ಕಂಗನಾ ಏಕೆ ದೊಡ್ಡ ಹೀರೋಗಳ ಸಿನಿಮಾದಲ್ಲಿ ನಟಿಸೋದಿಲ್ಲ?

By Web Desk  |  First Published May 12, 2019, 9:43 AM IST

ಮಹಿಳೆಯರ ಬಗ್ಗೆ ಯಾವಾಗಲೂ ತಲೆಬುಡವಿಲ್ಲದ ಒಂದಷ್ಟುಗಾಸಿಪ್‌ಗಳು ಚಾಲ್ತಿಯಲ್ಲಿರುತ್ತವೆ. ಅದರಲ್ಲೂ ಆಕೆ ಯಶಸ್ವಿ ಮಹಿಳೆಯಾಗಿದ್ದರೆ ಆ ಸ್ಥಾನಕ್ಕೇರಲು ಅವಳು ಯಾರದ್ದೋ ಜೊತೆ ಮಲಗಿದ್ದಳು ಎಂದೇ ಜನ ಮಾತನಾಡಿಕೊಳ್ಳುತ್ತಾರೆ - ಕಂಗನಾ ರಾಣಾವತ್. 


ಮಹಿಳೆಯರ ಬಗ್ಗೆ ಯಾವಾಗಲೂ ತಲೆಬುಡವಿಲ್ಲದ ಒಂದಷ್ಟುಗಾಸಿಪ್‌ಗಳು ಚಾಲ್ತಿಯಲ್ಲಿರುತ್ತವೆ. ಆಕೆ ಯಶಸ್ವಿಯಾಗಿದ್ದರೆ ಆ ಸ್ಥಾನಕ್ಕೇರಲು ಯಾರದ್ದೋ ಜೊತೆ ಮಲಗಿದ್ದಳು ಎಂದು ಜನ ಮಾತನಾಡಿಕೊಳ್ಳುತ್ತಾರೆ. ಮಹಿಳೆಯರ ಲೈಂಗಿಕ ಬದುಕಿನ ಬಗ್ಗೆ ಮೇಲಿಂದ ಮೇಲೆ ವದಂತಿಗಳು ಹರಡುತ್ತಿರುತ್ತವೆ. ನನ್ನ ಬದುಕಿನಲ್ಲೂ ಇದು ಆಗಿದೆಯಾದರೂ ಇಂತಹ ವಿಷಯಗಳಲ್ಲಿ ನಾನೊಬ್ಬಳು ಅಸಾಮಾನ್ಯ ಹೆಣ್ಣು. 

ಹುಡುಗಿಯರು ಲವ್‌ ಲೆಟರ್‌ ಬರೆಯುವ ಅಥವಾ ಇಷ್ಟಪಟ್ಟಹುಡುಗರ ಜೊತೆ ಓಡಾಡುವ ವಯಸ್ಸಿನಲ್ಲಿ ನಾನು ಇಡೀ ದಿನ ಕಷ್ಟಪಟ್ಟು ಕೆಲಸ ಮಾಡಲು ಆರಂಭಿಸಿದ್ದೆ. ಆಗ ನನಗೆ 17 ವರ್ಷ. ಮಹೇಶ್‌ ಭಟ್‌ ಹಾಗೂ ಅವರಂತಹ ಸಾಮಾಜಿಕ ಚಿಂತಕರು ಮತ್ತು ಪ್ರತಿಭಾವಂತ ಕಲಾವಿದರ ಜೊತೆ ಕುಳಿತುಕೊಳ್ಳುತ್ತಿದ್ದೆ.

Tap to resize

Latest Videos

ಚಿಕ್ಕವರು ಅಂತಹ ದೊಡ್ಡ ವ್ಯಕ್ತಿಗಳ ಜೊತೆ ಕುಳಿತಾಗ ಸಾಮಾನ್ಯವಾಗಿ ಏನೂ ಮಾತನಾಡಲು ಸಾಧ್ಯವಿಲ್ಲ. ಅವರಾಡುವ ಮಾತುಗಳನ್ನು ಕೇಳಿಸಿಕೊಳ್ಳಬೇಕಷ್ಟೆ. ನಾನೂ ಕೂಡ ಬರಿದೆ ಕಿವಿಯಾಗುತ್ತಿದ್ದೆ.

ಸಣ್ಣ ವಯಸ್ಸಿನ ಖುಷಿಗಳು ನನಗೆ ಯಾವತ್ತೂ ಸಿಕ್ಕಿದ್ದಿಲ್ಲ. ನನ್ನ ವಯಸ್ಸಿನವರ ಜೊತೆ ನಾನು ಹೊರಗೆ ಹೋಗಿ ಆಟವಾಡಲಿಲ್ಲ. ಬಾಲ್ಯ ಕಳೆದು ಷೋಡಶಿಯಾಗುತ್ತಿದ್ದಂತೆ ನಾನು ಸಿನಿಮಾ ಸೆಟ್‌ನಲ್ಲಿದ್ದೆ. ನಟಿಯಾಗಬೇಕೆಂದು ಬಾಂಬೆಗೆ ಓಡಿಬಂದಿದ್ದೆ. ಅದಕ್ಕೂ ಮುನ್ನ ಹಿಮಾಚಲ ಪ್ರದೇಶದಲ್ಲಿರುವ ನನ್ನೂರಿನಿಂದ 16ನೇ ವಯಸ್ಸಿಗೇ ದೆಹಲಿಗೆ ಬಂದು ಮಾಡೆಲ್‌ ಆಗಿದ್ದೆ.

ನನ್ನನ್ನು ಡಾಕ್ಟರ್‌ ಮಾಡಬೇಕೆಂದು ಅಪ್ಪ-ಅಮ್ಮ ಕನಸು ಕಂಡಿದ್ದರು. ನನ್ನ ಕನಸಿನಲ್ಲಿ ಸಿನಿಮಾ ಇತ್ತು. ಆದರೆ, ಸಿನಿಮಾ ನಟರ ಕುಟುಂಬದಿಂದ ಬಂದಿಲ್ಲದೆ ಇರುವವರಿಗೆ ಈ ಕ್ಷೇತ್ರದಲ್ಲಿ ನೆಲೆಯೂರುವುದು ಸುಲಭವೇ? ನಾನೂ ಸಾಕಷ್ಟುಕಷ್ಟಪಟ್ಟೆ. ಆ ವಯಸ್ಸಿಗೇ ಚಿತ್ರರಂಗದಲ್ಲಿ ನನ್ನದು ಅಳಿವು-ಉಳಿವಿನ ಹೋರಾಟ. ಚಿಕ್ಕಂದಿನಿಂದಲೂ ನನ್ನದು ಒಂಥರಾ ಬಂಡಾಯದ ಮನಸ್ಥಿತಿಯೇ ಆಗಿದ್ದರಿಂದ ಚಿತ್ರರಂಗದಲ್ಲೂ ಅದು ಮುಂದುವರೆಯಿತು.

ನಾನು ಬಾಲಿವುಡ್‌ನ ಕೆಟ್ಟ ಹುಡುಗಿ!

