ಇಂಡಿಯಾ v/s ಇಂಗ್ಲೆಂಡ್‌ ಪ್ರೇಕ್ಷಕರು ಗೌರವಿಸುವ ಸಿನಿಮಾ: ನಾಗತಿಹಳ್ಳಿ ಚಂದ್ರಶೇಖರ್‌

By Suvarna News  |  First Published Jan 24, 2020, 9:52 AM IST

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಬಹುನಿರೀಕ್ಷಿತ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಇವತ್ತು ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಅವರ ಜತೆ ಮಾತುಕತೆ


ದೇಶಾದ್ರಿ ಹೊಸ್ಮನೆ

ಬದಲಾದ ಕಾಲದಲ್ಲಿ ಪ್ರೇಕ್ಷಕನ ಅಭಿರುಚಿಯನ್ನು ನೀವು ಅರ್ಥ ಮಾಡಿಕೊಂಡಿದ್ದು ಹೇಗೆ?

Latest Videos

undefined

ಪ್ರೇಕ್ಷಕ ಸದಾ ಹೊಸತನ್ನು ಬಯಸುತ್ತಾನೆ. ಅದರ ಜತೆಗೆ ಘನವಾದದ್ದು ಮತ್ತು ಅರ್ಥಪೂರ್ಣವಾದದ್ದನ್ನು ಬರಮಾಡಿಕೊಳ್ಳುವ ತವಕವೂ ಇದೆ. ಏಕತಾನತೆಯಿಂದ ಹೊರ ಬರಬೇಕೆನ್ನುವ ತುಡಿತ ಸದಾ ಅವನಲ್ಲಿದೆ. ಅದು ಸಹಜವೂ ಕೂಡ. ಹಾಗಿದ್ದಾಗಲೇ ನಾವೇನು ಕೊಡಬೇಕೆನ್ನುವುದನ್ನು ಕಂಡುಕೊಳ್ಳುವುದಕ್ಕೆ ಸಾಧ್ಯ. ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರದ ನನ್ನ ಈ ಮೂರು ವರ್ಷದ ಪ್ರಯಾಣ ಅದೇ ಆಗಿದೆ. ಈಗ ಅಡುಗೆ ರೆಡಿಯಿದೆ. ಪ್ರೇಕ್ಷಕ ಅದನ್ನು ಆಸ್ವಾದಿಸಬೇಕಿದೆ. ಅದಕ್ಕಾಗಿ ಶ್ರಮ, ಆರ್ಥಿಕ ಶಕ್ತಿ ಎಲ್ಲವನ್ನು ಧಾರೆಯೆರೆದು ಮನಸ್ಸು ಬರಿದಾಗಿದೆ. ಇನ್ನು ಮೇಲೆ ಸಿಗುವ ಪ್ರೇಕ್ಷಕರ ಪ್ರೀತಿ, ಪ್ರೇಮವನ್ನಷ್ಟೇ ತುಂಬಿಕೊಳ್ಳಬೇಕಿದೆ.

ಗುಣಮಟ್ಟದ ಸಿನಿಮಾ ಮಾಡಿರುವ ಖುಷಿ ನಮಗಿದೆ. ಅದನ್ನು ಜನರಿಗೆ ತಲುಪಿಸಲು ಕೆಆರ್‌ಜಿ ಸ್ಟುಡಿಯೋಸ್‌ ಮುಂದೆ ಬಂದಿರುವುದು ದೊಡ್ಡ ಬೆಂಬಲ ಸಿಕ್ಕಂತಾಗಿದೆ. ಅದಕ್ಕೆ ಪೂರಕವಾಗಿ ಪ್ರೇಕ್ಷಕರ ಬೆಂಬಲವೂ ಸಿಕ್ಕರೆ, ಮೂರು ವರ್ಷದ ನಮ್ಮ ಶ್ರಮ, ಪ್ರಯತ್ನ, ಓಡಾಟ ಎಲ್ಲವೂ ಸಾರ್ಥಕ.

ಈ ಸಿನಿಮಾ ನಿಮಗೆ ಯಾಕೆ ಮುಖ್ಯ?

ತುಂಬಾ ಆಳವಾದ ಅಧ್ಯಯನದ ಜತೆಗೆ ಕನ್ನಡ ಚಿತ್ರರಂಗಕ್ಕೆ ಗೌರವ ತಂದುಕೊಡಬೇಕೆನ್ನುವ ಕಾರಣಕ್ಕೆ ಮಾಡಿದ ಸಿನಿಮಾ. ಕನ್ನಡದಲ್ಲೂ ಇಂತಹ ಸಿನಿಮಾ ಮಾಡಬಹುದೆನ್ನುವುದನ್ನು ಬೇರೆ ಭಾಷೆಯವರು ನೋಡುವ ಹಾಗೆ ಕಟ್ಟಿಕೊಟ್ಟಿದ್ದೇನೆ. ಇದು ವಿಶ್ವಾಸದ ಮಾತೂ ಹೌದು. ಮತ್ತೊಂದು ಪ್ರೇಮ ಕತೆ, ಮತ್ತೊಂದು ದೇಶಭಕ್ತಿ ಸಿನಿಮಾ ಅಥವಾ ಮತ್ತೊಂದು ಕ್ರೈಮ್‌ ಕತೆಯ ಸಿನಿಮಾ ಅಂತ ಬೇರ್ಪಡಿಸಿ ನೋಡದ ಹಾಗೆ ಎಲ್ಲಾ ಅಂಶಗಳ ಹೂರಣ ಇಲ್ಲಿದೆ. ಸಂಖ್ಯೆಯ ದೃಷ್ಟಿಯಲ್ಲಿ ಮಾಡಿದ ಸಿನಿಮಾ ಇದಲ್ಲ. ಆತ್ಮತೃಪ್ತಿಗೆ ಹತ್ತಿರವಾದ ಸಿನಿಮಾ. ಪ್ರೇಕ್ಷಕರನ್ನು ಗೌರವಿಸುವಂತಹ ಸಿನಿಮಾ. ಪ್ರೇಕ್ಷಕನಿಗೆ ಏನೂ ಗೊತ್ತಿಲ್ಲ ಅಂತ ಸಿನಿಮಾ ಮಾಡುವುದಲ್ಲ, ಹಾಗೆಯೇ ಸಿದ್ಧ ಸೂತ್ರಗಳಿಂದ ಕಟ್ಟಿಹಾಕುವುದು ನನ್ನ ಸಿನಿಮಾದ ಗುಣವಲ್ಲ. ಅದನ್ನು ಮೀರುತ್ತಲೇ ಕಮರ್ಷಿಯಲ್‌ ಸಿನಿಮಾ ನೀಡುವುದು ನನ್ನ ಉದ್ದೇಶ. ಈ ಸಿನಿಮಾ ಆಗಿದ್ದು ಕೂಡ ಹಾಗೆಯೇ.

ವಸಿಷ್ಠ ಸಿಂಹರನ್ನು ಹೀರೋ ಮಾಡುವ ಮನಸ್ಸು ಮತ್ತು ಧೈರ್ಯ ಹೇಗೆ ಸಾಧ್ಯವಾಯಿತು?

ರಂಗ ಪ್ರವೇಶ ಮಾಡಿದ ಒಬ್ಬ ನಟನ ದೈಹಿಕ ಅಪೀರಿಯನ್ಸ್‌ ಅಥವಾ ಆತನ ವೇಷ ಭೂಷಣಕ್ಕಿಂತ ಅಭಿನಯ ನನಗೆ ಮುಖ್ಯ. ಯಾಕಂದ್ರೆ ಅಭಿನಯ ಅನ್ನೋದು ಆತ್ಮದ ಕತೆ. ಹಾಗೆ ನನ್ನೊಳಗೆ ಕುತೂಹಲ ಹುಟ್ಟಿಸಿದ್ದು ವಸಿಷ್ಠ ಸಿಂಹ. ಜತೆಗೆ ಸಿನಿಮಾದ ನಾಯಕನ ಪಾತ್ರಕ್ಕೆ ವೈಬ್ರೆಂಟ್‌ ಆದಂತಹ ನಟ ಬೇಕಿತ್ತು. ಆ ಗುಣ ವಸಿಷ್ಠ ಅವರಲ್ಲಿತ್ತು. ಒಳ್ಳೆಯ ಶರೀರ ಮತ್ತು ಶಾರೀರ ಎರಡು ಅವರಲ್ಲಿತ್ತು. ಇನ್ನು ಆತ ಒಬ್ಬ ಖಳನಟ ಎನ್ನುವುದು ನಾವು ಕೊಟ್ಟಲೇಬಲ್‌ ಮಾತ್ರ. ಅದನ್ನು ಕಿತ್ತು ಹಾಕಿ ನೋಡಿದರೆ ಆತ ಒಬ್ಬ ಕಲಾವಿದ. ಅದರಿಂದಲೇ ಆತನೊಳಗೆ ನಾನು ಒಬ್ಬ ಹೀರೋ ಗುಣವನ್ನು ಕಾಣಲು ಸಾಧ್ಯವಾಯಿತು.

ದೊಡ್ಡ ತಾರಾಗಣ ಇರುವ ಸಿನಿಮಾ ಇದು. ವಸಿಷ್ಠ, ಮಾನ್ವಿತಾ, ಅನಂತ ನಾಗ್‌ ಜತೆಗೆ ಸುಮಲತಾ ಅಂಬರೀಷ್‌ ಈ ಸಿನಿಮಾದ ಆಕರ್ಷಣೆ. ಹಾಡುಗಳ ಜತೆಗೆ ಸಿನಿಮಾ ಲೊಕೇಷನ್‌ ಕೂಡ ಕಣ್ಣಿಗೆ ಹಬ್ಬ.

ಸಿನಿಮಾಗಳಲ್ಲಿ ಎರಡು ದೇಶಗಳನ್ನು ಬೆಸೆಯುವುದು ನಿಮ್ಮ ಶೈಲಿ. ಇಂಗ್ಲೆಂಡ್‌ ಯಾಕೆ ನಿಮ್ಮನ್ನು ಕಾಡಿತು?

ಭಾರತ ಬಿಟ್ಟರೆ ಜಗತ್ತಿನಲ್ಲಿ ಸುಂದರವಾದ ದೇಶಗಳು ಸಾಕಷ್ಟಿವೆ. ಹಾಗಂತ ಆಕರ್ಷಣೆ ದೃಷ್ಟಿಯಿಂದ ನಾನು ಪರದೇಶ ನೋಡುವುದಿಲ್ಲ. ಇಂಗ್ಲೆಂಡ್‌ನಂತಹ ಒಂದು ಪುಟ್ಟದೇಶ ನನ್ನನ್ನು ಆರಂಭದಿಂದಲೂ ಕಾಡಿದ್ದು ಭಾರತವೂ ಸೇರಿದಂತೆ ಅದು ಜಗತ್ತಿನ ಸಾಕಷ್ಟುದೇಶಗಳನ್ನು ಆಳಿದ್ದರ ಕಾರಣಕ್ಕೆ. ಬ್ರಿಟಿಷರು ಇಲ್ಲಿಗೆ ಬಂದು ಹೋದ ನಂತರದಲ್ಲಿ ಸಾಕಷ್ಟುವಿದ್ಯಮಾನಗಳಿವೆ. ಕೆಲವರು ಅವರು ಬಂದಿದ್ದರಿಂದಲೇ ಒಂದಷ್ಟುಒಳ್ಳೆಯದಾಗಿದೆ ಎನ್ನುತ್ತಾರೆ, ಇನ್ನು ಕೆಲವರ ವಾದ ಅದಕ್ಕೆ ವ್ಯತಿರಿಕ್ತವಾಗಿದೆ. ಇವೆಲ್ಲದರ ಕುರಿತು ಈ ತನಕ ಪುಸ್ತಕಗಳಲ್ಲಿ ನೋಡಲು ಸಾಧ್ಯವಾಗಿತ್ತು. ಆದರೆ ಅದನ್ನೇ ಒಂದು ಸಿನಿಮಾದ ರೂಪದಲ್ಲಿ ಯಾಕೆ ನೋಡಬಾರದು ಅಂತ ಯೋಚಿಸುತ್ತಿದ್ದಾಗ ನನಗೆ ಸಹಾಯವಾಗಿದ್ದು ನನ್ನ ಮಗಳು ಬರೆದ ಕತೆ.

ಇಂಡಿಯಾ-ಇಂಗ್ಲೆಂಡ್‌ ಸಂಬಂಧವನ್ನು ನಿಮ್ಮ ಮಗಳು ನೋಡಿದ ರೀತಿ ಎಂಥದ್ದು, ಅದನ್ನು ಸಿನಿಮಾಕ್ಕೆ ತಂದ ಬಗೆ ಹೇಗೆ?

ಒಂದೇ ಮಾತಿನಲ್ಲಿ ಹೇಳೋದಾದ್ರೆ ಭೂತವನ್ನು ವರ್ತಮಾನದಲ್ಲಿ ನಿಂತು ನೋಡುವ ಪ್ರಯತ್ನ ಇದು. ಭಾರತವು ಬ್ರಿಟಿಷರ ವಸಾಹತು ಆಗಿದ್ದ ಕಾಲ ಮತ್ತು ಆನಂತರ ದಿನಗಳ ಅನೇಕ ಸಂಗತಿಗಳು ಚಿತ್ರದಲ್ಲಿವೆ. ಬ್ರಿಟಿಷರು ಇಲ್ಲಿಂದ ಅಪಹರಿಸಲ್ಪಟ್ಟಕೊಹಿನೂರ್‌ ವಜ್ರದ ಕತೆಯೂ ಇಲ್ಲಿದೆ. ಉಪದೇಶ, ಬೋಧನೆ ಇಲ್ಲಿಲ್ಲ.

ಈ ಹೊತ್ತಿನ ಸಿನಿಮಾ ನಿರ್ಮಾಣ, ರಿಲೀಸ್‌ ಸಂಬಂಧಿತ ಓಡಾಟ ಎಲ್ಲವೂ ಮೇಷ್ಟಿ್ರಗೆ ಸುಸ್ತು ಎನಿಸಿರಬೇಕು?

ಖಂಡಿತಾ ತುಂಬಾ ಸುಸ್ತಾಗಿದೆ. ಸಿನಿಮಾಕ್ಕೆ ಪೂರಕವಾದ ಒಂದು ವೃತ್ತಿಪರ ವ್ಯವಸ್ಥೆ ಇಲ್ಲಿಲ್ಲ. ಪ್ರತಿವಾರ ಎಷ್ಟುಚಿತ್ರಗಳು ಬರುತ್ತವೆ ಎನ್ನುವುದು ಗೊತ್ತಾಗುತ್ತಿಲ್ಲ. ಯಾವುದರ ಮೇಲೂ ನಿಯಂತ್ರಣ ಇಲ್ಲ. ಎಷ್ಟುದಿನ ಚಿತ್ರಮಂದಿರ ಸಿಗುತ್ತವೆ ಎನ್ನುವ ಖಾತರಿಯೂ ಇಲ್ಲ. ಈ ಆತಂಕವೇ ಸಿನಿಮಾ ಮಂದಿಯನ್ನು ಹೆಚ್ಚು ಸುಸ್ತು ಮಾಡುತ್ತೆ. ಹಿಂದೆಲ್ಲ ರಿಲೀಸ್‌ ಆದ ಸಿನಿಮಾ 25 ಅಥವಾ 50 ದಿನ ಚಿತ್ರಮಂದಿರಗಳಲ್ಲಿ ಇರುತ್ತೆ ಎನ್ನುವ ನಂಬಿಕೆ ಇತ್ತು. ಅದು ಈಗಿಲ್ಲ. ದಯವಿಟ್ಟು ಪ್ರೇಕ್ಷಕರು ನಾಳೆ ನೋಡಿದ್ರಾಯ್ತು ಅಂತ ಕಾಯಬೇಡಿ, ಟೈಮ್‌ ಮಾಡ್ಕೊಂಡು ಇವತ್ತೇ ಸಿನಿಮಾ ನೋಡಿ, ಇಷ್ಟವಾದರೆ ಬೇರೆಯವರಿಗೂ ಹೇಳಿ. ಹಾಗಾದ್ರೂ ಸಿನಿಮಾ ಮಂದಿಯ ಸುಸ್ತು ದೂರವಾಗಬಹುದು.

ಈ ಸಿನಿಮಾ ನೋಡಲು 5 ಕಾರಣ ನೀಡಿ?

ಅತ್ಯುತ್ತವಾದ ಕತೆ, ಅತ್ಯುತ್ತಮವಾದ ಹಾಡುಗಳು, ಕಲಾವಿದರ ಅತ್ಯುತ್ತಮ ಅಭಿನಯ, ಚಿತ್ರೀಕರಣಕ್ಕೆ ಬಳಸಿಕೊಂಡ ಅತ್ಯುತ್ತಮ ಲೊಕೇಷನ್ಸ್‌ ಜತೆಗೆ ಒಂದು ಒಳ್ಳೆಯ ಸಿನಿಮಾ ಮಾಡ್ಬೇಕೆನ್ನುವ ಕಾರಣಕ್ಕೆ ನಾನೂ ಸೇರಿದಂತೆ ಟೆಂಟ್‌ ಸಿನಿಮಾದ ಒಂದು ತಂಡ ಅವಿರತ ಹಾಕಿದ ಶ್ರಮ. ಇವೆಲ್ಲವೂ ಸಾರ್ಥಕವಾಗಬೇಕಾದರೆ ಪ್ರೇಕ್ಷಕರ ಆಶೀರ್ವಾದ ತೀರಾ ಅಗತ್ಯ. ಜತೆಗೆ ನಾನು ಕಂಡ ಅನುಭವಗಳನ್ನು ಇಲ್ಲಿ ಹೇಳಿದ್ದೇನೆ. ಉಪದೇಶ ಇಲ್ಲ. ಎಡ-ಬಲ ಎನ್ನುವ ಸಿದ್ಧಾಂತಗಳ ಜಿಜ್ಞಾಸೆ ತೀವ್ರಗೊಂಡಿರುವ ಈ ಸಂದರ್ಭದಲ್ಲಿ ಸತ್ಯ ಎನ್ನುವುದು ಎಡ-ಬಲ ಎರಡರ ಅತಿರೇಕದಲ್ಲಿ ಇಲ್ಲ, ಅದು ಅವೆರೆಡರ ಮಧ್ಯದಲ್ಲಿದೆ ಎನ್ನುವ ಸಮನ್ವಯದ ಸಂದೇಶವೂ ಇಲ್ಲಿದೆ.

ಆ ಕಾಲಕ್ಕೂ ಈ ಕಾಲಕ್ಕೂ ಸಿನಿಮಾ ಮೇಕಿಂಗ್‌ ಬದಲಾಗಿದೆಯಾ? ಈ ಕಾಲದಲ್ಲಿ ಸಿನಿಮಾ ಮಾಡಬೇಕಾದರೆ ಯಾವುದು ಮುಖ್ಯ? ಏನು ಮಾಡುವುದು ಮುಖ್ಯ?

ಈಗ ಸಿನಿಮಾ ಮಾಡೋದು ಮೊದಲಿಗಿಂತ ಕಷ್ಟ. ಪ್ರೇಕ್ಷಕರ ಹಸಿವು, ಆಯ್ಕೆ, ಆದ್ಯತೆ ದೊಡ್ಡ ಸವಾಲಾಗಿದೆ. ಸೋಷಲ್‌ ಮೀಡಿಯಾ ಆತನ ಅಂಗೈನಲ್ಲಿದೆ. ಮನರಂಜನೆಯ ನೂರಾರು ಆಯ್ಕೆಗಳಿವೆ. ಅಂತಹ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತರುವುದು ತುಂಬಾ ಕಷ್ಟ. ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಂತೂ ಒಂದೊಂದಾಗಿಯೇ ಮುಚ್ಚುತ್ತಿವೆ. ಹಿಂದೆಲ್ಲ ಹೀಗಿರಲಿಲ್ಲ. ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುವುದೇ ಹಬ್ಬದ ಸಂಭ್ರಮ. ಈಗ ಪ್ರೇಕ್ಷಕ ಸ್ವಾತಂತ್ರದ ಪರಾಕಾಷ್ಟೆಅನುಭವಿಸುತ್ತಿದ್ದಾನೆ. ಸ್ಟಾರ್‌ಡಾಮ್‌ ಸಿನಿಮಾಗಳಿಗೂ ಇದು ಸವಾಲು. ಮೇಲಾಗಿ ಪ್ರೇಕ್ಷಕನಿಗೆ ಕಲ್ಪಿತ, ಸೋಜಿಗ, ಗೌರವ ಇಲ್ಲ. ಎಲ್ಲರಿಗೂ ಎಲ್ಲವೂ ಗೊತ್ತಿದೆ. ಅವರಿಗೆ ತಕ್ಕಂತೆ ನಾವು ಸಿನಿಮಾ ಮಾಡಬೇಕಿದೆ. ಅದು ಈ ಹೊತ್ತಿನ ಸವಾಲು.ನನಗಾದ ಅನುಭವ.

 

 

click me!