ಮಲಯಾಳಂ ನಟಿ ಹನಿ ರೋಸ್, ಉದ್ಯಮಿ ಬಾಬಿ ಚೆಮ್ಮನೂರು ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರು ನೀಡಿದ್ದಾರೆ. ಚೆಮ್ಮನೂರು ಆರೋಪವನ್ನು ಅಲ್ಲಗಳೆದಿದ್ದಾರೆ. ಈ ನಡುವೆ ಕೆಟಿಆರ್‌ಗೆ ಇ.ಡಿ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಬಂಧನ ಭೀತಿ ಎದುರಾಗಿದೆ.
ಕೊಚ್ಚಿ: ಖ್ಯಾತ ಉದ್ಯಮಿ ಹಾಗೂ ಆಭರಣ ವ್ಯಾಪಾರಿ ಬಾಬಿ ಚೆಮ್ಮನೂರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಲಯಾಳಂ ನಟಿ ಹನಿ ರೋಸ್ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75ರ ಅಡಿ ಪ್ರಕರಣ ದಾಖಲಾಗಿದೆ. ಆದರೆ, ತಮ್ಮ ಮೇಲಿನ ಆರೋಪಗಳನ್ನು ಚೆಮ್ಮನೂರು ಅಲ್ಲಗಳೆದಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ರೋಸ್, ‘ನನ್ನ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಕ್ಕಾಗಿ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಇದೇ ಮನಸ್ಥಿತಿ ಹೊಂದಿರುವ ನಿಮ್ಮ ಬೆಂಬಲಿಗರ ಮೇಲೆಯೂ ಇದೇ ಕ್ರಮ ಕೈಗೊಳ್ಳುತ್ತೇನೆ. ನೀವು ನಿಮ್ಮ ಸಂಪತ್ತಿನ ಮೇಲೆ ಅವಲಂಬಿತರಾಗಿರಬಹುದು. ಆದರೆ ನನಗೆ ಭಾರತದ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆಯಿದೆ’ ಎಂದು ಹೇಳಿದ್ದಾರೆ.
ತೆಲಂಗಾಣ ಫಾರ್ಮುಲಾ-ಇ ಹಗರಣ: ಕೆಟಿಆರ್‌ಗೆ ಬಂಧನ ಭೀತಿ
ಹೈದರಾಬಾದ್: ಬಿಆರ್‌ಎಸ್ ಅಧಿಕಾರದಲ್ಲಿ ಇದ್ದಾಗ ಫಾರ್ಮುಲಾ-ಇ ರೇಸ್ ನಡೆಸಿದ್ದ ವೇಳೆ, ಫಾರ್ಮುಲಾ ಕಂಪನಿ ಜತೆ ಸರ್ಕಾರ ನಡೆಸಿದ 55 ಕೋಟಿ ರು. ಹಣದ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪವು ಬಿಆರ್‌ಎಸ್ ನಾಯಕ ಕೆ.ಟಿ. ರಾಮರಾವ್ ಅವರಿಗೆ ಸಂಕಷ್ಟ ತಂದೊಡ್ಡಿದೆ. ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ.) ಬಂಧನದ ಭೀಇ ಶುರುವಾಗಿದೆ.ಪ್ರಕರಣದಲ್ಲಿ ಅವರ ಪಾತ್ರ ಇದ್ದಂತೆ ಕಾಣುತ್ತಿದೆ ಎಂದಿರುವ ಹೈಕೋರ್ಟ್, ಅವರ ವಿರುದ್ಧ ತೆಲಂಗಾಣ ಎಸಿಬಿ ದಾಖಲಿಸಿದ್ದ ಎಫ್‌ಐಆರ್ ರದ್ದತಿಗೆ ನಿರಾಕರಿಸಿದೆ. ಇದರ ಬೆನ್ನಲ್ಲೇ ಅವರಿಗೆ ಜ.16ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಎಸಿಬಿ ಕೇಸು ಆಧರಿಸಿ ಎಫ್ಐಆರ್ ಹಾಕಿದ್ದ ಇ.ಡಿ. ಬುಲಾವ್ ನೀಡಿದೆ. ಹೀಗಾಗಿ ರಾಮವರಾವ್‌ಗೆ ಬಂಧನ ಭೀತಿ ಶುರುವಾಗಿದೆ.
ಭಾರತದಲ್ಲಿ ಮೈಕ್ರೋಸಾಫ್ಟ್ 3 ಶತಕೋಟಿ ಡಾಲರ್ ಹೂಡಿಕೆ
ಪಿಟಿಐ ಬೆಂಗಳೂರು: ಮೈಕ್ರೋಸಾಫ್ಟ್ ಮುಂದಿನ 2 ವರ್ಷಗಳಲ್ಲಿ ಕ್ಲೌಡ್ ಮತ್ತು ಎಐ ಮೂಲಸೌಕರ್ಯಕ್ಕಾಗಿ ಭಾರತದಲ್ಲಿ 3 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಎಂದು ಮತ್ತು ಸಿಇಒ ಸತ್ಯ ನಾದೆಳ್ಲ ಪ್ರಕಟಿಸಿದ್ದಾರೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾದೆಳ್ಲ ಭೇಟಿ ಮಾಡಿ ಭಾರತದಲ್ಲಿ ಹೂಡಿಕೆ ಇಂಗಿತ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಹೂಡಿಕೆ ಘೋಷಣೆ ಹೊರಬಿದ್ದಿದೆ.
ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ನಾದೆಳ್ಲ, ‘ಮೈಕ್ರೋಸಾಫ್ಟ್ ಭಾರತದಲ್ಲಿ ಕ್ಲೌಡ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಭಾರತದಲ್ಲಿ 3 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ. ಇದು ಭಾರತದಲ್ಲಿ ಮೈಕ್ರೋಸಾಫ್ಟ್ ಮಾಡುತ್ತಿರುವ ಈವರೆಗಿನ ಅತಿದೊಡ್ಡ ಹೂಡಿಕೆ ಆಗಿದೆ ಎಂಬುದನ್ನು ಹೇಳಲು ಸಂತಸವಾಗುತ್ತಿದೆ’ ಎಂದರು.‘2030 ರ ವೇಳೆಗೆ 1 ಕೋಟಿ ಜನರಿಗೆ ಎಐನಲ್ಲಿ ತರಬೇತಿ ಮತ್ತು ಕೌಶಲ್ಯವನ್ನು ನೀಡುವ ಇರಾದೆ ನಮ್ಮದಾಗಿದೆ’ ಎಂದ ನಾದೆಳ್ಲ, ‘ಕಂಪನಿಯು ಈಗಾಗಲೇ 24 ಲಕ್ಷ ಭಾರತೀಯರನ್ನು ಸಬಲೀಕರಣಗೊಳಿಸಿದೆ, ಇದರಲ್ಲಿ ನಾಗರಿಕ ಸೇವಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ವಿಕಲಚೇತನರು, ಎಐ ಕೌಶಲ್ಯಗಳನ್ನು ಪಡೆದಿದ್ದಾರೆ’ ಎಂದರು.
ಈ ಹೂಡಿಕೆಯು ದೇಶದಲ್ಲಿ ಎಐ ಆವಿಷ್ಕಾರವನ್ನು ವೇಗಗೊಳಿಸುವ ಗುರಿ ಹೊಂದಿದೆ, ಇದು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ (ವಿಕಸಿತ್ ಭಾರತ್) ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಯನ್ನು ಸಾಧಿಸಲು ಪ್ರಮುಖವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಮಲಯಾಳಂ ನಟಿ ಹನಿ ರೋಸ್‌ಗೆ ಅಶ್ಲೀಲ ನಿಂದನೆ: ಓರ್ವ ಅಂದರ್, 30 ಜನರ ವಿರುದ್ಧ ಕೇಸ್