ಅಪ್ಪ, ಅಮ್ಮನ ಮಾತು ನಿರಾಕರಿಸಿ ಚಿತ್ರರಂಗಕ್ಕೆ ಬಂದೆ: ಸ್ಫೂರ್ತಿ

By Kannadaprabha News  |  First Published Mar 27, 2020, 5:31 PM IST

ಕಿರುಣ್‌ ಸೂರ್ಯ ನಿರ್ದೇಶನದ, ಕಾಶಿನಾಥ್‌ ಪುತ್ರ ಅಭಿಮನ್ಯು ನಟನೆಯ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಮೂಲಕ ಸ್ಯಾಂಡಲ್‌ ವುಡ್‌ ಗೆ ನಾಯಕಿ ಎಂಟ್ರಿ ಕೊಟ್ಟಿರುವ ಸ್ಫೂರ್ತಿ ಜತೆ ಮಾತುಕತೆ.


ನಿಮ್ಮ ಹಿನ್ನೆಲೆ ಏನು?

ನಾನು ಚಿಕ್ಕಮಂಗಳೂರಿನ ಹುಡುಗಿ. ಓದಿದ್ದು ಮಂಗಳೂರು. ಚಿಕ್ಕಂದಿನಿಂದಲೂ ಸಿನಿಮಾಗಳೆಂದರೆ ಕ್ರೇಜು. ಓದುವಾಗಲೇ ಜ್ಯುವೆಲ್ಲರಿ ಜಾಹೀರಾತುಗಳಲ್ಲಿ ಕಾಣಸಿಕೊಂಡಿದ್ದೆ. ಇಂಜಿನಿಯರಿಂಗ್‌ ಮುಗಿಸಿದ್ದೇನೆ. ನಮ್ಮ ಮನೆಯಲ್ಲಿ ಯಾರಿಗೂ ಸಿನಿಮಾ ಹಿನ್ನೆಲೆ ಇಲ್ಲ.

Tap to resize

Latest Videos

ನಟಿ ಆಗುವ ಮುನ್ನ ಏನು ಮಾಡುತ್ತಿದ್ರಿ?

ಇಂಜಿನಿಯರಿಂಗ್‌ ಮುಗಿದ ಮೇಲೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅಪ್ಪನ ಆಸೆ ನಾನು ಡಾಕ್ಟರ್‌ ಆಗಬೇಕು ಅಂತ, ಅಮ್ಮನ ಆಸೆ ಇಂಜಿನಿಯರ್‌ ಆಗಬೇಕು ಅಂತ. ಈ ಎರಡೂ ನನಗೆ ಇಷ್ಟವಿರಲ್ಲ. ಆದರೂ ಇಂಜಿನಿಯರಿಂಗ್‌ ಮುಗಿಸಿ ಕೆಲಸದ ಭಾಗವಾಗಿ ಬೆಂಗಳೂರಿಗೆ ಬಂದೆ. ಉದ್ಯೋಗ ಜತೆಗೆ ಮಾಡೆಲಿಂಗ್‌ ಮಾಡಿಕೊಂಡು ಇದ್ದೆ. ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಮುಂದುವರಿಸಿದ್ದೆ.

ನೀವು ಸಿನಿಮಾ ನಾಯಕಿ ಆಗಿದ್ದು ಹೇಗೆ?

ನಾನು ಮಾಡೆಲಿಂಗ್‌ ಮಾಡುವಾಗ ನನ್ನ ಸ್ನೇಹಿತರು ನೋಡಿ ನೀನು ಸಿನಿಮಾಗಳಿಗೆ ಸೂಕ್ತ, ಪ್ರಯತ್ನ ಮಾಡು ಅಂತ ಹೇಳುತ್ತಿದ್ದರು. ಅದೇ ಸಮಯಕ್ಕೆ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರಕ್ಕೆ ಆಡಿಷನ್‌ ನಡೆಯುತ್ತಿದೆ ಎನ್ನುವ ಮಾಹಿತಿ ಗೊತ್ತಾಯಿತು. ಇದರ ಬಗ್ಗೆ ನನಗೆ ಗೈಡ್‌ ಮಾಡಿ ಕಳುಹಿಸಿದ್ದು ನಿರ್ದೇಶಕ ಕಿರಣ್‌ ಸೂರ್ಯ ಅವರಿಗೂ ಸ್ನೇಹಿತರು ಆಗಿದ್ದರು. ಅವರ ಮೂಲಕ ನಾನು ಹೋಗಿ ಚಿತ್ರಕ್ಕೆ ಆಡಿಷನ್‌ ಕೊಟ್ಟು ಸೆಲೆಕ್ಟ್ ಆದೆ. ಅದೇ ದಿನ ಮತ್ತೊಂದು ಚಿತ್ರದ ಕತೆ ಕೇಳಿ ನನ್ನ ಆಯ್ಕೆ ಮಾಡಿಕೊಂಡು. ಹೀಗೆ ಒಂದೇ ದಿನ ಎರಡು ಚಿತ್ರಗಳಿಗೆ ನಾಯಕಿ ಆದೆ. ಆ ಪೈಕಿ ಈಗ ಕಿರಣ್‌ ಸೂರ್ಯ ಅವರ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರಕ್ಕೆ ಶೂಟಿಂಗ್‌ ನಡೆಯುತ್ತಿದೆ.

ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?

ಒಂದು ಸ್ಟ್ರಾಂಗ್‌ ವುಮನ್‌ ಪಾತ್ರ. ಮಧ್ಯಮ ವರ್ಗದ ಹುಡುಗಿ. ಏನೇ ಬಂದರೂ ಎದುರಿಸಿ ನಿಲ್ಲುವ ಪ್ರಬುದ್ದ ಇರುವ ಹುಡುಗಿ. ಚಿತ್ರದ ಹೆಸರು ನೋಡಿದರೆ ಕತೆ ಮತ್ತು ಅಲ್ಲಿನ ಪಾತ್ರಗಳು ಕೂಡ ಭಿನ್ನವಾಗಿರುತ್ತವೆ. ಹೀಗಾಗಿ ಇಷ್ಟರ ಹೊರತಾಗಿ ಪಾತ್ರದ ಬಗ್ಗೆ ಬೇರೆ ಏನೂ ಬಿಟ್ಟು ಕೊಡಲಾಗದು.

ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ತಂಡದ ಜತೆಗೆ ಕೆಲಸದ ಅನುಭವ ಹೇಗಿತ್ತು?

ನನಗೆ ಇದು ಮೊದಲ ಸಿನಿಮಾ. ಮೊದಲ ಚಿತ್ರದಲ್ಲಿ ಲೆಜೆಂಡ್‌ ನಿರ್ದೇಶಕ, ನಟ ಹಾಗೂ ನಿರ್ಮಾಪಕ ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಜತೆ ನಟಿಸುವ ಅವಕಾಶ ಸಿಕ್ಕಿದ್ದು ತುಂಬಾ ಥ್ರಿಲ್ಲಿಂಗ್‌ ಅನಿಸಿತು. ನಿರ್ದೇಶಕ ಕಿರಣ್‌ ಸೂರ್ಯ ಅವರು ಚಿತ್ರದ ಪ್ರತಿ ಪಾತ್ರವನ್ನೂ ತುಂಬಾ ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಅವರಿಗೆ ಕತೆ ಮತ್ತು ಅದರ ಪಾತ್ರಗಳ ಮೇಲೆ ತುಂಬಾ ಹಿಡಿತ ಇದೆ. ಹೀಗಾಗಿ ಇಲ್ಲಿವರೆಗೂ ಆಗಿರುವ ಚಿತ್ರೀಕರಣ ತುಂಬಾ ಚೆನ್ನಾಗಿದೆ.

ನಿಮಗೆ ಯಾವ ರೀತಿಯ ಪಾತ್ರಗಳು ಇಷ್ಟ?

ರಿಯಾಲಿಟಿ ಪಾತ್ರಗಳು ಅಂದರೆ ಇಷ್ಟ. ಗ್ಲಾಮರ್‌ ಗಿಂತ ಜನರಿಗೆ ಸಾಮಾಜಿ ಸಂದೇಶ ಕೊಡುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ. ಅಂದರೆ ಮಲಯಾಳಂನ ಪಾರ್ವತಿ ಮೆನನ್‌ ಅವರು ಮಾಡುವ ಪಾತ್ರಗಳು.

ಈ ನಡುವೆ ಬೇರೆ ಭಾಷೆಯ ಸಿನಿಮಾ ಕೂಡ ಒಪ್ಪಿಕೊಂಡಿದ್ದೀರಿ ಅಲ್ವಾ?

ಹೌದು. ತಮಿಳಿನ ರೀಲ್‌ ಅಂದು ಪೋಚು ಎನ್ನುವ ಸಿನಿಮಾ. ಅದಿತ್‌ ಅರುಣ್‌ ಚಿತ್ರದ ನಾಯಕ. ಮಾಚ್‌ರ್‍ 7ರಂದು ಚಿತ್ರಕ್ಕೆ ಮುಹೂರ್ತ ಆಗಿದೆ. ಎರಡನೇ ವಾರದಿಂದ ಶೂಟಿಂಗ್‌ ಆಗಬೇಕಿತ್ತು. ಆದರೆ, ಕೊರೋನಾ ಭೀತಿ. ಹೀಗಾಗಿ ಶೂಟಿಂಗ್‌ ಶುರುವಾಗಲಿಲ್ಲ.

click me!