Sarath Babu Death: ಫಲಿಸದ ಪ್ರಾರ್ಥನೆ, 'ಅಮೃತವರ್ಷಿಣಿ' ನಟ ಶರತ್ ಬಾಬು ಇನ್ನಿಲ್ಲ

By Shruthi Krishna  |  First Published May 22, 2023, 3:00 PM IST

 'ಅಮೃತವರ್ಷಿಣಿ' ಖ್ಯಾತಿಯ ನಟ ಶರತ್ ಬಾಬು ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶರತ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 


ಕನ್ನಡದ ಅಮೃತವರ್ಷಿಣಿ ಸೇರಿದಂತೆ ದಕ್ಷಿಣ ಭಾರತದ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಶರತ್ ಬಾಬು ಇಂದು ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶರತ್ ಬಾಬು ಅವರನ್ನು ಕಳೆದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೈದರಾಬಾದ್​‌ನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇರಿಸಿ ಶರತ್ ಬಾಬು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆ ಬೆಡ್‌ ಮೇಲೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶರತ್ ಬಾಬು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಶರತ್ ಬಾಬು ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. 

ಆಂಧ್ರಪ್ರದೇಶದ ಅಮದಾಲವಲಸದಲ್ಲಿ ಸತ್ಯಂ ಬಾಬು ದೀಕ್ಷಿತುಲು ಎಂಬ ಹೆಸರಿನಿಂದ ಜನಿಸಿದ ಶರತ್ ಬಾಬು 1973 ರಲ್ಲಿ ತೆಲುಗು ಸಿನಿಮಾರಂಗ ಪ್ರವೇಶ ಮಾಡಿದರು.  ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿರುವ ಶರತ್ ಬಾಬು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ಜನಪ್ರಿಯ ನಟನಾಗಿರುವ ಶರತ್ ಬಾಬು ನಾಯಕನಾಗಿ ಪೋಷಕ ನಟನಾಗಿ ಕಾಣಿಸಿಕೊಂಡಿದ್ದಾರೆ. ರಜನೀಕಾಂತ್​ ಜೊತೆಗೆ ಮುತ್ತು, ಅರುಣಾಚಲಂ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. 

ಪ್ರಖ್ಯಾತ ನಟ ಶರತ್‌ ಬಾಬು ಆರೋಗ್ಯ ಸ್ಥಿತಿ ಗಂಭೀರ, ಚೆನ್ನೈನ ಆಸ್ಪತ್ರೆಗೆ ದಾಖಲು!

Tap to resize

Latest Videos

ಕೇವಲ ತಮಿಳು ಮತ್ತು ತೆಲುಗು ಮಾತ್ರವಲ್ಲದೇ ಕನ್ನಡದ ಹಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು, ಅಮೃತವರ್ಷಿಣಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಅಮೃತವರ್ಷಿಣಿ ಸಿನಿಮಾದ ಪಾತ್ರವನ್ನು ಕನ್ನಡ ಚಿತ್ರಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ. ಸಿನಿಮಾ ಮಾತ್ರವಲ್ಲದೇ ಕನ್ನಡದ ಪ್ರೀತಿಗಾಗಿ ಧಾರಾವಾಹಿಯಲ್ಲಿಯೂ ಶರತ್ ಬಾಬು ನಟಿಸಿದ್ದರು. 

ಇತ್ತೀಚೆಗೆ ಶರತ್ ಬಾಬು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಕೊನೆಯದಾಗಿ ಶರತ್ ಬಾಬು ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 1974ರಲ್ಲಿ ರಮಾ ಪ್ರಭ ಜೊತೆ ವಿವಾಹವಾಗಿದ್ದ ಶರತ್ ಬಾಬು 1988ರಲ್ಲಿ ವಿಚ್ಛೇದನ ಪಡೆದು ದೂರ ಆದರು. ಬಳಿಕ 1990ರಲ್ಲಿ ಸ್ನೇಹ ನಂಬಿಯಾರ್ ಜೊತೆ 2ನೇ ವಿವಾಹವಾದರು. ಆದರೆ 2011ರಲ್ಲಿ ಸ್ನೇಹ ಅವರಿಂದನೂ ದೂರ ಆದರು. ಒಂಟಿಯಾಗಿದ್ದ ಶರತ್ ಬಾಬು ಇತ್ತೀಚೆಗಷ್ಟೆ ಪತ್ರಕರ್ತೆಯೊಬ್ಬರನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಇದೆ. 

click me!