ಯಶಸ್ಸನ್ನು ಅಲ್ಲೇ ಬಿಟ್ಟು ಸಾಗಬೇಕು, ಇಲ್ಲದಿದ್ದರೆ ನಮ್ಮತನ ಕಳ್ಕೋಬೇಕು: ರಾಜ್ ಬಿ ಶೆಟ್ಟಿ ಸಂದರ್ಶನ

Published : Oct 17, 2025, 08:56 AM IST
Raj B Shetty

ಸಾರಾಂಶ

ಹೊರಗಿನ ಬದಲಾವಣೆ ಸಾಕಷ್ಟು ಆಗಿದೆ. ಆದರೆ ಹಸಿವಿನ ಬದಲಾವಣೆ ಏನೂ ಆಗಿಲ್ಲ. ಈಗಲೂ ಹೊಸತನಕ್ಕೆ ತುಡಿಯುವುದು ಇದ್ದೇ ಇದೆ. ಹೊಸ ಪ್ರಯೋಗಗಳನ್ನು ಮಾಡುವ ಹಂಬಲವಿದೆ ನಟ, ನಿರ್ದೇಶಕ, ನಿರ್ಮಾಪಕ ರಾಜ್‌ ಬಿ ಶೆಟ್ಟಿ ಹೇಳಿದರು.

- ರಾಜೇಶ್ ಶೆಟ್ಟಿ

ಸು ಫ್ರಂ ಸೋ ಗೆಲುವಿನ ಬೆನ್ನಲ್ಲಿ ಥ್ರಿಲ್ಲರ್‌ ಸಿನಿಮಾ ನಿರ್ದೇಶನದ ತಯಾರಿಯಲ್ಲಿರುವ ನಟ, ನಿರ್ದೇಶಕ, ನಿರ್ಮಾಪಕ ರಾಜ್‌ ಬಿ ಶೆಟ್ಟಿ ಬದುಕು, ಗೆಲುವು, ಸಿನಿಮಾ, ಯಶಸ್ಸು, ಅಭದ್ರತೆ, ಸಂತೋಷ ಎಲ್ಲದರ ಕುರಿತು ಮಾತನಾಡಿದ್ದಾರೆ.

* ತಿಟ್ಹತ್ತಿ ತಿರುಗಿ ನೋಡಿದಾಗ ಏನನ್ನಿಸುತ್ತಿದೆ?
ಹೊರಗಿನ ಬದಲಾವಣೆ ಸಾಕಷ್ಟು ಆಗಿದೆ. ಆದರೆ ಹಸಿವಿನ ಬದಲಾವಣೆ ಏನೂ ಆಗಿಲ್ಲ. ಈಗಲೂ ಹೊಸತನಕ್ಕೆ ತುಡಿಯುವುದು ಇದ್ದೇ ಇದೆ. ಹೊಸ ಪ್ರಯೋಗಗಳನ್ನು ಮಾಡುವ ಹಂಬಲವಿದೆ. ಆದರೆ ಮೊದಲಿನ ಪ್ರಯತ್ನ ಮತ್ತು ಈಗಿನ ಪ್ರಯತ್ನಗಳಲ್ಲಿ ಯೋಚನೆಗಳಲ್ಲಿ ಸ್ವಲ್ಪ ಭ್ರಷ್ಟಾಚಾರ ಬಂದಿರಬಹುದು. ಯಾಕೆಂದರೆ ಈಗ ದುಡ್ಡು ಹಾಕಿದವರು ನಷ್ಟ ಆಗದಂತೆ ನೋಡಿಕೊಳ್ಳಲು ಏನೇನೋ ಮಾಡಬೇಕೋ ಅದನ್ನೆಲ್ಲಾ ಮಾಡುವಷ್ಟು ಎಚ್ಚರ ವಹಿಸುತ್ತೇನೆ. ಅಷ್ಟರ ಮಟ್ಟಿಗೆ ಬದಲಾವಣೆ ಆಗಿದೆ.

* ನೀವು ಬಂದಾಗ ಇದ್ದ ಚಿತ್ರರಂಗಕ್ಕೂ ಈಗಿನ ಕಾಲಕ್ಕೂ ಏನೇನು ವ್ಯತ್ಯಾಸ ಕಾಣುತ್ತಿದೆ?
ಆಗ ಕೊಂಚ ಪ್ರಾಮಾಣಿಕತೆ ಜಾಸ್ತಿ ಇತ್ತು. ಪ್ರಮೋಷನ್‌ ಮಾಡುವ ವಿಚಾರದಲ್ಲಿ ಬಹಳಷ್ಟು ಪ್ರಾಮಾಣಿಕರಾಗಿದ್ದೆವು. ಆದರೆ ಈಗ ಬಲವಂತವಾಗಿ ತುರುಕುತ್ತಿದ್ದೇವೆ. ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದೇವೆ. ಈಗ ಸಿಕ್ಕಾಪಟ್ಟೆ ಕಂಟೆಂಟ್‌ಗಳು ಬರುತ್ತಿವೆ. ತುಂಬಾ ಸಿನಿಮಾಗಳು ಬರುತ್ತಿವೆ. ಆದರೆ ಒಳ್ಳೆಯ ಕಂಟೆಂಟ್‌ಗಳು ತುಂಬಾ ಕಡಿಮೆ ಆಗಿವೆ. ವರ್ಚುವಲ್‌ ಆಗಿ ಬದುಕುವುದು ಜಾಸ್ತಿಯಾಗಿದೆ. ಮೊದಲು ಒಂದು ವಾರದಲ್ಲಿ 4 ಸಿನಿಮಾದಲ್ಲಿ ಒಂದು ಕನ್ನಡ ಸಿನಿಮಾ ಮೆಚ್ಚುತ್ತಿದ್ದೆವು ಅಥವಾ ನೋಡುತ್ತಿದ್ದೆವು. ಈಗ ಬೇರೆ ಬೇರೆ ಭಾಷೆಯ 16 ಸಿನಿಮಾಗಳಲ್ಲಿ ಒಂದು ಸಿನಿಮಾ ಮೆಚ್ಚುವ ಅಥವಾ ನೋಡುವ ಪರಿಸ್ಥಿತಿ ಇದೆ. ಅಷ್ಟೆಲ್ಲಾ ಬದಲಾವಣೆ ಆಗಿದೆ. ಈಗ ನಾವು ಬದಲಾಗಿದ್ದೇವೆ ಅನ್ನುವುದಕ್ಕಿಂತ ಬದಲಾಗಿರುವ ಇಂಡಸ್ಟ್ರಿಗೆ ತಕ್ಕಂತೆ ಬದಲಾವಣೆ ಪ್ರತಿಬಿಂಬಿಸುತ್ತಿದೆ.

