
* ನಮಸ್ಕಾರ ಮೇಡಂ, ಹೇಗಿದ್ದೀರಿ, ಎಲ್ಲಿದ್ದೀರಿ?
ಈಗ ಮನೆಗೆ ಬಂದಿದ್ದೇನೆ, ಮಗಳ ಜೊತೆಗೆ. ಒಂದು ವಾರದ ಕೆಳಗೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಯ್ತು. ಎಳೇ ಮಗುವಿನ ಜೊತೆಗಿರುವಾಗ ಹಗಲು, ರಾತ್ರಿಗಳ ವ್ಯತ್ಯಾಸ ಗೊತ್ತಾಗಲ್ಲ. ತಾಯಿಗೆ ನಿದ್ದೆ ಮರೀಚಿಕೆಯೇ ಆಗಿಬಿಡುತ್ತದೆ. ಎಲ್ಲವೂ ಒಂದು ಅನುಭವ.
* ತಾಯಿಯಾಗಿದ್ದೀರಿ. ಸಿಹಿ ಅನುಭವ ಕಹಿಯನ್ನು ಮರೆಸಿದೆಯಾ?
7ನೇ ತಿಂಗಳಲ್ಲಿ ಚೆಕ್‌ಅಪ್‌ಗೆ ಐವಿಎಫ್ ತಜ್ಞರಲ್ಲಿ ಹೋದಾಗ ಅವರಿಗೆ ಎಲ್ಲವೂ ಸರಿ ಇಲ್ಲ ಅನ್ನೋದು ಗೊತ್ತಾಯ್ತು. ಮಗುವಿಗೆ ತಾಯಿಯ ಕರುಳಬಳ್ಳಿಯಿಂದ ಹೋಗುವ ರಕ್ತದ ಪೂರೈಕೆ ಸರಿ ಇರಲಿಲ್ಲ. ಮೆದುಳಿಗೂ ಸರಿಯಾಗಿ ಆಮ್ಲಜನಕ ಪೂರೈಕೆ ಆಗುತ್ತಿರಲಿಲ್ಲ. ಡಾಕ್ಟರ್ ಮೆಡಿಸಿನ್ ಕೊಟ್ಟು ಎಚ್ಚರಿಕೆ ನೀಡಿ ಕಳಿಸಿದ್ದರು. ಆದರೆ ಸೀಮಂತದ ಬಳಿಕ ನಡೆಯುವುದು ಬಹಳ ಕಷ್ಟವಾಗುತ್ತಿತ್ತು. ಎರಡು ಹೆಜ್ಜೆ ಇಡಲೂ ಒದ್ದಾಡುತ್ತಿದ್ದೆ. ಇದ್ದಕ್ಕಿದ್ದಂತೆ ವಿಲಕ್ಷಣ ನೋವು ಕಾಣಿಸಿತು. ತಕ್ಷಣ ತಂಗಿಯ ಸಲಹೆಯಂತೆ ಮಲ್ಲೇಶ್ವರಂ ಆಸ್ಪತ್ರೆ ಸೇರಿದೆ. ಡಾಕ್ಟರ್ ನನ್ನನ್ನು ನೋಡಿದ್ದಷ್ಟೇ, ನಿಮ್ಮ ಸ್ಥಿತಿ ನೋಡಿದರೆ ಡೇಂಜರ್ ಅನಿಸ್ತಿದೆ ಅನ್ನುತ್ತಲೇ ವ್ಹೀಲ್ ಚೇರ್ ತರಿಸಿ ಚೆಕಪ್ ಮಾಡಿದರು. ಅವರ ಊಹೆ ನಿಜವಾಗಿತ್ತು. ಒಂದು ಮಗುವಿನ ಹೃದಯಬಡಿತ ಶೇ.50ರಷ್ಟು ಮಾತ್ರ ಇತ್ತು. ನನ್ನಿಂದ ಮಗುವಿಗೆ ಹೋಗಬೇಕಾದ ರಕ್ತ ರಿವರ್ಸ್ ಆಗಿ ಮಗುವಿನಿಂದ ನನಗೆ ಬರುತ್ತಿತ್ತು. ಅದನ್ನು ಕಂಡೇ ನನಗೆ ಅಳು ತಡೆಯಲಿಕ್ಕಾಗಲಿಲ್ಲ. ಆ ಮಗು ಹೊಟ್ಟೆಯಿಂದ ಹೊರ ಬರುವಾಗಲೇ ಅಸುನೀಗಿತ್ತು.. ಕೂಡಲೇ ಇನ್ನೊಂದನ್ನು ಹೊರತೆಗೆದರು. ಅದು ಆರೋಗ್ಯದಿಂದಿತ್ತು. ಕರುಳುಬಳ್ಳಿಗಳ ಹುಟ್ಟು, ಸಾವು ಕಣ್ಣೆದುರೇ ಘಟಿಸಿತ್ತು. ದಿಗ್ಭ್ರಮೆ ಆಯಿತು.
