ಸದ್ಯದಲ್ಲೇ `ಟಾಕೀಸ್' ಬಾಗಿಲು ತೆರೆಯಲಿದ್ದಾರೆ ಸೃಜನ್..!

Suvarna News   | Asianet News
Published : Jul 14, 2020, 04:45 PM IST
ಸದ್ಯದಲ್ಲೇ `ಟಾಕೀಸ್' ಬಾಗಿಲು ತೆರೆಯಲಿದ್ದಾರೆ ಸೃಜನ್..!

ಸಾರಾಂಶ

ಹಾಸ್ಯವೆಂದರೆ ನಗುಮುಖ, ಪೀಚಲು ದೇಹ ಎನ್ನುವ ಕಲ್ಪನೆಯನ್ನು ಕನ್ನಡದ ಮಟ್ಟಿಗೆ ಬದಲಾಯಿಸಿದ ಕೀರ್ತಿ ಸಂಪೂರ್ಣವಾಗಿ ಸೃಜನ್ ಲೋಕೇಶ್ ಅವರಿಗೆ ಸಲ್ಲುತ್ತದೆ. ಯಾಕೆಂದರೆ ಆರಡಿ ಮೀರಿದ ದೇಹ, ಸದೃಢ ಮೈಕಟ್ಟು, ಗಾಂಭೀರ್ಯತೆ ತುಂಬಿದ ಮುಖ ಇರಿಸಿಕೊಂಡು ಕೂಡ ಒಂದು ಗಂಟೆಯ ಕಾಲ ಹುಣ್ಣಾಗುವ ಮಟ್ಟಿಗೆ ನಗಿಸಬಲ್ಲೆನೆಂದು ತೋರಿಸಿಕೊಟ್ಟವರು ಸೃಜನ್. `ಮಜಾಟಾಕೀಸ್' ಎನ್ನುವ ರಿಯಾಲಿಟಿ ಶೋ ಮಾತ್ರವಲ್ಲ, ನಿರ್ಮಾಣ ಸಂಸ್ಥೆಯನ್ನೇ ಸ್ಥಾಪಿಸಿ, ಅದರ ಮೂಲಕ ಸಿನಿಮಾಗಳನ್ನು ನಿರ್ಮಿಸಿ ನಾಯಕರಾಗಿಯೂ ಹೆಸರಾಗಿರುವ ಸೃಜನ್ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.  

ಹಾಸ್ಯವೆಂದರೆ ನಗುಮುಖ, ಪೀಚಲು ದೇಹ ಎನ್ನುವ ಕಲ್ಪನೆಯನ್ನು ಕನ್ನಡದ ಮಟ್ಟಿಗೆ ಬದಲಾಯಿಸಿದ ಕೀರ್ತಿ ಸಂಪೂರ್ಣವಾಗಿ ಸೃಜನ್ ಲೋಕೇಶ್ ಅವರಿಗೆ ಸಲ್ಲುತ್ತದೆ. ಯಾಕೆಂದರೆ ಆರಡಿ ಮೀರಿದ ದೇಹ, ಸದೃಢ ಮೈಕಟ್ಟು, ಗಾಂಭೀರ್ಯತೆ ತುಂಬಿದ ಮುಖ ಇರಿಸಿಕೊಂಡು ಕೂಡ ಒಂದು ಗಂಟೆಯ ಕಾಲ ಹುಣ್ಣಾಗುವ ಮಟ್ಟಿಗೆ ನಗಿಸಬಲ್ಲೆನೆಂದು ತೋರಿಸಿಕೊಟ್ಟವರು ಸೃಜನ್. ಅದರಲ್ಲಿ ಅವರ ತಂಡದ ಪಾಲು ದೊಡ್ಡದಿರಬಹುದು. ಆದರೆ ಅಶ್ಲೀಲವಿರದ ಶುದ್ಧ ಹಾಸ್ಯ, ಅನಿರೀಕ್ಷಿತವಾಗಿ ಹೊಮ್ಮುವ ಸಹಜ ಪಂಚ್ ಮೂಲಕ `ಮಜಾಟಾಕೀಸ್' ಎನ್ನುವ ಕಾರ್ಯಕ್ರಮದ ನಿರ್ದೇಶಕ, ನಿರ್ಮಾಪಕರಾಗಿ ಸೃಜನ್ ಪಾತ್ರ ದೊಡ್ಡದು. ತಂದೆ ಕನ್ನಡದ ಹೆಸರಾಂತ ನಟ ಲೋಕೇಶ್ ಅವರ ಹೆಸರಲ್ಲೇ ನಿರ್ಮಾಣ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ ಸಿನಿಮಾಗಳನ್ನು ನಿರ್ಮಿಸಿ ನಾಯಕರಾಗಿಯೂ ಹೆಸರಾಗಿರುವ ಸೃಜನ್ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.

ಶಶಿಕರ ಪಾತೂರು

ಮಜಾ ಮತ್ತು ಟಾಕೀಸ್ ಎರಡೂ ಮೌನವಾದಂತಿದೆಯಲ್ಲ?

ಸುತ್ತಲಿನ ಘಟನೆಗಳನ್ನು ನೋಡುವಾಗ ನಮ್ಮಲ್ಲಿ ಮಜಾ ಮರೆತರೆ ಅದು ಸಹಜ. ಆದರೆ ಮಜಾ ಮಾನವನ ಸಹಜ ಗುಣ. ಅದನ್ನು ಬಲವಂತವಾಗಿ ಯಾರಿಂದಲೂ ತಡೆದಿರಿಸಲು ಸಾಧ್ಯವಿಲ್ಲ. ಕೊರೊನಾದ ಬಗ್ಗೆಯೂ ಸಾಕಷ್ಟು ಜೋಕ್ಸ್ ಬಂದವು. ಮತ್ತೊಂದು ಕಡೆ ವಿಪರೀತ ಭಯಪಟ್ಟವರೂ ಇದ್ದಾರೆ. ಇವೆರಡರ ಮಧ್ಯೆ ಜಾಗೃತಿಯಾಗುವುದು ಬೇಕಿದೆ. ಇನ್ನು ಸೋಂಕಿತರ ಸಂಖ್ಯೆ ಕಡಿಮೆಯಾದೊಡನೆ ಟಾಕೀಸ್ ತೆರೆಯಲ್ಪಡುತ್ತದೆ. ನಮ್ಮ ಮಜಾ ಟಾಕೀಸ್ ವಿಚಾರದಲ್ಲಿಯೂ ಅದೇ ಮಾತು. ಇನ್ನು ಸ್ವಲ್ಪ ದಿನ ಅಷ್ಟೇ. ಚಿತ್ರಕತೆ ಎಲ್ಲ ರೆಡಿಯಾಗಿದೆ. ಶೂಟಿಂಗ್ ಆರಂಭಿಸಬಹುದು ಎನ್ನುವ ಸಂದರ್ಭ ಬಂದಾಗ ಖಂಡಿತವಾಗಿ ನಾವು ತಯಾರಿದ್ದೇವೆ.

ಮನೆಯೊಳಗಿನ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ?

ಮನೇಲಿರುವುದು ನನಗೆ ಹೊಸತಲ್ಲ. ಮೊದಲಿಂದನೂ `ಮಜಾ ಟಾಕೀಸ್‌'ನ ಪ್ರ್ಯಾಕ್ಟೀಸ್ ಎಲ್ಲ ಮನೆಯಲ್ಲೇ ನಡೆಯುತ್ತಿತ್ತು. ಆದರೆ ಈಗ ಕೆಲಸವೂ ಇರದೇ ಇರುವುದು ಅಂದರೆ ಕಷ್ಟ. ಕೆಲವರು ಬಿಗ್ ಬಾಸ್ ಮನೆಯಲ್ಲಿದ್ದು ಅಭ್ಯಾಸ ಇದೆಯಲ್ಲ ಅಂತಾರೆ. ಆದರೆ ಅಲ್ಲಿ ಟಾಸ್ಕ್ ಆದರೂ ಇರುತ್ತಿತ್ತು. ಹಾಗಾಗಿ, ಮನೇಲಿದ್ದು ಕೆಲಸ ಮಾಡುತ್ತಿದ್ದಾಗ ಸಿಕ್ಕ ಖುಷಿ ಈಗ ಸುಮ್ಮನಿರುವಾಗ ಇಲ್ಲ. ಹೆಚ್ಚು ಹೆಚ್ಚು ವರ್ಕೌಟು, ಮನೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುತ್ತೇನೆ. ಆದರೆ ಮೊದಲು ಮನೆಯಲ್ಲೇ ಇದ್ದರೂ ಫ್ಯಾಮಿಲಿ ಬಗ್ಗೆ ಗಮನ ಕೊಡೋಕೆ ಆಗುತ್ತಿರಲಿಲ್ಲ. ಈಗ ಫ್ಯಾಮಿಲಿ ಜತೆ ಕಳೆಯಲು ಸಾಧ್ಯವಾಯಿತು. ದೊಡ್ಡ ಮಗನ ಬಾಲ್ಯವೆಲ್ಲ ಡೀಟೇಲಾಗಿ ನೆನಪಿಲ್ಲ. ಆದರೆ ಈಗ ಎರಡನೆಯವನು ಮೊದಲ ಹೆಜ್ಜೆ ಇಟ್ಟಿರುವುದು, ಈಗ ನಡೆಯಲು ಶುರು ಮಾಡಿರುವುದು ಎಲ್ಲವನ್ನೂ ಎಂಜಾಯ್ ಮಾಡಲು ಸಾಧ್ಯವಾಗಿದೆ. 

ಕಾಮಿಡಿ ಕಿಂಗ್ ಸೃಜನ್ ಲೋಕೇಶ್ ಲವ್ಲಿ ಅಕ್ಕ ಪೂಜಾ ಹೇಗಿದ್ದಾರೆ ನೋಡಿ.....

ಇತ್ತೀಚೆಗಷ್ಟೇ ಜನ್ಮದಿನಾಚರಣೆ ಇತ್ತು. ಸಂಭ್ರಮ ಹೇಗಿತ್ತು?

ಈ ಬಾರಿ ನಾನು ಜನ್ಮದಿನವನ್ನು ಸೆಲೆಬ್ರೇಷನ್ ಹಾಗೆ ಮಾಡಿಲ್ಲ.  ಆದರೆ ಅಭಿಮಾನಿಗಳು ಸಂಘದ ಮೂಲಕ ಅವರೇ ನೇತೃತ್ವ ವಹಿಸಿಕೊಂಡು ಆಚರಣೆ ಮಾಡಿದ್ದಾರೆ. ಅದನ್ನು ಕೂಡ ನನ್ನ ಸಲಹೆಯಂತೆ ಚಿರು ಸರ್ಜನ ಸ್ಮರಣಾರ್ಥ ಆಚರಿಸಲಾಯಿತು. ಆತನ ನೆನಪಲ್ಲಿ ಎರಡು ಸಾವಿರ ಜನಕ್ಕೆ ಮಾಸ್ಕ್ ಹಂಚಿದೆವು. ಒಂದು ಸಾವಿರ ಜನಕ್ಕೆ ಊಟ ಹಾಕಲಾಯಿತು. ಅಂದರೆ ಅದು ಒಂದೇ ಕಡೆಯಲ್ಲಿ ಏರ್ಪಡಿಸಿದ ಅನ್ನ ಸಂತರ್ಪಣೆ ಆಗಿರಲಿಲ್ಲ. ಪೌರ ಕಾರ್ಮಿಕರುಗಳಿಗೆ, ಎರಡು ಪೊಲೀಸ್ ಸ್ಟೇಷನ್‌ಗಳಿಗೆ ಮತ್ತು ಒಂದಷ್ಟು ಏರಿಯಾಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಆಹಾರ ಹಂಚಲಾಗಿತ್ತು.  

ನಿಮ್ಮ ಪ್ರಕಾರ ಚಿತ್ರಮಂದಿರಗಳು ಯಾವಾಗ ತೆರೆಯಬಹುದು?

ಜನರ ಮೈಂಡ್ ಸೆಟ್ ಹೇಗಿದೆ ಎನ್ನುವುದನ್ನು ನಾವು ಒಳಗಿದ್ದುಕೊಂಡು ಜಡ್ಜ್ ಮಾಡುವುದು ಕಷ್ಟ. ಅದರಲ್ಲೂ ನ್ಯೂಸ್ ಚಾನೆಲ್ಸ್‌ ಸಿಕ್ಕಾಪಟ್ಟೆ ಹೈಪ್ ಮಾಡಿರುವುದರಿಂದ ಜನ ಹೆದರ್ಕೊಂಡಿದ್ದಾರೆ. ಇದರಲ್ಲಿ ರಿಕವರಿ ಆಗುತ್ತಿರುವವರ ಸಂಖ್ಯೆ ಹೆಚ್ಚು. ಅದು ಸುದ್ದಿಯಾಗಬೇಕಿದೆ. ಡಾಕ್ಟರ್ ಗಳೇ ಮಹಾಮಾರಿ, ಹೆಮ್ಮಾರಿ ಎಂದು ಜನರನ್ನು ಭಯಪಡಿಸಬೇಡಿ ಅಂದಿರೋದನ್ನು ನೋಡಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ಥಿಯೇಟರ್ ಬಗ್ಗೆ ಅವರ ಮನಸ್ಥಿತಿ ಹೇಗಿದೆ ಎನ್ನುವುದು ಗೊತ್ತಾಗ್ತಿಲ್ಲ. ವೆಯ್ಟ್ ಮಾಡಿ ಎಲ್ಲ ಸರಿ ಹೋದ ಮೇಲೆ ಚಿತ್ರ ಮಂದಿರ ತೆರೆದಾಗ ಹೇಗೆ ರಿಯಾಕ್ಟ್ ಮಾಡುತ್ತಾರೆ ಎಂದು ನೋಡಿದಾಗಲೇ ಏನನ್ನಾದರೂ ಹೇಳಲು ಸಾಧ್ಯ. ಆದರೆ ಕೊರೊನ ಸಂಪೂರ್ಣವಾಗಿ ದೂರವಾದ ಮೇಲೆ ಖಂಡಿತವಾಗಿ ಥಿಯೇಟರ್ ತೆರೆದೇ ತೆರೆಯುತ್ತದೆ. 

ಬೆಳ್ಳಿತೆರೆಗೆ ಸೃಜನ್‌ ಲೋಕೇಶ್‌ ಪುತ್ರ ಸುಕೃತ್‌ ಲೋಕೇಶ್‌! 

ಮಜಾಟಾಕೀಸ್‌ನಲ್ಲಿ ಹೊಸದಾದ ಬದಲಾವಣೆಗಳನ್ನು ನಿರೀಕ್ಷಿಸಬಹುದೇ?

ಖಂಡಿತವಾಗಿ. ಹೊಸ ಸೆಟ್ ಹಾಕಿರುತ್ತೇವೆ. ಹೊಸ ಕಲಾವಿದರು ಬರುತ್ತಿರುತ್ತಾರೆ. ಚಿತ್ರಕತೆಯಲ್ಲಿನ ಹೊಸತನ ನಾನು ಹೇಳುವುದಕ್ಕಿಂತ ನೀವು ನೋಡುವುದು ಉತ್ತಮ. ಆದರೆ ಒಂದು; ಮಜಾ ಟಾಕೀಸ್ ಯಾವತ್ತಿಗೂ ಹಳೆಯ ಕಲಾವಿದರನ್ನು ಕೈ ಬಿಡುವುದಿಲ್ಲ. ಅಂದರೆ ಹಳೆಯ ಪಾತ್ರಗಳಿಗೆ ಹೊಸ ಕಲಾವಿದರನ್ನು ರೀಪ್ಲೇಸ್ ಮಾಡಿಲ್ಲ. ಹೊಸಬರು ಎಂಟ್ರಿಯಾದರೆ ಹೊಸ ಕ್ಯಾರೆಕ್ಟರ್ ಮಾಡುತ್ತೇವೆ ಹೊರತು, ಹಳಬರ ಸ್ಥಾನಕ್ಕೆ ತಂದು ಕೂರಿಸುವುದಿಲ್ಲ. ಈ ಬಾರಿ ಹಿಂದಿನ ಹಾಗೆ ಇಂದ್ರಜಿತ್ ಕೂಡ ಇರುತ್ತಾರೆ. ಮುಖ್ಯವಾಗಿ ಆಗಲೇ ಹೇಳಿದಂತೆ ನಾನು ಶೋ ಶರು ಮಾಡಿದಾಗ ಕೂಡ ಜನರಲ್ಲಿ ಕೊರೊನಾ ಆತಂಕ ಇದ್ದರೆ, ಯಾರಾದರೂ ಎಕ್ಸ್ ಪರ್ಟ್ಸ್ ನ ಕರೆದುಕೊಂಡು ಮಾತನಾಡಿಸುವ ಯೋಜನೆ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು