ಪೆದ್ದಿ ಸಿನಿಮಾ ಶೂಟಿಂಗ್‌ ವೇಳೆ ನಟ ರಾಮ್‌ ಚರಣ್‌ಗೆ ಗಾಯ; 4 ಹೊಲಿಗೆ ಹಾಕಿಸಿಕೊಂಡು ಮತ್ತೆ ಚಿತ್ರೀಕರಣಕ್ಕೆ ಹಾಜರ್!

Published : Mar 25, 2026, 07:06 PM IST
Ram Charan

ಸಾರಾಂಶ

ಹೈದರಾಬಾದ್‌ನಲ್ಲಿ 'ಪೆದ್ದಿ' ಸಿನಿಮಾದ ಆಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ನಟ ರಾಮ್ ಚರಣ್ ಅವರ ಕಣ್ಣಿನ ಹುಬ್ಬಿನ ಬಳಿ ಗಾಯವಾಗಿದೆ. ಕೂಡಲೇ ಅವರಿಗೆ 4 ಹೊಲಿಗೆಗಳನ್ನು ಹಾಕಲಾಗಿದ್ದು, ಚಿಕಿತ್ಸೆ ಪಡೆದ ಕೆಲವೇ ಗಂಟೆಗಳಲ್ಲಿ ಅವರು ಮತ್ತೆ ಶೂಟಿಂಗ್‌ಗೆ ಹಾಜರಾಗಿದ್ದಾರೆ. ಈ ಚಿತ್ರಕ್ಕೆ ಜಾಹ್ನವಿ ಕಪೂರ್ ನಾಯಕಿ.

ರಾಮ್‌ ಚರಣ್‌ಗೆ ಗಾಯ?

ಟಾಲಿವುಡ್‌ನ ʻಮೆಗಾ ಪವರ್‌ ಸ್ಟಾರ್‌ʼ ರಾಮ್‌ ಚರಣ್‌ ಅವರು ಸದ್ಯ ʻಪೆದ್ದಿʼ ಸಿನಿಮಾದ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಏಪ್ರಿಲ್‌ 30, 2026ಕ್ಕೆ ರಿಲೀಸ್ ಮಾಡಬೇಕು ಎಂಬುದು ಚಿತ್ರತಂಡ ಗುರಿಯಾಗಿದೆ. ಆ ನಿಟ್ಟಿನಲ್ಲಿ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿವೆ. ಆದರೆ ಈ ನಡುವೆ ಶೂಟಿಂಗ್‌ ವೇಳೆ ರಾಮ್‌ ಚರಣ್‌ ಅವರಿಗೆ ಪೆಟ್ಟಾಗಿದ್ದು, ಅಭಿಮಾನಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ.

ಶೂಟಿಂಗ್‌ ವೇಳೆ ನಟ ರಾಮ್‌ ಚರಣ್‌ ಅವರ ಕಣ್ಣಿನ ಬಳಿ ಸಣ್ಣ ಪ್ರಮಾಣದ ಗಾಯವಾಗಿದೆ. ತಕ್ಷಣವೇ ಈ ನಟನಿಗೆ ಚಿಕಿತ್ಸೆ ನೀಡಲಾಗಿದೆ. ವಿಶೇಷವೆಂದರೆ, ಪೆಟ್ಟಾಗಿದ್ದರೂ ಕೂಡ ಅವರು ಯಾವುದೇ ವಿಶ್ರಾಂತಿ ಪಡೆಯದೇ ಪುನಃ ಶೂಟಿಂಗ್‌ಗೆ ಹಾಜರಾಗಿದ್ದಾರೆ. ಮಂಗಳವಾರ (ಮಾ.24) ಹೈದರಾಬಾದ್‌ನಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ರಾಮ್‌ ಚರಣ್‌ ಕಣ್ಣಿನ ಬಳಿ ಗಾಯವಾಗಿ ರಕ್ತ ಸೋರತೊಡಗಿದೆ.

ರಾಮ್ ಚರಣ್ ಅವರ ಕಣ್ಣಿಗೆ ಗಾಯವಾಗಿದೆ ಎಂಬ ವದಂತಿ

ರಾಮ್ ಚರಣ್ ಅವರ ಕಣ್ಣಿಗೆ ಗಾಯವಾಗಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಚಿತ್ರತಂಡವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಗಾಯವು ಕಣ್ಣಿನ ಮೇಲ್ಭಾಗದಲ್ಲಿ ಆಗಿದೆಯೇ ಹೊರತು ಕಣ್ಣಿಗಲ್ಲ ಎಂದು ತಿಳಿಸಿದೆ. "ರಾಮ್ ಚರಣ್ ಅವರಿಗೆ ಆ್ಯಕ್ಷನ್ ದೃಶ್ಯದ ವೇಳೆ ಗಾಯವಾಗಿದ್ದು, ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ. ಗಾಯವು ಕಣ್ಣಿನ ಹುಬ್ಬಿನ ಮೇಲ್ಭಾಗದಲ್ಲಿ ಆಗಿದೆ. ಕಣ್ಣಿಗೆ ಯಾವುದೇ ಸಮಸ್ಯೆ ಆಗಿಲ್ಲ, ಅವರ ಕಣ್ಣು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದು ಸಣ್ಣ ಗಾಯವಾಗಿದ್ದು, ಆತಂಕಪಡುವ ಅಗತ್ಯವಿಲ್ಲ. ಅವರು ಯಾವುದೇ ವಿರಾಮ ತೆಗೆದುಕೊಳ್ಳದೆ ತಕ್ಷಣವೇ ಕೆಲಸಕ್ಕೆ ಮರಳಿದ್ದಾರೆ" ಎಂದು ರಾಮ್‌ ಚರಣ್‌ ಟೀಮ್‌ ತಿಳಿಸಿದೆ.‌

ಗಾಯವಾದಾಗ, ಹೊಲಿಗೆ ಹಾಕಿಸಿಕೊಂಡು ಕೆಲವೇ ಗಂಟೆಗಳಲ್ಲಿ ಅವರು ಮತ್ತೆ ಚಿತ್ರೀಕರಣಕ್ಕೆ ಮರಳುವ ಮೂಲಕ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ. ಈ ಬಗ್ಗೆ ಇಡೀ ಚಿತ್ರತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. 'ಉಪ್ಪೇನಾ' ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿರುವ ಈ ಕ್ರೀಡಾ ಆಧಾರಿತ ಆ್ಯಕ್ಷನ್ ಸಿನಿಮಾವನ್ನು ಮಾರ್ಚ್ 27ರಂದು ರಿಲೀಸ್‌ ಮಾಡಲು ಈ ಮೊದಲು ಪ್ಲಾನ್ ಮಾಡಲಾಗಿತ್ತು. ಆದರೆ ಈಗ ಏಪ್ರಿಲ್ 30 ರಂದು ವಿಶ್ವದಾದ್ಯಂತ ರಿಲೀಸ್‌ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಕನ್ನಡದ ನಟ ಶಿವರಾಜ್‌ಕುಮಾರ್‌

ಕನ್ನಡದ ನಟ ಶಿವರಾಜ್‌ಕುಮಾರ್‌ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜಗಪತಿ ಬಾಬು, ಜಾಹ್ನವಿ ಕಪೂರ್‌, ದಿವ್ಯೇಂದು ಸೇರಿದಂತೆ ಹಲವರು ಈ ಚಿತ್ರದಲ್ಲಿದ್ದಾರೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಪೆದ್ದಿ ಚಿತ್ರವನ್ನು ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದು, ಸುಕುಮಾರ್‌ ರೈಟಿಂಗ್ಸ್‌ ಮತ್ತು ಮೈತ್ರಿ ಮೂವೀ ಮೇಕರ್ಸ್‌ ಸಂಸ್ಥೆಗಳು ಪ್ರಸ್ತುತಪಡಿಸಲಿದ್ದಾರೆ.

ಗುಣಮುಖರಾಗಲಿ ಎಂದು ಹಾರೈಸಿದ ಪಿಕೆ

"ಪೆದ್ದಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಾಮ್ ಚರಣ್ ಗಾಯಗೊಂಡಿದ್ದು ತಿಳಿದುಬಂದಿದೆ. ರಾಮ್ ಚರಣ್ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ" ಎಂದು ನಟ, ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಟ್ವೀಟ್‌ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Vijay Sangeetha Divorce: ವಿಜಯ್ ಏನೆಲ್ಲಾ ಮಾಡಿದ್ದರು? ಹಳೆ ಇಂಟರ್ವ್ಯೂನಲ್ಲಿ ಲಿಸ್ಟ್ ಕೊಟ್ಟಿದ್ದ ಸಂಗೀತಾ!
AR Rahman: 20 ವರ್ಷವಾದ್ರೂ ಬದಲಾಗದ ಮ್ಯಾಜಿಕ್, ಪ್ರತಿ ಸ್ಟೇಜ್‌ನಲ್ಲೂ ಅದೇ ಹಾಡು: ರೆಹಮಾನ್‌ರ ಸಿಗ್ನೇಚರ್ ಗೀತೆ!