ಮಸ್ತ್ ಮಸ್ತ್ ಹುಡುಗಿ ಬಂದ್ಲು ಅಂತ ಇಪ್ಪತ್ತು ವರ್ಷದ ಹಿಂದೆ ಕಚಗುಳಿ ಕೊಟ್ಟಿದ್ದ ರವಿನಾ ಟಂಡನ್ ಈಗ ಕೆಜಿಎಫ್ ಚಾಪ್ಟರ್ ೨ ನಲ್ಲಿ ಬ್ಯುಸಿ. ಈ ಲೇಡಿಗೆ ಪ್ರಾಣಿಗಳು ಅಂದರೆ ಜೀವ. ಅವರ ಈ ಪ್ರೀತಿ ಹಿಂದೆ ನಿಮಗೊತ್ತಿಲ್ಲದ ಒಂದು ಕತೆ ಇದೆ.
ರವೀನಾ ಟಂಡನ್ ಇಪ್ಪತ್ತು ವರ್ಷಗಳ ಹಿಂದೆ ಉಪೇಂದ್ರನ ಜೊತೆಗೆ ಡ್ಯುಯೆಟ್ ಹಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರನೇ. ' ಮಸ್ತ್ ಮಸ್ತ್ ಹುಡುಗಿ ಬಂದ್ಲು..' ಅಂತ ಕುಣಿದಾಡಿ ಹುಡುಗರ ಮನಸ್ಸನ್ನು ಕದ್ದ ಬೆಡಗಿ ಈಗ ಇಪ್ಪತ್ತು ವರ್ಷಗಳ ಬಳಿಕ ಮತ್ತೆ ಕೆಜಿಎಫ್ ಚಾಪ್ಟರ್ 2ಕ್ಕೆ ರಮಿಕಾ ಸೇನ್ ಆಗಿ ಬರ್ತಿದ್ದಾರೆ. ಇದರಲ್ಲಿ ಅವರದ್ದು ಪ್ರಧಾನ ಮಂತ್ರಿ ಪಾತ್ರ ಅಂತೆ. ಹೀಗೆ ಪಾತ್ರ ಮಾಡಲಿಕ್ಕೆ ಅಂತ ಬಾಲಿವುಡ್ ನಿಂದ ಸ್ಯಾಂಡಲ್ ವುಡ್ ಅಂಗಳಕ್ಕೆ ಹಾರಿ ಬಂದ ಚೆಲುವೆ ಕಳೆದ ಭಾನುವಾರ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಕೆಜಿಎಫ್ ಟೀಮ್ ಸೇರ್ಕೊಳ್ತಾರೆ. ವಿಷ್ಯ ಅದಲ್ಲ. ಈ ಸುಂದರಿ ಸಿನಿಮಾ ಶೂಟಿಂಗ್ ನಡುವೆಯೇ ಸುದ್ದಿಯಾಗ್ತಿರೋದು ಆಕೆ ವೈಲ್ಡ್ ಲೈಫ್ ಅನ್ನು ಎನ್‌ಜಾಯ್ ಮಾಡ್ತಿರೋದಕ್ಕೆ. ಈಕೆ ಸದ್ಯ ನಾಗರಹೊಳೆಯ ಕಾಡಿನೊಳಗೆ ಸಫಾರಿ ಮಾಡುತ್ತಾ ಕಾಡಿನೊಳಗೆ ಕಂಡು ಬರುವ ವನ್ಯಮೃಗಗಳನ್ನು ತದೇಕ ಚಿತ್ತದಿಂದ ನೋಡುತ್ತಾ ಬೆರಗಾಗುತ್ತಿದ್ದಾರೆ. ಇದಾದ ಮೇಲೆ ಕಬಿನಿಗೆ ಹೋಗಿ ಅಲ್ಲೂ ಕಾಡು ಪ್ರಾಣಿಗಳ ವೀಕ್ಷಣೆ ಮಾಡುತ್ತಾರಂತೆ.
ಬಾಲಿವುಡ್ ನಿಂದ ಕನ್ನಡ ಸಿನಿಮಾ ಇಂಟಸ್ಟ್ರಿಗೆ ನಟ, ನಟಿಯರು ಬರೋದು ಹೊಸತಲ್ಲ. ಹಾಗವರು ಬಂದರೆ ಐಷಾರಾಮಿ ಹೊಟೇಲ್ ನಲ್ಲಿ ತಂಗಿ ಶೂಟಿಂಗ್ ಮುಗಿಸಿ ಅಲ್ಲಿಂದಲೇ ವಾಪಾಸ್ ಹೋಗೋದು ರೂಢಿ. ಯಾರೂ ಇಲ್ಲಿನ ವೈಲ್ಡ್ ಲೈಫ್ ಕಡೆ ಕಣ್ಣು ಹಾಯಿಸೋದಿಲ್ಲ. ಆದರೆ ರವೀನಾ ಇವರೆಲ್ಲರಿಗಿಂತ ಡಿಫರೆಂಟ್. ಅವರ ಪ್ರಾಣಿ ಪ್ರೀತಿ ಇಂದು ನಿನ್ನೆಯದಲ್ಲ.
ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿರುವ ಅವಳಿ ಸುಂದರಿಯರ ಅಸಲಿ ಕತೆ
ರವೀನಾ ಮನೆ ತುಂಬ ಪ್ರಾಣಿಗಳು
ರವೀನಾ ಅವರಿಗೆ ನಾಲ್ಕು ಜನ ಮಕ್ಕಳು ಗೊತ್ತಾ! ಆದರೆ ನಾಲ್ಕೂ ಮಕ್ಕಳು ಇವರು ಹೆತ್ತ ಮಕ್ಕಳಲ್ಲ. ಈಗ ನಲವತ್ತೈದು ವರ್ಷ ವಯಸ್ಸಿನವರಾದ ರವೀನಾ ಮದುವೆಗೂ ಮೊದಲೇ ಇಬ್ಬರು ಮಕ್ಕಳನ್ನು ದತ್ತು ಪಡೆದು ಸಿಂಗಲ್ ಪೇರೆಂಟ್ ಆಗಿ ಸಾಕುತ್ತಿದ್ದರು. ವಿತರಕ ಅನಿಲ್ ತಂದಾನಿ ಅವರ ಜೊತೆಗೆ 2004ರಲ್ಲಿ ಮದುವೆ ಆಯ್ತು. ಆಮೇಲೆ ಇನ್ನಿಬ್ಬರು ಮಕ್ಕಳು ಹುಟ್ಟಿದರು. ಸೋ, ನಾಲ್ಕು ಮಕ್ಕಳ ಸಂಸಾರ ಅವರದ್ದು ಅಂತ ನೀವು ತಿಳ್ಕೊಂಡರೆ ನಿಮ್ಮ ಗೆಸ್ ತಪ್ಪಾಗುತ್ತೆ.
ಮಕ್ಕಳಷ್ಟೇ ಕಾಳಜಿಯಿಂದ ಕಾಣುವ ಐದಾರು ನಾಯಿ, ಬೆಕ್ಕುಗಳೂ ಇವರ ಮನೆಯಲ್ಲಿವೆ. ಏಂಜೆಲ್, ಕಡ್ಲೆಸ್, ಲೂಸಿಫರ್, ಪೂಮಾ, ಚೋಟು, ಬಾನ್ ಜೋವರ್.. ಇತ್ಯಾದಿ ಪೆಟ್ ಗಳು ಇವರ ಮನೆ ಮನಸ್ಸು ತುಂಬಿವೆ. ಹೇಗಿದ್ರೂ ಬಾಲಿವುಡ್ ಸ್ಟಾರ್ ಗಳು, ಬೇಕಾದಷ್ಟು ದುಡ್ಡಿರುತ್ತೆ, ಎಲ್ಲೆಲ್ಲಿಂದಲೋ ಪ್ರಾಣಿಗಳನ್ನು ತಂದು ಸಾಕುವ ದುಬಾರಿ ಹವ್ಯಾಸ ಇವರದು ಅಂದುಕೊಳ್ಳಬೇಡಿ. ಈ ನಾಯಿ, ಬೆಕ್ಕುಗಳೆಲ್ಲ ಬೀದಿ ಬದಿಯಲ್ಲಿ ಅನಾಥವಾಗಿ, ಗಾಯಗೊಂಡು ಸಿಕ್ಕಿದಂಥವು. ಅವುಗಳನ್ನೆಲ್ಲ ಅಕ್ಕರೆಯಿಂದ ತಂದು ಟ್ರೀಟ್ ಮೆಂಟ್, ವ್ಯಾಕ್ಸಿನ್ ಎಲ್ಲ ಮಾಡಿಸಿ ಮನೆ ಮಕ್ಕಳ ಹಾಗೆ ಸಾಕಿದ್ದಾರೆ ರವೀನಾ.
'ನನ್ನ ಬಳಿ ಇರುವ ಪೂಮಾ ಎಂಬ ಹೆಸರಿನ ಬೆಕ್ಕಿಗೂ ಎಲ್ಲ ನಾಯಿಗಳಿಗೂ ಸರಿಹೋಗಲ್ಲ. ಪೂಮಾಗೆ ಇಂಡಿಯನ್ ಪಪ್ಪಿ ಚೋಟು ನ ಕಂಡರೆ ಭಯ. ಲೂಸಿಫರ್, ಕಡ್ಲೆಸ್ ಕಂಡರೂ ಅಂಥಾ ಇಷ್ಟ ಇಲ್ಲ. ಆದರೆ ಪೂಮಾ ಮತ್ತು ಬಾನ್ ಜೋವರ್ ಬೆಸ್ಟ್ ಫ್ರೆಂಡ್ಸ್ ' ಸಂದರ್ಶವೊಂದರಲ್ಲಿ ತಮ್ಮ ಪ್ರಾಣಿಗಳ ಬಗ್ಗೆ ಅವರು ಹೀಗೆ ಹೇಳ್ತಾರೆ. ರವೀನಾ ಪತಿ ಅನಿಲ್ ಬೆಳಗ್ಗೆ ಬೇಗ ಎದ್ದು ವಾಕ್ ಮುಗಿಸಿ ಬರೋದು ಈ ಪೆಟ್ ಗಳ ಬಳಿಗೆ. ' ಅನಿಲ್ ಬಂದ ಕೂಡಲೇ ಅಷ್ಟೂ ಪಪ್ಪಿಗಳೂ ಇವರ ಸುತ್ತ ಸಾಲುಗಟ್ಟಿ ಕೂರುತ್ತವೆ. ಅನಿಲ್ ಕೈ ಯಲ್ಲೊಂದು ಕಪ್ ಟೀ ಹಿಡ್ಕೊಂಡು ಅವುಗಳಿಗೆಲ್ಲ ಬಿಸ್ಕೆಟ್ ಹಾಕಿ ಮಾತನಾಡಿಸ್ತಾರೆ. ಆಮೇಲೆ ಮಕ್ಕಳು, ನಾನು ಬಂದು ಮಾತನಾಡಿಸಿ ಆಟಾಡಿಸಿ ಹೋಗ್ತೀವಿ' ಅಂತ ಪಪ್ಪಿಗಳ ಜೊತೆಗಿನ ತಮ್ಮ ಒಡನಾಟವನ್ನು ವಿವರಿಸ್ತಾರೆ ರವೀನಾ.
ಪ್ರಧಾನಿ ಮೋದಿ ಮುಂದೆ ಒಂದೇ ಒಂದು ಬಯಕೆ ಇಟ್ಟ ಸನ್ನಿ ಲಿಯೋನ್!
ಸುಮಾರು ವರ್ಷಗಳ ಹಿಂದೆ ರವೀನಾ ವಾಕ್ ಮುಗಿಸಿ ಬರುವಾಗ ಒಂದು ಹೃದಯ ವಿದ್ರಾವಕ ಘಟನೆ ಕಂಡರು. ಯಾರೋ ನಾಯಿ ಮರಿಗೆ ಗಾಡಿ ಗುದ್ದಿಸಿ ಹೋಗಿದ್ದರು. ಆ ಮರಿ ನೋವಲ್ಲಿ ಚೀರಾಡುತ್ತಾ ಬಿದ್ದಿತ್ತು. ಕೂಡಲೇ ಅದನ್ನು ಎತ್ತಿಕೊಂಡು ಮನೆಗೆ ತಂದರು ರವೀನಾ. ಅದಕ್ಕೆ ಟ್ರೀಟ್ ಮೆಂಟೂ ಕೊಟ್ಟರು. ಆಮೇಲೆ ಅದನ್ನು ವಾಪಾಸ್ ಅದೇ ಜಾಗದಲ್ಲಿಡಲು ಮನಸ್ಸಾಗಲಿಲ್ಲ. ಮನೆಯಲ್ಲೇ ಸಾಕತೊಡಗಿದರು. ಹೀಗೆ ಗಾಯಗೊಂಡ, ರೋಗ ಹಿಡಿಸಿಕೊಂಡ ನಾಯಿ, ಬೆಕ್ಕು ರವೀನಾ ಮನೆ ಸೇರುತ್ತಾ ಹೋದವು. ತನ್ನ ನಾಲ್ವರು ಮಕ್ಕಳ ಜೊತೆಗೆ ಇವಕ್ಕೂ ತಾಯಿಯಾದರು ರವೀನಾ.