* ಈ ಪ್ರಯಾಣ ಏನೆಲ್ಲಾ ಕೊಟ್ಟಿತು?
ಕೊಟ್ಟಿದ್ದು ಬಹಳ. ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಈ ಕ್ಷೇತ್ರ ಕೊಡುವಷ್ಟು ಬೇರೆ ಯಾವ ಕ್ಷೇತ್ರವೂ ಕೊಡುವುದಿಲ್ಲ. ಇಲ್ಲಿ ಪ್ರೀತಿಯೂ ಅಗಾಧವಾಗಿ ಸಿಗುತ್ತದೆ. ಕೀರ್ತಿಯೂ ಬಹಳ ದೊಡ್ಡದಾಗಿ ಬರುತ್ತದೆ. ಅದೇ ಥರ ಹೊಟ್ಟೆಕಿಚ್ಚೂ ಜಾಸ್ತಿ. ಜೆಲಸಿ ಜಾಸ್ತಿ. ಎಲ್ಲವೂ ಇಲ್ಲಿ ಜಾಸ್ತಿಯೇ. ಇತ್ತೀಚೆಗೆ ಒಬ್ಬರು ಬಹಳ ದೊಡ್ಡ ಉದ್ಯಮಿ ಒಂದು ಮಾತು ಹೇಳಿದರು. ನಾವು ಮಾಡಬಹುದಾದ ಅತ್ಯಂತ ದೊಡ್ಡ ಇನ್ವೆಸ್ಟ್‌ ಎಂದರೆ ಅದು ನಮ್ಮ ಮೇಲೆ ಮಾಡುವ ಇನ್ವೆಸ್ಟ್‌ಮೆಂಟ್‌ ಅಂತ. ನಾವು ನಮ್ಮ ಮೇಲೆ ಇನ್ವೆಸ್ಟ್‌ ಮಾಡುತ್ತಾ ಇರಬೇಕು. ಚಿತ್ರರಂಗದಲ್ಲಿರುವ ನಾವು ಸುನಾಮಿಯಲ್ಲಿ ಸರ್ಫಿಂಗ್‌ ಮಾಡುತ್ತಿರುತ್ತೇವೆ. ತಾಕತ್ತಿನಿಂದ ಗೆದ್ದವರು ಜಯಭೇರಿ ಬಾರಿಸುತ್ತಾರೆ. ಬಿದ್ದು ಹೋದವರು ಗತ ಸೇರುತ್ತಾರೆ. ಈ ಪ್ರಯಾಣ ಅನುದಿನದ ಸಾಹಸ.

* ಹಿಂದೆ ಎಲ್ಲಾ ಕಥನ ಮುಂದೆ ಇತ್ತು, ಈಗ ವಿಷುವಲ್‌ ಮೆಚ್ಚಿಕೊಳ್ಳುವ ಕಾಲ ಬಂದಿದೆ. ಈ ಕಾಲದಲ್ಲಿ ಹೇಗಿರಬೇಕು, ಹೇಗಿರಬಾರದು?
ತಾಂತ್ರಿಕತೆ ಮುಂದೆ ಬಂದಿದೆ. ವಿಷುವಲ್‌ಗಳಿಗೆ ಹೆಚ್ಚಿನ ಒತ್ತು ಸಿಗುತ್ತಿದೆ. ಕಥನ ತೆಳುವಾಗುತ್ತಾ ಹೋಗುತ್ತಿದೆ. ಅದಕ್ಕೆ ಕಾರಣ‍ವಿದೆ. ನಾವು ಮನುಷ್ಯರು ವೈಯಕ್ತಿಕ ಸಂವಹನಗಳಿಂದ ದೂರ ಸರಿಯುತ್ತಿದ್ದೇವೆ. ವೈಯಕ್ತಿಕ ಬಾಂಡಿಂಗ್‌ ಕಡಿಮೆಯಾಗುತ್ತಿದೆ. ಗಾಢ ಸಂವಾದಗಳು ಅಪರೂಪವಾಗಿದೆ. ಮನುಷ್ಯರು ಬದಲಾಗಿದ್ದೇವೆ. ಅದೇ ಥರ ಸಿನಿಮಾ ರೂಪಿಸುವಿಕೆ ಕೂಡ ಬದಲಾಗಿದೆ. ಮೊದಲು ಕಥೆ ಪ್ರಧಾನವಾಗಿದ್ದ ಚಿತ್ರಗಳಿಗೆ ಮೆಚ್ಚುಗೆ ದೊರೆಯುತ್ತಿತ್ತು. ಆದರೆ ಈಗ ಸೆಟ್‌ ಪೀಸ್‌ ಪ್ರಧಾನ ಸಿನಿಮಾಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮೊದಲು ಓದು, ಮೈಬಗ್ಗಿಸಿ ದುಡಿಯಬೇಕಿತ್ತು. ಈಗ ತಾಂತ್ರಿಕತೆ ಕಡೆಗೆ ಗಮನ ಕೊಡಬೇಕಿದೆ.

* ನೀವು ಸಿನಿಮಾ ಆರಂಭಿಸಿದಾಗ ಹೇಗಿತ್ತು?
ಮೊದಲು ಬರವಣಿಗೆ ಬಿಟ್ಟರೆ ಬೇರೆ ಕಡೆ ಗಮನ ಇರಲಿಲ್ಲ. ಒಂದು ಮೊಟ್ಟೆಯ ಕತೆ ಮಾಡಿದಾಗ ಬರವಣಿಗೆ ನನ್ನ ಶಕ್ತಿಯಾಗಿತ್ತು. ಜೊತೆದೆ ಉಳಿದ ಲಿಮಿಟೇಷನ್‌ಗಳು ಗೊತ್ತಿತ್ತು. ಬರವಣಿಗೆಯನ್ನೇ ಉತ್ತಮವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೆ. ಆ ಹೊತ್ತಲ್ಲಿ ನಮ್ಮ ಲಿಮಿಟೇಷನ್‌ಗಳನ್ನು ಪ್ರೇಕ್ಷಕರಿಗೆ ಗೊತ್ತಾಗದಂತೆ ಮಾಡಬೇಕು. ಒಳ್ಳೆಯ ಸಿನಿಮಾ ಮಾಡಿದ್ದೇವೆ ಅಂತ ನಾವು ನಂಬಬೇಕು. ಆಗ ಪ್ರೇಕ್ಷಕರು ಕೂಡ ನಂಬುತ್ತಾರೆ. ಈಗ ಒಳ್ಳೆಯ ಬರವಣಿಗೆ ಜೊತೆಗೆ ಒಳ್ಳೆಯ ತಾಂತ್ರಿಕತೆ ಕೂಡ ಇದ್ದರೆ ಸಿನಿಮಾ ಗೆಲ್ಲುವಂತಹ ಸ್ಥಿತಿ ನಿರ್ಮಾಣ ಆಗಿದೆ. ಅದನ್ನು ಚಿತ್ರರಂಗ ಬಳಸಿಕೊಳ್ಳಬೇಕು.

* ಈ ಪ್ರಯಾಣದಲ್ಲಿ ನಿಮ್ಮ ಬರವಣಿಗೆಯ ರೀತಿ ಬದಲಾಗಿದೆಯೇ?
ಬರವಣಿಗೆ ಬದಲಾಗಲ್ಲ, ಬರಹಗಾರ ಬದಲಾಗುತ್ತಾನೆ. ಅವನ ಅನುಭವ ಶ್ರೀಮಂತವಾಗಿತ್ತದೆ ಅಥವಾ ಹೊಸ ರೀತಿಯ ಅನುಭವಗಳಿಗೆ ಎದುರಾಗುತ್ತಾನೆ. ಅವನ ಆಲೋಚನೆಗಳು ಬದಲಾಗಬಹುದು. ರಾಜಕೀಯ ಚಿಂತನೆಗಳು, ಸಾಂಸ್ಕೃತಿಕ ಚಿಂತನೆಗಳು ಬದಲಾಗಬಹುದು. ಅವನ ಕಲಿಕೆಗಳು ಬದಲಾಗುತ್ತಾ ಹೋಗುತ್ತದೆ. ಅದೇ ರೀತಿ ಅವನಿಗೇ ಗೊತ್ತಿಲ್ಲದಂತೆ ಬರವಣಿಗೆ ಕೂಡ ಬದಲಾಗಬೇಕು. ಅದು ಸಹಜ ಕ್ರಮ. ನಾನು ಬರೆಯುವ ರೀತಿ ಅದೇ ಆಗಿರುತ್ತದೆ. ಆದರೆ ಹೊಸ ಜಾನರ್‌ಗಳನ್ನು ನಾನು ಪ್ರಯತ್ನ ಮಾಡುತ್ತೇನೆ. ಆಗ ಹೊಸತು ಕಲಿಯಬೇಕಾಗುತ್ತದೆ. ನನಗೆ ಗೊತ್ತಿರದಿದ್ದನ್ನು ಕಲಿತು ಗೊತ್ತುಮಾಡಿಕೊಳ್ಳುವುದೇ ನನಗೆ ಆನಂದ.

* ಒಂದು ಸಿನಿಮಾ ಮುಗಿದ ಮೇಲೆ ಮತ್ತೆ ತುಂಬಿಕೊಳ್ಳುವುದು ಹೇಗೆ?
ಮನುಷ್ಯರ ಜೊತೆ ಒಡನಾಟದಲ್ಲಿ, ಮಾತುಕತೆಯಲ್ಲಿ. ನಾನು ನನ್ನ ಸ್ನೇಹಿತರ ಜೊತೆ ತುಂಬಾ ಸಮಯ ಕಳೆಯುತ್ತೇನೆ. ಓಡಾಡುತ್ತೇವೆ. ಬದುಕನ್ನು ಅನುಭವಿಸುತ್ತೇವೆ. ನಾವು ಸಿನಿಮಾ ಕುರಿತು ಮಾತನಾಡುವುದಿಲ್ಲ. ಸಿನಿಮಾ ಮಾತನಾಡುವುದರಿಂದ ದೂರ ಉಳಿಯುತ್ತೇನೆ. ಬದುಕಿನಿಂದ ಸಿನಿಮಾ ಹುಟ್ಟಬೇಕೇ ಹೊರತು, ಸಿನಿಮಾದಿಂದ ಬದುಕಲ್ಲ. ನಾನು ಸಿನಿಮಾ ಸಂಬಂಧಿಸಿದ ಜಗತ್ತಿನಿಂದ ಸಾಧ್ಯವಾದಷ್ಟು ದೂರವೇ ಉಳಿಯುತ್ತೇನೆ. ಎಲ್ಲಕ್ಕೂ ತೆರೆದುಕೊಂಡಿರುತ್ತೇನೆ. ನಾವು ತುಂಬಿಕೊಳ್ಳಬೇಕಿದ್ದರೆ, ಬರಿದಾಗಿರಬೇಕು. ಆ ತುಂಬಿಕೊಳ್ಳುವ ಪ್ರಕ್ರಿಯೆ ಏನಿದ್ದರೂ ಹೊರಗಿನಿಂದ ಒಳ ಬಂದಾಗಲೇ ಆಗುವುದು. ನಾನು ಜಾತ್ರೆಗೆ ಹೋಗುತ್ತೇನೆ. ಆ ವಾತಾವರಣ ಅನುಭವಿಸುತ್ತೇನೆ. ಮಾಸ್ಕ್‌ ಹಾಕಿಕೊಂಡು ಹೋಗುವ ಸ್ಥಿತಿ ಬಂದಿದೆ ಬಿಟ್ಟರೆ ಬೇರೆಲ್ಲವೂ ಅದೇ ರೀತಿ ಇದೆ. ಎಲ್ಲರೂ ಅಷ್ಟೇ, ತೆರೆದುಕೊಂಡಿರಬೇಕು, ತುಂಬಿಕೊಳ್ಳುವುದಕ್ಕೆ.

* ದೊಡ್ಡ ಯಶಸ್ಸು ಕೊಡುವ ಕಷ್ಟ ಏನು?
ಬಹಳ ಕಷ್ಟ ಕೊಡುತ್ತದೆ. ಯಶಸ್ಸು ನಮ್ಮ ದಾರಿಯನ್ನು ವಿಚಲಿತಗೊಳಿಸಬಹುದು. ನಮ್ಮ ಟೋಬಿ ಸಿನಿಮಾ ಕಲೆಕ್ಷನ್‌ನಲ್ಲಿ ಸೋತಿತು. ಆಗ ಜಗತ್ತು ನಮ್ಮನ್ನು ನೋಡಿದ ರೀತಿಗೂ ಮಾತನಾಡಿದ ರೀತಿಯನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರೆ ನಾವು ಮತ್ತೊಂದು ಸಿನಿಮಾ ಮಾಡಲಾಗುತ್ತಿರಲಿಲ್ಲ. ಅದೇ ರೀತಿ ಸು ಫ್ರಮ್‌ ಸೋ ಗೆದ್ದಾಗ ಎಲ್ಲರೂ ಹೊಗಳಿದರು. ಅದನ್ನೂ ನಾವು ಮನಸ್ಸಿಗೆ ಹಚ್ಚಿಕೊಳ್ಳಬಾರದು. ನಾವು ಆ ಕ್ಷಣದ ಮಾತುಗಳನ್ನು ನಂಬಿಕೊಳ್ಳಬಾರದು. ನೀವು ಗ್ರೇಟು, ಅದ್ಭುತ ಸಿನಿಮಾ ಮಾಡಿದ್ದೀರಿ ಅನ್ನೋ ಮಾತುಗಳನ್ನು ಬೇರೆಯವರು ಹೇಳಬಹುದು ಮತ್ತು ಅವರು ಆ ಮಾತುಗಳ ಮೇಲೆ ನಂಬಿಕೆ ಇಟ್ಟುಕೊಳ್ಳಬಹುದು. ಅದನ್ನು ನಾವು ನಂಬಬಾರದು. ಅದನ್ನು ನಂಬಿದರೆ ನಮ್ಮತನ ಕಳೆದುಕೊಳ್ಳುತ್ತೇವೆ. ತುಂಬಾ ಅಲರ್ಟ್ ಆಗಿ ಅದೇ ಥರದ, ಅದಕ್ಕಿಂತ ದೊಡ್ಡ ಸಿನಿಮಾ ಮಾಡಲು ಹೊರಡುತ್ತೇವೆ. ದುಡ್ಡು ಬರುತ್ತದೆ, ಕೀರ್ತಿ ಬರುತ್ತದೆ. ಆದರೆ ನಮ್ಮತನ ಉಳಿಯುವುದಿಲ್ಲ. ನಾಲ್ಕೋ ಐದೋ ವರ್ಷ ಒಂದೇ ಯೋಜನೆಯಲ್ಲಿ, ಒಂದೇ ಯೋಚನೆಯಲ್ಲಿ ಇದ್ದಾಗ ಹೊಸತು ಹುಟ್ಟುವುದಿಲ್ಲ. ಅನುಭವ ಕಟ್ಟಿಕೊಡಲಾಗುವುದಿಲ್ಲ. ಸಿನಿಮಾಗಳಲ್ಲಿ ಸ್ಕೇಲ್‌ ಬೇರೆ, ಅನುಭವ ಬೇರೆ. ಸೆಟಪ್‌ ದೊಡ್ಡದಾಗುವುದು ಬೇರೆ, ಅನುಭವ ಕಟ್ಟಿಕೊಡುವುದು ಬೇರೆ. ಮಯೂರ ಸಿನಿಮಾದಲ್ಲಿ ಅಣ್ಣಾವ್ರು ಕನ್ನಡಿಗರ ಸ್ವಾಭಿಮಾನ ಕೆಣದಿರಿ ಎಂದು ಹೇಳುವ ದೃಶ್ಯವನ್ನು ನೆನಪಿಸಿದರೆ ಆ ದೃಶ್ಯ ತಕ್ಷಣ ಮನಸ್ಸಲ್ಲಿ ಸುಳಿಯುತ್ತದೆ. ಯಾಕೆಂದರೆ ಅದು ಕೊಟ್ಟ ಅನುಭವ ದೊಡ್ಡದು. ಆ ಅನುಭವವನ್ನು ದೊಡ್ಡ ಗಾತ್ರದ ಸೆಟ್‌ ಕೊಡುವುದಿಲ್ಲ. ಅಂಥಾ ಅನುಭವ ಕಟ್ಟಿಕೊಡಬೇಕಾದರೆ ನಮ್ಮತನ ಉ‍ಳಿದಿರಬೇಕು.

* ಯಾಕೆ ಹೀಗಾಗುತ್ತದೆ?
ಎಲ್ಲಕ್ಕೂ ಕಾರಣ ಅಭದ್ರತೆ. ಅವನು ಮಾಡಿದ್ದು ನಾವೂ ಮಾಡಬೇಕು ಅಂತ ಹೊರಟಾಗ ನಮ್ಮದು ಸೆಕೆಂಡ್ ಹ್ಯಾಂಡ್‌ ಥಾಟ್ ಆಗಿಬಿಡುತ್ತದೆ. ಅವನು ಮಾಡಿದ್ದೂ ನಾನೂ ಮಾಡಬೇಕು ಎಂಬ ಅಭದ್ರತೆಯನ್ನು ಮೀರುವ ಯತ್ನದಲ್ಲಿ ನಾವು ನಮ್ಮತನ ಬಲಿಕೊಡುವ ಸಾಧ್ಯತೆ ಬಹಳ ಇರುತ್ತದೆ. ಅದರಿಂದ ದೂರ ಉಳಿಯಬೇಕಾದರೆ ನಾನು ಯಾಕೆ ಇಲ್ಲಿಗೆ ಬಂದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಉದ್ದೇಶ ಏನು ಎಂಬುದನ್ನು ಅರಿವಿಗೆ ತಂದುಕೊಳ್ಳಬೇಕು. ಯಾಕೆಂದರೆ ಅಣ್ಣಾವ್ರು ಒಂದು ವರ್ಷದಲ್ಲಿ 14 ಸೂಪರ್‌ಹಿಟ್‌ ಸಿನಿಮಾಗಳನ್ನು ಕೊಟ್ಟವರು. ಅಂಥಾ ಯಶಸ್ಸಿನ ಮುಂದೆ ನಮ್ಮ ಯಶಸ್ಸು ಯಾವ ಲೆಕ್ಕ ಎಂಬುದು ಗೊತ್ತಿರಬೇಕು.

