ಬೆಂಗಳೂರಲ್ಲಿ ಶೀಘ್ರವೇ ಗ್ರೀನ್ ಎಸ್‌ಎಂ ಸೇವೆ, ಕೆಂಗೇರಿ ಬಳಿ ಸದ್ದಿಲ್ಲದೆ ಸಾಲುಕಟ್ಟಿ ನಿಂತ ಕಾರು, ಕ್ಯಾಬ್ ಚಾಲಕರಲ್ಲಿ ಆತಂಕ!

Published : Nov 05, 2026, 04:02 PM IST
Green SM

ಸಾರಾಂಶ

ವಿಯೆಟ್ನಾಂ ಮೂಲದ ಗ್ರೀನ್ ಎಸ್‌ಎಂ ಎಲೆಕ್ಟ್ರಿಕ್ ಕ್ಯಾಬ್ ಸೇವೆ ಬೆಂಗಳೂರಿಗೂ ವಿಸ್ತರಣೆಯಾಗುವ ಸಾಧ್ಯತೆ ಇದ್ದು ಕೆಂಗೇರಿ ಮೆಟ್ರೋ ಸ್ಟೇಷನ್ ಬಳಿ ತಂದು ನಿಲ್ಲಿಸಲಾಗಿದೆ. ಪ್ರತಿ ಕಿ.ಮೀ.ಗೆ ಸುಮಾರು ₹8 ದರದ ವರದಿಗಳ ನಡುವೆ, ಹೊಸ ಸೇವೆಯಿಂದ ಓಲಾ, ಉಬರ್ ಹಾಗೂ ಸ್ಥಳೀಯ ಕ್ಯಾಬ್ ಮತ್ತು ಆಟೋ ಚಾಲಕರಿಗೆ ಪೈಪೋಟಿ ಇರಲಿದೆ.

ಬೆಂಗಳೂರು: ಭಾರತದ ಪ್ರಮುಖ ನಗರಗಳಲ್ಲಿ ಜಾರಿಯಲ್ಲಿರುವ ಆ್ಯಪ್ ಆಧಾರಿತ ಸಾರಿಗೆ ವ್ಯವಸ್ಥೆಗೆ ಇದೀಗ ವಿಯೆಟ್ನಾಂನ ಬೃಹತ್ ಕೈಗಾರಿಕಾ ಸಮೂಹ 'ವಿಂಗ್‌ಗ್ರೂಪ್' (VinGroup) ತನ್ನ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯಾದ 'ಗ್ರೀನ್ ಎಸ್‌ಎಂ' ಮೂಲಕ ಬೆಂಗಳೂರಿಗೂ ಪ್ರವೇಶ ಪಡೆಯಲು ಸನ್ನದ್ಧವಾಗಿದೆ. ದೆಹಲಿ, ಹೈದರಾಬಾದ್ ಹಾಗೂ ಪಂಜಾಬ್‌ಗಳಲ್ಲಿ ಈಗಾಗಲೇ ಲಭ್ಯವಿರುವ ಈ ಎಲೆಕ್ಟ್ರಿಕ್ ಕ್ಯಾಬ್ ಸೇವೆ, ನವೆಂಬರ್ ಅಂತ್ಯದ ವೇಳೆಗೆ ಬೆಂಗಳೂರಿನಲ್ಲೂ ಅಧಿಕೃತವಾಗಿ ಆರಂಭವಾಗಲಿದೆ ಎಂದು ವರದಿಯಾಗಿದೆ. ಈ ಯೋಜನೆಯ ಭಾಗವಾಗಿ ಸಾವಿರಾರು ಅತ್ಯಾಧುನಿಕ ಎಲೆಕ್ಟ್ರಿಕ್ ಕಾರುಗಳು ಈಗಾಗಲೇ ಬೆಂಗಳೂರಿನ ಕೆಂಗೇರಿ ಮೆಟ್ರೋ ನಿಲ್ದಾಣದ ಬಳಿ ಇರುವ ಬೃಹತ್ ನಿಲ್ದಾಣಕ್ಕೆ ಬಂದು ತಲುಪಿವೆ.

ಬೈಕ್ ಟ್ಯಾಕ್ಸಿಗಿಂತಲೂ ಅಗ್ಗ: ಕಿಲೋಮೀಟರ್‌ಗೆ ಕೇವಲ ₹8 ದರ!

ಆ್ಯಪ್ ಆಧಾರಿತ ಸೇವೆ ನೀಡುವ ಓಲಾ ಮತ್ತು ಉಬರ್ ನಂತಹ ಕ್ಯಾಬ್ ಸೇವೆಗಳಿಗೆ ಟಕ್ಕರ್ ಕೊಡಲು ಗ್ರೀನ್ ಎಸ್‌ಎಂ ಕ್ರಾಂತಿಕಾರಿ ಪ್ರಯಾಣ ದರವನ್ನು ನಿಗದಿಪಡಿಸಿದೆ. ಗ್ರೀನ್ ಎಸ್‌ಎಂ ಸೇವೆಯ ಬಗ್ಗೆ ಚರ್ಚೆಯಾಗುತ್ತಿರುವ ಪ್ರಮುಖ ವಿಚಾರ ಅದರ ಪ್ರಯಾಣ ದರ. ವರದಿಗಳ ಪ್ರಕಾರ, ಸಾಮಾನ್ಯವಾಗಿ ನಗರಗಳಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಕಿಲೋಮೀಟರ್‌ಗೆ ಸರಾಸರಿ ₹10 ದರ ಇರುವಾಗ, ಅತ್ಯಾಧುನಿಕ ಎಲೆಕ್ಟ್ರಿಕ್ ಕಾರಿನಲ್ಲಿ ಕಿ.ಮೀ.ಗೆ ₹8 ದರದಲ್ಲಿ ಪ್ರಯಾಣಿಸಲು ಅವಕಾಶ ನೀಡಿರುವುದು ಪ್ರಯಾಣಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಓಲಾ, ಉಬರ್‌ಗಳಿಗೆ ಹೋಲಿಸಿದರೆ ಸಂಪೂರ್ಣ ಕಂಪನಿ ನಿಯಂತ್ರಿತ ಹೈಟೆಕ್ ಎಲೆಕ್ಟ್ರಿಕ್ ವಾಹನಗಳಾಗಿರುವುದರಿಂದ ಪ್ರಯಾಣಿಕರಿಗೆ ಸುಸಜ್ಜಿತ ಹಾಗೂ ಪ್ರೀಮಿಯಂ ಅನುಭವ ಸಿಗಲಿದೆ.

ಗ್ರೀನ್ ಎಸ್‌ಎಂನ ಕಾರ್ಯಾಚರಣಾ ಮಾದರಿ ಸಾಂಪ್ರದಾಯಿಕ ಕ್ಯಾಬ್ ಅಗ್ರಿಗೇಟರ್‌ಗಳಿಗಿಂತ ಭಿನ್ನವಾಗಿದೆ. ಓಲಾ-ಉಬರ್‌ಗಳಂತೆ ಚಾಲಕರ ಸ್ವಂತ ವಾಹನಗಳನ್ನು ನೆಚ್ಚಿಕೊಳ್ಳದೆ, ಜಿಎಸ್‌ಎಂ ಕಂಪನಿಯೇ ಸಂಪೂರ್ಣ ವಾಹನಗಳು, ಚಾರ್ಜಿಂಗ್ ನೆಟ್‌ವರ್ಕ್ ಮತ್ತು ನಿರ್ವಹಣಾ ವೆಚ್ಚವನ್ನು ನೋಡಿಕೊಳ್ಳುವ 'ಸ್ವಂತ ಫ್ಲೀಟ್' ಮಾದರಿಯನ್ನು ಬಳಸುತ್ತಿದೆ.

ಈ ವ್ಯವಸ್ಥೆಯಲ್ಲಿ ವಾಹನಗಳ ನಿರ್ವಹಣೆ, ಚಾಲಕರ ನೇಮಕಾತಿ, ಚಾರ್ಜಿಂಗ್ ಸೌಲಭ್ಯ ಮತ್ತು ಸೇವೆಯ ಗುಣಮಟ್ಟದ ಮೇಲೆ ಕಂಪನಿಯೇ ಹೆಚ್ಚಿನ ನಿಯಂತ್ರಣ ಹೊಂದಿರುತ್ತದೆ. ಇದರಿಂದ ಗ್ರಾಹಕರಿಗೆ ಒಂದೇ ರೀತಿಯ ಸೇವಾ ಅನುಭವ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ.

ಚಾಲಕರಲ್ಲಿ ಹೆಚ್ಚಿದ ಆತಂಕ

ಗ್ರೀನ್ ಎಸ್‌ಎಂ ಸೇವೆ ಬೆಂಗಳೂರಿಗೂ ವಿಸ್ತರಣೆಯಾಗಲಿದೆ ಎಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಕಡಿಮೆ ದರದಲ್ಲಿ ಸಾವಿರಾರು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುತ್ತಿರುವುದು ಸ್ಥಳೀಯ ಆಟೋ ಹಾಗೂ ಸ್ವಂತ ಕಾರು ಇಟ್ಟುಕೊಂಡು ಕ್ಯಾಬ್ ಓಡಿಸುವ ಚಾಲಕರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಈ ಹಿಂದೆ ತಮಿಳುನಾಡಿನ ಚೆನ್ನೈನಲ್ಲಿ ಗ್ರೀನ್ ಎಸ್‌ಎಂ ಸೇವೆಗೆ ಸ್ಥಳೀಯ ಸಾರಿಗೆ ಒಕ್ಕೂಟಗಳಿಂದ ತೀವ್ರ ವಿರೋಧ ವ್ಯಕ್ತವಾಗಿ, ತಡೆ ಉಂಟಾಗಿತ್ತು. ಇದೀಗ ಬೆಂಗಳೂರಿನಲ್ಲೂ ಈ ಸೇವೆ ಆರಂಭವಾಗುತ್ತಿರುವುದರಿಂದ, ಕ್ಯಾಬ್ ಚಾಲಕರೇ ದಯವಿಟ್ಟು ಕಾರ್ಪೊರೇಟ್ ಕಂಪನಿಗಳಿಗೆ ಗುಲಾಮರಾಗಬೇಡಿ ಎಂಬ ಸಂದೇಶಗಳು ಹಾಗೂ ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದು ಸ್ಥಳೀಯ ಆಟೋ ಮತ್ತು ಟ್ಯಾಕ್ಸಿ ಚಾಲಕರ ದೈನಂದಿನ ಆದಾಯದ ಮೇಲೆ ಹೊಡೆತ ನೀಡಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಕಡಿಮೆ ದರದಲ್ಲಿ ಕಂಪನಿಯೇ ನಿರ್ವಹಿಸುವ ವಾಹನಗಳು ಮಾರುಕಟ್ಟೆಗೆ ಬಂದರೆ, ಸ್ವಂತ ವಾಹನ ಹೊಂದಿರುವ ಚಾಲಕರು ಮತ್ತು ಅಗ್ರಿಗೇಟರ್ ವೇದಿಕೆಗಳ ಮೂಲಕ ಕೆಲಸ ಮಾಡುವವರಿಗೆ ಸ್ಪರ್ಧೆ ಹೆಚ್ಚಾಗಬಹುದು. ವಾಹನ ಖರೀದಿ, ಇಂಧನ, ನಿರ್ವಹಣೆ ಮತ್ತು ಇತರ ವೆಚ್ಚಗಳನ್ನು ಭರಿಸಿಕೊಂಡು ಜೀವನ ಸಾಗಿಸುವ ಚಾಲಕರಿಗೆ ಹೊಸ ಸ್ಪರ್ಧೆಯು ಆದಾಯದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆ ಎದುರಾಗಿದೆ.

ಏನಿದು ಗ್ರೀನ್ ಎಸ್‌ಎಂ?

ವೇಗವಾಗಿ ಬೆಳೆಯುತ್ತಿರುವ ಭಾರತದ ಆ್ಯಪ್ ಆಧಾರಿತ ಸಾರಿಗೆ ಮಾರುಕಟ್ಟೆಗೆ ವಿಯೆಟ್ನಾಂ ಮೂಲದ ಬೃಹತ್ ಕೈಗಾರಿಕಾ ಸಮೂಹ 'ವಿಂಗ್‌ಗ್ರೂಪ್' ಅಧಿಕೃತವಾಗಿ ಜೂನ್ 05, 2026 ರಂದು ನವದೆಹಲಿಯಲ್ಲಿ ತನ್ನ ಸೇವೆಗೆ ಅಧಿಕೃತ ಚಾಲನೆ ನೀಡಿತ್ತು. ಇವಿ ಮೊಬಿಲಿಟಿ ರಂಗಕ್ಕೆ ಎಂಟ್ರಿ ಕೊಟ್ಟು ಕಂಪನಿಯು ಪ್ರಥಮ ಹಂತದಲ್ಲಿ ನವದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ತನ್ನ ಎಲೆಕ್ಟ್ರಿಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

'ಗ್ರೀನ್ ಎಸ್‌ಎಂ' ಎಂಬುದು ವಿಯೆಟ್ನಾಂನ ವಿಂಗ್‌ಗ್ರೂಪ್ ಪರಿಸರ ವ್ಯವಸ್ಥೆಯ ಎಲೆಕ್ಟ್ರಿಕ್ ರೈಡ್-ಹೇಲಿಂಗ್ ಮತ್ತು ಮೊಬಿಲಿಟಿ ಅಂಗವಾಗಿದೆ. ಜಾಗತಿಕ ಇವಿ ವಾಹನ ತಯಾರಕ ಸಂಸ್ಥೆಯಾದ 'ವಿನ್‌ಫಾಸ್ಟ್' (VinFast) ಕೂಡ ಇದೇ ಸಮೂಹದ ಪ್ರಮುಖ ಭಾಗವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸೇವೆಯನ್ನು GSM ಅಥವಾ 'ಗ್ರೀನ್ ಅಂಡ್ ಸ್ಮಾರ್ಟ್ ಮೊಬಿಲಿಟಿ' ಎಂದು ಕರೆಯಲಾಗುತ್ತದೆ. ಓಲಾ ಮತ್ತು ಉಬರ್‌ಗಳಂತಹ ಸಾಂಪ್ರದಾಯಿಕ ಆ್ಯಪ್ ಆಧಾರಿತ ಪ್ಲಾಟ್‌ಫಾರ್ಮ್‌ಗಳು ಚಾಲಕರ ಸ್ವಂತ ವಾಹನಗಳನ್ನು ನೆಚ್ಚಿಕೊಂಡಿದ್ದರೆ, ಗ್ರೀನ್ ಎಸ್‌ಎಂ ಸಂಪೂರ್ಣವಾಗಿ ವಿಭಿನ್ನವಾದ 'ಕಂಪನಿ ನಿಯಂತ್ರಿತ ಹಾಗೂ ಫ್ಲೀಟ್-ಮಾಲೀಕತ್ವದ ಮಾದರಿ'ಯನ್ನು ಅನುಸರಿಸುತ್ತದೆ.

PREV
Read more Articles on
click me!

Recommended Stories

ದೀಪಾವಳಿ ಆಫರ್, ಮಾರುತಿ ಸುಜುಕಿ ಆಯ್ದ ಕಾರುಗಳಿಗೆ 1.50 ಲಕ್ಷ ರೂಪಾಯಿ ಡಿಸ್ಕೌಂಟ್
ಭಾರತದಲ್ಲೇ ತಯಾರಾಗಲಿದೆ ಹೋಂಡಾದ ಮೊದಲ ಇವಿ ಕಾರು: 'ಹೋಂಡಾ ಆಲ್ಫಾ' ಹೆಸರು ಅಧಿಕೃತ ಘೋಷಣೆ