ಭಾರತದಲ್ಲೇ ತಯಾರಾಗಲಿದೆ ಹೋಂಡಾದ ಮೊದಲ ಇವಿ ಕಾರು: 'ಹೋಂಡಾ ಆಲ್ಫಾ' ಹೆಸರು ಅಧಿಕೃತ ಘೋಷಣೆ

Published : Nov 03, 2026, 06:37 PM IST
Honda Alpha Electric SUV

ಸಾರಾಂಶ

ಹೋಂಡಾ ಕಾರ್ಸ್ ಇಂಡಿಯಾ ತನ್ನ ಮೊದಲ ಮೇಡ್-ಇನ್-ಇಂಡಿಯಾ ಎಲೆಕ್ಟ್ರಿಕ್ ಎಸ್‌ಯುವಿಗೆ 'ಹೋಂಡಾ ಆಲ್ಫಾ' ಎಂದು ಹೆಸರಿಟ್ಟಿದೆ. ಹೊಸ 'H' ಲೋಗೋ ಹೊಂದಿರುವ ಈ ಕಾರು 2026 ರ ಡಿಸೆಂಬರ್ 2 ರಂದು ಜಾಗತಿಕವಾಗಿ ಅನಾವರಣಗೊಳ್ಳಲಿದೆ.

ಮುಂಬೈ (ನ.3): ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಕ್ರಾಂತಿ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಜಪಾನ್‌ನ ದೈತ್ಯ ವಾಹನ ತಯಾರಿಕಾ ಸಂಸ್ಥೆ 'ಹೋಂಡಾ ಕಾರ್ಸ್ ಇಂಡಿಯಾ' (Honda Cars India) ತನ್ನ ಮೊದಲ ಮೇಡ್‌-ಇನ್‌-ಇಂಡಿಯಾ ಎಲೆಕ್ಟ್ರಿಕ್ ಎಸ್‌ಯುವಿಯ ಅಧಿಕೃತ ಹೆಸರನ್ನು ಘೋಷಿಸಿದೆ. ತೀವ್ರ ಕುತೂಹಲ ಮೂಡಿಸಿದ್ದ ಈ ಇವಿ ಕಾರಿಗೆ 'ಹೋಂಡಾ ಆಲ್ಫಾ' (Honda ALPHA) ಎಂದು ನಾಮಕರಣ ಮಾಡಲಾಗಿದ್ದು, ಪ್ರಥಮ ಅಧಿಕೃತ ಟೀಸರ್ ಬಿಡುಗಡೆಯಾಗಿದೆ!

ಈ ನೂತನ ಎಲೆಕ್ಟ್ರಿಕ್ ಎಸ್‌ಯುವಿ 2026 ರ ಡಿಸೆಂಬರ್ 2 ರಂದು ಭಾರತದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಥಮ ಬಾರಿಗೆ (Global Debut) ಅಧಿಕೃತವಾಗಿ ಅನಾವರಣಗೊಳ್ಳಲಿದೆ. 2025 ರ 'ಜಪಾನ್ ಮೊಬಿಲಿಟಿ ಶೋ'ನಲ್ಲಿ (Japan Mobility Show 2025) ಪ್ರದರ್ಶಿಸಲಾಗಿದ್ದ '0 ಆಲ್ಫಾ' (0 Alpha) ಕಾನ್ಸೆಪ್ಟ್ ಪ್ರೋಟೋಟೈಪ್ ಮಾದರಿಯನ್ನೇ ಆಧರಿಸಿ ಈ ಕಾರನ್ನು ಸಿದ್ಧಪಡಿಸಲಾಗಿದೆ. ಇತರ ಜಾಗತಿಕ ಮಾರುಕಟ್ಟೆಗಳಿಗಿಂತ ಮುಂಚಿತವಾಗಿ ಈ ಎಸ್‌ಯುವಿ ಭಾರತದ ರಸ್ತೆಗಿಳಿಯಲಿದ್ದು, ಭಾರತವನ್ನೇ ತನ್ನ ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ (Global Production Base) ಮಾಡಲು ಹೋಂಡಾ ಸಂಸ್ಥೆ ನಿರ್ಧರಿಸಿದೆ.

ಹೊಸ 'H' ಮಾರ್ಕ್ ಹೊಂದಲಿರುವ ಭಾರತದ ಪ್ರಥಮ ಕಾರು

ಹೆಸರು ಪ್ರಕಟಣೆಯ ಜೊತೆಗೆ, ಹೋಂಡಾ ಕಂಪನಿಯು ಹೊಚ್ಚಹೊಸದಾಗಿ ಮರುವಿನ್ಯಾಸಗೊಳಿಸಲಾದ 'H' ಮಾರ್ಕ್ (Redesigned Emblem) ಲೋಗೋವನ್ನು ಭಾರತದಲ್ಲಿ ಪ್ರಥಮ ಬಾರಿಗೆ ಪರಿಚಯಿಸಿದೆ. 1963 ರಲ್ಲಿ ಪ್ರಥಮ ಬಾರಿಗೆ ಅಳವಡಿಸಿಕೊಳ್ಳಲಾಗಿದ್ದ ಹೋಂಡಾದ 'H' ಲೋಗೋ ದಶಕಗಳ ಅವಧಿಯಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಕಂಪನಿಯ ಪರಿವರ್ತನೆ ಹಾಗೂ ಹೊಸ ಸವಾಲುಗಳನ್ನು ಸ್ವೀಕರಿಸುವ ಬದ್ಧತೆಯನ್ನು ಬಿಂಬಿಸುವ ಈ ನೂತನ 'H' ಲೋಗೋವನ್ನು ಹೊಂದಲಿರುವ ಭಾರತದ ಮೊದಲ ಹೋಂಡಾ ಕಾರು ಎಂಬ ಹೆಗ್ಗಳಿಕೆಗೆ 'ಹೋಂಡಾ ಆಲ್ಫಾ' ಪಾತ್ರವಾಗಲಿದೆ.

'ಆಲ್ಫಾ' ಹೆಸರಿನ ಅರ್ಥ ಹಾಗೂ ಭಾರತದಲ್ಲೇ ತೀವ್ರ ಟೆಸ್ಟಿಂಗ್

ಗ್ರೀಕ್ ವರ್ಣಮಾಲೆಯ ಮೊದಲ ಅಕ್ಷರವಾದ 'ಆಲ್ಫಾ'ದಿಂದ ಈ ಹೆಸರು ಪ್ರೇರಿತವಾಗಿದ್ದು, ಗ್ರಾಹಕರ ಜೀವನದಲ್ಲಿ ಹೊಸ ಆರಂಭದ ಸಂಕೇತವಾಗಿ ಈ ಹೆಸರಿಡಲಾಗಿದೆ ಎಂದು ಕಂಪನಿ ತಿಳಿಸಿದೆ. ಹೋಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ಹಾಗೂ ಸಿಇಒ ತೋಷಿಯುಕಿ ಯಾನಾಗಿಸಾವಾ (Toshiyuki Yanagisawa) ಮಾತನಾಡಿ, "ಹೋಂಡಾ ಆಲ್ಫಾ ಕಾರು ಭಾರತೀಯ ಗ್ರಾಹಕರಿಗೆ ಅತ್ಯಾಧುನಿಕ ಎಲೆಕ್ಟ್ರಿಕ್ ಮೊಬಿಲಿಟಿ, ಚಾಲನಾ ಸುಖ ಹಾಗೂ ಗುಣಮಟ್ಟವನ್ನು ನೀಡುವ ನಮ್ಮ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಈ ಕಾರಿಗೆ ಭಾರತವೇ ಜಾಗತಿಕ ಉತ್ಪಾದನಾ ಕೇಂದ್ರವಾಗಲಿದೆ" ಎಂದಿದ್ದಾರೆ.

2026 ರ ಮಾರ್ಚ್‌ನಿಂದಲೇ ರಾಜಸ್ಥಾನದ ತಪುಕರಾದಲ್ಲಿರುವ (Tapukara) ಘಟಕದಿಂದ ಹೋಂಡಾ ಸಂಸ್ಥೆಯು ಈ ಕಾರಿನ ಪ್ಯಾನ್-ಇಂಡಿಯಾ ರಸ್ತೆ ಪರೀಕ್ಷೆಯನ್ನು ನಡೆಸುತ್ತಿದೆ. ಭಾರತದ ಹೆದ್ದಾರಿಗಳು, ನಗರದ ದಟ್ಟಣೆ, ಕಠಿಣ ರಸ್ತೆಗಳು ಹಾಗೂ ವೈವಿಧ್ಯಮಯ ಹವಾಮಾನಗಳಲ್ಲಿ ಕಾರಿನ ಬ್ಯಾಟರಿ ಹಾಗೂ ಚಾರ್ಜಿಂಗ್ ವ್ಯವಸ್ಥೆಯನ್ನು ತೀವ್ರವಾಗಿ ಪರೀಕ್ಷಿಸಲಾಗಿದೆ.

ನಿರೀಕ್ಷಿತ ಫೀಚರ್ಸ್‌ಗಳು

ಪರೀಕ್ಷಾರ್ಥ ಚಾಲನೆಯ ವೇಳೆ ಕಂಡುಬಂದಂತೆ, ಕಾರಿನ ಒಳಾಂಗಣದಲ್ಲಿ (Interior) ದೊಡ್ಡ ಗಾತ್ರದ ಲ್ಯಾಂಡ್‌ಸ್ಕೇಪ್ ಮಾದರಿಯ ಸೆಂಟ್ರಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್., ಪ್ರತ್ಯೇಕ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್ ಇರಲಿದೆ.. ಅಂತಿಮ ಕ್ಯಾಬಿನ್ ವಿನ್ಯಾಸ ಹಾಗೂ ವೈಶಿಷ್ಟ್ಯಗಳ ಅಧಿಕೃತ ಪಟ್ಟಿಯನ್ನು ಡಿಸೆಂಬರ್ 2 ರ ಅನಾವರಣದ ವೇಳೆ ಪ್ರಕಟಿಸಲಾಗುತ್ತದೆ)

2030 ರೊಳಗೆ 10 ಹೊಸ ಕಾರುಗಳು – ಹೋಂಡಾ ಮಾಸ್ಟರ್ ಪ್ಲಾನ್

ಹೋಂಡಾ ಸಂಸ್ಥೆಯು ಭಾರತದಲ್ಲಿ 2030 ರ ವೇಳೆಗೆ ಒಟ್ಟು 7 ಎಸ್‌ಯುವಿಗಳು ಸೇರಿದಂತೆ 10 ಹೊಸ ವಾಹನಗಳನ್ನು ಮಾರುಕಟ್ಟೆಗೆ ತರಲು ಯೋಜನೆ ರೂಪಿಸಿದೆ. 2026 ರ ಮೇ ತಿಂಗಳಿನಲ್ಲಿ 'ಸಿಟಿ ಫೇಸ್‌ಲಿಫ್ಟ್' (City facelift), ಜುಲೈನಲ್ಲಿ 'ಝಡ್‌ಆರ್‌-ವಿ ಹೈಬ್ರಿಡ್' (ZR-V hybrid) ಹಾಗೂ ಅಕ್ಟೋಬರ್‌ನಲ್ಲಿ 'ಎಲಿವೇಟ್ ಫೇಸ್‌ಲಿಫ್ಟ್' (Elevate facelift) ಬಿಡುಗಡೆ ಮಾಡಿದ ಬೆನ್ನಲ್ಲೇ, ಡಿಸೆಂಬರ್‌ನಲ್ಲಿ ಎಲೆಕ್ಟ್ರಿಕ್ 'ಆಲ್ಫಾ' ಕಾರನ್ನು ತರುವ ಮೂಲಕ ಪೆಟ್ರೋಲ್, ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳಲ್ಲಿ ತನ್ನ ಪೋರ್ಟ್‌ಫೋಲಿಯೋವನ್ನು ಬಲಪಡಿಸುತ್ತಿದೆ.ನೂತನ ಎಲಿವೇಟ್ ಕಾರಿನ ಬಿಡುಗಡೆಯಿಂದಾಗಿ ಹೋಂಡಾ 2026 ರ ಅಕ್ಟೋಬರ್‌ನಲ್ಲಿ 7,609 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಶೇಕಡಾ 19 ರಷ್ಟು ವಾರ್ಷಿಕ ಬೆಳವಣಿಗೆ ಕಂಡಿತ್ತು. ಇದೀಗ 'ಆಲ್ಫಾ' ಇವಿ ಕಾರು ಭಾರತದ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಹೋಂಡಾ ಸಂಸ್ಥೆಗೆ ಭಾರಿ ಮೈಲೇಜ್ ನೀಡುವ ನಿರೀಕ್ಷೆಯಿದೆ.

PREV
Read more Articles on
click me!

Recommended Stories

ಲಕ್ಷಾಂತರ ಜನರ ಫೇವರಿಟ್ ಮಹೀಂದ್ರಾ ಕಾರುಗಳ ಹಿಂದಿದ್ದಾರೆ ಈ ಮಹಿಳೆ! ಥಾರ್, ಸ್ಕಾರ್ಪಿಯೋ ವಿನ್ಯಾಸಕಿ ಯಾರು ಗೊತ್ತಾ?
ಉದ್ಯೋಗಿಗೆ 4 ಕೋಟಿ ರೂ ಲ್ಯಾಂಬೋರ್ಗಿನಿ ಕಾರು ಗಿಫ್ಟ್ ನೀಡಿದ ಕಂಪನಿ, ಇಲ್ಲೆ ಕೆಲಸ ಕೊಡಿ ಎಂದ ನೆಟ್ಟಿಗರು