ಮಗಳು ನಟಿ ಮೇಘ ಶ್ರೀ ಬಗ್ಗೆ ಮಾತೆಯ ಮಾತುಗಳು!

By Suvarna News  |  First Published May 8, 2020, 1:32 PM IST

ಇವರನ್ನು ಕಂಡೊಡನೆ ತೊಂಬತ್ತರ ದಶಕದಲ್ಲಿ ನಾಯಕಿಯಾಗಿರಬಹುದೇ ಎನ್ನುವ ಸಂದೇಹ ಸಹಜ. ಯಾಕೆಂದರೆ ಅಂಥದೊಂದು ಕ್ಲಾಸಿಕ್ ಲುಕ್ ಜತೆಗೆ ಸಿನಿಮಾ ಸೆಟ್‌ ಗಳಲ್ಲಿ ಇವರು ಕಾಣಿಸಿಕೊಳ್ಳುತ್ತಾರೆ. ಆದರೆ ಅದು ಮೇಘ ಶ್ರೀ ನಾಯಕಿಯಾಗಿ ನಟಿಸುವ ಚಿತ್ರಗಳ ಸೆಟ್‌ನಲ್ಲಿ ಮಾತ್ರ ಎನ್ನುವುದು ವಿಶೇಷ! ಹೌದು, ಇವರು ನಟಿ ಮೇಘ ಶ್ರೀಯವರ ತಾಯಿ. ಹೆಸರು ಪ್ರತಿಮಾ ಪೂಜಾರಿ. `ಮದರ್ಸ್ ಡೇ'ಯ ಶುಭ ಸಂದರ್ಭದಲ್ಲಿ ಕನ್ನಡದ ಯುವನಟಿಯೋರ್ವಳ ತಾಯಿಯಾಗಿ ತಮ್ಮ ಅನುಭವದ ಮಾತುಗಳನ್ನು ಸುವರ್ಣನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ.
 


ಇವರನ್ನು ಕಂಡೊಡನೆ ತೊಂಬತ್ತರ ದಶಕದಲ್ಲಿ ನಾಯಕಿಯಾಗಿರಬಹುದೇ ಎನ್ನುವ ಸಂದೇಹ ಸಹಜ. ಯಾಕೆಂದರೆ ಅಂಥದೊಂದು ಕ್ಲಾಸಿಕ್ ಲುಕ್ ಜತೆಗೆ ಸಿನಿಮಾ ಸೆಟ್‌ ಗಳಲ್ಲಿ ಇವರು ಕಾಣಿಸಿಕೊಳ್ಳುತ್ತಾರೆ. ಆದರೆ ಅದು ಮೇಘ ಶ್ರೀ ನಾಯಕಿಯಾಗಿ ನಟಿಸುವ ಚಿತ್ರಗಳ ಸೆಟ್‌ನಲ್ಲಿ ಮಾತ್ರ ಎನ್ನುವುದು ವಿಶೇಷ! ಹೌದು, ಇವರು ನಟಿ ಮೇಘ ಶ್ರೀಯವರ ತಾಯಿ. ಹೆಸರು ಪ್ರತಿಮಾ ಪೂಜಾರಿ. `ಮದರ್ಸ್ ಡೇ'ಯ ಶುಭ ಸಂದರ್ಭದಲ್ಲಿ ಕನ್ನಡದ ಯುವನಟಿಯೋರ್ವಳ ತಾಯಿಯಾಗಿ ತಮ್ಮ ಅನುಭವದ ಮಾತುಗಳನ್ನು ಸುವರ್ಣನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ.

ಶಶಿಕರ ಪಾತೂರು

Latest Videos

undefined

ಮೇಘ ಶ್ರೀಯ ವಯಸ್ಸಲ್ಲಿ ನೀವಿದ್ದಾಗ ಸಿನಿಮಾ ನಟಿಯಾಗುವ ಕನಸು ಕಂಡಿದ್ದಿರಾ?  

ನಾನು ಅಂಥ ಕನಸು ಕಂಡಿರಲಿಲ್ಲ. ಆದರೆ ಕಾಲೇಜಲ್ಲಿದ್ದಾಗ ಗೆಳತಿಯರು "ನೀನು ನೋಡೋಕೆ ಹೀರೋಯಿನ್ ತರಹ ಇದ್ದೀಯ; ಸಿನಿಮಾದಲ್ಲಿ ಮಾಡಬಹುದು, ಟ್ರೈ ಮಾಡು" ಅಂತಾ ಇದ್ದರು. ಆದರೆ ನಾನು ಬಿಎ ಮಾಡಿದ್ದು ತೀರ್ಥಹಳ್ಳಿಯ ಕಾಲೇಜ್‌ನಲ್ಲಿ. ಹಾಗಾಗಿ ಅದೆಲ್ಲ ಈಗಿನಂತೆ ಫೊಟೋ ಶೂಟ್ ಮಾಡಿಸ್ಕೊಂಡು ಅವಕಾಶ ಕೇಳುವಷ್ಟು ಸುಲಭದ ವಿಚಾರವಾಗಿರಲಿಲ್ಲ. ಮಾತ್ರವಲ್ಲ ಮುಖ್ಯವಾಗಿ ನನಗೆ ಚಿತ್ರರಂಗದ ಬಗ್ಗೆ ಅಂಥ ವಿಶೇಷ ಆಸಕ್ತಿಯೂ ಇರಲಿಲ್ಲ. ಆದುದರಿಂದ ಅದನ್ನೆಲ್ಲ ನಾನು ಗಂಭೀರವಾಗಿ ತೆಗೆದುಕೊಂಡೇ ಇರಲಿಲ್ಲ. ಸ್ಪೋರ್ಟ್ಸ್, ಗೇಮ್ಸ್ ಅಂದರೆ ಆಸಕ್ತಿ ಇತ್ತು. ಖೊ ಖೊ ಮತ್ತು ರನ್ನಿಂಗ್ ರೇಸ್ ಸ್ಪರ್ಧೆಗಳಲ್ಲಿ ಅಂತರ್ಕಾಲೇಜ್ ಮಟ್ಟದಲ್ಲಿ ಪಾಲ್ಗೊಳ್ಳುತ್ತಿದ್ದೆ.

ಮಗಳನ್ನು ಚಿತ್ರರಂಗಕ್ಕೆ ತರುವುದು ನಿಮ್ಮ ಆಕಾಂಕ್ಷೆಯಾಗಿತ್ತೇ?

ಸುಮಾರು 25 ವರ್ಷಗಳ ಹಿಂದೆ ನನ್ನ ಮದುವೆಯಾಯಿತು. ಪತಿ ಮಂಜುನಾಥ್ ಬೆಂಗಳೂರಿನವರು. ಅವರಿಗೆ ಎಚ್.ಎ.ಎಲ್ ನಲ್ಲಿ ವೃತ್ತಿ. ನಮಗೆ ಮೂವರು ಹೆಣ್ಣು ಮಕ್ಕಳು. ಮಧ್ಯದವಳು ಮೇಘ ಶ್ರೀ. ಉಳಿದ ಇಬ್ಬರಲ್ಲಿ ಇಲ್ಲದ ಕಲಾಸಕ್ತಿ ಮೇಘ ಶ್ರೀಯಲ್ಲಿತ್ತು. ಮೇಘ ಆರಂಭದಲ್ಲಿ ಎಚ್.ಎ.ಎಲ್ ಕಲಾವಿದರ ಜತೆಯಲ್ಲಿ ನಾಟಕಗಳಲ್ಲಿ  ಪಾತ್ರ ಮಾಡುತ್ತಿದ್ದಳು. ಎಸ್ಎಸ್ ಎಲ್ ಸಿ ಮುಗಿದೊಡನೆ ತೆಲುಗು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿ ಹೈದರಾಬಾದ್‌ ಗೆ ಹೋಗಬೇಕಾಯಿತು. ಮತ್ತೆ ಕನ್ನಡದಲ್ಲಿ ಕೂಡ ಅವಕಾಶಗಳು ದೊರಕಿದವು. ಪ್ರಸ್ತುತ  ರಾಘವೇಂದ್ರ ರಾಜ್ ಕುಮಾರ್ ಅವರ ನಟನೆಯ  'ವಾರ್ಡ್ ನಂಬರ್ 11' ಸಿನಿಮಾದಲ್ಲಿ ಆಕೆ ನಟಿಸಿದ್ದು, ಆ ಚಿತ್ರ  ಬಿಡುಗಡೆಯಾಗಬೇಕಿದೆ. ಅದರ ನಡುವೆ `ಇವಳು ಸುಜಾತ' ಧಾರಾವಾಹಿಯಲ್ಲಿ ಸುಜಾತಾ ಪಾತ್ರದ ಮೂಲಕವೂ ಗಮನ ಸೆಳೆಯುತ್ತಿದ್ದಾಳೆ. ಇದಕ್ಕೆಲ್ಲ ಆಕೆಯಲ್ಲಿರುವ ಉತ್ಸಾಹ ಮತ್ತು ಪ್ರತಿಭೆಯಷ್ಟೇ ಕಾರಣ ಎನ್ನಬಹುದು.

ಚಿತ್ರನಟಿಯ ತಾಯಿಯಾದ ಮೇಲೆ ನಿಮ್ಮಲ್ಲಾದ ಬದಲಾವಣೆಗಳೇನು?

ಮಗಳು ನಟಿಯಾದ ಮೇಲೆ ನನ್ನ ಜವಾಬ್ದಾರಿ ಜಾಸ್ತಿಯಾಯಿತು. ಯಾಕೆಂದರೆ ಅವಳು ಚಿಕ್ಕ ವಯಸ್ಸಲ್ಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಳಲ್ಲ. ಮೊದಲು ಮನೆಯಲ್ಲಿರಬೇಕಾದರೆ ಆಕೆಯ ಸ್ಕೂಲ್ , ಓದು ನೋಡಿಕೊಂಡರೆ ಸಾಕಿತ್ತು. ಆದರೆ ಆಕೆ ಈಗ ನಟಿಸುವ ಎಲ್ಲ ಸಿನಿಮಾ ಸೆಟ್ ಗಳಿಗೂ ನಾನು ಜೆತೆಗೆ ಹೋಗುತ್ತೇನೆ. ಅದು ಕತೆ ಕೇಳುವಲ್ಲಿಂದಲೇ ಶುರುವಾಗುತ್ತದೆ. ಅವಳಿಗೆ ಕತೆಯ ಆಯ್ಕೆ ಮಾಡುವಲ್ಲಿ ಗೊಂದಲವಾಗುವ  ಕಾರಣ, ಕತೆ ಹೇಳುವ ಸಂದರ್ಭದಲ್ಲೇ ನಾನಿರುತ್ತೇನೆ. ಧಾರಾವಾಹಿ ಚಿತ್ರೀಕರಣ ಬಿಟ್ಟು ಬೇರೆಲ್ಲ ಕಡೆಗೆ ಹೋಗುತ್ತೇನೆ. ಒಂದು ರೀತಿ ನಾನು ಆಕೆಯ ಮ್ಯಾನೇಜರ್ ಆಗಿದ್ದೇನೆ. ಸ್ಥಳೀಯ ಚಿತ್ರೀಕರಣದ ವೇಳೆ ಆಕೆಯ ಕಾರ್ ಡ್ರೈವರ್ ಕೂಡ ಆಗಿದ್ದೇನೆ! ಆದರೆ ಇದು ಯಾವುದನ್ನು ಕೂಡ ನಾನು ಕಷ್ಟ ಎಂದುಕೊಂಡಿಲ್ಲ. ನಾನು ಮೊದಲಿನಿಂದಲೂ ರವಿಚಂದ್ರನ್ ಮತ್ತು ನಟಿ ಸೌಂದರ್ಯಾ ಅವರ ಅಭಿಮಾನಿ. ಹಾಗಾಗಿ `ದಶರಥ' ಚಿತ್ರದಲ್ಲಿ ರವಿಚಂದ್ರನ್ ಅವರ  ಮಗಳಾಗಿ ನನ್ನ ಮಗಳಿಗೆ ನಟಿಸುವ ಅವಕಾಶ ದೊರಕಿದ್ದು ದೊಡ್ಡ ಸಂತಸ ತಂದಿದೆ. 

ಕಿರುತೆರೆ ನಾಯಕಿಯಾಗಿ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ!

ಮೂವರು ಮಕ್ಕಳ ತಾಯಿಯಾಗಿ ನಿಮಗೆ ಹೆಮ್ಮೆ ಉಂಟಾಗಿರುವ ಸಂದರ್ಭ ಯಾವುದು?

ನನ್ನ ದೊಡ್ಡ ಮಗಳ ಹೆಸರು ನಾಗ ಶ್ರೀ. ಆಕೆ  ಇಂಜಿನಿಯರಿಂಗ್ ಮಾಡಿದ್ದಾಳೆ. ಐ ಎ ಎಸ್ ಮಾಡುವ ಪ್ರಯತ್ನದಲ್ಲಿದ್ದಾಳೆ. ಮೇಘ ಶ್ರೀ ಇತ್ತೀಚೆಗಷ್ಟೇ ಬಿಎ ಪೂರ್ತಿ ಮಾಡಿದ್ದಾಳೆ. ಮುಂದೆ ಎಂಬಿಎ ಮಾಡಬೇಕು ಅಂತ ಇದ್ದಾಳೆ. ಎಲ್ಲರಿಗಿಂತ ಚಿಕ್ಕವಳು ನಿಧಿ ಶ್ರೀ ಈಗಷ್ಟೇ ಪಿಯುಸಿ ಮುಗಿಸಿದ್ದಾಳೆ. ನನ್ನ ಹೆಮ್ಮೆ ಏನೆಂದರೆ ನನ್ನ ಈ ಮೂವರು ಮಕ್ಕಳು ಕೂಡ ಕಲಿಕೆಯಲ್ಲಿ ಮುಂದಿದ್ದಾರೆ! ಸೆಕೆಂಡ್ ಪಿಯುನಲ್ಲಿರುವಾಗ ಮೇಘಾ ಕಾಲೇಜ್‌ಗೆ ಟಾಪರ್ ಆಗಿದ್ದಳು. ಶೂಟಿಂಗ್‌  ನಡುವೆ ಓದಿನ ಕಡೆಗೆ ಗಮನ ಕೊಡುವುದು ಕಷ್ಟ ಇದೆ. ಅಂಥ ಸಂದರ್ಭದಲ್ಲಿ ಟ್ಯೂಷನ್‌ಗೆ ಕೂಡ ಹೋಗದೆ, ಅವಳೇ ಶ್ರಮಪಟ್ಟು ಓದಿ ಕಾಲೇಜ್‌ಗೇನೆ ಉತ್ತಮ ಫಲಿತಾಂಶ ತಂದಾಗ ನನಗೆ ತುಂಬ ಖುಷಿಯಾಗಿತ್ತು. ಅದೇ ರೀತಿ `ಕೃಷ್ಣ ತುಳಸಿ'ಯಂಥ ಚಿತ್ರದಲ್ಲಿ ಮೇಘಶ್ರೀ ಮಾಡಿದ ಅಂಧೆಯ ಪಾತ್ರ ಮತ್ತು ಅದಕ್ಕಾಗಿ ಆಕೆಯ ಸಮರ್ಪಣಾ ಮನೋಭಾವ ಕಂಡಾಗ ಹೆಮ್ಮೆ ಆಗಿದೆ.

click me!