ದಿ ಕೇರಳ ಸ್ಟೋರಿ ಬಳಿಕ ಫರ್ಹಾನಾ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ನಟಿ ಐಶ್ವರ್ಯ ರಾಜೇಶ್ ಅವರಿಗೆ ಭಾರಿ ಭದ್ರತೆ ಒದಗಿಸಲಾಗಿದೆ.
ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' (The Kerala Story) ಚಿತ್ರದ ವಿವಾದ ಇನ್ನೂ ಕಡಿಮೆಯಾಗಿಲ್ಲ. ಹಾಸ್ಟೆಲ್ಗೆ ಸೇರಿಕೊಂಡ ಮುಸ್ಲಿಂ ಹುಡುಗಿಯೊಬ್ಬಳು ಹೇಗೆ ತನ್ನ ರೂಮ್ಮೇಟ್ಸ್ಗಳ ಬ್ರೇನ್ ವಾಷ್ ಮಾಡಿ ಅವರನ್ನು ಇಸ್ಲಾಂಗೆ ಮತಾಂತರ ಮಾಡುವಂತೆ ಪ್ರಚೋದಿಸುತ್ತಾಳೆ, ನಂತರ ಆ ಯುವತಿಯರ ಪಾಡು ಏನಾಗುತ್ತದೆ ಎಂಬ ಭಯಾನಕ ಕರಾಳ ಸತ್ಯ ಘಟನೆಯನ್ನು ಆಧರಿಸಿರುವ ಚಿತ್ರ ದಿ ಕೇರಳ ಸ್ಟೋರಿ. ಯುವತಿಯರನ್ನು ಸಿರಿಯಾಕ್ಕೆ ಕಳುಹಿಸಿ ಅವರನ್ನು ಸ್ಯೂಸೈಡ್ ಬಾಂಬರ್ರನ್ನಾಗಿಯೋ (suicide bomber) ಇಲ್ಲವೇ ಭಯೋತ್ಪಾದಕರು ಇಚ್ಛೆ ಬಂದಾಗಲೆಲ್ಲಾ ದೈಹಿಕವಾಗಿ ಬಳಸಿಕೊಳ್ಳುವ ವಸ್ತುವಿನಂತೆ ಕಾಣುವ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾ ಬರಿ ಕಥೆಯಲ್ಲ, ಬದಲಿಗೆ ತಮಗೂ ಈ ಕರಾಳ ಅನುಭವವಾಗಿದೆ ಎಂದು ಚಿತ್ರ ಬಿಡುಗಡೆಯ ಬಳಿಕ ಕೆಲವು ಯುವತಿಯರು ಮಾಧ್ಯಮಗಳ ಮುಂದೆ ಬಂದು ತಮ್ಮ ನೋವು ತೋಡಿಕೊಂಡಿದ್ದಾರೆ. ಇದರ ಹೊರತಾಗಿಯೂ ಕಾಂಗ್ರೆಸ್ಸಿಗರು, ತೃಣಮೂಲ ಕಾಂಗ್ರೆಸ್ ಸೇರಿದಂತೆ ಕೆಲವು ವರ್ಗ ಈ ಚಿತ್ರವನ್ನು ವಿರೋಧಿಸುತ್ತಲೇ ಬಂದಿವೆ. ಇದರ ಹೊರತಾಗಿಯೂ ದಿ ಕೇರಳ ಸ್ಟೋರಿ ದಾಖಲೆಯತ್ತ ದಾಪುಗಾಲು ಹಾಕುತ್ತಿದ್ದು, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ.
ಇದಕ್ಕೂ ಮೊದಲು ಕಾಶ್ಮೀರಿ ಪಂಡಿತರ ನರಮೇಧದ ಸತ್ಯ ಘಟನೆಯನ್ನು ಆಧರಿಸಿ ಚಿತ್ರಿಸಲಾಗಿದ್ದ ದಿ ಕಾಶ್ಮೀರ್ ಫೈಲ್ಸ್ಗೂ ಕೆಲವರು ವಿರೋಧ ವ್ಯಕ್ತಪಡಿಸಿದ್ದು ಇದೆ. ಇದೀಗ ಇದೇ ವಿರೋಧದ ಸಾಲಿಗೆ ಸೇರ್ಪಡೆಯಾಗಿದೆ ಫರ್ಹಾನಾ. ಇದು ಕೂಡ ತೀವ್ರಗಾಮಿ ಸಂಘಟನೆಗಳಿಂದ ಪ್ರತಿಭಟನೆಗೆ ಒಳಗಾಗಿದೆ. ಚಿತ್ರದ ನಾಯಕಿಯ ಮನೆಯ ಹೊರಗೆ ಪೊಲೀಸರನ್ನು ನಿಯೋಜಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದಹಾಗೆ ಈ ಚಿತ್ರವು ತಮಿಳು ಚಿತ್ರವಾಗಿದೆ. ಚಿತ್ರದಲ್ಲಿ ಐಶ್ವರ್ಯಾ ರಾಜೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಕಾಣಿಸಿಕೊಂಡಾಗಿನಿಂದ, ಕೆಲವು ತೀವ್ರಗಾಮಿ ಇಸ್ಲಾಮಿಕ್ ಕಾರ್ಯಕರ್ತರು ಅದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. (Oppsing)
ಪಠಾಣ್, ಕೆಜಿಎಫ್ 2 ದಾಖಲೆ ಉಡೀಸ್: ಎರಡನೇ ವಾರದಲ್ಲಿ The Kerala Story ಗಳಿಸಿದ್ದೆಷ್ಟು?
ದಿ ಕಾಶ್ಮೀರ್ ಫೈಲ್ಸ್ (The Kashmir Files) ಹಾಗೂ ದಿ ಕೇರಳ ಸ್ಟೋರಿಯ ರೀತಿಯಲ್ಲಿಯೆ 'ಫರ್ಹಾನಾ' ಕೂಡ ಮುಸ್ಲಿಂ ಸಮುದಾಯದ ಬಗ್ಗೆ ತಪ್ಪು ಚಿತ್ರಣವನ್ನು ತೋರಿಸುತ್ತಿದೆ ಎಂದು ಹಲವು ಮುಸ್ಲಿಂ ಸಂಘಟನೆಗಳು ಹೇಳಿಕೊಂಡಿವೆ. ಇಂಡಿಯನ್ ನ್ಯಾಷನಲ್ ಲೀಗ್ ಅಂದರೆ INL ಸೇರಿದಂತೆ ಕೆಲವು ಇಸ್ಲಾಮಿಕ್ ಸಂಘಟನೆಗಳು ಈ ಚಿತ್ರವನ್ನು ಇಸ್ಲಾಂ ವಿರೋಧಿ ಎಂದೂ ಕರೆದಿವೆ. ಇತ್ತೀಚಿನ ವರದಿಗಳ ಪ್ರಕಾರ, ಚಿತ್ರದ ವಿರುದ್ಧ ಭಾರೀ ಪ್ರತಿಭಟನೆಯಿಂದಾಗಿ, ಅದರ ನಾಯಕಿ ನಟಿ ಐಶ್ವರ್ಯಾ ರಾಜೇಶ್ ಅವರಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ. ಐಶ್ವರ್ಯ ಅವರಿಗೆ ಜೀವ ಬೆದರಿಕೆ ಬಂದಿರುವ ಕಾರಣ ಆಕೆಯ ಮನೆಯ ಹೊರಗೆ ಕೂಡ ಪೊಲೀಸರನ್ನು ನಿಯೋಜಿಸಲಾಗಿದೆ.
ಸಂದರ್ಶನವೊಂದರಲ್ಲಿ ಐಶ್ವರ್ಯಾ ರಾಜೇಶ್ (Aishwarya Rajesh) ತಮ್ಮ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿನ ಪಾತ್ರ ಯಾವುದೇ ಧರ್ಮಕ್ಕೆ ಸೇರಲಿಲ್ಲ. ಅವರ ಪಾತ್ರವು ಮುಸ್ಲಿಂ, ಹಿಂದೂ ಅಥವಾ ಕ್ರಿಶ್ಚಿಯನ್ ಯಾವುದೇ ಆಗಿರಬಹುದು. ಅದರಲ್ಲಿ ಧರ್ಮದ ಕೋನವಿಲ್ಲ. ಈ ಬಗ್ಗೆ ಚಿತ್ರದ ನಿರ್ಮಾಪಕರು ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದರೂ ವಿನಾ ಕಾರಣ ಪ್ರತಿರೋಧ ಒಡ್ಡಲಾಗುತ್ತಿದೆ ಎಂದು ಐಶ್ವರ್ಯಾ ಹೇಳಿದ್ದಾರೆ. 'ಒಳ್ಳೆಯ ಚಲನಚಿತ್ರಗಳನ್ನು ಮಾತ್ರ ನೀಡುವುದು ನಮ್ಮ ಗುರಿಯಾಗಿದೆ. ನಾವು ಯಾವುದೇ ನಿರ್ದಿಷ್ಟ ಧರ್ಮ ಅಥವಾ ನಂಬಿಕೆಗೆ ವಿರುದ್ಧವಾದ ವಿಷಯವನ್ನು ಸಹ ಮುಟ್ಟುವುದಿಲ್ಲ. ನಾವು ಅದನ್ನು ಎಂದಿಗೂ ಮಾಡುವುದಿಲ್ಲ. ನಾವು ಅವಕಾಶ ನೀಡುವುದಿಲ್ಲ.ಮನುಷ್ಯತ್ವಕ್ಕೆ ವಿರುದ್ಧವಾದ ಇಂತಹ ಕಥೆಗಳು ಬೇಕಾಗಿಲ್ಲ. ನಮ್ಮ ಚಿತ್ರದ ಬಗ್ಗೆ ವಿವಾದ ಸೃಷ್ಟಿಸುತ್ತಿರುವ ಸಹೋದರ ಸಹೋದರಿಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ತಮಿಳುನಾಡು ಧಾರ್ಮಿಕ ಸೌಹಾರ್ದತೆಯ ಸ್ವರ್ಗ. ಎಲ್ಲರ ಸಹಕಾರದಿಂದ ಸಿನಿಮಾ ಮಾಡಲಾಗಿದೆ. ತಮಿಳು (Tamil) ಅಭಿಮಾನಿಗಳು ಈ ಚಿತ್ರವನ್ನು ಬೆಂಬಲಿಸುತ್ತಾರೆ ಎಂದು ನಾವು ಭಾವಿಸುತ್ತೇವೆ' ಎಂದು ನಟಿ ಹೇಳಿದ್ದಾರೆ.
The Kerala Story ನೋಡಿದ ಮುಸ್ಲಿಂ ಪತಿ ರಿಯಾಕ್ಷನ್ ಹೀಗಿತ್ತು ಎಂದ ನಟಿ ದೇವೋಲೀನಾ
'ಫರ್ಹಾನಾ' ಚಿತ್ರದ ಕಥೆ ಏನು?
'ಫರ್ಹಾನಾ' ಚಿತ್ರದ ಕುರಿತು ಹೇಳುವುದಾದರೆ, ಇದು ನಿರ್ದೇಶಕ ನೆಲ್ಸನ್ ವೆಂಕಟೇಶ್ ಅವರ ಚಿತ್ರ. ಇದರಲ್ಲಿ ಐಶ್ವರ್ಯಾ ರಾಜೇಶ್ ಜೊತೆಗೆ ಮಲಯಾಳಂ ನಟರಾದ ಅನುಮೋಲ್, ಸೆಲ್ವರಾಘವನ್, ಜೀತನ್ ರಮೇಶ್ ಮತ್ತು ಐಶ್ವರ್ಯಾ ದತ್ತಾ ಸಹ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಕಥೆಯು ಫರ್ಹಾನಾ ಎಂಬ ಹುಡುಗಿಯ ಸುತ್ತ ಸುತ್ತುತ್ತದೆ, ಫರ್ಹಾನಾ ಓರ್ವ ಮುಸ್ಲಿಂ ಗೃಹಿಣಿ. ಅವಳು ತನ್ನ ಕುಟುಂಬವನ್ನು ಪೋಷಿಸಲು ಫೋನ್ ಸೆಕ್ಸ್ (ಲೈಂಗಿಕತೆ ಕುರಿತಾಗಿ ಮಾತನಾಡುವ ) ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಾಳೆ. ಈ ಕಾರಣದಿಂದಾಗಿ ಅವಳು ಹೇಗೆ ತೊಂದರೆಗೆ ಸಿಲುಕುತ್ತಾಳೆ ಎನ್ನುವುದನ್ನು ತೋರಿಸಲಾಗಿದೆ. ವೃತ್ತಿಯಿಂದಾಗಿ ಕುಟುಂಬದವರಿಂದ ಎದುರಿಸುವ ಸಮಸ್ಯೆ, ಬ್ಲಾಕ್ಮೇಲರ್ ಒಬ್ಬನಿಗೆ ಎದುರಿಸುವ ಸಮಸ್ಯೆಗಳನ್ನು ಫರ್ಹಾನಾ (Farhana) ಹೇಗೆ ನಿಭಾಯಿಸುತ್ತಾಳೆ ಎಂಬುದೇ ಸಿನಿಮಾದ ಕತೆ. ಸಿನಿಮಾವು ಮೇ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿದೆ.