ಇತ್ತೀಚೆಗೆ ಭೂವಿವಾದದಲ್ಲಿ ಹೆಸರು ಕೇಳಿದ್ದು ಬಿಟ್ಟರೆ ಉಮಾಪತಿ ಗೌಡ ಅವರು ಗುರುತಿಸಿಕೊಂಡಿದ್ದು ಕನ್ನಡದ ಹೆಮ್ಮೆಯ ನಿರ್ಮಾಪಕರಾಗಿ. ಇಲ್ಲಿ ಅವರು ತಮ್ಮ ಹೊಸ ಯೋಜನೆಗಳು ಮತ್ತು ದರ್ಶನ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ಉಮಾಪತಿ ಫಿಲ್ಮ್ಸ್ ಎಂದೊಡನೆ ಬಿಗ್ ಬಜೆಟ್ ಚಿತ್ರಗಳನ್ನು ಮಾತ್ರ ನೆನಪು ಮಾಡಿಕೊಳ್ಳುವವರು ಇರಬಹುದು. ಅದಕ್ಕೆ ಅವರ ನಿರ್ಮಾಣದ ಮೊದಲ ಚಿತ್ರ ಸುದೀಪ್ ನಟನೆಯ `ಹೆಬ್ಬುಲಿ’ಯಾಗಲೀ, ಇತ್ತೀಚೆಗೆ ತೆರೆಕಂಡ ದರ್ಶನ್ ಅವರ `ರಾಬರ್ಟ್’ ಆಗಲೀ ಕಾರಣವಾಗಿ ಕಾಣಬಹುದು. ಆದರೆ ಅದೇ ಸಮಯದಲ್ಲಿ `ಒಂದಲ್ಲಾ ಎರಡಲ್ಲಾ’ ಮಾದರಿಯ ಪ್ರಶಸ್ತಿ ವಿಜೇತ ಚಿತ್ರಗಳನ್ನು ಕೂಡ ನಿರ್ಮಿಸಿರುವ ಖ್ಯಾತಿ ಅವರದ್ದಾಗಿದೆ. ಸಿನಿಮಾ ನಿರ್ಮಾಣದ ಜೊತೆಗೆ ತಮ್ಮ ಬಹುದಿನಗಳ ಕನಸಾಗಿರುವ ಫಿಲ್ಮ್ ಸಿಟಿ ನಿರ್ಮಾಣ ಯೋಜನೆಯನ್ನು ಕೂಡ ಉಮಾಪತಿಯವರು ಅಧಿಕೃತವಾಗಿ ಶುರು ಮಾಡಿರುವುದನ್ನು ಘೋಷಿಸಿದ್ದಾರೆ. ಆ ಎಲ್ಲ ವಿಚಾರಗಳ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜೊತೆಗೆ ಮಾತನಾಡಿದ್ದಾರೆ.
- ಶಶಿಕರ ಪಾತೂರು
undefined
ಫಿಲ್ಮ್ ಸಿಟಿ ಮಾಡಲೇಬೇಕು ಎನ್ನುವ ಹಠ ಶುರುವಾಗಿದ್ದು ಹೇಗೆ?
ಇದು ಸುಮಾರು ಆರು ವರ್ಷಗಳ ಹಿಂದಿನ ಕನಸು. ಯಾಕೆಂದರೆ ಆಗ ನಾನು `ಹೆಬ್ಬುಲಿ’ ಸಿನಿಮಾ ನಿರ್ಮಾಣ ಶುರು ಮಾಡಿದ್ದೆ. ನನಗೆ ಶೂಟಿಂಗ್ ವಿಚಾರದಲ್ಲಿ ಎದುರಾದ ದೊಡ್ಡ ಕಷ್ಟ ಎಂದರೆ ಸ್ಟುಡಿಯೋ ಸಮಸ್ಯೆ. ಯಾಕೆಂದರೆ ದೊಡ್ಡ ದೊಡ್ಡ ಕಲಾವಿದರ ಡೇಟ್ ನಾವು ಹೇಗೋ ಹೊಂದಿಸಿಕೊಂಡಿರುತ್ತೇವೆ. ಆದರೆ ಚಿತ್ರೀಕರಣಕ್ಕೆ ಯೋಜನೆ ಹಾಕಿದಾಗ ಸ್ಟುಡಿಯೋಗಳೇ ಖಾಲಿ ಇರುವುದಿಲ್ಲ! ಜಮೀನು ಇರುವ ಕಾರಣ ಸ್ಟುಡಿಯೋ ಮಾಡುವುದು ನನಗೆ ದೊಡ್ಡ ವಿಚಾರವಾಗಿ ಕಂಡಿರಲಿಲ್ಲ. ನಾವು ಸ್ಟುಡಿಯೋ ನೋಡಿ ಜಾಗ ಫಿಕ್ಸ್ ಮಾಡಿಕೊಂಡು ಚಿತ್ರೀಕರಣದ ತಯಾರಿ ಮಾಡುವಷ್ಟರಲ್ಲಿ ನಾವು ನೋಡಿದ ಫ್ಲೊರ್ ಬುಕ್ ಆಗಿ ಬಿಡುತ್ತಿತ್ತು. ಪರಭಾಷೆಯ ದೊಡ್ಡ ಸಿನಿಮಾದವರು ಅವರು ಶೂಟಿಂಗ್ ಆರಂಭಿಸುವ ಮೊದಲೇ ಬಾಡಿಗೆ ಕಟ್ಟಿ ಬ್ಲಾಕ್ ಮಾಡಿ ಇಟ್ಟುಕೊಳ್ಳುತ್ತಿದ್ದರು. ನಮ್ಮಲ್ಲೇ ಇರುವ ಸ್ಟುಡಿಯೋಗಳು ಯಾವಾಗಲೂ ರಿಯಾಲಿಟಿ ಶೋಗಳಿಗೆ ಬುಕ್ ಆಗಿರುತ್ತಿದ್ದವು. ಹಾಗಾಗಿ ನೆಮ್ಮದಿಯಿಂದ ಚಿತ್ರೀಕರಣ ಮಾಡಲು ಸಿನಿಮಾಗೆಂದೇ ಒಂದು ಸ್ಟುಡಿಯೋ ಮಾಡಬೇಕು ನಿರ್ಮಿಸಲೇಬೇಕು ಎಂದು ತೀರ್ಮಾನಿಸಿದೆ.
ನನ್ನ ದಾರಿಗೆ ಅಡ್ಡ ಬಂದರೆ ಸುಮ್ಮನಿರೋಲ್ಲ.!- ಶಮಂತ್
ಕರ್ನಾಟಕದಲ್ಲಿ ಸ್ಟುಡಿಯೋ ನಿರ್ಮಾಣ ನಿಮಗೆಷ್ಟು ಚಾಲೆಂಜಿಂಗ್ ಆಗಿತ್ತು?
ನಮ್ಮಲ್ಲಿ ಒಳ್ಳೊಳ್ಳೆಯ ಜಾಗಗಳಿವೆ. ಅವುಗಳನ್ನು ಹೊರಗಿನವರು ಬಂದು ಖರೀದಿಸಿ ನಮ್ಮಲ್ಲೇ ಅವರು ಸ್ಟುಡಿಯೋ ಮಾಡಿ ಅದರ ಕಾವಲು ಕಾಯುವ ಕೆಲಸವನ್ನಷ್ಟೇ ಕನ್ನಡಿಗರಿಗೆ ನೀಡುವ ದಿನಗಳು ದೂರವಿಲ್ಲ ಅನಿಸಿತು. ಯಾಕೆಂದರೆ ಬೇರೆ ರಾಜ್ಯಗಳ ಸ್ಟುಡಿಯೋಗಳಲ್ಲಿಯೂ ಅಷ್ಟೇ; ದೊಡ್ಡ ಕೆಲಸಗಳು ಆಯಾ ರಾಜ್ಯದವರಿಗೆ ಅಥವಾ ಉತ್ತರ ಭಾರತೀಯರಿಗೆ ಕೊಟ್ಟು ನಮ್ಮವರನ್ನು ಅಥವಾ ಅಲ್ಲಿನ ಸ್ಥಳೀಯರನ್ನು ಕಸ ಗುಡಿಸುವ ಕೆಲಸಗಳಿಗೆ ನೇಮಿಸುವುನ್ನು ನೋಡಲು ಕಷ್ಟವಾಗುತ್ತಿತ್ತು. ನಾವೇ ನಿರ್ಮಾಪಕರಾದರೂ ಕನ್ನಡಿಗರನ್ನು ಬಿಟ್ಟು, ಪರಭಾಷೆಯ ಸಾವಿರಾರು ಜನರಿಗೆ ಕೆಲಸ ಕೊಡಬೇಕಾದಾಗ ಆಗುವ ನೋವು ಇದೆಯಲ್ಲ? ಅದರ ಮುಂದೆ ಯಾವುದೂ ಚಾಲೆಂಜಿಂಗ್ ಅನಿಸಲೇ ಇಲ್ಲ. ಮುಖ್ಯವಾಗಿ ನಮ್ಮವರಿಗೆಲ್ಲ ಸ್ಟುಡಿಯೋದ ಆಡಳಿತದ ವಿಭಾಗದಲ್ಲಿ ಕೆಲಸ ನೀಡಿ, ಪರರಾಜ್ಯದವರಿಗೆ ವಾಚ್ ಮನ್ ಮಾದರಿಯ ಕೆಲಸ ನೀಡಬೇಕು ಎಂದುಕೊಂಡಿದ್ದೇನೆ. ಇಲ್ಲಿ ಕೆಲಸದ ಬಗ್ಗೆ ಮೇಲು ಕೀಳು ಮಾಡುವುದು ನನ್ನ ಉದ್ದೇಶವಲ್ಲ. ಆದರೆ ಕನ್ನಡಿಗರಿಗೆ ಆದ್ಯತೆಯ ಕೆಲಸಗಳು ಸಿಗಲೇಬೇಕು ಎನ್ನುವುದು ನನ್ನ ಆಶಯ.
ಮಂಜು ಬಿಗ್ ಬಾಸ್ ನಲ್ಲಿ ಸಿಕ್ಕ ಮುತ್ತು- ದಿವ್ಯಾ ಸುರೇಶ್ ಮಾತು
ನಿನ್ನೆ ಅಂದರೆ ಶುಕ್ರವಾರದಂದು ಫಿಲ್ಮ್ ಸಿಟಿಯ ವಿಚಾರದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ತಿಳಿಸಿ
ನಿನ್ನೆ ಫಿಲ್ಮ್ ಸಿಟಿ ಆರಂಭಕ್ಕಾಗಿ ಕನಕಪುರ ರವಿಶಂಕರ್ ಅವರ ಆಶ್ರಮದ ಹತ್ತಿರದಲ್ಲಿ ಭೂಮಿಪೂಜೆ ಮಾಡಿದ್ದೇವೆ. ಅದನ್ನು ಈ ಕಾಲಘಟ್ಟಕ್ಕೆ ಸರಿಯಾಗಿ ತೀರ ಚಿಕ್ಕದಾಗಿ ನನ್ನ ಕುಟುಂಬದವರ ಉಪಸ್ಥಿತಿಯಲ್ಲಷ್ಟೇ ಮಾಡಿದ್ದೇನೆ. ನನ್ನ ತಾಯಿ, ಪತ್ನಿ ಮತ್ತು ಮಕ್ಕಳು ಮಾತ್ರ ಭಾಗಿಯಾಗಿದ್ದೆವು. ಬಟರ್ ಫ್ರುಟ್ ಗಿಡವೊಂದನ್ನು ನೆಟ್ಟಿದ್ದೇವೆ. ಅದು ಸುಮಾರು ಇಪ್ಪತ್ತೈದು ಎಕ್ರೆ ವಿಸ್ತೀರ್ಣದ ಜಾಗ. ಸದ್ಯದ ಅಂದಾಜು ವೆಚ್ಚ ಸುಮಾರು175 ಕೋಟಿ ಆಗಬಹುದೆನ್ನುವ ನಿರೀಕ್ಷೆ ಇದೆ. `ಉಮಾಪತಿ ಫಿಲ್ಮ್ ಸಿಟಿ’ ಹೆಸರಲ್ಲಿ ಮುಂದಿನ ವರ್ಷದಿಂದ ಚಿತ್ರೀಕರಣಕ್ಕೆ ಲಭ್ಯವಾಗಲಿದೆ!
ಬಿಗ್ ಬಾಸ್‌ನಿಂದ ಕಳೆದುಕೊಂಡಿದ್ದೂ, ಪಡ್ಕೊಂಡಿದ್ದೂ ಎರಡೂ ಇವೆ: ಪ್ರಶಾಂತ್ ಸಂಬರಗಿ
ಒಂದು ವರ್ಷದೊಳಗೆ ಒಟ್ಟು ಫಿಲ್ಮ್ ಸಿಟಿಯನ್ನು ಪೂರ್ಣಗೊಳಿಸಬಹುದು ಎನ್ನುತ್ತೀರಾ?
ಖಂಡಿತವಾಗಿಯೂ ಇಲ್ಲ. ಒಟ್ಟು ಕೆಲಸ ಪೂರ್ಣವಾಗೋದಿಕ್ಕೆ ಸುಮಾರು ಆರು, ಏಳು ವರ್ಷಗಳೇ ಹಿಡಿಯಬಹುದು. ಆದರೆ ಅಗತ್ಯದ ಶೂಟಿಂಗ್ ಫ್ಲೋರ್ಸ್ ವರ್ಷದೊಳಗೆ ರೆಡಿಯಾಗಬಹುದು. ಉಳಿದಂತೆ ರೈಲ್ವೇ ಸ್ಟೇಷನ್, ಹಳ್ಳಿಯ ದಾರಿ ಮತ್ತು ನಗರದ ದಾರಿಗಳು, ನಗರದ ಮನೆಗಳು ಮತ್ತು ಹಳ್ಳಿಗಾಡಿನ ಮನೆಗಳು, ದೇವಸ್ಥಾನ, ಕಾಫಿ ಶಾಪ್, ರೆಸ್ಟಾರೆಂಟ್ಸ್, ಚೇಸಿಂಗ್ ದೃಶ್ಯಗಳಿಗಾಗಿ ಬೇಕಾದ ರಸ್ತೆಗಳು, ಕೋರ್ಟ್.. ಮೊದಲಾದವುಗಳ ನಿರ್ಮಾಣ ಯೋಜನೆ ಇದೆ. ಮುಖ್ಯವಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಯೋಗ್ಯವಾದ ಜಾಗ ಹಾಗೂ ಸಿನಿಮಾ ಇನ್ಸ್ಟಿಟ್ಯೂಟ್ ಸ್ಥಾಪಿಸುವ ಕನಸು ಇದೆ. ಇವೆಲ್ಲ ಕಾರ್ಯರೂಪಗೊಳ್ಳಬೇಕಾದರೆ ಆರೇಳು ವರ್ಷಗಳು ಖಂಡಿತವಾಗಿ ಬೇಕಾಗಬಹುದು. ನಾನೊಬ್ಬನೇ ಜವಾಬ್ದಾರಿ ವಹಿಸಿರುವ ಕಾರಣ ಒಂದಷ್ಟು ನಿಧಾನದಲ್ಲೇ ಕಾರ್ಯರೂಪಗೊಳ್ಳಲಿದೆ.
ದರ್ಶನ್ ಅವರೊಂದಿಗೆ ಈಗ ನಿಮ್ಮ ಸ್ನೇಹ ಸಂಬಂಧ ಹೇಗಿದೆ?
ಮೊದಲಿನಂತೆಯೇ ಇದೆ. ಸದ್ಯಕ್ಕೆ ಒಂದು ವಾರದೊಳಗೆ ಶ್ರೀಮುರಳಿಯವರ `ಮದಗಜ’ ಪೂರ್ತಿ ಮಾಡುವ ಯೋಜನೆಯಲ್ಲಿದ್ದೇನೆ. ಇದರ ನಡುವೆಯೂ ದರ್ಶನ್ ಅವರೊಂದಿಗೆ ಫೋನ್ ಸಂಪರ್ಕ ಇದ್ದೇ ಇದೆ. ಇತ್ತೀಚೆಗಷ್ಟೇ ಚಿತ್ರರಂಗಕ್ಕೆ ಬಂದು ತಮ್ಮ ಇಪ್ಪತ್ತನಾಲ್ಕನೇ ವರ್ಷಾಚರಣೆ ಮಾಡಿಕೊಂಡಿದ್ದಾರೆ. ನಾನು ಕೂಡ ಅವರಿಗೆ ಶುಭಾಶಯ ಕೋರಿದ್ದೇನೆ.