ಶ್ರೀಸಾಮಾನ್ಯನನ್ನು ಪ್ರತಿನಿಧಿಸುವ 'ಎಕ್ಕ' ಸಿನಿಮಾದ ಹೈಲೈಟ್ ಏನು? ಸಂದರ್ಶನಲ್ಲಿ ವಿಕ್ರಮ್ ಹೇಳಿದಿಷ್ಟು..

Published : Jul 18, 2025, 01:52 PM IST
Vikram Hatwar

ಸಾರಾಂಶ

'ಬ್ಯಾಂಗಲ್‌ ಬಂಗಾರಿ' ಹಾಡಿನಿಂದಲೇ ಸದ್ದು ಮಾಡುತ್ತಿರುವ ಯುವ ರಾಜ್‌ಕುಮಾರ್‌ ನಟನೆಯ 'ಎಕ್ಕ' ಸಿನಿಮಾದ ಕುರಿತು ಚಿತ್ರಕಥೆಗಾರ ವಿಕ್ರಮ್ ಹತ್ವಾರ್ ಸಂದರ್ಶನ.

ಪ್ರಿಯಾ ಕೆರ್ವಾಶೆ

* ಸಾಹಿತಿಯಾಗಿ ಹೆಸರು ಮಾಡಿರುವ ನೀವು ಎಕ್ಕದಂಥಾ ಕಮರ್ಷಿಯಲ್‌ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು?
ಈ ಸಿನಿಮಾದ ಕತೆ - ಚಿತ್ರಕಥೆ - ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದರಲ್ಲಿ ತೃಪ್ತಿ ಇದೆ. ಅನುಭವ ಮಜವಾಗಿತ್ತು. ನಿರ್ದೇಶಕ ರೋಹಿತ್‌ ಪದಕಿ ಅವರೊಂದಿಗೆ ಬೆಳಗ್ಗೆ ಆರು ಗಂಟೆಗೆ ಡಿಸ್ಕಶನ್‌ಗೆ ಕೂರುತ್ತಿದ್ದೆ. ಇದಕ್ಕಾಗಿ ನಾನು ಬೆಳಗ್ಗೆ ನಾಲ್ಕೂವರೆಗೆಲ್ಲ ಏಳುತ್ತಿದ್ದೆ. 11 ಗಂಟೆಯವರೆಗೂ ಚರ್ಚಿಸುತ್ತಿದ್ದೆವು. ಪ್ರತಿ ಆಯಾಮದ ಬಗ್ಗೆಯೂ ಪ್ರಶ್ನೆ ಮಾಡುತ್ತಾ ಹೋದಂತೆ ಅವ್ರಿಗೇನೋ ಟ್ರಿಗರ್‌ ಆಗೋದು, ಅವರ ಮಾತು ಕೇಳಿ ನನಗೇನೋ ಹೊಳೆಯೋದು.. ನಮ್ಮ ಅರಿವನ್ನೂ ಮೀರಿ ನಮ್ಮೊಳಗೆ ಕಥೆಯೂ, ಕಥೆಯೊಳಗೆ ನಾವೂ ಬೆಳೆಯುತ್ತಾ ಹೋಗುತ್ತಿದ್ದೆವು. ನನಗೆ ಮೊದಲಿಂದಲೂ ಸಿನಿಮಾದ ಬಗ್ಗೆ ಸೆಳೆತ, ಪ್ರೀತಿ. ಆದರೆ ಸಿನಿಮಾ ಬರಹಗಾರನಾಗುವ ಕನಸಿರಲಿಲ್ಲ. ಇದಕ್ಕೆ ಕಾರಣವಾದದ್ದು ರೋಹಿತ್‌ ಪದಕಿ. ಅವರ ‘ರತ್ನನ್‌ ಪ್ರಪಂಚ’ ಸಿನಿಮಾ ನೋಡಿ ಥ್ರಿಲ್ಲಾಗಿದ್ದೆ. ಆಮೇಲೆ ಅವರ ಪರಿಚಯವಾಗಿ ಸ್ನೇಹಿತರೂ ಆದೆವು. ಆ ಹೊತ್ತಲ್ಲೇ ‘ಎಕ್ಕ’ ಸಿನಿಮಾದ ಕಥೆಯ ಎಳೆಯೊಂದಿಗೆ ಅವರು ಬಂದರು.

* ತಂಡದ ಮುಂದೆ ನಿಮ್ಮ ಕಥೆಯನ್ನು ಪ್ರಸ್ತುತಪಡಿಸಿದ ಸನ್ನಿವೇಶ?
ಸ್ಕ್ರಿಪ್ಟ್‌ ಒಂದು ಹಂತಕ್ಕೆ ಬಂದಾಗ ನಾವು ನಿರ್ಮಾಪಕರೆದುರು ಅದನ್ನು ಪ್ರೆಸೆಂಟ್ ಮಾಡಬೇಕಿತ್ತು. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಕಾರ್ತಿಕ್‌ ಗೌಡ, ರಾಘವೇಂದ್ರ ರಾಜ್‌ಕುಮಾರ್‌, ನಮ್ಮ ಹೀರೋ ಯುವ, ವಿನಯ್‌ ಇದ್ದರು. ಇಂಟರ್‌ವಲ್‌ಗೂ ಮೊದಲ ಭಾಗದ ಕಥೆ ಹೇಳಿದಾಗ ಅವರಿಗೆ ಹಿಡಿಸಿದಂತೆ ತೋರಿ ಸಮಾಧಾನವಾಗಿತ್ತು. ಎರಡನೇ ಭಾಗ ನೋಡಿ ಅವರೆಲ್ಲ ಥ್ರಿಲ್‌ ಆಗುತ್ತಾರೆ ಅಂದುಕೊಂಡು ಕತೆ ಹೇಳಿದೆವು. ಸೆಕೆಂಡ್‌ ಹಾಫ್‌ ಮುಗಿದಾಗ ಅವರ ಮುಖದಲ್ಲಿ ಗೊಂದಲವಿತ್ತು. ಓಹ್, ಇದೆಲ್ಲೋ ಮಿಸ್‌ ಹೊಡೀತಿದೆ ಅನಿಸಿ ಮತ್ತೆ ಕತೆಯ ಮೇಲೆ ಕೆಲಸ ಮಾಡಿದೆವು.

* ಚಿತ್ರರಂಗದಲ್ಲಿ ಸಾಹಿತಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತಿದೆಯಲ್ಲಾ?
ಸಿನಿಮಾರಂಗದಲ್ಲಿ ನನ್ನ ಕಲಿಕೆ ಶೂನ್ಯದಿಂದಲೇ ಶುರುವಾಗಬೇಕು ಎಂಬುದನ್ನು ಅರ್ಥಮಾಡಿಕೊಂಡಿದ್ದೆ. ನನಗೆ ಕಡೆಗಣನೆಯ ಅನುಭವ ಆಗಿಲ್ಲ.

* ಬರಹಗಾರರ ಸಂಭಾವನೆ ವಿಚಾರದಲ್ಲಿ ಅಸಮಾಧಾನ ಇತ್ತು. ನಿಮಗೆ ಸಂಭಾವನೆ ವಿಚಾರದಲ್ಲಿ ತೃಪ್ತಿ ಇದೆಯಾ?
ಸಿನಿಮಾದಲ್ಲಿ ಬರುವ ಸಂಭಾವನೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ನನಗೆ ಇಲ್ಲ. ಆದರೆ ಹಲವು ಬರಹಗಾರರು ಇದರಿಂದಲೇ ಬದುಕು ಕಟ್ಟಿಕೊಳ್ಳಬೇಕಾಗಿದೆ. ಅವರ ಕೆಲಸಕ್ಕೆ ಅನ್ಯಾಯ ಆಗಬಾರದು. ಸರಿಯಾದ ಸಮಯಕ್ಕೆ ನ್ಯಾಯಯುತ ಸಂಭಾವನೆ ಅವರಿಗೆ ಸಿಗಬೇಕು.

* ಎಕ್ಕ ಸಿನಿಮಾದ ಹೈಲೈಟ್‌?
ಇಲ್ಲಿನ ನಾಯಕ ಯಾವುದೇ ಬಿಲ್ಡಪ್‌ಗಳಿಲ್ಲದ ಸಾಮಾನ್ಯ ಹುಡುಗ. ಹಳ್ಳಿಯಿಂದ ಮಹಾನಗರಕ್ಕೆ ಬಂದು ಇಲ್ಲಿ ಆಟೋ, ಟ್ಯಾಕ್ಸಿ ಓಡಿಸುವ, ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡವರನ್ನು ಆತ ಪ್ರತಿನಿಧಿಸುತ್ತಾನೆ. ನಗರವೊಂದು ಆತನೊಳಗಿನ ಮುಗ್ಧತೆಯನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೆಸೆದು ಮೃಗತ್ವವನ್ನು ಹೇಗೆ ಬಡಿದೆಬ್ಬಿಸುತ್ತದೆ ಮತ್ತು ಕಳೆದುಕೊಂಡದ್ದನ್ನು ಬಯಸುವ ಆತನ ಹಂಬಲ, ವಾಪಸ್‌ ಹಳೆಯದಕ್ಕೆ ಮರಳಿದರೆ ಅಲ್ಲಿ ಕಾಣುವ ವಾಸ್ತವವನ್ನು ರೂಪಕದಂತೆ ಸಿನಿಮಾ ನಿಮ್ಮ ಮುಂದಿಡುತ್ತದೆ. ಮುತ್ತು ಪಾತ್ರದ ಆಂತರಿಕ ಏಳುಬೀಳುಗಳು ತೀವ್ರವಾಗಿ ಬಂದಿವೆ. ಯುವ ಸೇರಿದಂತೆ ಎಲ್ಲಾ ಕಲಾವಿದರೂ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚರಣ್‌ ರಾಜ್‌ ಸಂಗೀತ, ಸೊಗಸಾದ ಕ್ಯಾಮರಾ ವರ್ಕ್‌ ಮತ್ತೊಂದು ಹೈಲೈಟ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು