ನಾನು ಬೇರೆ ಭಾಷೆಯ ಪ್ರೇಕ್ಷಕರ ಮುಂದೆ ಹೋಗಲು ಸೂಕ್ತ ಚಿತ್ರವಿದು: ಸತೀಶ್‌ ನೀನಾಸಂ

By Kannadaprabha NewsFirst Published May 22, 2023, 1:02 PM IST
Highlights

ಸತೀಶ್‌ ನೀನಾಸಂ ಅಭಿನಯದ ‘ಅಶೋಕ ಬ್ಲೇಡ್‌’ ಸಿನಿಮಾ ಬಹುಭಾಷೆಯಲ್ಲಿ ಮೂಡಿ ಬರುತ್ತಿದೆ. ವಿನೋದ್‌ ವಿ ಧೋಂಡಾಲೆ ನಿರ್ದೇಶÜ, ಟಿ ಕೆ ದಯಾನಂದ ಕತೆ ಬರೆದಿರುವ ಈ ಚಿತ್ರವು ಪ್ಯಾನ್‌ ಇಂಡಿಯಾ ಆಗಲು ಸತೀಶ್‌ ನೀನಾಸಂ ಕೊಟ್ಟಕಾರಣಗಳು ಇಲ್ಲಿವೆ.

ಆರ್‌ ಕೇಶವಮೂರ್ತಿ

ಇದ್ದಕ್ಕಿದ್ದಂತೆ ಪ್ಯಾನ್‌ ಇಂಡಿಯಾ ಸಿನಿಮಾ ಕನಸು ಬಂದಿದ್ದು ಯಾಕೆ?

ಇದ್ದಕ್ಕಿದ್ದಂತೆ ಬಂದ ಕನಸು ಅಲ್ಲ ಇದು. ಪ್ರತಿಯೊಬ್ಬ ಕಲಾವಿದನಿಗೂ ತನ್ನ ಭಾಷೆಯ ಜತೆಗೆ ಬೇರೆ ಬೇರೆ ಭಾಷೆಯಲ್ಲೂ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಮತ್ತು ಗುರಿ ಇರುತ್ತದೆ. ಅದಕ್ಕೆ ಕಾಲ ಮತ್ತು ಸೂಕ್ತ ಸಿನಿಮಾಗಾಗಿ ಕಾಯಬೇಕು. ಈಗ ‘ಅಶೋಕ ಬ್ಲೇಡ್‌’ ನನ್ನ ಬೇರೆ ಭಾಷೆಗಳಿಗೂ ಕರೆದುಕೊಂಡು ಹೋಗುವ ಸೂಕ್ತ ಸಿನಿಮಾ ಅನಿಸಿತು.

ಯಾವ ಕಾರಣಕ್ಕೆ ಇದು ಬಹುಭಾಷೆಯ ಸಿನಿಮಾ ಅನಿಸಿತು?

ಪ್ರಾದೇಶಿಕತೆಯ ಕತೆ. ಹೆಚ್ಚು ಹೆಚ್ಚು ಪ್ರಾದೇಶಿಕತೆ ಆದಷ್ಟುಅದು ಯೂನಿವರ್ಸೆಲ್‌ ಆಗುತ್ತದೆ. ಲೋಕಲೈಸ್‌ ಆದಷ್ಟುಗ್ಲೋಬಲೈಸ್‌ ಆಗುತ್ತೇವೆ ಅಂತೀವಲ್ಲ ಹಾಗೆ. ಇದಕ್ಕೆ ಕನ್ನಡದ್ದೇ ಉತ್ತಮ ಉದಾಹರಣೆ ಎಂದರೆ ‘ಕಾಂತಾರ’. ಇದು ನಮ್ಮ ಕನ್ನಡದ ಮಣ್ಣಿನ ಸಿನಿಮಾ. ಆದರೆ, ಈ ಚಿತ್ರವನ್ನು ಇಡೀ ಭಾರತೀಯ ಚಿತ್ರರಂಗ ಸಂಭ್ರಮಿಸಿತು. ಪ್ರಾದೇಶಿಕತೆಗಳಿಗೆ ಮಾತ್ರ ಇಂಥ ಶಕ್ತಿ ಇರುತ್ತದೆ. ‘ಅಶೋಕ ಬ್ಲೇಡ್‌’ ಸಿನಿಮಾ ಕೂಡ ಇಂಥದ್ದೇ ಪ್ರಾದೇಶಿಕ ಕತೆಯನ್ನು ಒಳಗೊಂಡ ಸಿನಿಮಾ.

ಬರೀ ಕತೆ ಇದ್ದರೆ ಸಾಕಾ?

ಖಂಡಿತ ಸಾಕಾಗಲ್ಲ. ಅದರ ಜತೆಗೆ ಮೇಕಿಂಗ್‌ ಕೂಡ ಮುಖ್ಯ. ನಿರ್ದೇಶಕ ವಿನೋದ್‌ ಧೋಂಡಾಲೆ ಅವರ ತಂಡದ ಶ್ರಮ ನೋಡಿದರೆ ಯಾವ ಭಾಷೆಗೂ ಕಡಿಮೆ ಇಲ್ಲದಂತೆ ಇಡೀ ಚಿತ್ರವನ್ನು ರೂಪಿಸಿದ್ದಾರೆ. ಪ್ರತಿ ಪಾತ್ರಕ್ಕೂ ಮಹತ್ವ ಕೊಟ್ಟಿದ್ದಾರೆ. ನನ್ನ ವೃತ್ತಿಯಲ್ಲಿ ಇಂಥ ಕತೆ ಇರುವ ಸಿನಿಮಾ ಮಾಡಿಲ್ಲ. ಕತೆ ಚೆನ್ನಾಗಿತ್ತು. ಪಾತ್ರ ಕೂಡ ಅಷ್ಟೇ ಪರಿಣಾಮಕಾರಿಯಾಗಿತು. ಬೇರೆ ಭಾಷೆಗಳಿಗೂ ಹೋಗುವುದಕ್ಕೆ ಈ ಚಿತ್ರ ಧೈರ್ಯ ತುಂಬಿತು.

