ಸದ್ದಿಲ್ಲದೆ ಮದುವೆಯಾದ ಸುಮನಾ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ!

By Suvarna News  |  First Published May 24, 2020, 8:40 PM IST

ವೈವಾಹಿಕ ಜೀವನಕ್ಕೆ ಕಾಲಿಟ್ಟ ಪತ್ರಕರ್ತೆ, ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು/ ಲಾಕ್ ಡೌನ್ ನಡುವೆ ಸರಳ ವಿವಾಹ/  ಪತಿ ಶ್ರೀನಿವಾಸ್ ಫೇಸ್ಬುಕ್ ನಲ್ಲಿ ಹಾಕಿದ ವಿವಾಹದ ಪೋಟೊ ಕೊಟ್ಟ ಸುದ್ದಿ/   `ಎದೆಗಾರಿಕೆ', `ಕಿರಗೂರಿನ ಗಯ್ಯಾಳಿಗಳು ಅಂಥ ಸಿನಿಮಾ ಕೊಟ್ಟ ನಿರ್ದೇಶಕಿ


ಶಶಿಕರ ಪಾತೂರು

ಪತ್ರಕರ್ತೆ, ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಅವರು ವಿವಾಹಿತೆಯಾಗಿದ್ದಾರೆ. ಮದುವೆಯಾಗಿ ತಿಂಗಳಾಗಿದ್ದರೂ, ಲಾಕ್ಡೌನ್‌ ಕಾಲವಾದ ಕಾರಣ ಸುದ್ದಿ ಮಾಡುವ ಪ್ರಯತ್ನವನ್ನೂ ಅವರು ಮಾಡಿರಲಿಲ್ಲ. ಆದರೆ ಅವರ ಪತಿ ಶ್ರೀನಿವಾಸ್ ಫೇಸ್ಬುಕ್ ನಲ್ಲಿ ಹಾಕಿದ ವಿವಾಹದ ಪೋಟೊ ಹೊಸ ಸುದ್ದಿಯನ್ನು ಹೊರಗೆ ತಂದಿದೆ. ಕನ್ನಡದಲ್ಲಿ `ಎದೆಗಾರಿಕೆ', `ಕಿರಗೂರಿನ ಗಯ್ಯಾಳಿ'ಗಳಂಥ ಮಾಸ್, ಕ್ಲಾಸ್ ಸಿನಿಮಾ ನೀಡಿದ ಸುಮನಾ ಅವರು ವಿವಾಹದ ಬಳಿಕ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮನಸು ಬಿಚ್ಚಿ ಮಾತನಾಡಿದ್ದಾರೆ. 

Latest Videos

undefined

ವಿವಾಹದ ಬಗ್ಗೆ ನಿಮ್ಮ ನಿರ್ಧಾರಗಳೇನಿತ್ತು? 

 ಸರಿಯಾದ ಸಮಯಕ್ಕೆ ಮದುವೆ ಆಗಬೇಕು ಎನ್ನುವುದು  ಮಾತ್ರ ಇತ್ತು. ಅದುಬಿಟ್ಟು ಚಿತ್ರರಂಗದವರನ್ನೇ ಆಗಬೇಕು ಅಥವಾ ಇಂಥದೇ ವೃತ್ತಿಯವರು ಆಗಬೇಕು ಎನ್ನುವ ಯಾವ ಗುರಿಯೂ ನನಗೆ ಇರಲಿಲ್ಲ. ಪ್ರೇಮ ವಿವಾಹವನ್ನೇ ಆಗುತ್ತೇನೆ ಎಂದು ಕೂಡ ಅಂದುಕೊಂಡವಳಲ್ಲ. ಮನೆಯವರು ಮೆಚ್ಚಿದ ಹುಡುಗನೇ ಆದರೂ ನನಗೆ ಕೂಡ ಇಷ್ಟವಾಗುವುದಾದರೆ ಮದುವೆಗೆ ಸಿದ್ಧವಾಗಿದ್ದೆ. ಇದೀಗ ಮನೆಯಲ್ಲಿ ಪರಿಚಯ ಇರುವ ಆತ್ಮೀಯ ಯುವಕನೇ ನನ್ನ ಬಾಳ ಸಂಗಾತಿಯಾಗಿದ್ದಾರೆ.