ಸಿನಿಮಾ ಸ್ಟಾರ್‌ಗಳ ಮಕ್ಕಳಲ್ಲಿ ಸ್ವಲ್ಪ ಪ್ರತಿಭೆಯೂ ಇದ್ದುಬಿಟ್ಟರೆ ಅವರಿಗೆ ಯಶಸ್ಸು ಸುಲಭವಾಗಿ ಸಿಕ್ಕಿಬಿಡುತ್ತದೆ. ಆದರೆ, ನಿಜವಾದ ಯಶಸ್ಸು ಗಳಿಸಲು ಹಾಗೂ ಯಾವುದೇ ಕ್ಷೇತ್ರದಲ್ಲಿ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಏನಿಲ್ಲವೆಂದರೂ ಒಂದು ದಶಕ ಬೇಕೆಂಬುದು ಅವರಿಗೆ ಗೊತ್ತೇ? ಎಲ್ಲವೂ ಕೈಗೆಟಕುವಂತಿರುವ ಆರಾಮದ ಸ್ಥಿತಿಯಿಂದ ಸ್ಟಾರ್‌ ಮಕ್ಕಳ ವೃತ್ತಿಜೀವನ ಶುರುವಾಗುತ್ತದೆ. ಆದರೆ, ಸಿನಿಮಾ ಇಂಡಸ್ಟ್ರಿಗೆ ಹೊರಗಿನಿಂದ ಬಂದವರಲ್ಲಿ ಬಹಳ ಜನರಿಗೆ ಅಂತಹದ್ದೊಂದು ವೃತ್ತಿಜೀವನದ ಶುರುವಾತು ಸಿಗಲು ಜೀವಮಾನವಿಡೀ ಹಿಡಿಯುತ್ತದೆ! ನನಗೆ ಮೊದಲ ಯಶಸ್ಸು ಸಿಕ್ಕಿದ್ದು ಚಿತ್ರರಂಗಕ್ಕೆ ಕಾಲಿಟ್ಟ10 ವರ್ಷಗಳ ನಂತರ.

ನನ್ನ ಗ್ಯಾಂಗ್‌ಸ್ಟರ್‌ ಸಿನಿಮಾ ಹಿಟ್‌ ಆಯಿತು. ಅದಕ್ಕೂ ಮೊದಲು ಸಾಕಷ್ಟುದುರದೃಷ್ಟಕರ ಸನ್ನಿವೇಶಗಳನ್ನು ಎದುರಿಸಿದ್ದೆ. ಅಂತಹ ಕಷ್ಟಗಳೇ ನಮಗೆ ಧೈರ್ಯದ ಪಾಠ ಕಲಿಸುತ್ತವೆ. ಬೇರೆಯವರು ನಿಮ್ಮನ್ನು ತುಳಿಯಲು ಎಷ್ಟೇ ಪ್ರಯತ್ನಿಸಲಿ, ನಿಮ್ಮೊಳಗೊಂದು ಕೆಚ್ಚನ್ನು ಅವು ಹುಟ್ಟಿಸುತ್ತವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಗ್ಯಾಂಗ್‌ಸ್ಟರ್‌ ಸಿನಿಮಾ ಹಿಟ್‌ ಆದ ನಂತರ ನನಗೆ ಬಾಲಿವುಡ್‌ನ ಅಪ್ಪಟ ಕೆಟ್ಟಹುಡುಗಿಯಾಗುವ ಸ್ವಾತಂತ್ರ್ಯ ಸಿಕ್ಕಿತು.

ಗಂಡಸರ ಬಗ್ಗೆ ಏಕೆ ಮಾತಾಡೋದಿಲ್ಲ?

ಮಹಿಳೆಯರ ಬಗ್ಗೆ ಯಾವಾಗಲೂ ತಲೆಬುಡವಿಲ್ಲದ ಒಂದಷ್ಟುಗಾಸಿಪ್‌ಗಳು ಚಾಲ್ತಿಯಲ್ಲಿರುತ್ತವೆ. ಅದರಲ್ಲೂ ಆಕೆ ಯಶಸ್ವಿ ಮಹಿಳೆಯಾಗಿದ್ದರೆ ಆ ಸ್ಥಾನಕ್ಕೇರಲು ಅವಳು ಯಾರದ್ದೋ ಜೊತೆ ಮಲಗಿದ್ದಳು ಎಂದೇ ಜನ ಮಾತನಾಡಿಕೊಳ್ಳುತ್ತಾರೆ.

ಚಿತ್ರರಂಗದಲ್ಲಿ ಒಬ್ಬಳು ನಿರ್ಮಾಪಕಿ ದೊಡ್ಡದೊಂದು ಸಿನಿಮಾ ನಿರ್ಮಾಣಕ್ಕೆ ಕೈಹಾಕಿದಾಗಲೂ ಇದನ್ನೇ ಹೇಳುತ್ತಾರೆ. ನಮ್ಮ ಸಮಾಜದಲ್ಲಿ ಮಹಿಳೆಯರ ಲೈಂಗಿಕ ಬದುಕಿನ ಬಗ್ಗೆ ಮೇಲಿಂದ ಮೇಲೆ ವದಂತಿಗಳು ಹರಡುತ್ತಿರುತ್ತವೆ. ಆದರೆ, ಗಂಡಸರ ಬಗ್ಗೆ ಹಾಗೆ ಯಾರೂ ಮಾತನಾಡುವುದಿಲ್ಲ.

ನನ್ನ ಬದುಕಿನಲ್ಲೂ ಇದು ಆಗಿದೆಯಾದರೂ ಇಂತಹ ವಿಷಯಗಳಲ್ಲಿ ನಾನೊಬ್ಬಳು ಅಸಾಮಾನ್ಯ ಹೆಣ್ಣು. ನನ್ನ ಅನುಭವಗಳೆಲ್ಲ ಅತಿ ಎಂಬಷ್ಟುತೀವ್ರ. ನಾನು ಬಹಳ ಸೂಕ್ಷ್ಮ ಮನಸ್ಥಿತಿಯವಳಾಗಿದ್ದರೂ ಮನಸ್ಸಿಗೆ ಏನು ಹೇಳಬೇಕೆನ್ನಿಸುತ್ತದೆಯೋ ಅದನ್ನು ಹೇಳಿಬಿಡುತ್ತೇನೆ. ಅದಕ್ಕೆ ಬರುವ ಟೀಕೆಗಳಿಗೆ ಮುಕ್ತಳಾಗಿರುತ್ತೇನೆ.

ಎರಡು ವರ್ಷದ ಹಿಂದೆ ಕಾಫಿ ವಿತ್‌ ಕರಣ್‌ ಶೋದಲ್ಲಿ ಬಾಲಿವುಡ್‌ನಲ್ಲಿರುವ ಸ್ವಜನಪಕ್ಷಪಾತದ ಬಗ್ಗೆ ನಾನು ಮಾತನಾಡಿದ್ದು ದೊಡ್ಡ ವಿವಾದವಾಗಿತ್ತು. ನಿಜ ಹೇಳಬೇಕೆಂದರೆ ನನಗದು ಯಾವ ರೀತಿಯಲ್ಲೂ ತಟ್ಟಲಿಲ್ಲ. ಏಕೆಂದರೆ ನಾನೀಗ ಚಿತ್ರರಂಗದಲ್ಲಿ ನನ್ನದೇ ಸ್ಥಾನ ಕಂಡುಕೊಂಡಿದ್ದೇನೆ. ನನ್ನದೇ ಪ್ರೊಡಕ್ಷನ್‌ ಹೌಸ್‌ ಇದೆ. ಮನಾಲಿಯಲ್ಲೊಂದು ಸುಂದರ ಮನೆ ಕಟ್ಟಿಕೊಂಡಿದ್ದೇನೆ. ಬೇಜಾರಾದಾಗ ಅಲ್ಲಿಗೆ ಹೋಗಿ ನನ್ನ ಪಾಡಿಗೆ ಇದ್ದುಬಿಡುತ್ತೇನೆ.

ನನಗೆ ಸ್ಟಾರ್‌ ನಟರು ಬೇಡ

ಚಿತ್ರರಂಗದಲ್ಲಿ ಮಹಿಳೆಯರಿಗೆ ಒಂದಷ್ಟುಟಿಪಿಕಲ್‌ ಪಾತ್ರಗಳನ್ನು ನಿಗದಿಪಡಿಸಿಟ್ಟಿದ್ದಾರೆ. ಸ್ತ್ರೀ ಪಾತ್ರಗಳು ಅಳಬೇಕು. ಗಂಡಸು ಬಿಟ್ಟುಹೋದ ನಂತರ ಗೋಳಾಡಬೇಕು. ಸಿನಿಮಾದಲ್ಲಿ ಸ್ತ್ರೀಯರ ಪಾತ್ರಗಳು ಯಾವಾಗಲೂ ಪುರುಷ ಪಾತ್ರಗಳ ಸುತ್ತ ಸುತ್ತುತ್ತವೆ. ನನಗೆ ಅಂತಹ ಪಾತ್ರಗಳು ಇಷ್ಟವಿಲ್ಲ. ಇಷ್ಟಕ್ಕೂ ನಾನು ಬಾಲಿವುಡ್‌ನ ಮುಂಚೂಣಿ ನಟಿಯರಲ್ಲೊಬ್ಬಳು.

ನಟನೆಗಾಗಿ ಮೂರು ರಾಷ್ಟ್ರಪ್ರಶಸ್ತಿ ಪಡೆದಿದ್ದೇನೆ. ನನ್ನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲೂ ಚೆನ್ನಾಗಿ ಓಡುತ್ತವೆ. ಕೆಲ ಸಿನಿಮಾಗಳು ದಾಖಲೆಗಳನ್ನೇ ಮುರಿದಿವೆ. ಹಾಗಾಗಿ ಕ್ವೀನ್‌ನಂತಹ ಸ್ತ್ರೀ ಪ್ರಧಾನ ಸಿನಿಮಾಗಳಲ್ಲಷ್ಟೇ ಅಭಿನಯಿಸುತ್ತೇನೆ. ಒಂದು ಪಾತ್ರಕ್ಕಾಗಿ ನನ್ನೆಲ್ಲಾ ಸಮಯವನ್ನು ವಿನಿಯೋಗಿಸುವಾಗ, ನನ್ನ ಹೃದಯ ಹಾಗೂ ಆತ್ಮವನ್ನು ಅದರಲ್ಲಿ ತೊಡಗಿಸುವಾಗ ನಾನೇಕೆ ಬೇರೆಯವರನ್ನು ವೈಭವೀಕರಿಸುವ ಪಾತ್ರದಲ್ಲಿ ನಟಿಸಲಿ? ಜನರು ಕೂಡ ನನ್ನಿಂದ ಒಂದಷ್ಟುನಿರೀಕ್ಷೆಗಳನ್ನು ಹೊಂದಿರುತ್ತಾರೆ. ಹಾಗಾಗಿ ಪ್ರಮುಖ ಪಾತ್ರದಲ್ಲೇ ನಟಿಸುತ್ತೇನೆ. ಹಾಗೆ ಮಾಡದಿದ್ದಾಗೆಲ್ಲ ನನ್ನ ಸಿನಿಮಾಗಳು ಸೋತಿವೆ. ಜನಪ್ರಿಯ ನಟನ ಜೊತೆ ನಾನು ನಟಿಸಿದ ಯಾವ ಸಿನಿಮಾಗಳೂ ಹಿಟ್‌ ಆಗಿಲ್ಲ. ಸಿನಿಮಾ ಓಡುವುದಿಲ್ಲ ಅಂತಾದರೆ ದೊಡ್ಡ ಸ್ಟಾರ್‌ಗಳ ಜೊತೆ ಏಕೆ ನಟಿಸಲಿ?

ನಮ್ಮದು ರೋಗಗ್ರಸ್ತ ಸಮಾಜ

ಚಿತ್ರರಂಗದಲ್ಲಿ ಬಹಳ ಯುವತಿಯರಿಗೆ ಕೆಟ್ಟಅನುಭವಗಳಾಗುತ್ತವೆ. ಇಲ್ಲೊಂದೇ ಏಕೆ, ಹೊರಗಿನ ಸಮಾಜದಲ್ಲೂ ಆಗುತ್ತವೆ. ಅದಕ್ಕೆ ಮದ್ದಿರುವುದು ಸ್ತ್ರೀವಾದದಲ್ಲಿ. ಸ್ತ್ರೀವಾದ ಅಂದರೇನು? ಸಮಾನತೆ. ಸ್ತ್ರೀವಾದ ಎಂಬುದೊಂದು ಕಾನ್ಸೆಪ್ಟ್‌ ಅಲ್ಲ. ಅದು ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ.

