ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಅವರನ್ನು ಮದುವೆಯಾಗಿರುವ ನಟಿ ಸ್ವರಾ ಭಾಸ್ಕರ್ ಗಾಜಾದಲ್ಲಿ ಮಕ್ಕಳ ಸಾವಿಗೆ ಕಣ್ಣೀರು ಹರಿಸುತ್ತಿದ್ದು, ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmad) ಅವರೊಂದಿಗೆ ಕಳೆದ ಜನವರಿ 6 ರಂದು ಮದುವೆಯಾಗಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಮಗಳಿಗೆ ಜನ್ಮ ನೀಡಿದ್ದಾರೆ. ಈಗ ಅವರು ತಮ್ಮ ಹೊಸ ಪ್ರಯಾಣವನ್ನು ಆನಂದಿಸುತ್ತಿದ್ದಾರೆ. ಈ ದಿನಗಳಲ್ಲಿ ಸ್ವರಾ ತನ್ನ ನವಜಾತ ಮಗುವಿನೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದಾರೆ. ಇದರೊಂದಿಗೆ, ನಟಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಪ್ರತಿದಿನ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈಗ ಸ್ವರಾ ಭಾಸ್ಕರ್ ಮತ್ತೊಮ್ಮೆ ತಮ್ಮ ಮಗಳೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ದೀರ್ಘ ಮತ್ತು ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ. ಇದರೊಂದಿಗೆ ಗಾಜಾದಲ್ಲಿ ಮಗಳು ಹುಟ್ಟಿದ್ದರೆ ಏನಾಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ.
ಸ್ವರಾ ಭಾಸ್ಕರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಇನ್‌ಸ್ಟಾಗ್ರಾಮ್‌ನಲ್ಲಿ ಇಂದು ಅಂದರೆ ಅಕ್ಟೋಬರ್ 20 ರಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ, ನಟಿ ತನ್ನ ಮಗಳು 'ರಾಬಿಯಾ'ಳನ್ನು ತಮ್ಮ ಮಡಿಲಲ್ಲಿ ಹಿಡಿದುಕೊಂಡು ಅವಳನ್ನು ನೋಡುತ್ತಿರುವುದನ್ನು ಕಾಣಬಹುದು. ಈ ಫೋಟೋವನ್ನು ಹಂಚಿಕೊಳ್ಳುವಾಗ, ನಟಿ ಟಿಪ್ಪಣಿಯನ್ನು ಸಹ ಬರೆದಿದ್ದಾರೆ. 'ಯಾವುದೇ ತಾಯಿಯು ತನ್ನ ನವಜಾತ ಶಿಶುವನ್ನು ಗಂಟೆಗಳ ಕಾಲ ಶಾಂತಿ ಮತ್ತು ಸಂತೋಷದ ಭಾವನೆಯಿಂದ ನೋಡಬಹುದು. ಇದಕ್ಕೆ ನಾನೂ ಭಿನ್ನವಾಗಿಲ್ಲ. ಪ್ರಪಂಚದಾದ್ಯಂತದ ಅನೇಕ ತಾಯಂದಿರಂತೆ ನಾನೂ ನನ್ನ ಮಗುವನ್ನು ನೋಡುವಾಗ ಅದೇ ಭಾವನೆ ಅನುಭವಿಸುತ್ತೇನೆ. ನಮ್ಮ ಮಗುವನ್ನು ನೋಡುವಾಗ ಗಾಜಾದಲ್ಲಿನ ಮಕ್ಕಳ ನೆನಪಾಗುತ್ತಿದೆ ಎಂದಿದ್ದಾರೆ.
ನಟಿ ಸ್ವರಾ ಭಾಸ್ಕರ್ಗೆ ಹೆಣ್ಣು ಮಗು: ತಾಕತ್ತಿದ್ರೆ ಹಿಂದೂ ಹೆಸ್ರು ಇಡಿ ಅಂತ ಚಾಲೆಂಜ್ ಹಾಕ್ದೋರು ಶಾಕ್!
'ನಾನು ನನ್ನ ಮಗಳು ಶಾಂತಿಯುತವಾಗಿ ಮಲಗುವುದನ್ನು ನೋಡುತ್ತಿದ್ದೇನೆ. ಆದರೆ ಒಂದು ವೇಳೆ ಈಕೆ ಗಾಜಾದಲ್ಲಿ ಜನಿಸಿದರೆ ನಾನು ಅವಳನ್ನು ಹೇಗೆ ರಕ್ಷಿಸುತ್ತಿದ್ದೆ ಎಂದು ಭಾವಿಸಿ ಭಯವಾಗುತ್ತಿದೆ. ಅವಳು ಎಂದಿಗೂ ಅಂತಹ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಬಾರದು ಎಂದು ಪ್ರಾರ್ಥಿಸುತ್ತೇನೆ. ಈಕೆ ದೇವರ ವರಗಳೊಂದಿಗೆ ಜನಿಸಿದ್ದಾಳೆ, ಆದರೆ ಗಾಜಾದಲ್ಲಿ ಪ್ರತಿದಿನ ಕೊಲ್ಲಲ್ಪಡುತ್ತಿರುವ ಮಕ್ಕಳು ಯಾವ ಶಾಪದೊಂದಿಗೆ ಜನಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಗಾಜಾದ ಮಕ್ಕಳನ್ನು ದುಃಖ, ನೋವು ಮತ್ತು ಸಾವಿನಿಂದ ರಕ್ಷಿಸಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಇದನ್ನು ನೋಡಿ ಹಲವರು ನಟಿಯನ್ನು ಟ್ರೋಲ್ ಮಾಡಿದ್ದಾರೆ. ಇಸ್ರೇಲ್ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಶಿಶುಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದಾಗ ನಿಮಗೆ ಏನೂ ಅನ್ನಿಸಲಿಲ್ಲವೆ ಎಂದು ಪ್ರಶ್ನಿಸುತ್ತಿದ್ದಾರೆ. ನೀವು ಪ್ಯಾಲಿಸ್ತೀನ್‌ಗೆ ಹೋಗಬೇಕಿತ್ತು. ಆಗ ಗೊತ್ತಾಗುತ್ತಿತ್ತು ಎಂದು ಹಲವರು ಹೇಳುತ್ತಿದ್ದಾರೆ. ಇಸ್ರೇಲ್‌ನಲ್ಲಿ ಶಿಶುಗಳನ್ನು ಅಪಹರಿಸಿದ ಉಗ್ರರು ಶಿರಚ್ಛೇದನ ಮಾಡಿ ವಿಡಿಯೋ ಹರಿಬಿಟ್ಟಿದ್ದಾರಲ್ಲ, ಅವರು ನಿಮಗೆ ಮಕ್ಕಳಲ್ವಾ ಎಂದು ಇನ್ನು ಹಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ನಟಿಯ ಪರವಾಗಿದ್ದು, ಎಂಥ ಅಮಾನುಷ ಕೃತ್ಯ ಎನ್ನುತ್ತಿದ್ದಾರೆ.