
ಭೋಪಾಲ್ನ ಚರ್ಚಿತ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಘಾತಕಾರಿ ವಿವರಗಳು ಬಹಿರಂಗವಾಗಿವೆ. ಸಿಬಿಐ ಪ್ರಕಾರ, 34 ವರ್ಷದ ಮಾಜಿ ಮಿಸ್ ಪುಣೆ ತ್ವಿಶಾ ಸಾವು ಕೊಲೆಯಲ್ಲ, ಆತ್ಮಹತ್ಯೆ ಎಂಬುದು ಬಹಿರಂಗವಾಗಿದೆ. ನಿರಂತರ ಮಾನಸಿಕ ಕಿರುಕುಳದಿಂದ ಬೇಸತ್ತು ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
30 ಪುಟಗಳ ಚಾರ್ಜ್ಶೀಟ್ನಲ್ಲಿ ತ್ವಿಶಾ ಸಾವಿಗೂ ಮುನ್ನ ನಡೆದ ಕೊನೆಯ ಸುಮಾರು 90 ನಿಮಿಷಗಳ ಘಟನೆಗಳ ವಿವರ, ಸಿಸಿಟಿವಿ ದೃಶ್ಯಗಳು, ವಾಟ್ಸಾಪ್ ಸಂದೇಶಗಳು, ಕರೆ ದಾಖಲೆಗಳು, ಕೌನ್ಸೆಲಿಂಗ್ ವರದಿಗಳು ಹಾಗೂ ಹಣಕಾಸಿನ ವಿವಾದದ ಮಾಹಿತಿಯನ್ನು ದಾಖಲಿಸಲಾಗಿದೆ.
ಚಾರ್ಜ್ಶೀಟ್ ಪ್ರಕಾರ, ರಾತ್ರಿ 9.20ಕ್ಕೆ ತ್ವಿಶಾ ತನ್ನ ಅತ್ತಿಗೆ ರಾಶಿಗೆ ಕರೆ ಮಾಡಿದ್ದರು. ಅವರು ಅಳುತ್ತಾ, ಬೆನ್ನು ನೋವಿನ ಕಾರಣ ಪತಿ ಸಮರ್ಥ್ಗೆ ಬೇರೆ ಕೋಣೆಯಲ್ಲಿ ಮಲಗುವಂತೆ ಹೇಳಿದ್ದಕ್ಕೆ ಆತ ಆಕ್ರಮಣಕಾರಿಯಾಗಿ ವರ್ತಿಸಿದ್ದಾನೆ ಎಂದು ತಿಳಿಸಿದ್ದರು. 9.29ಕ್ಕೆ ಮತ್ತೆ ಕರೆ ಬಂದರೂ, ತ್ವಿಶಾ ಅಳುತ್ತಿದ್ದ ಕಾರಣ ಹೆಚ್ಚಿನ ಮಾತುಕತೆ ಸಾಧ್ಯವಾಗಲಿಲ್ಲ. ರಾತ್ರಿ 9.36ಕ್ಕೆ ಅವರು ತಮ್ಮ ಅತ್ತಿಗೆಗೆ ಕೊನೆಯ ಸಂದೇಶ ಕಳುಹಿಸಿದ್ದರು ಎಂದು ಸಿಬಿಐ ಹೇಳಿದೆ. ಅದರಲ್ಲಿ, ಅವನಿಗೆ ತನ್ನ ಹೆಂಡತಿಯ ಡೆಡ್ ಬಾಡಿಯನ್ನು ತೆಗೆದುಕೊಂಡು ಹೋಗಲು ಹೇಳಿ, ಆದರೆ ನಾಳೆ. ನನಗೆ ಈಗ ಶಾಂತಿಯಿಂದ ಸಾಯಲು ಬಿಡಿ ಎಂದು ಬರೆದಿದ್ದರು ಎನ್ನಲಾಗಿದೆ.
ಸಿಸಿಟಿವಿ ದೃಶ್ಯಗಳ ಪ್ರಕಾರ, 9.40ಕ್ಕೆ ತ್ವಿಶಾ ಒಬ್ಬರೇ ಮೆಟ್ಟಿಲುಗಳ ಮೂಲಕ ಮೇಲ್ಛಾವಣಿಯತ್ತ ತೆರಳಿದ್ದಾರೆ. 9.41ಕ್ಕೆ ತಂದೆಗೆ ಕರೆ ಮಾಡಿ, ಸಮರ್ಥ್ ತುಂಬಾ ಆಕ್ರಮಣಕಾರಿಯಾಗಿದ್ದಾನೆ, ತಕ್ಷಣ ಬರುವಂತೆ ತಿಳಿಸಿದ್ದಾರೆ. ರಾತ್ರಿ 10.5ಕ್ಕೆ ಇದೇ ವಿಚಾರವನ್ನು ತಾಯಿಗೂ ತಿಳಿಸಿದ್ದಾರೆ. ನಂತರ ಕುಟುಂಬಸ್ಥರು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ.
10.10ಕ್ಕೆ ತಾಯಿ ಗಿರಿಬಾಲಾ ಸಿಂಗ್ ಅವರಿಗೆ ಕರೆ ಮಾಡಿ ತ್ವಿಶಾಳನ್ನು ನೋಡಿಕೊಳ್ಳುವಂತೆ ತಿಳಿಸಿದ್ದಾರೆ. 10.16ಕ್ಕೆ ಗಿರಿಬಾಲಾ ಕೆಳಗಿನ ಕೋಣೆಗೆ ತೆರಳಿದ್ದು, 10.18ಕ್ಕೆ ತ್ವಿಶಾ ಗೆ ಕರೆ ಮಾಡಿದ್ದಾರೆ. 10.21ಕ್ಕೆ ಸಮರ್ಥ್ಗೆ ಕರೆ ಮಾಡಲಾಗಿದೆ. 10.23ಕ್ಕೆ ಗಿರಿಬಾಲಾ ಮತ್ತು ಸಮರ್ಥ್ ಸಿಸಿಟಿವಿಯಲ್ಲಿ ಮೇಲ್ಛಾವಣಿಯತ್ತ ತೆರಳುತ್ತಿರುವುದು ಕಂಡುಬಂದಿದೆ. ನಂತರ ತ್ವಿಶಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ರಾತ್ರಿ 10.55ಕ್ಕೆ ಏಮ್ಸ್ ಭೋಪಾಲ್ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮೊದಲ ಪೋಸ್ಟ್ಮಾರ್ಟಂ ವರದಿ ಕುರಿತು ಕುಟುಂಬಸ್ಥರು ಪ್ರಶ್ನೆಗಳನ್ನು ಎತ್ತಿದ ನಂತರ, ಮಧ್ಯಪ್ರದೇಶ ಹೈಕೋರ್ಟ್ ಆದೇಶದ ಮೇರೆಗೆ ಏಮ್ಸ್ ದೆಹಲಿಯ ವೈದ್ಯಕೀಯ ಮಂಡಳಿ ಮರುಪೋಸ್ಟ್ಮಾರ್ಟಂ ನಡೆಸಿತ್ತು. ಸಿಬಿಐ ಚಾರ್ಜ್ಶೀಟ್ ಪ್ರಕಾರ, ಮರುಪೋಸ್ಟ್ಮಾರ್ಟಂ ವರದಿಯಲ್ಲಿ ನೇಣು ಬಿಗಿದ ಪರಿಣಾಮ ಉಸಿರುಗಟ್ಟುವಿಕೆಯಿಂದ ಸಾವು ಸಂಭವಿಸಿದೆ ಎಂದು ತಿಳಿಸಲಾಗಿದೆ.
ಆನ್ಲೈನ್ ಪರಿಚಯ, ಮದುವೆ ಮತ್ತು ವೈವಾಹಿಕ ಕಲಹ
ಚಾರ್ಜ್ಶೀಟ್ ಪ್ರಕಾರ, 2025ರ ಫೆಬ್ರವರಿಯಲ್ಲಿ ಆನ್ಲೈನ್ ಡೇಟಿಂಗ್ ಆ್ಯಪ್ ಮೂಲಕ ತ್ವಿಶಾ ಮತ್ತು ಸಮರ್ಥ್ ಪರಿಚಯವಾಗಿದ್ದರು. 2025ರ ಡಿಸೆಂಬರ್ 9ರಂದು ಇಬ್ಬರೂ ಮದುವೆಯಾಗಿದ್ದರು. ಮದುವೆಯ ನಂತರ ಸಮರ್ಥ್ ತ್ವಿಶಾಳ ಹಿಂದಿನ ಸಂಬಂಧಗಳ ಕುರಿತು ಅವಮಾನಕರ ಹಾಗೂ ಅನೈತಿಕ ಟೀಕೆಗಳನ್ನು ಮಾಡುತ್ತಿದ್ದ ಎಂದು ಸಿಬಿಐ ಆರೋಪಿಸಿದೆ. ಈ ಬಗ್ಗೆ ತ್ವಿಶಾ ಅತ್ತೆಗೆ ದೂರು ನೀಡಿದಾಗಲೆಲ್ಲಾ ಅವರು ಮಗನ ಪರ ನಿಂತಿದ್ದರು ಎನ್ನಲಾಗಿದೆ.
2026ರ ಮಾರ್ಚ್ನಲ್ಲಿ ತ್ವಿಶಾಳ ತಂದೆಗೆ ಹೃದಯಾಘಾತವಾದಾಗ, ಚಿಕಿತ್ಸೆಗಾಗಿ ಅವರು ತವರು ಮನೆಗೆ ತೆರಳಿದ್ದರು. ಆದರೆ ಭೋಪಾಲ್ಗೆ ಹಿಂದಿರುಗುವಂತೆ ಪತಿ ಮತ್ತು ಅತ್ತೆ ಒತ್ತಡ ಹೇರಿದ್ದರೆಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ನಂತರ ಮಾರ್ಚ್ 24ರಂದು ಅವರು ಭೋಪಾಲ್ಗೆ ಮರಳಿದ್ದರು.
ಗರ್ಭಧಾರಣೆ, ಗರ್ಭಪಾತದ ಒತ್ತಡ ಮತ್ತು ಕಿರುಕುಳದ ಆರೋಪ
ಏಪ್ರಿಲ್ 16ರಂದು ತ್ವಿಶಾಗೆ ತಾನು ಗರ್ಭಿಣಿಯಾಗಿರುವುದು ತಿಳಿದುಬಂದಿತ್ತು. ವೈವಾಹಿಕ ಸಂಬಂಧದಲ್ಲಿನ ಒತ್ತಡದಿಂದಾಗಿ ಮಗುವನ್ನು ಮುಂದುವರಿಸುವ ಬಗ್ಗೆ ಅವರು ಗೊಂದಲದಲ್ಲಿದ್ದರು ಎನ್ನಲಾಗಿದೆ. ಏಪ್ರಿಲ್ 17ರಂದು ಈ ವಿಚಾರವಾಗಿ ಪತಿ-ಪತ್ನಿ ನಡುವೆ ವಿವಾದ ಉಂಟಾಗಿದ್ದು, ನಂತರ ತ್ವಿಶಾ ತವರು ಮನೆಗೆ ತೆರಳಿದ್ದರು.
ಏಪ್ರಿಲ್ 30ರಂದು ಅವರಿಗೆ ಪ್ಯಾನಿಕ್ ಅಟ್ಯಾಕ್ ಬಂದಿದ್ದು, ಮನೋವೈದ್ಯರ ಬಳಿ ಕರೆದೊಯ್ಯಲಾಗಿತ್ತು. ಮೇ 6ರಂದು ಅವರು ತಮ್ಮ ಹಳೆಯ ಉದ್ಯೋಗಕ್ಕೆ ಮರಳುವ ಅವಕಾಶವನ್ನು ಸ್ವೀಕರಿಸಿದ್ದರು. ಅದೇ ದಿನ ಗರ್ಭಪಾತಕ್ಕಾಗಿ ಮೊದಲ ಔಷಧಿ ತೆಗೆದುಕೊಂಡಿದ್ದರು ಎನ್ನಲಾಗಿದೆ. ಮೇ 7ರಂದು ಸಾಸು ಗಿರಿಬಾಲಾ ಅವರನ್ನು ಆಸ್ಪತ್ರೆಗೆ ಕರೆದೊಯ್ದು, ಗರ್ಭಪಾತವನ್ನು ನಿಲ್ಲಿಸಲು ಸಾಧ್ಯವೇ ಎಂದು ವೈದ್ಯರನ್ನು ಕೇಳಿದ್ದರು. ಆದರೆ ವೈದ್ಯರು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕೌನ್ಸೆಲಿಂಗ್ ವೇಳೆ ತ್ವಿಶಾ ಅಳುತ್ತಾ, ಗರ್ಭಪಾತ ಮಾಡಿಸಿಕೊಳ್ಳುತ್ತಿರುವ ಕಾರಣಕ್ಕೆ ಅತ್ತೆ ತಮ್ಮನ್ನು ದೂರಿದ್ದರು ಎಂದು ಆರೋಪಿಸಿದ್ದಾರೆ. ಮೇ 8ರಂದು ಎರಡನೇ ಔಷಧಿ ತೆಗೆದುಕೊಂಡ ನಂತರ ತೀವ್ರ ನೋವಿನಿಂದ ಬಳಲುತ್ತಿದ್ದಾಗಲೂ ಸಮರ್ಥ್ಮ, ಪತ್ನಿ ಬೆಂಬಲಕ್ಕೆ ಬಂದಿರಲಿಲ್ಲ.
ಮೇ 9ರಂದು ಸಮರ್ಥ್, ಗರ್ಭದಲ್ಲಿರುವ ಮಗು ತನ್ನದೇ ಎಂಬುದರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾನೆ ಎಂದು ಸಿಬಿಐ ಆರೋಪಿಸಿದೆ. ಇದಾದ ಬಳಿಕ ತ್ವಿಶಾ ತನ್ನ ತಾಯಿಗೆ ನನ್ನ ಉಸಿರೇ ಇಲ್ಲಿ ಕಟ್ಟಿಹೋಗುತ್ತಿದೆ ಎಂಬ ಅರ್ಥದ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.
20 ಲಕ್ಷದ ಷೇರು ಹಣದ ವಿವಾದ
ದಂಪತಿಯ ನಡುವಿನ ವಿವಾದದಲ್ಲಿ ಹಣಕಾಸಿನ ವಿಚಾರವೂ ಪ್ರಮುಖವಾಗಿತ್ತು ಎಂದು ಚಾರ್ಜ್ಶೀಟ್ ಹೇಳುತ್ತದೆ. ತ್ವಿಶಾ ಅವರ ಡಿಮ್ಯಾಟ್ ಖಾತೆಯಲ್ಲಿ ಸುಮಾರು 20 ಲಕ್ಷ ಮೌಲ್ಯದ ಷೇರುಗಳಿದ್ದವು ಎನ್ನಲಾಗಿದೆ. ಈ ಹಣವನ್ನು ಸಮರ್ಥ್ ಮತ್ತು ಅವರ ತಾಯಿ, ಏಪ್ರಿಲ್ 7ರಂದು ತೆರೆಯಲಾಗಿದ್ದ ಜಂಟಿ ಖಾತೆಗೆ ವರ್ಗಾಯಿಸುವಂತೆ ಒತ್ತಡ ಹೇರಿದ್ದರು ಎಂದು ಸಿಬಿಐ ಆರೋಪಿಸಿದೆ. ಸಮರ್ಥ್ ಈ ಹಣವನ್ನು ಚೀನಾದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದ್ದ ಎನ್ನಲಾಗಿದೆ. ಆದರೆ ತ್ವಿಶಾ ಹಣ ತನ್ನ ತಂದೆಗೆ ಸೇರಿದ್ದು, ಅದನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರು. ಪ್ರಕರಣದಲ್ಲಿ ತ್ವಿಶಾ ಅವರ ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳನ್ನು ಸಿಬಿಐ ದಾಖಲಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.