
ಚಾಮರಾಜನಗರ (ಫೆ.01) ಲವ್ ಅಫೇರ್, ಮದುವೆ, ಅಕ್ರಮ ಸಂಬಂಧಗಳ ನೈಜ ಘಟನೆಗಳು ಸಿನಿಮಾ ಕತೆಯನ್ನು ಮೀರಿಸುವಂತಿದೆ. ಈ ರೀತಿ ಹಲವು ಘಟನೆಗಳು ವರದಿಯಾಗಿದೆ. ಇದೀಗ ಸಿನಿಮಾ ಕತೆಗಿಂತ ಭಿನ್ನ, ಕ್ಷಣ ಕ್ಷಣಕ್ಕೂ ರೋಚಕ ಟ್ವಿಸ್ಟ್ ನೀಡಿದ ಘಟನೆಯೊಂದು ನಡೆದಿದೆ.ಮದುವೆ ಫಿಕ್ಸ್ ಆಗಿದೆ. ಹುಡಗ ಹಾಗೂ ಹುಡುಗಿ ಮನೆಯಲ್ಲಿ ಅದ್ಧೂರಿ ತಯಾರಿ ಬಳಿಕ ಮದುವೆ ದಿನ ಬಂದೇ ಬಿಟ್ಟಿದೆ. ಕಲ್ಯಾಣ ಮಂಟಪಕ್ಕೆ ಕಾರಿನಲ್ಲಿ ವರ ಆಗಮಿಸುತ್ತಿದ್ದಂತೆ ದಾರಿ ನಡುವೆ ಕಾರು ಅಡ್ಡಗಟ್ಟಿ ದಾಳಿಯಾಗಿದೆ. ವರನಿಗೆ ಚಾಕು ಇರಿಯಲಾಗಿದೆ. ಇದೇನು ಹಳೇ ದ್ವೇಷ ಅಥವಾ ವರನ ಬ್ಯೂಸಿನೆಸ್, ವ್ಯವಹಾರಗಳ ಸಂಬಂಧ ಎಂದು ಎಲ್ಲರೂ ಅಂದುಕೊಂಡರೆ ತಪ್ಪು. ಇಲ್ಲೊಂದು ಟ್ವಿಸ್ಟ್. ಈ ಚಾಕು ಇರಿದ ಪ್ರಕರಣದ ಹಿಂದಿನ ರೂವಾರಿ ಕೆಲವೇ ಹೊತ್ತಿನಲ್ಲಿ ತಾಳಿ ಕಟ್ಟಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ವಧು. ಈ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಕೊಳ್ಳೇಗಾಲದಲ್ಲಿ ಇದೀಗ ರವೀಶ್ ಹಾಗೂ ನಯನಾ ಮದುವೆ ಭಾರಿ ಸದ್ದು ಮಾಡುತ್ತಿದೆ. ಡಿಸೆಂಬರ್ 29 ರಂದು ನಯನ ಹಾಗೂ ರವೀಶ್ ಮದುವೆ ಫಿಕ್ಸ್ ಆಗಿತ್ತು. ಕೊಳ್ಳೇಗಾಲದ ವೆಂಕಟೇಶ್ವರ ಮಹಲ್ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಎರಡೂ ಮನೆಯ ಗುರು ಹಿರಿಯರು ನಿಶ್ಚಿಯಿಸಿದ್ದರು. ಇಬ್ಬರು ಕರೆ ಮಾಡಿ ಮಾತನಾಡಿ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು.
ರವೀಶ್ ಕಾರಿನ ಮೂಲಕ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದಂತೆ ಮತ್ತೊಂದು ಕಾರು ಬಂದು ಕಾರಿಗೆ ಡಿಕ್ಕಿಯಾಗಿದೆ. ಬಳಿಕ ಕಾರಿನಿಂದ ಇಳಿದ ಇಬ್ಬರು ಏಕಾಏಕಿ ರವೀಶ್ ಹೊರಗೆಳೆದು ಚಾಕು ಇರಿದು ಪರಾರಿಯಾಗಿದ್ದಾರೆ. ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಇಬ್ಬರು ಆರೋಪಿಗಳಾದ ದರ್ಶನ್ ಹಾಗೂ ಮಿಥುನ್ ಇಬ್ಬರನ್ನು ಬಂಧಿಸಿದ್ದಾರೆ.
ಆಸ್ಪತ್ರೆಗೆ ಆಗಮಿಸಿದ ನಯನ, ಚಿಕಿತ್ಸೆ ಪಡೆಯುತ್ತಿದ್ದ ರವೀಶ್ ಮುಂದೆ ನಿಂತು ಕಣ್ಣೀರಿಟ್ಟಿದ್ದಾರೆ. ಆರೋಗ್ಯ ವಿಚಾರಿ ಮದುವೆಯಾಗುವಂತೆ ಕಣ್ಣೀರಿಟ್ಟಿದ್ದಳು. ಏನೇ ಆದರೂ ತಾನು ಜೊತೆಗಿರುವುದಾಗಿ ಭರವಸೆ ನೀಡಿದ್ದಳು. ಈಕೆಯ ಕಣ್ಣೀರಿಗೆ ರವೀಶ್ ಅಪಾರ ನೋವನ್ನು ಮರೆತಿದ್ದ. ಆದರೆ ಕೆಲವೇ ಹೊತ್ತಲ್ಲಿ ಅಸಲಿ ಬಣ್ಣ ಬಯಲಾಗಿದೆ.
ದರ್ಶನ್ ಹಾಗೂ ಮಿಥುನ್ ಬಂಧಿಸಿದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ದಾಳಿ ಹಿಂದಿನ ಕೃತ್ಯ ಬಯಲಾಗಿದೆ. ವಧು ನಯನಾ ಹಾಗೂ ಆರೋಪಿ ದರ್ಶನ್ ಪ್ರೀತಿಸುತ್ತಿದ್ದರು. ಇದರ ನಡುವೆ ಮದುವೆ ಫಿಕ್ಸ್ ಆಗಿತ್ತು. ಹೇಗಾದರು ಮಾಡಿ ಮದುವೆ ತಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಹೀಗಾಗಿ ಕೊನೆಗೆ ವರನಿಗೆ ಚಾಕು ಇರಿಯಲು ಮುಂದಾಗಿದ್ದಾರೆ. ಈ ಎಲ್ಲಾ ಪ್ಲಾನ್ ಮಾಡಿದ್ದು ನಯನಾ ಹಾಗೂ ದರ್ಶನ್. ನಯನಾ ಸೂಚನೆ ಮೇರೆಗೆ ವರ ರವೀಶ್‌ಗೆ ಚಾಕು ಇರಿಯಲು ದರ್ಶನ್ ಹಾಗೂ ಮಿಥುನ್ ಸಜ್ಜಾಗಿ ಬಂದಿದ್ದರು. ಪ್ಲಾನ್ ಪ್ರಕಾರ ದಾಳಿ ಮಾಡಿದ್ದರು.
ವಿಚಾರಣೆಯಲ್ಲಿ ನಯನಾ ಹೆಸರು ಬರುತ್ತಿದ್ದಂತೆ ಪೊಲೀಸರು, ನೇರವಾಗಿ ನಯನಾ ಫೋನ್ ಕರೆ, ಮಾತುಕತೆ ಸೇರಿದಂತೆ ಇತರ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಬಳಿಕ ನಯನಾ ಬಂಧಿಸಿದ್ದಾರೆ. ಘಟನೆ ಸಂಬಂಧ ನಯನಾ ಸೇರಿ ಒಟ್ಟು ಮೂವರು ಅರೆಸ್ಟ್ ಆಗಿದ್ದಾರೆ.