
ಮುಂಬೈ(ಜು.07): ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
"
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಅವರನ್ನು ಭಾನುವಾರವಷ್ಟೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು, ಬುಧವಾರ ಬೆಳಗ್ಗೆ 07.30ಕ್ಕೆ ಕೊನೆಯುಸಿರೆಳೆದಿದ್ದಾರೆ. ದಿಲೀಪ್ ಕುಮಾರ್ ಅಗಲುವಿಕೆಯಿಂದ ಬಾಲಿವುಡ್‌ನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ದಿಲೀಪ್ ಕುಮಾರ್ ಅಂತಿಮಸಂಸ್ಕಾರವನ್ನು ಸಾಂಟ್ರಾಕ್ರೂಜ್ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
1922 ಡಿಸೆಂಬರ್ 11ರಂದು ಪೇಶಾವರ (ಇಂದಿನ ಪಾಕಿಸ್ತಾನ) ಕಿಸ್ಸಾ ಖವಾನಿ ಬಜಾರ್‌ನಲ್ಲಿ ಜನಸಿದ ದಿಲೀಪ್ ಕುಮಾರ್ ಮೂಲ ಹೆಸರು ಮಹಮ್ಮದ್ ಯೂಸುಫ್ ಖಾನ್. ಹೀಗಾಗೇ ಅವರನ್ನು ಬಾಲಿವುಡ್‌ನ ಮೊದಲ ಖಾನ್ ಎಂದೇ ಎನ್ನಲಾಗುತ್ತಿತ್ತು. ಇನ್ನು ಫಿಲಂಫೇರ್ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆ ಕೂಡಾ ದಿಲೀಪ್ ಕುಮಾರ್‌ಗಿದೆ. ಚಿತ್ರರಂಗ ಮಾತ್ರವಲ್ಲದೇ ರಾಜಕೀಯದಲ್ಲೂ ಅವರು ಗುರುತಿಸಿಕೊಂಡಿದ್ದರು.
ಬಾಲಿವುಡ್ ದಿಗ್ಗಜನ ಸಿನಿ ಪಯಣ:
ಐದು ದಶಕಗಳು ಸಿನಿಮಾರಂಗವನ್ನ ಆಳಿದ ನಟ ದಿಲೀಪ್ ಕುಮಾರ್ 1944ರಲ್ಲಿ ಜ್ವರ್ ಭಾತಾ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ್ದರು. ಬಳಿಕ ದಾಗ್, ದೇವದಾಸ್, ಆಜಾದ್, ಶಕ್ತಿ, ಮಸಾಲ್, ಸೌದಾಗರ್, ಕ್ರಾಂತಿ, ಮಘಲ್ ಎ ಆಜಮ್, ನಯಾ ದೌರ್, ರಾಮ್ ಔರ್ ಶ್ಯಾಮ್ ಮೊದಲಾದ ಚಿತ್ರಗಳ ಮೂಲಕ ಅಭಿಮಾನಿಗಳ ಮನ ಕದ್ದಿದ್ದರು. ಇನ್ನು ಜುಗ್ನು ಸಿನಿಮಾ ಅವರಿಗೆ ಭಾರೀ ಖ್ಯಾತಿ ತಂದುಕೊಟ್ಟ ಸಿನಿಮಾವಾಗಿದೆ. 1998 ರ "ಕಿಲಾ" ದಿಲೀಪ್ ಕುಮಾರ್ ಅವರ ಕಡೆಯ ಸಿನಿಮಾವಾಗಿದೆ. ತಮ್ಮ ಅದ್ಭುತ ನಟನೆ ಮೂಲಕ ಜನರ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.