ಡ್ರಗ್ಸ್ ಕೇಸ್ನಲ್ಲಿ ಸಿಲುಕಿರುವ ಆರ್ಯನ್ ಖಾನ್ರನ್ನು ಅರೆಸ್ಟ್ ಮಾಡಿದ ಅಧಿಕಾರಿ ಸಮೀರ್ ವಾಂಖೆಡೆ ಅವರ ಪತ್ನಿ ಕೆಲವೊಂದು ವಿಷಯ ಬಹಿರಂಗಗೊಳಿಸಿದ್ದಾರೆ. ಏನದು?
ಎರಡು ವರ್ಷಗಳ ಹಿಂದೆ ಅಂದರೆ 2021ರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಸಿಲುಕಿರುವುದು ಎಲ್ಲರಿಗೂ ತಿಳಿದೇ ಇದೆ. ಕ್ರೂಸ್ ಡ್ರಗ್ಸ್ ಪ್ರಕರಣ (Cruise Drugs Case) ಎಂದು ಇದು ಫೇಮಸ್ ಆಗಿತ್ತು. ಶಾರುಖ್ ಪುತ್ರ ಆರ್ಯನ್ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಅವರ ಮಕ್ಕಳು ಈ ಕೇಸ್ನಲ್ಲಿ ಸಿಲುಕಿದ್ದರಿಂದ ಇದು ಭಾರಿ ಸದ್ದು ಮಾಡಿತ್ತು. ಈ ಘಟನೆಯಿಂದ ಶಾರುಖ್ ಖಾನ್ ಜರ್ಜರಿತರಾಗಿದ್ದೂ ಸುಳ್ಳಲ್ಲ. ಇಂದಿಗೂ ಇದರ ಕುರಿತು ಚರ್ಚೆಯಾಗುತ್ತಲೇ ಇದೆ. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು.
ಅಂತಿಮವಾಗಿ ಅವರು ಅಕ್ಟೋಬರ್ 30 ರಂದು ತಮ್ಮ ತಂದೆಯ ಹುಟ್ಟುಹಬ್ಬದ (Birthday) ಸಮಯದಲ್ಲಿ ಜೈಲಿನಿಂದ ಹೊರಬಂದಿದ್ದರು. ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶುಕ್ರವಾರ 6 ಸಾವಿರ ಪುಟಗಳ ಚಾರ್ಜ್ ಶೀಟ್ (Chargesheet) ಸಲ್ಲಿಕೆ ಮಾಡಿದ್ದು, 14 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ. ಹಲವರು ಇನ್ನೂ ಕೇಸ್ನಲ್ಲಿ ಒಳಗೇ ಇದ್ದರೆ, ಆರ್ಯನ್ ಖಾನ್ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದರು. ಆದರೆ ಕುತೂಹಲದ ಬೆಳವಣಿಗೆಯಲ್ಲಿ, ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ (Cleanchit) ಅಂದರೆ ಅವರ ನಿರಪರಾಧಿ ಎಂದು ಸಾಬೀತು ಮಾಡಲು ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳದ ಹಿಂದಿನ ಅಧಿಕಾರಿ ಸಮೀರ್ ವಾಂಖೇಡೆ 25 ಕೋಟಿ ರೂ. ಲಂಚ ಕೇಳಿದ್ದ ಗಂಭೀರ ಆರೋಪ ಕೇಳಿಬಂದಿತ್ತು. ಡ್ರಗ್ಸ್ ಪ್ರಕರಣದಲ್ಲಿ ತಾವೇ ಹಿಡಿದಿದ್ದ ಆರ್ಯನ್ ಖಾನ್‌ಗೆ ಕ್ಲೀನ್‌ಚಿಟ್ ಕೊಡಿಸಲು ಸಮೀರ್ ವಾಂಖೇಡೆ ತಂತ್ರ ರೂಪಿಸಿದ್ದರು. ಇದಕ್ಕಾಗಿ 25 ಕೋಟಿ ರೂ. ಕೇಳಿದ್ದರು. ಡೀಲ್ ಅನ್ನು ಈಗಾಗಲೇ ಬಂಧಿತರಾಗಿರುವ ಮಧ್ಯವರ್ತಿ ಕೆ.ಪಿ. ಗೋಸಾವಿ ಹಾಗೂ ಸ್ಯಾನ್ವಿಲ್ ಡಿ’ಸೋಜಾ ಅವರ ಮೂಲಕ ಕುದುರಿಸಿದ್ದರು. ಗೋಸಾವಿ ಹಾಗೂ ಡಿ’ಸೋಜಾ ಕೊನೆಗೆ 18 ಕೋಟಿ ರೂಗೆ ಡೀಲ್ ಅಂತಿಮಗೊಳಿಸಿದರು ಹಾಗೂ 50 ಲಕ್ಷ ರೂ. ಟೋಕನ್ ಅಡ್ವಾನ್ಸ್ ಪಡೆದರು. ಈ ಪೈಕಿ ಕೊಂಚ ಹಣವನ್ನು ಆರ್ಯನ್‌ಗೇ ನಂತರ ಮರಳಿಸಿದ್ದರು ಎಂದು ಸಿಬಿಐ ದಾಖಲು ಮಾಡಿರುವ ಎಫ್ಐಆರ್ನಲ್ಲಿ ಹೇಳಲಾಗಿದೆ.
ಡ್ರಗ್ಸ್ ಕೇಸ್ನಲ್ಲಿ ಆರ್ಯನ್ ಜೈಲಲ್ಲಿದ್ದಾಗ ತನಿಖಾಧಿಕಾರಿಗೆ ಶಾರುಖ್ ಬರೆದ ಪತ್ರ ವೈರಲ್
ಆದರೆ ಆರ್ಯನ್ ಖಾನ್ ಅವರನ್ನು ಅರೆಸ್ಟ್ ಮಾಡಿದುದಕ್ಕಾಗಿ ತಮ್ಮನ್ನು ಹೇಗೆ ಸಿಲುಕಿಸುತ್ತಿದ್ದಾರೆ ಎಂದು ವಾಂಖೆಡೆ ಈ ಹಿಂದೆಯೇ ಹೇಳಿದ್ದರು. ನಿಯತ್ತಾಗಿ ಕೆಲಸ ಮಾಡಿದರೆ ಸಿಗುವ ಶಿಕ್ಷೆ ಇದು ಎಂದು ಅವರ ಪತ್ನಿ ಕ್ರಾಂತಿ ರೆಡ್ಕಾರ್ (Kranti Redkar) ಕೂಡ ದುಃಖಿತರಾಗಿದ್ದರು. ಇದೀಗ ಮತ್ತೊಮ್ಮೆ ಆ ವಿಚಾರ ಮುನ್ನೆಲೆಗೆ ಬಂದಿದೆ. ಆರ್ಯನ್ನನ್ನು ಅರೆಸ್ಟ್ ಮಾಡಿ ದಕ್ಷ ಅಧಿಕಾರಿ ಎನಿಸಿಕೊಂಡಿದ್ದರೂ ನಂತರದಲ್ಲಿ ತಮ್ಮ ಪತಿಯನ್ನು ಹೇಗೆ ಸಿಲುಕಿಸಿದರು, ಆರ್ಯನ್ ಡ್ರಗ್ಸ್ ಕೇಸ್ ಹೇಗೆಲ್ಲಾ ತಿರುವು ಪಡೆದು ಕೊನೆಗೆ ತಮ್ಮ ಪತಿಯನ್ನೇ ಆರೋಪಿ ಸ್ಥಾನದಲ್ಲಿ ಹೇಗೆ ನಿಲ್ಲಿಸಿದರು ಎಂಬ ಬಗ್ಗೆ ಕ್ರಾಂತಿ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪತಿಯ ದಕ್ಷತೆಯ ಕುರಿತೂ ಮಾತನಾಡಿದ್ದಾರೆ. ಅಮೃತಾ ಹಾಗೂ ಆರ್ಜೆ ಅನ್ಮೋಲ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕ್ರಾಂತಿಯವರು ನೋವಿನಿಂದ ಈ ವಿಷಯ ತಿಳಿಸಿದ್ದಾರೆ.
ನನ್ನ ಪತಿಯ ಕೆಲಸ ನೋಡದೆ ಅವರನ್ನೇ ಆರೋಪಿಯನ್ನಾಗಿಸಲಾಯಿತು. ಅವರು ಕೆಲಸ ಮಾಡುವ ರೀತಿ ನೋಡದೆ ಜಡ್ಜ್ ಮಾಡಿದ್ದು ತುಂಬಾ ಬೇಸರದ ವಿಷಯ ಎಂದರು. ನನ್ನ ಮೈದುನ ಪೊಲೀಸ್ ಇಲಾಖೆಯಲ್ಲಿದ್ದಾರೆ. ಅವರು ಒಮ್ಮೆ ತುಂಬಾ ಬೆದರುತ್ತಲೇ ಬಂದು, ಸಮೀರ್ ಅವರಿಗೆ ಯಾವುದೇ ಟೀಮ್ ಲೀಡ್ ಮಾಡದಂತೆ ಬುದ್ಧಿ ಹೇಳಿ ಎಂದು ನನಗೆ ಹೇಳಿದ್ದರು. ಇದಕ್ಕೆ ಕಾರಣ ಕೇಳಿದಾಗ ಮೈದುನ ಹೇಳಿದ್ದು ಕೇಳಿ ನನಗೂ ಶಾಕ್ ಆಗಿತ್ತು. ಏನು ಎತ್ತ ನೋಡದೇ ಸಮೀರ್ ಮುನ್ನುಗ್ಗುತ್ತಾರೆ. ಮಾರಣಾಂತಿಕ ಆಯುಧ ಹಿಡಿದವರ ಮುಂದೆ ಹಾಗೆಯೇ ನುಗ್ಗುತ್ತಾರೆ. ಜೀವ ಹೋಗಲು ಒಂದು ಬುಲೆಟ್ ಸಾಕು ಎಂದರು. ಇಂಥ ಪತಿಯ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಿದ್ದಾರೆ ಎಂದರು ಕ್ರಾಂತಿ.
ಸಮೀರ್ ಯಾವುದಕ್ಕೂ ಹೆದರದೇ ಧೈರ್ಯದಿಂದ ಮುನ್ನುಗ್ಗುತ್ತಾರೆ. ಹಲವು ಬಾರಿ ಅವರ ಷರ್ಟ್ಗೆ ರಕ್ತದ ಕಲೆಗಳು ಇರುವುದನ್ನು ನಾನು ನೋಡಿದ್ದೇನೆ. ಹರಿದ ಪ್ಯಾಂಟ್ ನೋಡಿದ್ದೇನೆ, ಗಲೀಜಾದ ಶೂಸ್ ಕ್ಲೀನ್ ಮಾಡಿದ್ದೇನೆ. ರಕ್ತವನ್ನು ಮೆತ್ತಿಕೊಂಡು ಬಂದ ದಿನಗಳು ತುಂಬಾ ಇವೆ. ಅಷ್ಟು ಧೈರ್ಯದಿಂದ ಮುನ್ನುಗ್ಗುವವರ ಬಗ್ಗೆ ಹೀಗೆಲ್ಲಾ ಮಾತನಾಡಿದ್ದು ನೋವು ಉಂಟು ಮಾಡಿದೆ ಎಂದಿದ್ದಾರೆ.
ಶಾರುಖ್ ಪುತ್ರನ ಡ್ರಗ್ಸ್ ಕೇಸ್: ಕೊನೆಗೂ ಮೌನ ಮುರಿದ ಮಾಡೆಲ್ ಮುನ್ಮುನ್ ಧಮೇಚಾ!