ರಾಣಾ ದಗ್ಗುಬಾಟಿ ಮನಗೆದ್ದ ಚೆಲುವೆ ಹೇಗಿದ್ದಾರೆ?

ಶ್ರೀನಿವಾಸ್ ಅವರಲ್ಲಿನ ಯಾವ ಗುಣ ನಿಮಗೆ ತುಂಬ ಇಷ್ಟವಾಯಿತು?

 ನನಗೆ ಅವರ ಕುಟುಂಬ ಮೊದಲೇ ಪರಿಚಯ. ಶ್ರೀನಿವಾಸ್ ಬಗ್ಗೆಯೂ ತಿಳಿದುಕೊಂಡಿದ್ದೆ. ಆದರೆ ಪುದುಚೇರಿಯಲ್ಲಿ ಭೇಟಿಯಾಗಿದ್ದು ಮಾತ್ರ ಅನಿರೀಕ್ಷಿತ. ನಿಮಗೆ ತಿಳಿದಿರುವ ಹಾಗೆ ಅದು ಒಂದು ಕೇಂದ್ರಾಡಳಿತ ಪ್ರದೇಶ. ತಮಿಳು ಅಲ್ಲಿನ ಭಾಷೆ. ಹಾಗಾಗಿ ಶ್ರೀನಿವಾಸ್ ಅವರು ಅಲ್ಲಿ ಸಿಕ್ಕಾಗ ಇಬ್ಬರು ಕನ್ನಡಿಗರು ಅಪರಿಚಿತ ಊರಲ್ಲಿ ಭೇಟಿಯಾದಾಗ ಆಗುವ ನಿರಾಳತೆಯೇ ನಮಗಾಗಿತ್ತು. ನಮ್ಮ ನಡುವಿನ ಆತ್ಮಿಯತೆ, ಅವರಿಗಿರುವ ಹೊಂದಾಣಿಕೆಯ ಸ್ವಭಾವ ಮದುವೆಯ ಬಗ್ಗೆ ಯೋಚಿಸುವಂತೆ ಮಾಡಿತು. ಆದರೆ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದು ಮಾತ್ರ ಶ್ರೀನಿವಾಸ್ ಅವರೇ. ನನ್ನ ನಿರೀಕ್ಷೆಯ ಹುಡುಗನ ಗುಣಗಳೆಲ್ಲ ಅವರಲ್ಲಿ ಕಾಣಿಸಿದ ಕಾರಣ ನಾನು ಒಪ್ಪಿದೆ. 

ಮನೆಯಲ್ಲಿ ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ ಏನು ಹೇಳಿದರು 

ಅವರು ಸಂತೋಷದಿಂದಲೇ ಒಪ್ಪಿದರು. ಜತೆಗೆ ಶ್ರೀನಿವಾಸ್ ಅವರ ತಾಯಿ ನನಗೆ ಚೆನ್ನಾಗಿ ಪರಿಚಯ. ಅವರಿಗೆ ನನ್ನ `ಕಿರಗೂರಿನ ಗಯ್ಯಾಳಿ' ಸಿನಿಮಾ ಇಷ್ಟವೆಂದು ಬೇರೆ ಹೇಳುತ್ತಿದ್ದರು. ಹಾಗೆ ಸೊಸೆಯಾಗಿ ಸ್ವೀಕರಿಸುವ ವಿಚಾರದಲ್ಲಿ ಅವರಿಂದಲೂ ಯಾವುದೇ ನಿರಾಕರಣೆಗಳಿರಲಿಲ್ಲ. ಹಾಗಾಗಿ ಇದನ್ನು ಲವ್ ಕಮ್ ಅರೇಂಜ್ ಮ್ಯಾರೇಜ್ ಎನ್ನಬಹುದು. ಆದರೆ ಮದುವೆ ಸರಳವಾಗಿ ಆಗಬೇಕೆನ್ನುವುದು ನನ್ನ  ಆಸೆಯಾಗಿತ್ತು. ಯಾಕೆಂದರೆ ಬಾಲ್ಯದಿಂದಲೂ ದುಂದುವೆಚ್ಚದ ಮದುವೆಗಳು, ಅವುಗಳ ಹಿಂದಿನ ಕಷ್ಟಗಳನ್ನು ಕಂಡಿದ್ದ ನನಗೆ ಸರಳ ವಿವಾಹವೇ ಆದರ್ಶ ಅನಿಸಿತ್ತು. ಕುಪ್ಪಳ್ಳಿಯಲ್ಲಿ ಮಂತ್ರಮಾಂಗಲ್ಯದ ಮೂಲಕ ವಿವಾಹವಾಗುವ ಯೋಜನೆ ಹಾಕಿಕೊಂಡಿದ್ದೆವು. ಆದರೆ ಅನಿರ್ದಿಷ್ಟವಾಗಿ ಲಾಕ್ಡೌನ್ ಮುಂದುವರಿಯುತ್ತಿದ್ದ ಕಾರಣ, ನಾವಿದ್ದ ಪುದುಚೇರಿಯಲ್ಲಿಯೇ ವಿವಾಹಿತರಾದೆವು.

ನಾನು ಆಕಾಶದಿಂದ ಹಾರಲೂ ಸಿದ್ಧ ಎನ್ನುತ್ತಾರೆ ರಮೇಶ್ ಅರವಿಂದ್

ಪುದುಚೇರಿಯಲ್ಲಿ ನಿಮ್ಮಿಬ್ಬರ ವೃತ್ತಿ ಏನಾಗಿತ್ತು?

ನಾನು ಒಂದು ಪ್ರಾಜೆಕ್ಟ್ ವರ್ಕ್ ಮೇಲೆ ಬಂದಿದ್ದೆ. ಶ್ರೀನಿವಾಸ್ ಅವರು ಇಲ್ಲೇ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಎಂ.ಎ ಇನ್ ಟೂರಿಸಮ್ ಕೂಡ  ಮಾಡಿದ್ದಾರೆ. ನಮ್ಮ ವೃತ್ತಿ ಬೇರೆ ಬೇರೆ ಇರಬಹುದು; ಆದರೆ ಪರಸ್ಪರರ ವೃತ್ತಿಯ ಬಗ್ಗೆ ಗೌರವ ಕೊಡುವ ಸ್ವಭಾವ ಇದೆಯಲ್ಲ? ಅದು ಮುಖ್ಯ. ಅವರು ಹವ್ಯಾಸಿ ಛಾಯಾಗ್ರಾಹಕರು ಕೂಡ ಹೌದು. ಹಾಗಾಗಿ ಸಿನಿಮಾ ಬಗ್ಗೆ ಅವರಿಗೆ ಗೌರವ ಇದೆ. ಚಿತ್ರದ ನಿರ್ದೇಶಕಿಯಾಗಿ ನನ್ನ ಜವಾಬ್ದಾರಿ ಏನಿರುತ್ತದೆ ಎಂದು ಅರ್ಥ ಮಾಡಿಕೊಂಡಿದ್ದಾರೆ. ಅವರು ಕೂಡ ನನ್ನ ಸಿನಿಮಾಗಳನ್ನು ನೋಡಿದ್ದಾರೆ. ಅವುಗಳಲ್ಲಿ `ಎದೆಗಾರಿಕೆ' ಚಿತ್ರವನ್ನು ಇಷ್ಟಪಟ್ಟಿದ್ದಾರೆ. ನಾನು ಕೆಲಸದಲ್ಲಿದ್ದಾಗ ತುಂಬ ಸದ್ದು ಮಾಡುತ್ತಿರುತ್ತೇನೆ. ಆದರೆ ಶ್ರೀನಿವಾಸ್ ಅವರು ನಿಜವಾಗಿ ತುಂಬ ಸೈಲೆಂಟ್. ಈ ರೀತಿಯ ವ್ಯತಿರಿಕ್ತ ಗುಣಗಳು ಇದ್ದಾಗ ಹೊಂದಾಣಿಕೆ ಕಂಡುಕೊಳ್ಳುವುದು ಹೆಚ್ಚು. ಅಂಥದೊಂದು ಹೊಂದಾಣಿಕೆ ಸದಾ ನಮ್ಮ ಬಾಳಲ್ಲಿ ಇರಲಿದೆ ಎನ್ನುವ ನಂಬಿಕೆ ನನಗಿದೆ.