ನಾಯಕನ ಮಾರುಕಟ್ಟೆಕೂಡ ಮುಖ್ಯ ಅಲ್ಲವಾ?

ಖಂಡಿತ ಮುಖ್ಯ. ಈ ಹಿಂದೆಯೇ ‘ಲೂಸಿಯಾ’ ಸಿನಿಮಾ ನನ್ನ ಬೇರೆ ಭಾಷೆಯವರಿಗೂ ಪರಿಚಯಿಸಿದೆ. ಈ ಸಿನಿಮಾ ಬಿಡುಗಡೆಯಾಗಿ ಹಲವು ವರ್ಷ ಕಳೆದಿರಬಹುದು. ಆದರೆ ಇಂದಿಗೂ ಸತೀಶ್‌ ನೀನಾಸಂ ಎಂದರೆ ತೆಲುಗು, ತಮಿಳಿನ ಹಲವು ಸ್ಟಾರ್‌ಗಳು, ತಂತ್ರಜ್ಞರು ‘ಲೂಸಿಯಾ’ ಚಿತ್ರವನ್ನು ನೆನಪಿಸಿಕೊಳ್ಳುತ್ತಾರೆ. ಇತ್ತೀಚೆಗೆ ತಮಿಳು ನಟ ಸೂರ್ಯ ಮತ್ತು ಅವರ ಸಹೋದರ ಕಾರ್ತಿ ಅವರನ್ನು ಭೇಟಿ ಮಾಡಿದಾಗ ಅವರು ‘ಲೂಸಿಯಾ’ ಚಿತ್ರದ ಬಗ್ಗೆ ಮಾತನಾಡಿದರು.

ಈ ಚಿತ್ರದ ಕತೆ ಏನು? ಯಾವ ಕಾಲಘಟ್ಟದ್ದು?

ಇದೊಂದು ಸಾಮಾಜಿಕ ಸಮಸ್ಯೆಯ ಸುತ್ತ ಸಾಗುವ ಸಿನಿಮಾ.70ರ ದಶಕರದ ರೆಟ್ರೋ ಸ್ಟೈಲಿನ ಹಿನ್ನೆಲೆಯಲ್ಲಿ ಮೂಡುತ್ತದೆ. ಕತೆಯನ್ನು ಹೆಚ್ಚು ಹೇಳಲಾರೆ. ಇನ್ನೂ ಚಿತ್ರಕ್ಕಾಗಿ ಮೈಸೂರು, ಚಾಮರಾಜನಗರ, ನಂಜನಗೂಡಿನ ಸುತ್ತಮುತ್ತ ದೊಡ್ಡ ಸೆಟ್‌ ಹಾಕಿ ಚಿತ್ರಿಕರಣ ಮಾಡಲಾಗಿದೆ. ಮೇಕಿಂಗ್‌ ಅದ್ದೂರಿಯಾಗಿದೆ. ಕತೆ ಕೂಡ. ಹೀಗಾಗಿ ಎಲ್ಲ ವರ್ಗದ ಜನರಿಗೆ ಇದು ಇಷ್ಟವಾಗುತ್ತದೆ ಎನ್ನುವ ನಂಬಿಕೆ ಇದೆ.

ನಿಮ್ಮ ದ್ವನಿಯೇ ನಿಮಗೆ ಪ್ಲಸ್‌. ಬೇರೆ ಭಾಷೆಯಲ್ಲಿ ನಿಮ್ಮ ಪಾತ್ರಕ್ಕೆ ಬೇರೆಯವರು ಧ್ವನಿ ಕೊಟ್ಟರೆ, ಪಾತ್ರದ ಮಹತ್ವ ಉಳಿಯುತ್ತದೆಯೇ?

ಇದೇ ಕಾರಣಕ್ಕೆ ನನ್ನ ಪಾತ್ರಕ್ಕೆ ನಾನು ಡಬ್‌ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ತೆಲುಗು ಹಾಗೂ ತಮಿಳು ಕಲಿಯುತ್ತಿದ್ದೇನೆ. ಇದು ನನಗೆ ಸವಾಲು ಕೂಡ. ಉಳಿದಂತೆ ಹಿಂದಿ, ಮಯಾಳಂನಲ್ಲಿ ನನ್ನ ಪಾತ್ರಕ್ಕೆ ಯಾರಿಂದ ಡಬ್ಬಿಂಗ್‌ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.

ಈಗ ‘ಅಶೋಕ ಬ್ಲೇಡ್‌’ ಯಾವ ಹಂತದಲ್ಲಿದೆ?

ಈಗಾಗಲೇ ಶೇ.90ರಷ್ಟುಚಿತ್ರೀಕರಣ ಮುಗಿದಿದೆ. ಕೊನೆಯ ಹಂತದ ಚಿತ್ರೀಕರಣಕ್ಕೆ ಪ್ಲಾನ್‌ ಮಾಡಿಕೊಳ್ಳುತ್ತಿದ್ದೇವೆ.

click me!