
ನಿರುದ್ಯೋಗ ಎನ್ನುವುದು ತಲೆತಲಾಂತರಗಳಿಂದಲೂ ದೊಡ್ಡ ಪೀಡೆಯಾಗಿಯೇ ಬಂದಿದೆ. ಎಷ್ಟೇ ಉದ್ಯೋಗ ಸೃಷ್ಟಿ ಮಾಡಿದರೂ, ನಿರುದ್ಯೋಗ ತಾಂಡವವಾಡುತ್ತಲೇ ಇರುತ್ತದೆ. ಇದಕ್ಕೆ ಹಲವು ಕಾರಣ ಇದ್ದರೂ, ಮುಖ್ಯವಾಗಿರುವ ಕಾರಣ ಎಂದರೆ ಸರ್ಕಾರಿ ಹುದ್ದೆಯ ಹಂಬಲ. ಸರ್ಕಾರಿ ಕೆಲಸ ಸಿಕ್ಕರೆ ಮಾತ್ರ ಉದ್ಯೋಗ ಎನ್ನುವ ಮನಸ್ಥಿತಿ ಇಂದಿಗೂ ಕಡಿಮೆಯಾಗಿಲ್ಲ. ಮತ್ತೆ ಹಲವರಿಗೆ ತಮ್ಮ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಇಲ್ಲ ಎನ್ನುವ ಕೊರಗು. ಇದೇ ಕಾರಣಕ್ಕೆ ಚಿಕ್ಕಪುಟ್ಟ ಕೆಲಸಗಳಿಗೆ ಹೋಗಲು ಮನಸ್ಸು ಒಪ್ಪುವುದಿಲ್ಲ. ನಾನು ಕಲಿತಿರುವುದು ಇದು, ನನಗೆ ಇಂಥ ಕೆಲಸನಾ ಎಂದುಕೊಳ್ಳುವವರೂ ಲಕ್ಷಾಂತರ ಮಂದಿ ಇದ್ದಾರೆ. ಉದ್ಯೋಗ ಇಲ್ಲದಿದ್ದರೂ ಪರವಾಗಿಲ್ಲ, ಈ ಚಿಕ್ಕ ಉದ್ಯೋಗ ಮಾಡಲ್ಲ ಎನ್ನುವ ಅಹಂ ಅಡ್ಡಿ ಬರುವುದೂ ನಿರುದ್ಯೋಗಕ್ಕೆ ಬಹುದೊಡ್ಡ ಕಾರಣ ಎನ್ನುವುದು ಇದಾಗಲೇ ಸಾಬೀತಾಗಿಬಿಟ್ಟಿದೆ.
ರಾಷ್ಟ್ರೀಯ ಅಂಕಿಅಂಶ ಕಚೇರಿಯ (NSO) ಇತ್ತೀಚಿನ ವರದಿಯ ಪ್ರಕಾರ, ಜುಲೈ-ಸೆಪ್ಟೆಂಬರ್ 2024 ರ ತ್ರೈಮಾಸಿಕದಲ್ಲಿ ನಗರ ನಿರುದ್ಯೋಗ ದರವು ಶೇ. 6.4 ಕ್ಕೆ ಇಳಿದಿದೆ, ಇದು ಉತ್ತಮ ಬೆಳೆವಣಿಗೆಯಾದರೂ, ಭಾರತ ಉದ್ಯೋಗ ವರದಿ 2024 ನೀಡಿರುವ ವರದಿಯ ಅನ್ವಯ, ಯುವಕರು ಉತ್ತಮ ಉದ್ಯೋಗಾವಕಾಶಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಯಾವ ಪರಿಯಲ್ಲಿ ಯುವ ಸಮೂಹ ಸರ್ಕಾರದ ಉದ್ಯೋಗಕ್ಕೆ ಆಸೆ ಪಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾದದ್ದು, ರೈಲ್ವೆಯಲ್ಲಿ ಕರೆದಿರುವ ಗ್ರೂಪ್ ಡಿ ಹುದ್ದೆಗಳಿಗೆ ಬಂದಿರುವ ಅರ್ಜಿ. 32,438 ಹುದ್ದೆಗಳಿಗೆ 1.8 ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ. ಅದೂ 25 ಸಾವಿರ ರೂಪಾಯಿ ವೇತನಕ್ಕೆ! ಇದರ ಜೊತೆ ಇನ್ನೂ ಕೆಲವು ಸೌಲಭ್ಯ ಸಿಗುತ್ತದೆ. ಹಾಗೆಂದು ಇಲ್ಲಿ ಅರ್ಜಿ ಸಲ್ಲಿಸಿರುವವರೆಲ್ಲರೂ ನಿರುದ್ಯೋಗಿಗಳು ಎಂದಲ್ಲ. ಯಾವುದೋ ಚಿಕ್ಕಪುಟ್ಟ ಉದ್ಯೋಗ ಮಾಡಿಕೊಂಡು ಬದುಕುತ್ತಿರುವವರೂ ಸರ್ಕಾರಿ ನೌಕರಿಗೆ ಹಂಬಲ ಪಡುವವರು ಇದ್ದಾರೆ. ಅದೇನೇ ಆದರೂ ನಿರುದ್ಯೋಗ ಯಾವ ಪರಿಯಲ್ಲಿ ಬೆಳೆದಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿ ನಿಂತಿದೆ. ಅದೇ ಇನ್ನೊಂದೆಡೆ, ಜಾಬ್ ಕಟ್ಟಿಂಗ್ ನಡೆಯುತ್ತಿವೆ. ಎಐ ಬಂದ ಬಳಿಕ ಹಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾವಂತರಿಗೂ ಉದ್ಯೋಗ ಸಿಗದ ಸ್ಥಿತಿಯೂ ಎದುರಾಗಿದೆ.
ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಹ್ವಾನ: 56 ಸಾವಿರ ರೂ.ಸ್ಟೈಪೆಂಡ್, ಉಚಿತ ವಸತಿ- ಡಿಟೇಲ್ಸ್ ಇಲ್ಲಿದೆ...
ದೇಶಾದ್ಯಂತ 1.08 ಕೋಟಿಗೂ ಹೆಚ್ಚು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚಿನ ಅರ್ಜಿಗಳು ಮುಂಬೈ ವಲಯದಿಂದ ಬಂದಿವೆ. ಮುಂಬೈನಿಂದ ಒಟ್ಟು 15,59,100 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಚಂಡೀಗಢದಿಂದ 11.60 ಲಕ್ಷ, ಚೆನ್ನೈನಿಂದ 11.12 ಲಕ್ಷ, ಸಿಕಂದರಾಬಾದ್‌ನಿಂದ 9.60 ಲಕ್ಷ, ಪ್ರಯಾಗ್‌ರಾಜ್‌ನಿಂದ 8.61 ಲಕ್ಷ ಮತ್ತು ಕೋಲ್ಕತಾದಿಂದ 7.93 ಲಕ್ಷ ಅರ್ಜಿಗಳು ಬಂದಿವೆ.
ಒಟ್ಟು 1,08,22,423 ಅರ್ಜಿಗಳು ಸಲ್ಲಿಕೆಯಾಗಿವೆ. ರೈಲ್ವೆಯ ವಿವಿಧ ಇಲಾಖೆಗಳಲ್ಲಿ ಲೆವೆಲ್-1 ಹುದ್ದೆಗಳಿಗೆ ಈ ನೇಮಕಾತಿ ಡ್ರೈವ್ ನಡೆಸಲಾಗುತ್ತಿದೆ. ಇದರಲ್ಲಿ ಟ್ರ್ಯಾಕ್ ಮೇಂಟೇನರ್ ಗ್ರೇಡ್-IV, ಅಸಿಸ್ಟೆಂಟ್ ಪಾಯಿಂಟ್ಸ್‌ಮನ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳು ಸೇರಿವೆ. ಈ ಹುದ್ದೆಗಳು ವಿದ್ಯುತ್, ಯಾಂತ್ರಿಕ ಮತ್ತು ಸಿಗ್ನಲ್ ಮತ್ತು ದೂರಸಂಪರ್ಕ ವಿಭಾಗಗಳಲ್ಲಿವೆ.
5 ತಿಂಗಳಲ್ಲೇ 61 ಸಾವಿರ ಮಂದಿ ವಜಾಗೊಳಿಸಿದ 130 ಐಟಿ ಕಂಪೆನಿ! ಬೆಂಗಳೂರಲ್ಲೇ ಅಧಿಕ- ಡಿಟೇಲ್ಸ್ ಇಲ್ಲಿದೆ