
‘8 ವರ್ಷ, 9 ತಿಂಗಳು, 23 ದಿನಗಳ ಕತ್ತಲ ಹೋರಾಟ... ಕಡೆಗೂ ಕಂಡಿತು ಬೆಳಕು’..!
ಕೊಚ್ಚಿ: ಸತತ 8 ವರ್ಷ, 9 ತಿಂಗಳು ಮತ್ತು 23 ದಿನಗಳ ಸುದೀರ್ಘ ಹಾಗೂ ನೋವಿನ ಪಯಣದ ನಂತರ, ಕಡೆಗೂ ಆ ಕತ್ತಲ ಸುರಂಗದ ತುದಿಯಲ್ಲಿ ಒಂದು ಸಣ್ಣ ಆಶಾಕಿರಣ ಕಂಡಿದೆ. ಬಹುಚರ್ಚಿತ ನಟಿ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ದೋಷಿಗಳೆಂದು ಸಾಬೀತಾಗಿದ್ದು, ಈ ತೀರ್ಪಿಗೆ ಬಹುಭಾಷಾ ನಟಿ ಭಾವನಾ ಮೆನನ್ (Bhavana Menon) ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಇಷ್ಟು ದಿನ ತಮ್ಮ ಮನದಾಳದಲ್ಲಿ ಹುದುಗಿದ್ದ ನೋವು, ಆಕ್ರೋಶ ಮತ್ತು ವ್ಯವಸ್ಥೆಯ ಮೇಲಿನ ಅನುಮಾನಗಳನ್ನು ಸಾಲು ಸಾಲಾಗಿ ಬಿಚ್ಚಿಟ್ಟಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಖಡಕ್ ಉತ್ತರ!
"ನನ್ನ ಈ ನೋವನ್ನು 'ಸುಳ್ಳು' ಎಂದವರಿಗೆ ಮತ್ತು ಇದೊಂದು 'ಕಟ್ಟುಕಥೆ' ಎಂದು ಜರೆದವರಿಗೆ ಈ ಕ್ಷಣವನ್ನು ಅರ್ಪಿಸುತ್ತೇನೆ. ಇಂದಾದರೂ ನಿಮ್ಮ ಮನಸ್ಸಿಗೆ ಶಾಂತಿ ಸಿಗಲಿ," ಎಂದು ಭಾವನಾ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಇದೇ ವೇಳೆ, ವರ್ಷಗಳಿಂದ ಹರಿದಾಡುತ್ತಿದ್ದ ಸುಳ್ಳು ಸುದ್ದಿಯೊಂದಕ್ಕೆ ಅವರು ತೆರೆ ಎಳೆದಿದ್ದಾರೆ. "ಪ್ರಕರಣದ 1ನೇ ಆರೋಪಿ (ಪಲ್ಸರ್ ಸುನಿ) ನನ್ನ ಪರ್ಸನಲ್ ಡ್ರೈವರ್ ಆಗಿದ್ದ ಎಂದು ಹೇಳುವುದನ್ನು ನಿಲ್ಲಿಸಿ. ಆತನಿಗೂ ನನಗೂ ಯಾವುದೇ ಸಂಬಂಧವಿರಲಿಲ್ಲ. 2016ರಲ್ಲಿ ನಾನು ಕೆಲಸ ಮಾಡುತ್ತಿದ್ದ ಸಿನಿಮಾಗೆ ಆತನನ್ನು ಡ್ರೈವರ್ ಆಗಿ ಕಳುಹಿಸಲಾಗಿತ್ತು ಅಷ್ಟೇ. ಆತನನ್ನು ನಾನು ನೋಡಿದ್ದೇ ಒಂದೆರಡು ಬಾರಿ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ," ಎಂದು ಮನವಿ ಮಾಡಿದ್ದಾರೆ.
ಅಲ್ಲದೇ, ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ನೇರವಾಗಿಯೇ ಸವಾಲು ಹಾಕಿದ್ದಾರೆ. "ನನ್ನ ಮೇಲೆ ನಿರಂತರವಾಗಿ ಕೆಟ್ಟ ಕಾಮೆಂಟ್‌ಗಳ ಮೂಲಕ ದಾಳಿ ಮಾಡುತ್ತಿರುವವರು ಮತ್ತು ಹಣ ಪಡೆದು 'ಕಟ್ಟುಕಥೆ'ಗಳನ್ನು (Paid Narratives) ಹಬ್ಬಿಸುತ್ತಿರುವವರಿಗೆ ನಾನೊಂದು ಮಾತು ಹೇಳುತ್ತೇನೆ; ನಿಮಗೆ ಹಣ ಸಿಗುತ್ತಿದೆ ಎಂಬ ಕಾರಣಕ್ಕೆ ನೀವು ಮಾಡುತ್ತಿರುವ ಕೆಲಸವನ್ನು ಮುಂದುವರಿಸಬಹುದು, ನಿಮಗೆ ಅದಕ್ಕೆ ಸ್ವಾತಂತ್ರ್ಯವಿದೆ," ಎಂದು ನಟಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಈ ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯವಿಲ್ಲ!" - ನಟಿ ಭಾವನಾ ಭಾವುಕ ಪೋಸ್ಟ್
ಬಹುಭಾಷಾ ನಟಿ ಭಾವನಾ ಮೆನನ್ ಅವರು ತಮ್ಮ ದೀರ್ಘಕಾಲದ ಕಾನೂನು ಹೋರಾಟದ ಕುರಿತು ಮೌನ ಮುರಿದಿದ್ದಾರೆ. ಇತ್ತೀಚಿನ ಕೋರ್ಟ್ ಬೆಳವಣಿಗೆಗಳ ನಂತರ ತೀವ್ರ ಬೇಸರಗೊಂಡಿರುವ ನಟಿ, ಸೋಶಿಯಲ್ ಮೀಡಿಯಾದಲ್ಲಿ ಸಾಲು ಸಾಲು ನೋವಿನ ಮಾತುಗಳನ್ನು ಹಂಚಿಕೊಳ್ಳುವ ಮೂಲಕ ವ್ಯವಸ್ಥೆಯ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ನ್ಯಾಯಾಲಯದ ಮೇಲಿನ ನಂಬಿಕೆ ಮತ್ತು ತಿರಸ್ಕಾರ
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಭಾವನಾ, "ಕಳೆದ ಹಲವು ವರ್ಷಗಳಿಂದ ನಾನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೆ. ನನಗೆ ಈ ನಿರ್ದಿಷ್ಟ ನ್ಯಾಯಾಲಯದ ಮೇಲೆ ನಂಬಿಕೆಯಿಲ್ಲ ಎಂದು ಪದೇ ಪದೇ ಸ್ಪಷ್ಟವಾಗಿ ಹೇಳಿದ್ದೆ. ಅದೇ ನ್ಯಾಯಾಧೀಶರಿಂದ ಈ ಪ್ರಕರಣವನ್ನು ಬೇರೆಡೆಗೆ ವರ್ಗಾಯಿಸುವಂತೆ ನಾನು ಮಾಡಿದ ಪ್ರತಿಯೊಂದು ಮನವಿಯನ್ನು ತಿರಸ್ಕರಿಸಲಾಯಿತು," ಎಂದು ತಮ್ಮ ಕಾನೂನು ಹೋರಾಟದ ಹಾದಿ ಎಷ್ಟು ಕಠಿಣವಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
'ಈ ತೀರ್ಪು ಹಲವರಿಗೆ ಆಶ್ಚರ್ಯ ತಂದಿರಬಹುದು, ಆದರೆ ನನಗಲ್ಲ' ಎಂದು ಹೇಳಿರುವ ಭಾವನಾ, '2020ರಲ್ಲೇ ನನಗೆ ಏನೋ ಸರಿಯಿಲ್ಲ ಎಂಬ ಅನುಮಾನ ಬಂದಿತ್ತು. ವಿಚಾರಣಾ ನ್ಯಾಯಾಲಯದ ಮೇಲೆ (Trial Court) ನಂಬಿಕೆ ಕಳೆದುಕೊಳ್ಳಲು ನಾನು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದ್ದೇನೆ:-
ಮೂಲಭೂತ ಹಕ್ಕುಗಳ ದಮನ: ಪ್ರಕರಣದ ಅತಿಮುಖ್ಯ ಸಾಕ್ಷ್ಯವಾಗಿದ್ದ 'ಮೆಮೊರಿ ಕಾರ್ಡ್' ನ್ಯಾಯಾಲಯದ ಸುಪರ್ದಿಯಲ್ಲಿದ್ದಾಗಲೂ ಮೂರು ಬಾರಿ ಕಾನೂನುಬಾಹಿರವಾಗಿ 'ಆಕ್ಸೆಸ್' (Access) ಮಾಡಲಾಗಿತ್ತು' ಎಂದಿದ್ದಾರೆ ಭಾವನಾ.
ಪ್ರಾಸಿಕ್ಯೂಟರ್‌ಗಳ ರಾಜೀನಾಮೆ: ನ್ಯಾಯಾಲಯದ ವಾತಾವರಣ ಪಕ್ಷಪಾತದಿಂದ ಕೂಡಿದೆ ಎಂದು ಬೇಸತ್ತು ಇಬ್ಬರು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ರಾಜೀನಾಮೆ ನೀಡಿದ್ದರು. "ಈ ಕೋರ್ಟ್‌ನಲ್ಲಿ ನಿನಗೆ ನ್ಯಾಯ ಸಿಗುವುದಿಲ್ಲ ಎಂದು ಅವರು ನೇರವಾಗಿಯೇ ಹೇಳಿದ್ದರು' ಎಂದಿದ್ದಾರೆ.
ವರದಿ ನೀಡಲು ನಿರಾಕರಣೆ: 'ಮೆಮೊರಿ ಕಾರ್ಡ್ ಟ್ಯಾಂಪರಿಂಗ್ ಬಗ್ಗೆ ತನಿಖಾ ವರದಿಯನ್ನು ಕೇಳಿ ಕೇಳಿ ಸುಸ್ತಾದರೂ, ಅದನ್ನು ನನಗೆ ಅವರು ನೀಡಿರಲಿಲ್ಲ' ಎಂದಿದ್ದಾರೆ.
ಆರೋಪಿಗಳ ವಿಚಿತ್ರ ನಡೆ: 'ನಾನು ಸಂತ್ರಸ್ತೆ ನ್ಯಾಯಯುತ ವಿಚಾರಣೆಗೆ ಬೇಡಿಕೆ ಇಡುತ್ತಿದ್ದರೆ, ಅತ್ತ ಆರೋಪಿಗಳು ಅದೇ ನ್ಯಾಯಾಧೀಶರೇ ವಿಚಾರಣೆ ಮುಂದುವರಿಸಲಿ ಎಂದು ಅರ್ಜಿ ಸಲ್ಲಿಸಿದ್ದು ನನಗೆ ಅನುಮಾನವನ್ನು ದ್ವಿಗುಣಗೊಳಿಸಿತ್ತು' ಎಂದಿದ್ದಾರೆ ಭಾವನಾ.
ವಿಶೇಷವೆಂದರೆ, ಈ ಅನ್ಯಾಯದ ವಿರುದ್ಧ ಭಾವನಾ ಅವರು ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೂ ಪತ್ರ ಬರೆದು ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದರಂತೆ! ಅಲ್ಲದೆ, ಸತ್ಯ ಜನರಿಗೆ ತಿಳಿಯಲಿ ಎಂದು 'ಓಪನ್ ಕೋರ್ಟ್' (Open Court) ವಿಚಾರಣೆಗೆ ಮನವಿ ಮಾಡಿದ್ದರೂ ಅದನ್ನು ತಿರಸ್ಕರಿಸಲಾಗಿತ್ತು ಎಂಬ ಕಟು ಸತ್ಯವನ್ನು ನಟಿ ಇದೀಗ ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.
"ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣುತ್ತಿಲ್ಲ"
ಅತ್ಯಂತ ನೋವಿನ ಸಂಗತಿಯೆಂದರೆ, 'ನಾನು ವ್ಯವಸ್ಥೆಯ ಬಗ್ಗೆ ಕಟುವಾದ ಸತ್ಯವೊಂದನ್ನು ಅರಿತುಕೊಂಡಿದ್ದೇನೆ' ಎಂದಿದ್ದಾರೆ. ಜೊತೆಗೆ, "ವರ್ಷಗಳ ನೋವು, ಕಣ್ಣೀರು ಮತ್ತು ಮಾನಸಿಕ ಹೋರಾಟದ ನಂತರ, ನನಗೊಂದು ಕಟುವಾದ ಸತ್ಯದ ಅರಿವಾಗಿದೆ. 'ಈ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಕಾನೂನಿನ ಮುಂದೆ ಸಮಾನವಾಗಿ ನಡೆಸಿಕೊಳ್ಳಲಾಗುವುದಿಲ್ಲ' ಎಂಬುದು ನನಗೆ ಅರ್ಥವಾಗಿದೆ," ಎಂದು ಬರೆಯುವ ಮೂಲಕ ತಮ್ಮ ಆಳವಾದ ನೋವನ್ನು ವ್ಯಕ್ತಪಡಿಸಿದ್ದಾರೆ.
ಮಾನವ ನಿರ್ಧಾರಗಳ ಪ್ರಭಾವ
'ಅಂತಿಮವಾಗಿ ಬಂದಿರುವ ಈ ತೀರ್ಪು, ಮಾನವನ ಆಲೋಚನೆಗಳು ಅಥವಾ ಪೂರ್ವಾಗ್ರಹಗಳು (Human Judgment) ನ್ಯಾಯಾಂಗದ ನಿರ್ಧಾರಗಳನ್ನು ಎಷ್ಟು ಬಲವಾಗಿ ರೂಪಿಸಬಲ್ಲವು ಎಂಬುದನ್ನು ತೋರಿಸಿಕೊಟ್ಟಿದೆ' ಎಂದು ಭಾವನಾ ಅಭಿಪ್ರಾಯಪಟ್ಟಿದ್ದಾರೆ. ಆದರೂ, "ಪ್ರತಿಯೊಂದು ನ್ಯಾಯಾಲಯವೂ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂಬುದು ನನಗೊತ್ತಿದೆ," ಎಂದು ಹೇಳುವ ಮೂಲಕ ನ್ಯಾಯಾಂಗ ವ್ಯವಸ್ಥೆಯ ಮೇಲಿನ ತಮಗೆ ಇನ್ನೂ ನಂಬಿಕೆ ಇದೆ ಎಂಬುದನ್ನು ಹೇಳಿದ್ದಾರೆ.
ಇದೇ ವೇಳೆ, 'ಈ ಕಠಿಣ ಸಮಯದಲ್ಲಿ, ಈ ಸುದೀರ್ಘ ಪ್ರಯಾಣದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ನನ್ನ ಧನ್ಯವಾದಗಳು.. ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು," ಎಂದಿದ್ದಾರೆ. ಒಟ್ಟಿನಲ್ಲಿ, ನಟಿ ಭಾವನಾ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಮತ್ತು ಸಿನಿಪ್ರಿಯರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಮುಂದಿನ ಬೆಳವಣಿಗೆ ಏನಿದೆಯೋ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.