* ಇದೆಲ್ಲದರಿಂದ ಪಾರಾಗುವ ಬಗೆ ಹೇಗೆ?
ಸಾವು. ಅಲ್ಲಿಯವರೆಗೂ ಈ ಹೋರಾಟ ಇದ್ದಿದ್ದೇ. ಆದರೆ ಒಂದು ನೆನಪಿಟ್ಟುಕೊಳ್ಳಬೇಕು, ಎಲ್ಲಕ್ಕಿಂತ ದೊಡ್ಡದು ಇನ್ನೂ ಏನೋ ಇದೆ. ಹೊಸತು ಕಲಿಯುವುದು ಇನ್ನೂ ಬಾಕಿ ಇದೆ. ತಪ್ಪು ಮಾಡಿದರೂ ಪರವಾಗಿಲ್ಲ, ಹೊಸತು ಕಲಿಯುತ್ತಾ ಹೋಗಬೇಕು. ಅದೇ ಬದುಕು.

* ಯಶಸ್ಸನ್ನು ನಿರ್ವಹಿಸುವುದು ಎಷ್ಟು ಮುಖ್ಯ?
ನೀವು ಯಶಸ್ಸು ಗಳಿಸಿದಾಗ ಹೇಗೆ ವರ್ತಿಸುತ್ತೀರೋ ಅದೇ ರೀತಿ ನಿಮ್ಮ ಜೊತೆ ಇರುವವರೂ ವರ್ತಿಸುತ್ತಾರೆ. ನೀವು ಲೀಡರ್ ಆಗಿರುತ್ತೀರಿ. ಅವರು ಕೂಡ ಅದೇ ಥರ ಯೋಚನೆ ಮಾಡುತ್ತಿರುತ್ತಾರೆ. ಹಾಗಾಗಿ ಒಂದು ವರ್ತುಲದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಜಾಸ್ತಿ ಇರುತ್ತದೆ. ಹಾಗಾದಾಗ ಮತ್ತೆ ಎಕ್ಸ್‌ಪೆರಿಮೆಂಟ್‌ ಮಾಡುವ ಸಾಧ್ಯತೆ ಕ್ಷೀಣಿಸಬಹುದು. ಸಕ್ಸಸ್‌ ಅನ್ನು ಅಲ್ಲಲ್ಲೇ ಬಿಟ್ಟು ನಡೆಯಬೇಕು. ಅದರಿಂದ ದೊರೆಯುವ ಕಲಿಕೆ ಮಾತ್ರ ತೆಗೆದುಕೊಳ್ಳಬೇಕು. ಬದುಕಲ್ಲಿ ದುಡ್ಡೇ ಎಲ್ಲಾ ಅಲ್ಲ. ಹಾಗಾಗಿ ನನ್ನ ಫ್ಯಾನ್‌ ನಾನೇ ಆಗಬಾರದು. ನನ್ನ ಯಶಸ್ಸಿನ ಫ್ಯಾನ್‌ ನಾನಾಗಬಾರದು. ನಮ್ಮನ್ನು ನಾವು ಕಳೆದುಕೊಂಡರೆ ಬೇರೆ ಯಾವುದಕ್ಕೂ ಪ್ರಾಮುಖ್ಯತೆಯೇ ಇರುವುದಿಲ್ಲ. ಅದೇ ರೀತಿ ಸೋಲನ್ನೂ ಘನತೆಯಿಂದ ಸ್ವೀಕರಿಸಬೇಕು. ನಮ್ಮ ಟೋಬಿ ಸಿನಿಮಾ ಆರ್ಥಿಕವಾಗಿ ಸೋತಿತು. ಆಗ ಜನ ಮಾತನಾಡಿದ ರೀತಿಯನ್ನು ಮನಸ್ಸಿಗೆ ತೆಗೆದುಕೊಂಡರೆ ವಾದ ವಿವಾದ ಆಗುತ್ತದೆ. ಮಾತಿನ ವಾಗ್ವಾದ ನಡೆಯುತ್ತದೆ. ನಾವು ಏನೇ ಇದ್ದರೂ ಮಾತಿನ ಮೂಲಕವೇ ಪ್ರೂವ್ ಮಾಡಬೇಕಲ್ಲವೇ. ಆಗ ಘರ್ಷಣೆ ಆಗುತ್ತದೆ. ಹಾಗಾಗಿ ಸೋಲು ಕೂಡ ಪಾಠವೇ. ಆದರೆ ನಮ್ಮ ನಾವೇ ಅನುಮಾನ ಪಡಬಾರದು. ನಂಬಬೇಕು. ಎಲ್ಲವನ್ನೂ ಸ್ಥಿತಪ್ರಜ್ಞರಾಗಿ ಸ್ವೀಕರಿಸಬೇಕು. ಹಾಗಾಗಿ ಗೆದ್ದಾಗ ನನ್ನ ಕಾಲರ್ ಮೇಲೆ ಹೋಗಲ್ಲ, ಸೋತಾಗ ಕುಗ್ಗಲ್ಲ.

* ಈ ಪ್ರಕ್ರಿಯೆಯಿಂದ ಕಲಿಯುವುದು ಏನು?
ಪ್ರಾಸೆಸ್‌ ಅನ್ನು ಎಂಜಾಯ್ ಮಾಡುವುದು. ಈ ಸಿನಿಮಾ ಮಾಡುವ ಪ್ರಾಸೆಸ್‌ ಕೊಡುವ ಖುಷಿಗಾಗಿಯೇ ನಾವು ಸಿನಿಮಾ ಮಾಡುತ್ತೇವೆಯೇ ಹೊರತು ಅದರಿಂದ ಸಿಗುವ ರಿವಾರ್ಡ್‌ಗಾಗಿ ಅಲ್ಲ. ನಮ್ಮ ತಂಡ ಈಗಲೂ ಶೂಟಿಂಗಿಗೆ ಹೋಗೋಕೆ ಆಸೆ ಪಡುತ್ತಿದೆ.