* ಸಕಾಲಕ್ಕೆ ಸಹಾಯ ಸಿಕ್ಕಿತಾ?
ನನ್ನ ಕುಟುಂಬದವರ ಬೆಲೆ ಅಂದು ಗೊತ್ತಾಯಿತು. ತೀರಿಕೊಂಡ ಮಗುವಿನ ಅಂತ್ಯಕ್ರಿಯೆಯನ್ನು ನನ್ನ ತಂಗಿ ಮಗ ನಿರ್ವಹಿಸಿದ. ಬಹಳ ಭಾವುಕಳಾಗಿದ್ದೆ ಆ ಕ್ಷಣ. ಜೊತೆಗೆ ಮಕ್ಕಳೆಲ್ಲ ದೊಡ್ಡವರಾದ ಮೇಲೆ ಅವರವರದೇ ಜಗತ್ತಿನಲ್ಲಿ ಇರುತ್ತಾರಲ್ಲ, ಇಂಥಾ ಹೊತ್ತಲ್ಲಿ ಮತ್ತೆ ಅವರೊಂದಿಗೆ ಸಂಬಂಧದ ಹಿಂದಿನ ಪ್ರೀತಿ, ಅಕ್ಕರೆಯ ಅರಿವಾಗುತ್ತದೆ. ಕುಟುಂಬದ ಸಹಾಯವೇ ನನಗೆ ಬೆನ್ನುಲುಬಾಯ್ತು.
* ನೀವು ಐವಿಎಫ್‌ಗೆ ಹೋದಾಗ ನಿಮ್ಮ ವಯಸ್ಸಿನ ಪ್ರಶ್ನೆಯೂ ಬಂದಿತ್ತು. ಅದು ಹೆರಿಗೆ ವೇಳೆ ಸಮಸ್ಯೆ ಆಗಿಲ್ಲವಾ?
ಇಲ್ಲ. ನನ್ನ ಆರೋಗ್ಯ ಹೆರಿಗೆಯವರೆಗೂ, ಆಮೇಲೂ ಸ್ಥಿರವಾಗಿತ್ತು. ಒಂದು ವಾರ ನನ್ನ ಮಗಳನ್ನು ಎನ್‌ಐಸಿಯುನಲ್ಲಿ ಇಟ್ಟಿದ್ದರು. ಅದಕ್ಕೆ ಪ್ರತೀದಿನ ಕಾಂಗರೂ ಕೇರ್ ಅಂದರೆ ತಾಯಿಯ ಮೈಗೆ ಮಗುವಿನ ಮೈಯನ್ನು ಅಂಟಿಸಿ ನೀಡುವ ಚಿಕಿತ್ಸೆ ನೀಡಬೇಕಿತ್ತು. ಇದರಿಂದ ಮಗುವಿನ ತೂಕ, ಆರೋಗ್ಯ, ಚೇತರಿಕೆ ಎಲ್ಲವೂ ಆಗುತ್ತದೆ. ಆ ಹೊತ್ತಿಗೆ ನಾನು ಸ್ನೇಹಿತರ ಮನೆಯಲ್ಲಿದ್ದೆ. ಡ್ರೈವರ್ ಸಿಗದಿದ್ದಾಗ ನಾನೇ ಆಸ್ಪತ್ರೆಗೆ ಡ್ರೈವ್ ಮಾಡಿಕೊಂಡು ಹೋಗಿ ಮಧ್ಯರಾತ್ರಿ 1ರ ತನಕ ಕಾಂಗರೂ ಮದರ್ ಕೇರ್ ನೀಡಿ ಬರುತ್ತಿದ್ದೆ. ನನ್ನನ್ನು ನೋಡಿ ಅಲ್ಲಿದ್ದ ಹೊಸ ತಾಯಂದಿರಿಗೆ ಡಾಕ್ಟರ್ ಹೇಳ್ತಿದ್ದರು, ಅವರನ್ನು ನೋಡಿ ಕಲಿಯಿರಿ ಅಂತ.
* ಮಗುವಿನ ಮೊದಲ ಸ್ಪರ್ಶ?
ಅದೊಂದು ಅನಿರ್ವಚನೀಯ ಅನುಭವ. ಮಗುವನ್ನು ಎನ್‌ಐಸಿಯುನಲ್ಲಿ ಮಲಗಿಸಿದ್ರು. ಮೈಗೆಲ್ಲ ಚುಚ್ಚಿದ್ದ ವೈರ್‌ಗಳು. ಆಕ್ಸಿಜನ್ ಸಪ್ಲೈ ಆಗುತ್ತಿತ್ತು. ನಾನು ಮೆತ್ತಗೆ ಮುಟ್ಟಿದೆ, ಮಗು ಕೂಡಲೇ ಸ್ಪಂದಿಸಿತು. ನನಗೆ ರೋಮಾಂಚನ! ಏಕೆಂದರೆ ಅಲ್ಲಿಯವರೆಗೆ ಡಾಕ್ಟರ್, ನರ್ಸ್ ಎಲ್ಲರೂ ಮಗುವನ್ನು ಮುಟ್ಟಿರುತ್ತಾರೆ, ಆ ಸ್ಪರ್ಶಗಳ ನಡುವೆಯೂ ತಾಯಿಯ ಸ್ಪರ್ಶವನ್ನು ಆ ಎಳೆಯ ಜೀವ ಗುರುತಿಸುವ ಬಗೆ ಕಂಡು ಬೆರಗಾದೆ. ಪ್ರಕೃತಿಯೋ, ದೇವರೋ.. ಏನೋ ಒಂದು ಶಕ್ತಿಯೋ.. ಅದರಲ್ಲಿ ನಂಬಿಕೆ ಹೆಚ್ಚಾಯಿತು.
* ಏಕಕಾಲಕ್ಕೆ ನೋವು, ಸಂತಸ.. ಮನಸ್ಸು ಹೇಗೆ ರಿಯಾಕ್ಟ್ ಮಾಡಿತು?
ಒಂದು ಸಮಯದ ನಂತರ ನಮ್ಮ ಎಷ್ಟೋ ಭಾವನೆಗಳು ಮರೆಯಾಗುತ್ತವೆ. ಈ ಮಕ್ಕಳ ಮೂಲಕ ನನಗೆ ಅಷ್ಟೂ ಭಾವನೆಗಳೂ ವಾಪಾಸ್ ಬಂದ ಹಾಗಾಯ್ತು. ದುಃಖವನ್ನು ನಾವು ಮರೆ ಮಾಡ್ತೀವಿ, ಪೂರ್ತಿಯಾಗಿ ಅನುಭವಿಸುವುದಿಲ್ಲ. ನನಗೆ ಹೆರಿಗೆಯ ವೇಳೆ ಒಂದು ಮಗುವನ್ನು ಕಳೆದುಕೊಂಡಾಗ ದುಃಖದ ಪೂರ್ಣ ದರ್ಶನ. ಇನ್ನೊಂದು ಮಗು ಮಡಿಲಿಗೆ ಬಂದಾಗ ಆನಂದದ ದಿವ್ಯ ಘಳಿಗೆ. ಎರಡೂ ತೀವ್ರತೆಗಳ ಜೊತೆಗೆ ಪ್ರಕೃತಿ ಕರುಣಿಸಿದ ತಾಯ್ತನದ ಅನುಭವ.
ಮಗುವಿಗಾಗಿ ನಾನು ಎಷ್ಟು ಹಂಬಲಿಸಿದ್ದೆ ಅನ್ನುವುದು ಎಲ್ಲರಿಗೂ ಗೊತ್ತು. ಮಗಳು ಬಂದಾಗ ನನಗೆ ನನ್ನಮ್ಮ ಶಕುಂತಳಾ ನೆನಪಾಗುತ್ತದೆ. ಅವರು 10 ವರ್ಷದ ಕೆಳಗೆ ತೀರಿಕೊಂಡದ್ದು. ಮಗಳಲ್ಲಿ ಅವರೇ ಕಾಣ್ತಾರೆ. ಅಮ್ಮನ ಅಮ್ಮ ರುಕ್ಮಿಣಿ ಎಂಬ ಹೆಸರನ್ನು ಮಗಳಿಗೆ ಇಟ್ಟಿದ್ದೇನೆ. ಅವಳೀಗ ರುಕ್ಮಿಣಿ ಭಾವನಾ ರಾಮಣ್ಣ. ಮಗುವಿಗಾಗಿ ಅಷ್ಟೊಂದು ಹಾಗೆ ಹಂಬಲಿಸಿದವಳು ಅದನ್ನು ಚೆನ್ನಾಗಿ ಬೆಳೆಸುತ್ತೇನೆ ಎಂಬ ವಿಶ್ವಾಸವಿದೆ. ಸದ್ಯಕ್ಕೆ ಒಬ್ಬ ಎನ್‌ಐಸಿಯು ನರ್ಸ್ ಸಹಾಯ ಪಡೆಯುತ್ತಿದ್ದೇನೆ. ಈಗ ನಿಮ್ಮ ಜೊತೆ ಇಷ್ಟು ಹೊತ್ತಿನಿಂದ ಮಾತಾಡುತ್ತಿರುವುದಕ್ಕೆ ಮಗಳಿಗೆ ಪೊಸೆಸ್ಸಿವ್ ಫೀಲ್ ಆಗ್ತಿದೆ. ಸಣ್ಣಗೆ ಅದನ್ನು ಎಕ್ಸ್‌ಪ್ರೆಸ್ ಮಾಡ್ತಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.