರಿ ಅವರು ಪಾಡ್ಕ್ಯಾಸ್ಟ್ ಒಂದರಲ್ಲಿ ನಟನ ದುಸ್ಥಿತಿಯ ಹಿಂದಿನ ಕರಾಳ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಮುಂಬೈನಲ್ಲಿ ಶರದ್ ವಾಸವಿದ್ದ ಕಟ್ಟಡದಲ್ಲಿ ಬೀದಿ ನಾಯಿಗಳನ್ನು ರಕ್ಷಿಸಲು ಹೋದಾಗ ಶರದ್ ಅವರ ಚಿಂತಾಜನಕ ಸ್ಥಿತಿ ತಮಗೆ ಕಂಡುಬಂದಿತು ಎಂದು ಅವರು ವಿವರಿಸಿದ್ದಾರೆ.
ನಾನು ಅವರನ್ನು ಭೇಟಿಯಾದಾಗ ಶರದ್ ಬದುಕುವ ಆಸೆಯನ್ನೇ ಕಳೆದುಕೊಂಡಿದ್ದರು. ಸುಮಾರು ಎರಡು ವರ್ಷಗಳಿಂದ ಅವರು ಹಾಸಿಗೆ ಬಿಟ್ಟು ಎದ್ದಿರಲಿಲ್ಲ ಹಾಗೂ ಸ್ನಾನವನ್ನೂ ಮಾಡದೆ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಊಟ-ತಿಂಡಿ ಕೇಳುವವರೂ ಇಲ್ಲದೆ ಅವರು ನಿಧಾನವಾಗಿ ಸಾವಿನಂಚಿಗೆ ತಲುಪಿದ್ದರು. ಈ ಬಗ್ಗೆ ಅವರ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದರೂ, ಆಸ್ತಿ ವಿವಾದವೋ ಅಥವಾ ನಿರ್ಲಕ್ಷ್ಯವೋ ಗೊತ್ತಿಲ್ಲ, ಕುಟುಂಬದವರು ಅವರ ನೆರವಿಗೆ ಬರಲಿಲ್ಲ ಎಂದು ಹೇಮಾ ಗಂಭೀರ ಆರೋಪ ಮಾಡಿದ್ದಾರೆ.
ಶರದ್ ಅವರ ವೈಯಕ್ತಿಕ ಜೀವನದ ಕುರಿತು ಮಾತನಾಡಿದ ಹೇಮಾ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ ಮೊಮ್ಮಗಳು ಕೊಯೆಲ್ ಬಸು ಅವರೊಂದಿಗೆ ಶರದ್ ನಿಶ್ಚಿತಾರ್ಥ ನಡೆದಿತ್ತಾದರೂ, ಕಾರಣಾಂತರಗಳಿಂದ ಮದುವೆ ನಡೆಯಲಿಲ್ಲ ಎಂದು ದೃಢಪಡಿಸಿದ್ದಾರೆ. ಸದ್ಯ ಅವರಿಗೆ ಗೆಳತಿಯೊಬ್ಬರಿದ್ದರೂ ಅವರನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ ಎಂದಿರುವ ಹೇಮಾ, ಶರದ್ ಅವರಿಗೆ ಮಗುವಿದೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಇದೇ ವೇಳೆ, ಶರದ್ ಹಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಗಳನ್ನು ಅಲ್ಲಗಳೆದಿರುವ ಹೇಮಾ, ಅವರು ಮಾನಸಿಕವಾಗಿ ಇನ್ನೂ ಸಂಪೂರ್ಣ ಸ್ಥಿರವಾಗಿಲ್ಲ. ಮೊದಲು ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ವಿಶ್ರಾಂತಿಯ ಅಗತ್ಯವಿದೆ" ಎಂದಿದ್ದಾರೆ. ಅಲ್ಲದೆ, ಕೆಲವು ಸ್ವಾರ್ಥಿಗಳು ಶರದ್ ಅವರಿಗೆ ಹಣ ನೀಡುವಂತೆ ನಟಿಸಿ, ಫೋಟೋ ಕ್ಲಿಕ್ಕಿಸಿಕೊಂಡು ಬಳಿಕ ಹಣ ವಾಪಸ್ ಪಡೆದಿದ್ದಾರೆ. ಇನ್ನೂ ಕೆಲವರು ಶರದ್ ಹೆಸರಿನಲ್ಲಿ ನಕಲಿ ಆನ್ಲೈನ್ ಅಭಿಯಾನ ನಡೆಸಿ ದೇಣಿಗೆ ಸಂಗ್ರಹಿಸುತ್ತಿದ್ದು, ಅಂತಹವರ ವಿರುದ್ಧ ಎಚ್ಚರಿಕೆಯಿಂದಿರುವಂತೆ ಹೇಮಾ ಕಿವಿಮಾತು ಹೇಳಿದ್ದಾರೆ.
ಮಹೇಶ್ ಭಟ್ ಅವರ ಜನಪ್ರಿಯ ಧಾರಾವಾಹಿ 'ಸ್ವಾಭಿಮಾನ್' ಮೂಲಕ ಗಮನ ಸೆಳೆದಿದ್ದ ಶರದ್ ಕಪೂರ್, 'ದಸ್ತಕ್', 'ಜೋಶ್', 'ಎಲ್ಒಸಿ ಕಾರ್ಗಿಲ್', 'ಲಕ್ಷ್ಯ', 'ವಾಂಟೆಡ್' ಹಾಗೂ 'ಜೈ ಹೋ' ಮುಂತಾದ ಹಿಟ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2019ರಲ್ಲಿ ಜೀ5 ಒಟಿಟಿಯಲ್ಲಿ ಬಿಡುಗಡೆಯಾದ 'ಕ್ಯಾಬರೆಟ್'ಚಿತ್ರದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದೀಗ ಚಿಕಿತ್ಸೆ ಪಡೆದು ಹೊಸ ಹುಮ್ಮಸ್ಸಿನೊಂದಿಗೆ ಬಾಲಿವುಡ್ಗೆ ಮರಳಲು ಸಜ್ಜಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.