* ಅವಮಾನಗಳನ್ನು ಎದುರಿಸುವ ರೀತಿ ಹೇಗಿರುತ್ತದೆ?
ಅವಮಾನಗಳು ತಪ್ಪಲ್ಲ. ಅವಮಾನ ಪಾರ್ಟ್‌ ಆಫ್ ಅ‍ವರ್ ಬಿಸಿನೆಸ್. ಹಾಗಾಗಿ ಅವಮಾನವನ್ನು ಎದೆಗೆ ಹಾಕಿಕೊಳ್ಳಬಾರದು. ನಮಗೆ ಮರ್ಯಾದೆ ಸಿಗುತ್ತದೆ ಎಂದರೆ ಅದು ನಮ್ಮ ಕೆಲಸಕ್ಕೆ ಸಿಗುವ ಮರ್ಯಾದೆ. ಕೆಲಸದ ಮುಂದೆ ನಾವು ದೊಡ್ಡವರಲ್ಲ. ಅವಮಾನ ಆಗುತ್ತದೆ. ಆ ಹೊತ್ತಲ್ಲಿ ಬೇಸರ ಆಗಬಹುದು. ಸಮಯ ಬಂದಾಗ ಅವನನ್ನು ನೋಡಿಕೊಳ್ಳುತ್ತೇನೆ ಎಂದುಕೊಳ್ಳಬಹುದು. ಆದರೆ ಕೆಲವೇ ಕ್ಷಣದಲ್ಲಿ ಅದು ಸಣ್ಣತನ ಎಂಬ ಭಾವ ಬರುತ್ತದೆ. ಎದುರಿನಲ್ಲಿದ್ದವ ಯಾವ ಪರಿಸ್ಥಿತಿಯಲ್ಲಿ ಹಾಗೆ ವರ್ತಿಸಿದನೋ ಯಾರಿಗೆ ಗೊತ್ತು. ಇತ್ತೀಚೆಗೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ನನ್ನ ಗೆಳೆಯ ಹೇಳಿದ, ಇನ್ನೊಬ್ಬರ 10 ಬ್ಯಾನರ್‌ ಹಾಕಿದ್ದಾರೆ, ನಿಮ್ಮದು ಎರಡೇ ಬ್ಯಾನರ್‌ ಹಾಕಿದ್ದಾರೆ ಅಂತ. ನೀನು ಲೆಕ್ಕ ಹಾಕಿದ್ದು ಯಾಕೆ ಎಂದು ನಾನು ಕೇಳಿದೆ. ಬ್ಯಾನರ್‌ ಹಾಕುವವರಿಗೆ ಅದು ಅನಿವಾರ್ಯವಾಗಿರಬಹುದು. ಅಥವಾ ಎರಡೇ ಬ್ಯಾನರ್‌ ಹಾಕಿದರೂ ರಾಜ್‌ ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರಿಗೆ ಅನ್ನಿಸಿರಬಹುದು. ಎಲ್ಲವನ್ನೂ ಅಲ್ಲಲ್ಲಿ ಬಿಟ್ಟುಹೋಗುವುದು ಶ್ರೇಯಸ್ಕರ. ಜನ ಮಂಗಳೂರಿನ ಯಾವುದೋ ಒಂದು ಮೂಲೆಯಲ್ಲಿ ಇದ್ಗವನನ್ನು ಕರೆದುಕೊಂಡು ಬಂದು ಸಿನಿಮಾ ಮಾಡುವ ಅವಕಾಶ ಕೊಟ್ಟಿದ್ದಾರೆ, ಪ್ರೀತಿ ತೋರಿಸುತ್ದಿದ್ದಾರೆ ಎಂದರೆ ಅದಕ್ಕಿಂತ ಹೆಚ್ಚೇನು ಬೇಕು.

* ಕಾಲ ಬದಲಾದಂತೆ ನಿಮ್ಮ ಪಾತ್ರಗಳೂ ಬದಲಾಗುತ್ತಾ ಬಂದವು, ಹೇಗೆ?
ನಾನು ಮೂಲತಃ ಬರಹಗಾರನಾಗಿದ್ದೆ. ನಿರ್ದೇಶಕನಾಗಬೇಕು ಎಂದುಕೊಂಡು. ನಟಿಸಬೇಕು ಅಂತ ಆಸೆ ಇರಲಿಲ್ಲ. ಬೇರೆಯವರು ಸಿಗದಿದ್ದಾಗ ನಾನೇ ನಟಿಸಿದೆ. ಸಿನಿಮಾ ನಿರ್ಮಾಣ ಸಮಸ್ಯೆಯಾದಾಗ ನಾವೇ ನಿರ್ಮಾಣ ಸಂಸ್ಥೆ ಕಟ್ಟಿಕೊಳ್ಳಬೇಕಾಗಿ ಬಂತು. ಮೊದಲೆಲ್ಲಾ ದುಡ್ಡು ಅರ್ಥವಾಗುವುದಿಲ್ಲ ಅಂದುಕೊಳ್ಳುತ್ತಿದ್ದೆ. ಆದರೆ ಬದುಕು ದುಡ್ಡಿನ ಕುರಿತು ಕಲಿ ಎಂದಿತು. ಕಲಿಯಲ್ಲ ಅಂತ ಹೇಳುವುದಕ್ಕೆ ನಾನ್ಯಾರು. ಆ ಪ್ರೊಸೆಸ್‌ ಅನ್ನೂ ಕಲಿಯಬೇಕಾಗಿ ಬಂತು. ಗರುಡಗಮನ ವೃಷಭವಾಹನ ಮಾಡುವಾಗಲೂ ನಾನೂ ನಿರ್ಮಾಪಕನಾಗಿದ್ದೆ. ಆದರೆ ಹೆಸರು ಹಾಕಲು ನಾಚಿಕೆಯಾಯಿತು. ಅಭದ್ರತೆ ಇತ್ತು ಅನ್ನಿಸುತ್ತದೆ. ಈಗ ಹಾಕುತ್ತೇನೆ. ಯಾಕೆಂದರೆ ಹೆಸರು ಹಾಕಿದರೂ ಹಾಕದಿದ್ದರೂ ನನ್ನಲ್ಲೇನೂ ಬದಲಾವಣೆ ಆಗಲ್ಲ. ಬದುಕು ಅಂದರೆ ಕಲಿಯುವುದು.

* ಸಂಬಂಧಗಳನ್ನು ಹೇಗೆ ನಿಭಾಯಿಸುತ್ತೀರಿ?
ನಮ್ಮ ತಂಡದಲ್ಲಿ ಯಾರಿಗೂ ನೋವಾಗದೇ ಇರುವ ಹಾಗೆ ನೋಡಿಕೊಳ್ಳುತ್ತೇನೆ. ನಮ್ಮ ತಂಡದ ಎಲ್ಲರೂ ಅನುಭವ ಶ್ರೀಮಂತರಾಗಬೇಕು ಅನ್ನುವುದು ನಮ್ಮ ಆಸೆ. ಎಲ್ಲರೂ ಸಂತೋಷವಾಗಿರಬೇಕು. ಆಗಲೇ ನೆಮ್ಮದಿ.

* ಹೊಸ ಸಿನಿಮಾ ಬರಹಗಾರನಿಗೆ ನೀವು ಕೊಡಬಹುದಾದ ಸಲಹೆಗಳು..
ಸಿನಿಮಾದ ಭಕ್ತನಾಗಿರಬೇಕು. ಬದುಕನ್ನು ಗಾಢವಾಗಿ ಅನುಭವಿಸಬೇಕು. ಎಲ್ಲವನ್ನೂ ನೋಡುವ, ಅನುಭವಿಸುವ ಪ್ರಜ್ಞೆ ಹೊಂದಿರಬೇಕು. ಓದಬೇಕು. ಎಲ್ಲವನ್ನೂ ಓದಬೇಕು. ಎಲ್ಲರನ್ನೂ ಓದಬೇಕು. ಆಮೇಲೆ ಸಿನಿಮಾ ನೋಡಬೇಕು. ಅದರಿಂದಲೇ ಕಲಿಯುತ್ತಾ ಹೋಗಬೇಕು. ಆಗಲೇ ಹೊಸತು ಹುಟ್ಟುವುದು.

* ಹೊಸಬರಿಗೆ ಹೊಸ ದಾರಿಗಳಾವುದು?
ಹೊಸಬರಿಗೆ ಅವಕಾಶ ಕೊಡುವುದು ಅನ್ನುವುದಕ್ಕಿಂತ ಹೊಸ ಬರಹಗಾರರು, ನಿರ್ದೇಶಕರ ಅಗತ್ಯ ಚಿತ್ರರಂಗಕ್ಕಿದೆ. ನನಗೆ ಕೆಆರ್‌ಜಿ, ಕೆವಿಎನ್‌ ಮುಂತಾದ ಸಂಸ್ಥೆಗಳು ಹೊಸಬರಿದ್ದಾರಾ ಅಂತ ಕೇಳುತ್ತಾರೆ. ಹೊಂಬಾಳೆ ಫಿಲಂಸ್‌ ಕೂಡ ಅವಕಾಶ ಕೊಡುತ್ತದೆ. ನಮ್ಮ ತಂಡವೂ ಕೊಡುತ್ತದೆ. ಹೊಸಬರು ಏನು ಮಾಡಬೇಕು ಎಂದರೆ ಅವರ ಊರಿನ ಯಾವುದೋ ಒಂದು ಗಟ್ಟಿ ಕತೆಯನ್ನು ಆರು ತಿಂಗಳ ಕಾಲ ಶ್ರಮಪಟ್ಟು ಕೇವಲ 3 ನಿಮಿಷ ಚಿತ್ರೀಕರಣ ಮಾಡಿ ತೋರಿಸಿದರೆ ಸಾಕು, ಅವರಿಗೆ ದಾರಿಗಳು ತೆರೆದುಕೊಳ್ಳುತ್ತವೆ. ಕೆಎಸ್‌ ಕಾರ್ತಿಕ್‌ಕುಮಾರ್‌ ನಿರ್ದೇಶನ ಮಾಡಿರುವ ಛಾಯೆ ಎಂಬ ಶಾರ್ಟ್‌ಫಿಲ್ಮ್‌ ಅನ್ನು ನಾನೇ ತರಿಸಿಕೊಂಡು ನಮ್ಮ ಲೈಟರ್‌ ಬುದ್ಧ ಚಾನಲ್‌ನಲ್ಲಿ ಬಳಸಿಕೊಂಡೆ. ಅದನ್ನು ನೋಡಿ ಅವರಿಗೆ ಈಗ ಸಿನಿಮಾ ಅವಕಾಶ ಬಂದಿದೆ. ಈಗ ಅನಂತ ಸಾಧ್ಯತೆಗಳು ನಮ್ಮೆದುರಿಗಿವೆ. ಬೇಕಾಗಿರುವುದು ಪ್ರಾಮಾಣಿಕ ಪ್ರಯತ್ನ.

* ಬರವಣಿಗೆ ಸಂದರ್ಭದಲ್ಲಿ ಎಷ್ಟು ಕಾನ್ಶಿಯಸ್‌ ಆಗಿರುತ್ತೀರಿ?
ನನ್ನ ಕತೆ ಏನು ಕೇಳುತ್ತದೋ ಅದನ್ನು ಮಾತ್ರ ಕೊಡುತ್ತೇನೆ. ಕತೆಗೆ ಅಗತ್ಯವಿಲ್ಲದಿದ್ದರೆ ನಮ್ಮೂರಿನ ಪರಿಸರವನ್ನು ಎಳೆದುತರುವುದಿಲ್ಲ. ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಲ್ಲಿ ಕರಾವಳಿತನ ಇಲ್ಲ. ಆದರೆ ಅದರಲ್ಲಿ ನಾನು ಬದುಕಿನಲ್ಲಿ ನೋಡಿದ ಅಂಶಗಳು ಬಂದಿವೆ. ನನ್ನ ಅಮ್ಮನ ಜೊತೆಗಿನ ಸಂಬಂಧ, ನಾನು ಕಲಿತ ಬಿಎಸ್‌ಡಬ್ಲ್ಯೂ ಎಲ್ಲವೂ ಬಂದಿದೆ. ಕತೆಗೆ ತಕ್ಕಂತೆ ಬದುಕಿನ ಅಂಶಗಳು ಸೇರಿಕೊಳ್ಳಬಹುದು. ಆದರೆ ಬರಹಗಾರ ಏನಿದ್ದರೂ ಕತೆಗೆ ನಿಷ್ಠವಾಗಿರಬೇಕು.

