ಪೂರಿ ಜಗನ್ನಾಥ್ ನಿರ್ದೇಶಿಸಿ, ವಜ್ರೇಶ್ವರಿ ಕಂಬೈನ್ಸ್ ನಿರ್ಮಾಣದ ‘ಅಪ್ಪು’ ಚಿತ್ರದ ಮೂಲಕ ನಟ ಪುನೀತ್ ರಾಜ್‌ಕುಮಾರ್ ಹಾಗೂ ರಕ್ಷಿತಾ ಅವರು ಚಿತ್ರರಂಗಕ್ಕೆ ಪರಿಚಯವಾದವರು. ಇಂದು ಪುನೀತ್ ಅವರ 50ನೇ ಹುಟ್ಟುಹಬ್ಬ. ಅಪ್ಪು-ಪುನೀತ್ ಜತೆಗಿನ ತನ್ನ ನೆನಪುಗಳನ್ನು ರಕ್ಷಿತಾ ಪ್ರೇಮ್ ಅವರು ಮೆಲುಕು ಹಾಕಿದ್ದಾರೆ.
ಆರ್.ಕೇಶವಮೂರ್ತಿ
* ಪುನೀತ್ ರಾಜ್‌ಕುಮಾರ್ ಅವರ ನಿಮ್ಮ ಮೊದಲ ಭೇಟಿ ಯಾವಾಗ?
ಸಿನಿಮಾಗಿಂತ ಮೊದಲು ನಾನು ಅಪ್ಪು ಅವರನ್ನು ಭೇಟಿ ಯಾಗಿದ್ದು ಎರಡು ಸಲ. ಸದಾಶಿವನಗರ ಮನೆಯಲ್ಲಿ ಅನಿಸುತ್ತದೆ. ರಾಘಣ್ಣ ಅವರು ಅಪ್ಪುಗೆ ಕ್ರಯಾನ್ಸ್, ಸ್ಕೆಚ್ ಪೆನ್ಸಿಲ್, ಕಲರಿಂಗ್ ತೆಗೆದುಕೊಂಡು ಬರುವಂತೆ ಅಪ್ಪುಗೆ ಹೇಳಿದರು. ಆಗ ಅಪ್ಪು ಬಂದರು. ನಾವು ಮತ್ತು ಅಪ್ಪು ಇಬ್ಬರು ಜತೆಗೆ ಕೂತು ಪೇಂಯಿಂಟಿಂಗ್ ಮಾಡಿದ್ವಿ. ಇದು ನನ್ನ ಮತ್ತು ಅಪ್ಪು ಮೊದಲ ಭೇಟಿ. ಆಗ ನನಗೆ ಏಳೆಂಟು ವರ್ಷ ವಯಸ್ಸು. ಮುಂದೆ ಮತ್ತೆ ನಮ್ಮ ಭೇಟಿ ಆಗಿದ್ದು ಡ್ಯಾನ್ಸ್ ಕ್ಲಾಸ್‌ನಲ್ಲಿ ಇಬ್ಬರು ಒಂದೇ ಕಡೆ ಡ್ಯಾನ್ಸ್ ಕಲಿಯಲು ಹೋಗುತಿದ್ವಿ.
* ಅಪ್ಪು ಚಿತ್ರದ ನಿಮ್ಮ ಮೊದಲ ಸೀನ್, ಡೈಲಾಗ್ ನೆನಪಿದೆಯೇ?
ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ನನ್ನ ಮತ್ತು ಅಪ್ಪು ಅವರ ಮೊದಲ ಸೀನ್ ಚಿತ್ರೀಕರಣ ಆಗಿದ್ದು. ನಾನು ಕ್ಲಾಸ್‌ನಲ್ಲಿರುತ್ತೇನೆ. ಪ್ರೊಪೇಸರ್ ಬಂದು ನನ್ನ ಕರೆಯುವುದು, ಮತ್ತೆ ಹೀರೋ ಫ್ರೆಂಡ್ ಬಂದು ಸುಚಿ, ಅಪ್ಪು ಮಾತನಾಡಬೇಕಂತೆ ಅಂದಾಗ ನಾನು ಬರಲ್ಲ ಎನ್ನುವುದು.
ಸಿನಿಮಾ ನೋಡುತ್ತಾ, ಅಪ್ಪು ನೆನಪು ತೀವ್ರವಾಗಿ ಕಾಡಿತು: ಕಣ್ಣೀರಾದ ರಕ್ಷಿತಾ ಪ್ರೇಮ್
* ಅಪ್ಪು ಚಿತ್ರದ ಮೂರು ಭಾಷೆಯಲ್ಲೂ ನೀವೇ ನಟಿಸಿದ್ದೀರಲ್ಲ?
ಕನ್ನಡ, ತೆಲುಗು, ತಮಿಳು ಈ ಮೂರು ಭಾಷೆಯಲ್ಲಿ ನಾನೇ ನಾಯಕಿ. ಮಲಯಾಳಂಗೂ ನನಗೇ ಕೇಳಿದರು. ಆದರೆ, ಮಾಡಕ್ಕೆ ಆಗಲಿಲ್ಲ. ಒಂದು ವೇಳೆ ಮಾಡಿದ್ದರೆ, ಮೊದಲ ಚಿತ್ರದಲ್ಲೇ ನಾಲ್ಕು ಭಾಷೆಯನ್ನು ಕವರ್ ಮಾಡುತ್ತಿದ್ದೆ.
* ಪುನೀತ್ ಅವರಲ್ಲಿ ನೀವು ಮೊದಲ ಕಂಡ ಗುಣಗಳೇನು?
ಪ್ರತಿಯೊಬ್ಬರ ಜತೆಗೂ ಹೊಂದಿಕೊಂಡು ಹೋಗುವುದು, ಎಲ್ಲರನ್ನು ಜತೆಯಲ್ಲಿ ಕರೆದುಕೊಂಡು ಹೋಗುವ ಗುಣ. ಎಲ್ಲರ ಜತೆಗೆ ಫ್ರೆಂಡ್ಲಿಯಾಗಿ ಮಾತನಾಡಿಸುವುದು.
* ಪುನೀತ್ ಚಿತ್ರಕ್ಕೆ ನಾಯಕಿ ಅಂದಾಗ ನಿಮ್ಮ ಮನೆಯಲ್ಲಿ ನಿಮಗೆ ಹೇಳಿದ್ದೇನು?
ಏನಮ್ಮ ಮಾಡ್ತಿಯಾ, ನಾವೆಲ್ಲ ವಜ್ರೇಶ್ವರಿ ಸಂಸ್ಥೆಯಿಂದಲೇ ಬಂದವರು. ನಿನಗೂ ಅದೇ ಸಂಸ್ಥೆಯಿಂದ ಲಾಂಚಿಂಗ್ ಸಿಗುತ್ತಿದೆ. ಪುಣ್ಯ ಮಾಡಿದ್ದಿಯಾ, ನಿಭಾಯಿಸಿಕೊಂಡು ಹೋಗ್ತಿಯಾ ಅಂತ ಮೊದಲು ಕೇಳಿದ್ದು ಅಮ್ಮ. ಎಲ್ಲರನ್ನು ಗೌರವದಿಂದ ಮಾತನಾಡಿಸಬೇಕು, ರೆಸ್ಪೆಕ್ಟ್ ತುಂಬಾ ಮುಖ್ಯ ಎಂದು ಅಪ್ಪ ಹೇಳಿದರು. ಇದು ಒಂದು ರೀತಿಯಲ್ಲಿ ನನ್ನ ಅಭಿಪ್ರಾಯ ಕೇಳಿದಂತೆಯೂ ಇತ್ತು, ಹಾಗೆ ಯಾವ ನಡೆದುಕೊಳ್ಳಬೇಕು ಎನ್ನುವ ಎಚ್ಚರಿಕೆಯಂತೆಯೂ ಇತ್ತು.
* ನೀವು ಹೇಗೆ ‘ಅಪ್ಪು’ ಚಿತ್ರಕ್ಕೆ ನಾಯಕಿ ಆಗಿದ್ದು?
ಒಮ್ಮೆ ಪಾರ್ವತಮ್ಮ ಅವರು ನಾನು ಡ್ಯಾನ್ಸ್ ಕಲಿಯುತ್ತಿದ್ದ ಶಾಲೆಗೆ ಬಂದಿದ್ದರು. ಅಲ್ಲಿ ನನ್ನ ನೋಡಿ, ಯಾರು ಇವಳು ಅಂತ ಕೇಳಿದರು. ಗೌರಿ ಶಂಕರ್ ಮಗಳು ಅಂತ ತಿಳಿದು, ಏಷ್ಟ್ ದೊಡ್ಡವಳಾಗಿದ್ದಾಳೆ ಅಂತ ಅಚ್ಚರಿಯಿಂದ ನನ್ನ ಮಾತನಾಡಿಸಿದರು. ಅಲ್ಲೇ ಅಮ್ಮನಿಗೆ ನನ್ನ ಒಂದು ಫೋಟೋಶೂಟ್ ಮಾಡಿಸಿಕ್ಕೆ ಹೇಳಿದರು. ಯಾಕೆ ಅಂತ ನನಗೂ ಗೊತ್ತಾಗಲಿಲ್ಲ ಆಗ. ಒಂದೆರಡು ಫೋಟೋಗಳನ್ನು ಪಾರ್ವತಮ್ಮ ಅವರಿಗೆ ಕಳುಹಿಸಿದಾಗ ಫೋಟೋ ನೋಡಿ ನೀನೇ ನಾಯಕಿ ಅಂದರು.
* ಶೂಟಿಂಗ್ ಜಾಗದಲ್ಲಿ ರೀ ಟೇಕ್, ಇನ್ನಷ್ಟು ಚೆನ್ನಾಗಿ ಮಾಡಬೇಕೆಂದು ಕೇಳಿದ್ದುಂಟೆ?
ನಾನು ಅಪ್ಪು ಚಿತ್ರಕ್ಕೆ ನಾಯಕಿ ಆದಾಗ ನನಗೆ 17 ವರ್ಷ. ತೀರಾ ಚಿಕ್ಕ ವಯಸ್ಸು. ಫರ್‌ಪೆಕ್ಟ್, ರೀ ಟೇಕ್ ಇತ್ಯಾದಿ ಬಗ್ಗೆ ತಿಳವಳಿಕೆಯೇ ಇರಲ್ಲ. ಇದ್ದರೂ ಕೇಳುವಷ್ಟು ಧೈರ್ಯವಂತೂ ಇರುತ್ತಿರಲಿಲ್ಲ. ಬ್ಲೈಂಡ್ ಆಗಿ ನಿರ್ದೇಶಕರು ಹೇಳಿದಂತೆ ಕೇಳಿಕೊಂಡು ಹೋಗುತ್ತಿದ್ದೆ.
* ಮತ್ತೆ ಮೊನ್ನೆ ‘ಅಪ್ಪು’ ಸಿನಿಮಾ ನೋಡಿದಾಗ ನಿಮಗೆ ಏನನಿಸಿತು?
ನಿಜ ಹೇಳಬೇಕು ಅಂದರೆ ಭಯಕ್ಕೆ ನಾನು ‘ಅಪ್ಪು’ ಚಿತ್ರವನ್ನು ಪೂರ್ತಿ ನೋಡೇ ಇಲ್ಲ. ಒಂದಿಷ್ಟು ಸೀನ್ಸ್, ಹಾಡು ಮಾತ್ರ ನೋಡಿದ್ದೆ. 23 ವರ್ಷಗಳ ನಂತರ ಚಿತ್ರಮಂದಿರದಲ್ಲಿ ನನ್ನ ಮಗನ ಜೊತೆ ‘ಅಪ್ಪು’ ಚಿತ್ರ ನೋಡಿದಾಗ ಅನಿಸಿದ್ದು, ತುಂಬಾ ಫ್ರೆಶ್ ಸಿನಿಮಾ. ಆಶಿಕಿ, ಡಿಡಿಎಲ್‌ಜೆ ಚಿತ್ರಗಳಂತೆ ದಾಖಲೆಯಲ್ಲಿ ಉಳಿದು ಬಿಡುವ ಎವರ್‌ಗ್ರೀನ್ ಪ್ರೇಮ ಕತೆ. ಸುಂದರವಾಗಿ ಮೂಡಿ ಬಂದಿರುವ ಮುಗ್ಧ ಪ್ರೇಮ ಕತೆ.
* ತೆರೆ ಮೇಲೆ ಪುನೀತ್ ಬಂದ ಕ್ಷಣ ಏನನಿಸಿತು?
ತುಂಬಾ ಬೇಗ ಕಳೆದುಕೊಂಡ್ವಿ. ಮತ್ತೆ ಮರಳಿ ಬಂದು ಬಿಡಲಿ. ಬಂದಾಗ ನಾನು ಪುನೀತ್ ಕೈಯ ಹಿಡಿದು ‘ಹೌ ಆರ್ ಯೂ’ ಅಂತ ಕೇಳಬೇಕು. ನನ್ನ ಆ ಮಾತಿಗೆ ಎಂದಿನಂತೆ ಅಪ್ಪು ಸ್ಮೈಲ್ ಕೊಟ್ಟು ಉತ್ತರಿಸಲಿ ಅಂತ ಭಾವನೆ ಹುಟ್ಟಿಕೊಂಡು ಆ ಕ್ಷಣ ಭಾವುಕಳಾದೆ.
23 ವರ್ಷಗಳ ಹಿಂದೆ ಬೆಳ್ಳಿತೆರೆ ಮೇಲೆ ಉದಯಿಸಿದ ಧ್ರುವತಾರೆ: ಅಪ್ಪು ಖದರ್ ನೋಡಿ ಸಿಂಹದ ಮರಿ ಎಂದಿದ್ರು ತಲೈವಾ!
* ಅಪ್ಪು ಚಿತ್ರವನ್ನು ಮತ್ತೆ ರೀಮೇಡ್ ಮಾಡಿದರೆ ಈಗ ಯಾರು ಮಾಡಬಹುದು?
ಚಾನ್ಸೇ ಇಲ್ಲ. ರೀ ಕ್ರಿಯೇಟ್ ಅಥವಾ ರೀಮೇಡ್ ಮಾಡೋ ಪ್ರಯತ್ನ ಇರಲಿ. ಹಾಗೊಂದು ಕಲ್ಪನೆ ಮಾಡಕ್ಕೂ ಸಾಧ್ಯವಿಲ್ಲ. ಪುನೀತ್ ಅವರ ಜಾಗದಲ್ಲಿ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅವಿನಾಶ್ ಅವರದ್ದು ಎಂಥ ಪಾತ್ರ. ಪೂರಿ ಜಗನ್ನಾಥ್ ಅವರ ಸ್ಥಾನ ತುಂಬಕ್ಕೆ ಆಗುತ್ತಾ? ಖಂಡಿತ ಆಗಲ್ಲ.