
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ (Chamarajanagar Encounter) ಸಂಬಂಧಿಸಿದಂತೆ ಕೊನೆಗೂ ಎಫ್‌ಐಆರ್ ದಾಖಲಾಗಿದೆ. ಪ್ರಾಣಿ ಬೇಟೆಗೆ ಬಂದಿದ್ದಾರೆ ಎಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಮೃತಪಟ್ಟಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೇ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ಆಂಟೋಣಿಸಾಮಿ ಅವರ ಪತ್ನಿ ಲೂರ್ದಾಮೇರಿ ನೀಡಿದ ದೂರಿನ ಆಧಾರದ ಮೇಲೆ ಚಾಮರಾಜನಗರದ ಹನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹಾಗೂ ಚಾಮರಾಜನಗರ ಎಸ್ಪಿ ಮುತ್ತುರಾಜು ಅವರ ಸಮ್ಮುಖದಲ್ಲಿ ಹನೂರು ವಿಭಾಗದ ಅರಣ್ಯ ಅಧಿಕಾರಿಗಳನ್ನು ಆರೋಪಿಗಳನ್ನಾಗಿಸಿ ಬಿಎನ್‌ಎಸ್ 103(1) (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಾವು ಹಸುಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆಗಸ್ಟ್ 14ರಂದು ನಮ್ಮ ಹಸುಗಳು ಕಾಡಿಗೆ ಮೇಯಲು ಹೋಗಿದ್ದವು ಆದರೆ ವಾಪಸ್ ಬಂದಿರಲಿಲ್ಲ. ಹಸುಗಳನ್ನು ಹುಡುಕಿಕೊಂಡು ಹೋಗಲು ನನ್ನ ಪತಿ ಆಂಟೋಣಿಸಾಮಿ, ತಮ್ಮ ಕುಮಾರ್, ಮೈದುನ ಪೀಟರ್ ಹಾಗೂ ದೊಡ್ಡಪ್ಪನ ಮಗ ಜೋಸೆಫ್ ಕಾಡಿಗೆ ತೆರಳಿದ್ದರು. ಮರಿಯಮಂಗಲ ಗ್ರಾಮದಿಂದ ಸುಮಾರು 4 ಕಿಲೋಮೀಟರ್ ದೂರದ ಕಾಡಿನಲ್ಲಿ ಇವರು ವಿಶ್ರಾಂತಿ ಪಡೆಯುತ್ತಾ ಮಲಗಿದ್ದಾಗ, ಬೆಳಗಿನ ಜಾವ 3 ರಿಂದ 5 ಗಂಟೆಯ ಸುಮಾರಿಗೆ ಅರಣ್ಯ ಅಧಿಕಾರಿಗಳು ಇದ್ದಕ್ಕಿದ್ದಂತೆ ಶೂಟ್ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಜೋಸೆಫ್ ಅಲ್ಲಿಂದ ತಪ್ಪಿಸಿಕೊಂಡು ಬಂದು ಘಟನೆಯನ್ನು ತಿಳಿಸಿದ್ದಾನೆ. ಅರಣ್ಯ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾರೆ ಎಂದು ಲೂರ್ದಾಮೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೊಂದೆಡೆ ಅರಣ್ಯ ಇಲಾಖೆಯ ಸಿಬ್ಬಂದಿ ಬೇರೆಯದೇ ವಾದ ಮಂಡಿಸಿದ್ದಾರೆ. ನಾಲ್ವರು ವ್ಯಕ್ತಿಗಳು ಪ್ರಾಣಿ ಬೇಟೆಯಾಡಲು ಅರಣ್ಯಕ್ಕೆ ಬಂದಿದ್ದರು. ಈ ವೇಳೆ ಬೇಟೆಗೆ ಬಂದವರು ಅರಣ್ಯ ಸಿಬ್ಬಂದಿ ಮೇಲೆ ಮೊದಲು ಫೈರಿಂಗ್ ಮಾಡಿದ್ದಾರೆ. ಜೀವ ರಕ್ಷಣೆಗಾಗಿ ನಾವು ಮರು ಗುಂಡಿನ ದಾಳಿ (Retaliatory Firing) ನಡೆಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಘಟನಾ ಸ್ಥಳದಲ್ಲಿ ಒಂದು ನಾಡಬಂದೂಕು ಹಾಗೂ ಎರಡು ಬ್ಯಾಗ್‌ನಷ್ಟು ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಹೇಳಿಕೊಂಡಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಕಾವೇರಿ ವನ್ಯಧಾಮದ ಕರಡಿ ಕಲ್ಲು ಒಡ್ಡು ಬಳಿ ಈ ಘಟನೆ ನಡೆದಿದೆ. ಫೈರಿಂಗ್‌ನಿಂದ ಮೂವರು ಮೃತಪಟ್ಟಿದ್ದು, ಒಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಗಾಯಾಳುಗಳ ಜೀವ ಉಳಿಸಲು ಕೊಳ್ಳೇಗಾಲ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಮೂವರು ಮೃತಪಟ್ಟಿದ್ದರಿಂದ ಆಂಟೋಣಿಸಾಮಿ, ಜಾನ್ ಪೀಟರ್ ಹಾಗೂ ಸೆಬಾಸ್ಟಿಯನ್ ಕುಮಾರ್ ಅವರ ಮೃತದೇಹಗಳನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ.
ನಾಲ್ವರು ಬೇಟೆಯಾಡಲು ಅರಣ್ಯಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬೇಟೆಗೆ ಬಂದವರು ಅರಣ್ಯ ಸಿಬ್ಬಂದಿ ಮೇಲೆ ಫೈರಿಂಗ್ ಮಾಡಿದ್ದಾರೆ. ಅದಕ್ಕೆ ನಾವು ಫೈರಿಂಗ್ ಮಾಡಿದ್ದೇವೆ ಅಂತಾ ಹೇಳಿದ್ದಾರೆ. ಸತ್ಯಾಸತ್ಯತೆ ಹೊರತರುವ ಕೆಲಸವಾಗುತ್ತದೆ. ನಾಡಬಂದೂಕು ಕೂಡ ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಎರಡು ಬ್ಯಾಗ್ ಮಾಂಸ ಸಿಕ್ಕಿದೆ ಅಂತಾ ಹೇಳಿದ್ದಾರೆ. ಸತ್ತವರ ವಿರುದ್ಧ ಪ್ರಕರಣಗಳಿರುವ ಬಗ್ಗೆ ಮಾಹಿತಿ ಇಲ್ಲ. ತನಿಖೆ ನಡೆದ ನಂತರ ಗೊತ್ತಾಗುತ್ತದೆ. ಅರಣ್ಯ ಬಾರ್ಡರ್ ಗೂ ಹಾಗೂ ಘಟನೆ ನಡೆದಿರುವ ಸ್ಥಳಕ್ಕೆ ದೂರವಿದೆ. ಈಗ ಕುಟುಂಬಸ್ಥರು ಮೈಸೂರಿಗೆ ತೆರಳಿದ್ದಾರೆ. ಅರಣ್ಯಧಿಕಾರಿಗಳು ಯಾವುದೇ ದೂರನ್ನ ನೀಡಿಲ್ಲ. ಅವರು ಸಹ ದೂರನ್ನು ಕೊಡಬಹುದು. ಎರಡೂ ಕಡೆಯ ವಾದಗಳಿದ್ದು, ಸಂಪೂರ್ಣ ತನಿಖೆಯ ಬಳಿಕವೇ ಸತ್ಯಾಸತ್ಯತೆ ಹೊರಬರಬೇಕಿದೆ. ಮೃತರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳಿವೆಯೇ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.