* ಆಚರಣೆ, ಸಂಪ್ರದಾಯಗಳನ್ನು ತೆರೆ ಮೇಲೆ ತರುವಾಗ ಎಷ್ಟು ತೆರೆದಿಡಬೇಕು, ಎಷ್ಟು ಬಿಚ್ಚಿಡಬಾರದು?
ಸಂಪ್ರದಾಯ, ಆಚರಣೆ ವಿಚಾರದಲ್ಲಿ ನೋಡಿದರೆ ಯಾವಾಗ ನಾವು ಮಾಡುವ ಕೆಲಸ ಪ್ರೇಕ್ಷಕನಿಗೆ ನೋವು ಕೊಡುತ್ತದೆ ಎಂದು ತಿಳಿಯುತ್ತದೋ ಅದನ್ನು ಮಾಡಬಾರದು. ಆಗ ನಾವು ಒಂದು ಹೆಜ್ಜೆ ಹಿಂದೆ ಹೋಗಬೇಕು. ಯಾವುದೇ ಕೃತಿ ಕೂಡ ಇನ್ನೊಬ್ಬರ ಬದುಕನ್ನು ಸುಂದರಗೊಳಿಸಬೇಕೇ ಹೊರತು ನೋಯಿಸಬಾರದು. ಬದುಕನ್ನು ಹಗುರಗೊಳಿಸಬೇಕು. ನನಗೆ ಯಾರೋ ಒಬ್ಬರು ಒಮ್ಮೆ ಕೇಳಿದರು, ದಪ್ಪ ಇರೋ ಹುಡುಗಿಯನ್ನು ದಪ್ಪ ಅಂತ ಯಾಕೆ ಹೇಳಬಾರದು, ಅದು ಸರಿ ತಾನೇ ಅಂತ. ದಪ್ಪ ಇರುವ ಹುಡುಗಿಯನ್ನು ದಪ್ಪ ಅಂತ ಹೇಳಬಹುದು, ಆದರೆ ಹಾಗೆ ಹೇಳುವುದು ಸರಿ ಅಂತ ಎಲ್ಲರಿಗೂ ಅನ್ನಿಸಬಾರದಲ್ಲವೇ. ಹೊಳೆಸುವುದು ನಮ್ಮ ಜವಾಬ್ದಾರಿ, ಹಳಿಯುವುದಲ್ಲ.

* ಹೊಸ ಕಾಲಕ್ಕೆ ತಕ್ಕಂತೆ ಕಲಿಯುವ ಪ್ರಕ್ರಿಯೆ ಹೇಗಿರುತ್ತದೆ?
ಓದುತ್ತೇನೆ. ಎಲ್ಲಾ ಸಿನಿಮಾಗಳನ್ನು ನೋಡುತ್ತೇನೆ. ಹೇಗೆ ಚಿತ್ರೀಕರಿಸಿದ್ದಾರೆ ಎಂದು ಯೋಚಿಸುತ್ತೇನೆ. ಸಿನಿಮಾ ನೋಡುವುದರಲ್ಲಿಯೇ ಎಲ್ಲಾ ಕಲಿಕೆ ಇದೆ.

* ಹೊಸ ಓದು ಯಾವುದು?
ಹಾಂಜಿನ್ ಮರ್ಡರ್ಸ್‌ ಅಂತ ಒಂದು ಕಮರ್ಷಿಯಲ್‌ ಥ್ರಿಲ್ಲರ್‌ ಓದುತ್ತಿದ್ದೇನೆ. ಅದಕ್ಕಿಂತ ಮೊದಲು ವಿಲೇಜ್ ಆಫ್ 8 ಗ್ರೇವ್ಸ್‌ ಬುಕ್ ಓದಿದೆ. ಅದರ ಪ್ಲಾಟ್‌ಗಳನ್ನು ಅರಿಯುವುದಕ್ಕಾಗಿ ಈ ಪುಸ್ತಕಗಳನ್ನು ಓದಿದೆ. ನಮ್ಮ ಸಿನಿಮಾಗಳಲ್ಲಿ ಮಾಡಲು ಸಾಧ್ಯವಾಗದಂತಹ ಪ್ಲಾಟ್‌ಗಳನ್ನು ಅವರು ಹೇಗೆ ಬರೆಯುತ್ತಾರೆ ಎಂಬುದನ್ನು ತಿಳಿಯಲು ಈ ಕೃತಿಗಳನ್ನು ಓದಿದೆ. ನಾನು ಪ್ರತೀಸಲ ಹೇಳುವ ಹಾಗೆ, ಕಲಿಯುವುದು ತುಂಬಾ ಇದೆ.

* ಮಲಯಾಳಂ ಚಿತ್ರರಂಗ ನಮಗೆ ಹತ್ತಿರವಾಗಿದೆ, ಹೇಗಿದೆ ಆ ಜಗತ್ತು?

ಸು ಫ್ರಂ ಸೋ ಸಿನಿಮಾವನ್ನು ಜನ ಗೆಲ್ಲಿಸಿರುವುದರಿಂದ ಸ್ವಲ್ಪ ದಿನ ಇಲ್ಲಿಯೇ ಕನ್ನಡ ಸಿನಿಮಾ ಮಾಡೋಣ ಅಂತ ಇದ್ದೇನೆ. ಹಾಗಾಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಅಲ್ಲಿಗೆ ಹೋಗಿದ್ದು ಒಳ್ಳೆಯದೇ ಆಗಿದೆ. ನಾವೀಗ ನಮ್ಮ ಸಿನಿಮಾವನ್ನು ಸುಲಭವಾಗಿ ಮಲಯಾಳಂನಲ್ಲಿ ರಿಲೀಸ್ ಮಾಡಬಹುದು. ನಮ್ಮ ದಿಗಂತ ವಿಸ್ತಾರವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು