ಅಂಬಾನಿ ಕುಟುಂಬವು ಮನೆ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡುವ ಮೂಲಕ ಕುಟುಂಬವು ಹೊಂದಿರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಇಡೀ ಜಗತ್ತಿಗೆ ಸಾರುತ್ತಿದೆ. ಆ ಮೂಲಕ ತಮ್ಮ ಪ್ರತಿಷ್ಠೆಯನ್ನು ತೋರ್ಪಡಿಸಿಕೊಳ್ಳುತ್ತಿದೆ. ಅದಕ್ಕೆ ಸಾಕ್ಷಿಯಾಗಿ ನೀವು ಅತಿಥಿಗಳ ಪಟ್ಟಿ ನೋಡಬಹುದು.
ಅನಂತ್ ಭಾಯಿ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಬಹುಶಃ ಇತ್ತೀಚಿನ ದಿನಗಳಲ್ಲಿ ಇಡೀ ದೇಶ ಕಂಡ ಬಹಳ ದೊಡ್ಡ ಮದುವೆ ಕಾರ್ಯಕ್ರಮ. ಅದ್ದೂರಿತನಕ್ಕೆ ಭಾಷ್ಯ ಬರೆಯುವಂತೆ ಅನಂತ್ ಭಾಯಿ ಅಂಬಾನಿ ಮದುವೆಯನ್ನು ಮುಕೇಶ್ ಅಂಬಾನಿ ನಡೆಸುತ್ತಿದ್ದಾರೆ. ವಿಶೇಷ ಎಂದರೆ ಐಷಾರಾಮಕ್ಕೆ ಎಷ್ಟು ಒತ್ತು ನೀಡಿದ್ದಾರೋ ಅದರಷ್ಟೇ ಒತ್ತು ಅತಿಥಿ ಗಣ್ಯರನ್ನು ಕರೆಸುವುದರಲ್ಲಿಯೂ ತೋರಿಸಿದ್ದಾರೆ.
ಇಡೀ ಜಗತ್ತಿನ ಕಲೆ, ರಾಜಕೀಯ, ಸಿನಿಮಾ ದಿಗ್ಗಜರನ್ನು ಮುಂಬೈಯಲ್ಲಿ ಒಟ್ಟು ಸೇರಿಸಿದ ಕೀರ್ತಿ ಈ ಮದುವೆಗೆ ಸಲ್ಲುತ್ತದೆ. ವಿಶ್ವದ ಎಲ್ಲೆಡೆಯಿಂದ ದಿಗ್ಗಜರು ಬಂದಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಮದುವೆಯಲ್ಲಿ ಯಾರು ಇದ್ದಾರೆ ಯಾರು ಇಲ್ಲ ಎನ್ನುವುದನ್ನು ಕುತೂಹಲದಿಂದ ನೋಡುವಂತಾಗಿದೆ. ರಜನಿಕಾಂತ್, ಅಮಿತಾಬ್ ಬಚ್ಚನ್ ರಂತಹ ಮೇರು ನಟರು ಕುಟುಂಬ ಸಮೇತ ಪಾಲ್ಗೊಂಡಿದ್ದಾರೆ.
ಕಿಮ್ ಕರ್ದಾಶಿಯನ್, ಪ್ರಿಯಾಂಕ ಚೋಪ್ರಾ ಮತ್ತು ಶಾರುಖ್ ಖಾನ್ ಮುಂತಾದ ಗಣ್ಯಾತಿಗಣ್ಯರು ತಾಜ್ ಕೋಲಾಬಾದಲ್ಲಿ ತಮಗೆ ದೊರೆತ ಅದ್ದೂರಿ ಸ್ವಾಗತವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಹೇಳಿದ್ದಾರೆ. ಕುತುಹೂಲಕರ ವಿಚಾರವೆಂದರೆ ಅಂಬಾನಿ ಕುಟುಂಬವು ಮನೆ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡುವ ಮೂಲಕ ಕುಟುಂಬವು ಹೊಂದಿರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಇಡೀ ಜಗತ್ತಿಗೆ ಸಾರುತ್ತಿದೆ. ಆ ಮೂಲಕ ತಮ್ಮ ಪ್ರತಿಷ್ಠೆಯನ್ನು ತೋರ್ಪಡಿಸಿಕೊಳ್ಳುತ್ತಿದೆ. ಅದಕ್ಕೆ ಸಾಕ್ಷಿಯಾಗಿ ನೀವು ಅತಿಥಿಗಳ ಪಟ್ಟಿ ನೋಡಬಹುದು.
ಯುಕೆಯ ಮಾಜಿ ಪ್ರಧಾನಮಂತ್ರಿಗಳಾದ ಟೋನಿ ಬ್ಲೇರ್, ಬೊರಿಸ್ ಜಾನ್ಸನ್ ಬಂದಿದ್ದಾರೆ. ಬಿಸಿನೆಸ್ ವಲಯದಿಂದ ಸ್ಯಾಮ್ಸಂಗ್‌ನ ಎಲೆಕ್ಟ್ರಾನಿಕ್ಸ್‌ನ ಕಾರ್ಯಕಾರಿ ಅಧ್ಯಕ್ಷ ಜೇ ವೈ ಲೀ ಬಂದಿದ್ದಾರೆ. ತಾಂಜಾನಿಯಾದ ಅಧ್ಯಕ್ಷ ಸಾಮಿಯಾ ಸುಲುಹು ಹಸನ್, ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೋ, ಐಓಸಿ ಉಪಾಧ್ಯಕ್ಷ ಜುವಾನ್ ಆಂಟೋನಿಯೊ ಸಮರಾಂಚ್ ಮತ್ತು ಡಬ್ಲ್ಯೂಟಿಓ ಮಹಾನಿರ್ದೇಶಕ ಎನ್ಗೋಜಿ ಒಕೊಂಜೊ-ಇವಾಲಾ ಕೂಡ ಆಗಮಿಸಲಿದ್ದಾರೆ.
ಅದರ ಹೊರತಾಗಿ ಕರ್ನಾಟಕದಿಂದ ಯಶ್ ಮತ್ತು ರಾಧಿಕಾ ಪಂಡಿತ್ ಭಾಗವಹಿಸಿದ್ದಾರೆ. ಒಟ್ಟಾರೆಯಾಗಿ ಮದುವೆ ಅಂಗಣ ಜಗಮಗಿಸುತ್ತಿದೆ. ಒಟ್ಟಾರೆಯಾಗಿ ನೋಡುವುದಾದರೆ ಪಾರಂಪರಿಕತೆ ಮತ್ತು ಆಧುನಿಕತೆಯನ್ನು ಬೆರೆಸಿಕೊಂಡು ಆಯೋಜಿಸಲಾಗಿರುವ ಅನಂತ್ ಭಾಯಿ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಮದುವೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ರಾಜಕೀಯ ಪಟುಗಳನ್ನು, ಸಿನಿಮಾ ಕಲಾವಿದರನ್ನು, ಸಾಂಸ್ಕೃತಿಕ ನೇತಾರರನ್ನು, ಬಿಸಿನೆಸ್ ಖ್ಯಾತನಾಮರನ್ನು ಒಂದೆಡೆ ಸೇರಿಸಿ ಹೊಸ ಮಾದರಿಯನ್ನು ಹಾಕಿಕೊಟ್ಟಿದೆ. ಜಗತ್ತಿನ ಕಣ್ಣು ಒಂದೆಡೆಗೆ ನೆಟ್ಟಿರುವಂತೆ ನೋಡಿಕೊಂಡಿದೆ.