
ಬಾಲಿವುಡ್‌ನಲ್ಲಿ ಭಾರಿ ಗ್ಲಾಮರ್‌ನಿಂದ ಮೆರೆದು ಬಳಿಕ ಮರೆಗೆ ಸಂದ ನಾಯಕಿಯರ, ನಾಯಕರ ಹೃದಯ ವಿದ್ರಾವಕ ಕಥೆಗಳು ಹಲವು ಇವೆ. ಆದರೆ ನಟಿ ವಿಮಿಯಷ್ಟು ದುರಂತ ಕಥೆಗಳು ಕಡಿಮೆ. ಹಿಂದಿ ಚಿತ್ರರಂಗದ ದುರಂತ ನಾಯಕಿ ಎಂದೇ ಮೀನಾ ಕುಮಾರಿಯನ್ನು ಕರೆಯಲಾಗುತ್ತದೆ. ಆಕೆಗೆ ಹೋಲಿಸಿದರೆ ವಿಮಿ ಕೂಡ ನೋವು ಮತ್ತು ಒಂಟಿತನದಲ್ಲಿ ಮುಳುಗಿಹೋದವಳು. ಅವಳ ಸೌಂದರ್ಯ, ಮೋಡಿ ಮತ್ತು ಭರವಸೆಯ ಚೊಚ್ಚಲ ಫಿಲಂನ ಹೊರತಾಗಿಯೂ ಅವಳ ಜೀವನವು ಕೇವಲ 34 ವರ್ಷ ವಯಸ್ಸಿನಲ್ಲಿ ಹಠಾತ್ತನೆ ಕೊನೆಗೊಂಡಿತು. ಒಂದು ಕಾಲದಲ್ಲಿ ಜನಪ್ರಿಯತೆ ಅವಳನ್ನು ಬೆಂಬತ್ತಿ ಬಂದಿತ್ತು. ನಂತರ ಸೋಲು, ವೇಶ್ಯಾವಾಟಿಕೆ, ಕುಡಿತ ಹಿಂಬಾಲಿಸಿದವು.
ವಿಮಿ ಶ್ರೀಮಂತ ಮತ್ತು ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದವಳು. ಸುಶಿಕ್ಷಿತೆ, ಸಂಗೀತ ಮತ್ತು ಕಲೆಗಳ ಬಗ್ಗೆ ಒಲವು ಹೊಂದಿದ್ದಳು. ಆದರೂ ಅವಳ ಕುಟುಂಬವು ಅವಳು ಚಲನಚಿತ್ರಗಳಿಗೆ ಸೇರುವುದಕ್ಕೆ ಸಮ್ಮತಿ ನೀಡಲಿಲ್ಲ. ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಆಕೆ ಮನೆ ಬಿಟ್ಟು ಮುಂಬೈಗೆ ಹೋದಳು.
ಚಲನಚಿತ್ರಗಳಿಗೆ ಅವಳ ಪ್ರವೇಶ ಶುದ್ಧ ಆಕಸ್ಮಿಕವಾಗಿತ್ತು. ಆಕೆಗೆ ಮದುವೆಯಾಗಿತ್ತು. ತನ್ನ ಪತಿಯೊಂದಿಗೆ ಒಂದು ಪಾರ್ಟಿಯಲ್ಲಿ ಭಾಗವಹಿಸಿದಳು. ಅಲ್ಲಿ ಮ್ಯೂಸಿಕ್ ಡೈರೆಕ್ಟರ್ ರವಿಯನ್ನು ಭೇಟಿಯಾದಳು. ಅವರು ಅವಳ ಸೌಂದರ್ಯದಿಂದ ಪ್ರಭಾವಿತರಾದರು ಮತ್ತು ನಟನೆಗೆ ಇಳಿಯುವಂತೆ ಪ್ರೋತ್ಸಾಹಿಸಿದರು. ವಿವಾಹಿತೆಗೆ ಎಂದಿಗೂ ಚಲನಚಿತ್ರಗಳಲ್ಲಿ ಕೆಲಸ ಸಿಗುವುದಿಲ್ಲ ಎಂದು ವಿಮಿ ಹಿಂಜರಿದಾಗ, ರವಿ ಅವಳನ್ನು ಚಲನಚಿತ್ರ ನಿರ್ಮಾಪಕ ಬಿ.ಆರ್. ಚೋಪ್ರಾಗೆ ಪರಿಚಯಿಸಿದರು. ಅವರು ಅವಳನ್ನು ಹಮ್ರಾಜ್ (1967) ನಲ್ಲಿ ಸುನಿಲ್ ದತ್ ಮತ್ತು ರಾಜ್ ಕುಮಾರ್ ಎದುರು ನಟಿಸುವಂತೆ ಮಾಡಿದರು. ಆ ಚಿತ್ರ ಯಶಸ್ವಿಯಾಯಿತು. ವಿಮಿಯನ್ನು ರಾತ್ರೋರಾತ್ರಿ ತಾರೆಯನ್ನಾಗಿ ಮಾಡಿತು.