ನಿಖಿಲ್ ರೇವತಿ ವೆಡ್ಡಿಂಗ್ ಪೋಟೋಸ್ ಹೀಗಿದೆ

ಹೊಸ ಪ್ರಾಜೆಕ್ಟ್ ಕನಸುಗಳೇನು?

ಸದ್ಯಕ್ಕೆ ನಾವಿಬ್ಬರೂ ಪುದುಚೇರಿಯನ್ನು ತೊರೆದಿದ್ದೇವೆ. ಮುಂದಿನ ಬದುಕನ್ನು ಸಾಂಸ್ಕೃತಿಕ ನಗರಿಯಾದ ಮೈಸೂರಿನಲ್ಲಿ ಕಳೆಯಬೇಕು ಎನ್ನುವ ನಿರ್ಧಾರ ಮಾಡಿದ್ದೇವೆ. ಇಟಲಿಯಲ್ಲಿನ ಒಂದು ಪ್ರಾಜೆಕ್ಟ್ ಗೆ ಭಾರತೀಯ ಮೂಲದ ನಿರ್ದೇಶಕರು ಬೇಕಾಗಿತ್ತು. ಅದಕ್ಕಾಗಿ ನನ್ನನ್ನು ಆಹ್ವಾನಿಸಿದ್ದರು. ಆ ಹೊತ್ತಿಗೆ ಅಲ್ಲಿ ಕೊರೋನಾ ಕಾಟ ಆರಂಭವಾಗಿತ್ತು. ಅದು ಹೆಚ್ಚಿದ ರೀತಿಗೆ ಇಂದಿಗೂ ಆ ಕಡೆ ಹೋಗಲು ಬೆಚ್ಚುತ್ತಿದ್ದೇನೆ! ಅದೇ ರೀತಿ ಒಂದು ವೆಬ್ ಸೀರೀಸ್ ಆಫರ್ ಕೂಡ ಬಂದಿತ್ತು. ಆದರೆ ಅದಕ್ಕಾಗಿ ಕೂಡ  ಮುಂಬೈಗೆ ಹೋಗಬೇಕಾಗಿತ್ತು. ಆದರೆ ಅಷ್ಟರಲ್ಲಿ ಲಾಕ್ ಡೌನ್ ಆಯಿತು. ಶ್ರೀಧರ್ ಸರ್ ಅವರ ಕಾದಂಬರಿಯನ್ನು ಆಧಾರಿಸಿಕೊಂಡು ವೆಬ್ ಸೀರೀಸ್ ಮಾಡಬೇಕಿತ್ತು. ಪ್ರಸ್ತುತ ಎಲ್ಲವೂ ಡೋಲಾಯಮಾನ ಪರಿಸ್ಥಿತಿಯಲ್ಲಿರುವ ಕಾರಣ ಯಾವುದನ್ನು ಅವಸರದಿಂದ ಯೋಜನೆ ಹಾಕುತ್ತಿಲ್ಲ. ಸಮಯ ತೆಗೆದುಕೊಂಡು ನಿರ್ಧಾರಕ್ಕೆ ಬರೋಣ ಎಂದುಕೊಂಡಿದ್ದೇನೆ.

click me!