ಇತ್ತೀಚೆಗೆ ಇಂತಹ ವಿಷಯಗಳ ಬಗ್ಗೆ ಹೆಚ್ಚೆಚ್ಚು ಚರ್ಚೆಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ನಾವು ಕೂಡ ಇದನ್ನು ಮೇಲಿಂದ ಮೇಲೆ ಪ್ರಸ್ತಾಪಿಸಬೇಕು. ಏಕೆಂದರೆ ನಮ್ಮಲ್ಲೂ ಪುರುಷರಲ್ಲೂ ಒಂದೇ ರಕ್ತ ಹರಿಯುತ್ತಿದೆ. ನಾವೂ ಅವರಷ್ಟೇ ಕೆಲಸ ಮಾಡುತ್ತೇವೆ.

ಹಾಗಾಗಿ ಅವರಷ್ಟೇ ಸಂಬಳ ಪಡೆಯಲೂ ಅರ್ಹರಾಗುತ್ತೇವೆ. ಸಮಾಜದಲ್ಲಿರುವ ಈ ಸಮಾನತೆಯ ಕೊರತೆಗೆ ಪರಿಹಾರ ಮಹಿಳಾವಾದ. ನಾವು ರೋಗಗ್ರಸ್ತ ಸಮಾಜದಲ್ಲಿ ಬದುಕುತ್ತಿದ್ದೇವೆ. ಅದಕ್ಕೆ ಸ್ತ್ರೀವಾದವೇ ಔಷಧ.

ಯಶಸ್ಸು, ನಿರೀಕ್ಷೆಯ ವಿಷಚಕ್ರ

ಚಿತ್ರನಟಿಯಾಗಬೇಕೆಂದು ಊರುಬಿಟ್ಟು ಓಡಿಬಂದು, ಕಷ್ಟಪಟ್ಟು ಯಶಸ್ಸನ್ನೂ ಗಳಿಸಿದ ಮೇಲೆ ಇತ್ತೀಚೆಗೆ ನನ್ನ ಬಗ್ಗೆ ನಾನೇ ಅತಿಯಾದ ನಿರೀಕ್ಷೆ ಇರಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದ್ದೆ. ಅಂತಹ ಸಮಯದಲ್ಲಿ ನನ್ನನ್ನು ಮತ್ತೆ ವಾಸ್ತವಕ್ಕೆ ಕರೆದುಕೊಂಡು ಬಂದಿದ್ದು ರಂಗೂನ್‌ ಸಿನಿಮಾದ ಸೋಲು.

ಆ ಸಿನಿಮಾ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆ. ಅದು ಸೋತಿದ್ದು ನನ್ನ ವೃತ್ತಿ ಬದುಕಿಗೆ ರಿಯಾಲಿಟಿ ಚೆಕ್‌ನಂತಾಯಿತು. ನಮ್ಮಿಂದ ನಾವು ಬಹಳ ನಿರೀಕ್ಷೆ ಇರಿಸಿಕೊಳ್ಳಬಾರದು ಎಂಬುದನ್ನು ಆ ಸೋಲು ನನಗೆ ಕಲಿಸಿತು. ನಾವು ಯಶಸ್ಸಿನ ಜೊತೆಗಾಗಲೀ, ನಿರೀಕ್ಷೆಗಳ ಜೊತೆಗಾಗಲೀ ಮೋಹ ಬೆಳೆಸಿಕೊಳ್ಳಬಾರದು. ಅದೊಂಥರಾ ವಿಷಚಕ್ರವಿದ್ದಂತೆ. ಅದರಿಂದ ಹೊರಬಂದರೆ ನಮ್ಮಿಂದ ನಾವೇ ಸ್ವಾತಂತ್ರ್ಯ ಗಳಿಸಿಕೊಳ್ಳುತ್ತೇವೆ. ಅಂತಹ ಸ್ವಾತಂತ್ರ್ಯ ನನಗೀಗ ಸಿಕ್ಕಿದೆ.

- ಕಂಗನಾ ರಾಣಾವತ್, ಬಾಲಿವುಡ್ ನಟಿ 

click me!