ಹಮ್ರಾಜ್ ಅವರಿಗೆ ಕನಸಿನಂಥ ವೃತ್ತಿ ಆರಂಭವನ್ನು ನೀಡಿತಾದರೂ, ನಂತರ ಅವರ ವೃತ್ತಿಜೀವನ ಶೀಘ್ರದಲ್ಲೇ ಅಡೆತಡೆಗಳನ್ನು ಎದುರಿಸಿತು. ಬಿ.ಆರ್. ಚೋಪ್ರಾ ಅವರೊಂದಿಗಿನ ಒಪ್ಪಂದದಿಂದ ಬಂಧಿಸಲ್ಪಟ್ಟ ಅವರು ಆರಂಭದಲ್ಲಿ ಇತರ ಚಲನಚಿತ್ರ ಆಫರ್‌ಗಳನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಅವರ ಸಂಬಂಧ ಕೊನೆಗೊಂಡಾಗ, ವಿಮಿ ಹೊಸ ಚಿತ್ರಗಳಿಗೆ ಸಹಿ ಹಾಕಿದರು. ಆದರೆ ಅವುಗಳಲ್ಲಿ ಹೆಚ್ಚಿನವು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ಕ್ರಮೇಣ ನಿರ್ಮಾಪಕರು ದೂರವಾದರು. ತಾರಾಪಟ್ಟ ಮರೆಯಾಯಿತು.
ಅದೇ ಸಮಯದಲ್ಲಿ ಆಕೆಯ ವೈಯಕ್ತಿಕ ಜೀವನ ಗೊಂದಲದಲ್ಲಿತ್ತು. ಅವಳ ಪತಿ ಆರಂಭದಲ್ಲಿ ಅವಳನ್ನು ಬೆಂಬಲಿಸಿದರೂ, ಅವರ ಸಂಬಂಧ ಕುಸಿಯಲು ಪ್ರಾರಂಭಿಸಿತು. ಅವಳು ಕುಡಿತ ಬೆಳೆಸಿಕೊಂಡಳು. ಸಣ್ಣಪುಟ್ಟ, ಗೌರವವಿಲ್ಲದ ನಟನೆಯ ಕಾಂಟ್ರಾಕ್ಟ್‌ಗಳನ್ನು ತೆಗೆದುಕೊಳ್ಳುವಂತಾಯಿತು. ಅವರ ದಾಂಪತ್ಯ ಅಂತಿಮವಾಗಿ ವಿಚ್ಛೇದನದಲ್ಲಿ ಕೊನೆಗೊಂಡಿತು. ಆಕೆ ಕೋಲ್ಕತ್ತಾಗೆ ತೆರಳಿದರು.
ಅವರ ವೈಯಕ್ತಿಕ ಆಯ್ಕೆಗಳು ಅವರ ಜೀವನದ ಮೇಲೆ ಪರಿಣಾಮ ಬೀರಿದವು. ಕೋಲ್ಕತ್ತಾದಲ್ಲಿ ವಿಮಿ, ಜಾಲಿ ಎಂಬ ಚಲನಚಿತ್ರ ವಿತರಕರೊಂದಿಗೆ ವಾಸಿಸಲು ಪ್ರಾರಂಭಿಸಿದರು. ಈ ಸಂಬಂಧ ಅವರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಈ ಹಂತದಲ್ಲಿಯೇ ಅವರು ಮದ್ಯದ ವ್ಯಸನಿಯಾದರು. ಗಂಡ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ. ಪ್ರೀತಿಯು ವಿನಾಶಕಾರಿ ಹಂತವಾಗಿ ಮಾರ್ಪಟ್ಟಿತು. ಅವಳನ್ನು ಹತಾಶೆಗೆ ತಳ್ಳಿತು.
ಶಶಿ ಕಪೂರ್, ರಾಜ್ ಕುಮಾರ್ ಮತ್ತು ಸುನಿಲ್ ದತ್ ಅವರಂತಹ ನಟರೊಂದಿಗೆ ಕೆಲಸ ಮಾಡಿದ, ಒಂದು ಕಾಲದಲ್ಲಿ ಪ್ರಸಿದ್ಧ ತಾರೆಯಾಗಿದ್ದ ವಿಮಿ ಅವರನ್ನು ಚಿತ್ರರಂಗ ಮರೆತೇಬಿಟ್ಟಿತು. ಅತಿಯಾದ ಮದ್ಯಪಾನದಿಂದಾಗಿ ಆದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಯಕೃತ್ತು ವಿಫಲವಾಯಿತು. 1977ರಲ್ಲಿ ಅವರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ದುರದೃಷ್ಟವಶಾತ್, ಅವರ ದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುವಾಗ ಯಾವುದೇ ಕುಟುಂಬ ಸದಸ್ಯರು ಅಥವಾ ಆಪ್ತ ಸ್ನೇಹಿತರು ಹತ್ತಿರ ಇರಲಿಲ್ಲ. ಅವರ ಅಂತಿಮ ಪ್ರಯಾಣದಲ್ಲಿ ಅವರ ಪಕ್ಕದಲ್ಲಿ ನಿಂತ ಕೆಲವೇ ಕೆಲವು ಜನರಲ್ಲಿ ನಟ ಸುನಿಲ್ ದತ್ ಕೂಡ ಇದ್ದರು ಎಂದು ಹೇಳಲಾಗುತ್ತದೆ. ವಿಮಿಯ ಜೀವನ ಬಾಲಿವುಡ್‌ನ ಅತ್ಯಂತ ದುಃಖಕರ ಕಥೆಗಳಲ್ಲಿ ಒಂದು ಎಂದು ನೆನಪಿಸಿಕೊಳ್ಳಲಾಗುತ್ತದೆ. ಎಲ್ಲವನ್ನೂ ಹೊಂದಿದ್ದರೂ ವೈಯಕ್ತಿಕ ಹೋರಾಟಗಳು, ವಿಫಲ ಸಂಬಂಧಗಳು ಮತ್ತು ತಪ್ಪು ಆಯ್ಕೆಗಳಿಂದ ಆಕೆ ಜೀವನ ಕಳೆದುಕೊಳ್ಳುವಂತಾಯ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.