Auto Desk: ರೆನಾಲ್ಟ್ ಇಂಡಿಯಾ (Renault India) ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಪರಿಚಯಿಸಿ ಒಂದು ದಶಕ ಕಳೆದಿದೆ. ಈ ಒಂದು ದಶಕದಲ್ಲಿ ಸುಮಾರು ಎಂಟು ಲಕ್ಷ ವಾಹನಗಳ ಮಾರಾಟದ ಮೈಲಿಗಲ್ಲನ್ನು ದಾಟಿರುವುದಾಗಿ ರೆನಾಲ್ಟ್ ಇಂಡಿಯಾ ಮಂಗಳವಾರ ಘೋಷಿಸಿದೆ. ಕಳೆದ ವರ್ಷಗಳಲ್ಲಿ ಡಸ್ಟರ್ (Duster) ಎಸ್ಯುವಿಯ (SUV) ಹೆಚ್ಚಿನ ಬೇಡಿಕೆ, ಅದರ ಕಾರ್ಯಕ್ಷಮತೆಗೆ ದೊರೆತ ಮೆಚ್ಚುಗೆ ಹಾಗೂ ಕ್ವಿಡ್ (Kwid) ಮತ್ತು ಟ್ರೈಬರ್ (Triber)ನಂತಹ ಮಾದರಿಗಳ ಜನಪ್ರಿಯತೆ ಕಂಪನಿಗೆ ಉತ್ತಮ ಮಾರುಕಟ್ಟೆ ವಿಸ್ತರಣೆಗೆ ನೆರವಾಗಿವೆ.
2012 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾದಾಗ ದೇಶದ ಬೃಹತ್ ಎಸ್ಯುವಿ ವಲಯದಲ್ಲಿ ಡಸ್ಟರ್ ಜನಪ್ರಿಯ ಮಾದರಿಯಾಗಿ ಗುರುತಿಸಿಕೊಂಡರೂ, ನಂತರ ಅದು ಮಧ್ಯಮ ಗಾತ್ರದ ಎಸ್ಯುವಿ ವಿಭಾಗದಲ್ಲಿ ಪ್ರತಿಸ್ಪರ್ಧಿಗಳಿಗೆ ಠಕ್ಕರ್ ನೀಡುವಲ್ಲಿ ಕೊಂಚ ಮಟ್ಟಿಗೆ ವಿಫಲವಾಯಿತು. ಡಸ್ಟರ್ನ ಬೇಡಿಕೆ ಇಳಿಮುಖವಾಗುತ್ತಿದ್ದಂತೆ, ದೇಶೀಯ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ರೆನಾಲ್ಟ್ಗೆ ಸಹಾಯ ಮಾಡಿರುವುದು ಕ್ವಿಡ್. ರೆನಾಲ್ಟ್ ಕ್ವಿಡ್ನ ಉತ್ತಮ ಕಾರ್ಯಕ್ಷಮತೆ ಮತ್ತು ಟ್ರೈಬರ್ ಮಾದರಿಗೆ ದೊರೆತ ಸಕಾರಾತ್ಮಕ ಪ್ರತಿಕ್ರಿಯೆಗಳು ಕಂಪನಿಗೆ ಲಾಭದಾಯಕವಾಗಿವೆ.
ಇದನ್ನೂ ಓದಿ: Renault Car Discount ಜನವರಿ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಿದ ರೆನಾಲ್ಟ್, ಕಾರು ಖರೀದಿ ಈಗ ಸುಲಭ!
ಕ್ವಿಡ್ ಅನ್ನು ಮೊದಲು 2015 ರಲ್ಲಿ ದೇಶದಲ್ಲಿ ಪರಿಚಯಿಸಲಾಯಿತು. ಕಳೆದ ವರ್ಷದ ನವೆಂಬರ್ನಲ್ಲಿ ಕ್ವಿಡ್ ನಾಲ್ಕು ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ. ವರ್ಷಾಂತ್ಯದಲ್ಲಿ ನೀಡಿದ ಅನೇಕ ಆಫರ್ಗಳ ಹಿನ್ನೆಲೆಯಲ್ಲಿ ಬಹುತೇಕ ಗ್ರಾಹಕರು ಈ ವಾಹನವನ್ನು ಬುಕ್ ಮಾಡಿದ್ದರು. ಜೊತೆಗೆ, ಮೂರು-ಸಾಲಿನ ಎಂಪಿವಿ ಟ್ರೈಬರ್ ಅನ್ನು 2019 ರ ಆಗಸ್ಟ್ನಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು ಒಂದು ಲಕ್ಷ ಮಾರಾಟದ ಗಡಿ ತಲುಪುತ್ತಿದೆ. ಕ್ವಿಡ್ 4.12 ಲಕ್ಷ ರೂ. ಶೋರೂಂ ದರ ಹಾಗೂ ಕ್ವಿಡ್ 5.69 ಲಕ್ಷ ರೂ. ಶೋರೂಂ ದರದಿಂದ ಆರಂಭವಾಗುತ್ತದೆ.
ಈ ಎರಡೂ ಮಾದರಿಗಳು ರೆನಾಲ್ಟ್ ಅನ್ನು ಉತ್ತಮ ಸ್ಥಾನದಲ್ಲಿ ಇರಿಸಿವೆ. ರೆನಾಲ್ಟ್ ಇಂಡಿಯಾ ಕಾರ್ಯಾಚರಣೆಗಳ ಕಂಟ್ರಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ವೆಂಕಟರಾಮ್ ಮಾಮಿಲ್ಲಾಪಲ್ಲೆ “ಭಾರತದಲ್ಲಿ 8 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿರುವುದಕ್ಕೆ ಸಂತಸವಾಗುತ್ತಿದೆ. ಇದೊಂದು ಅಸಾಧಾರಣ ಪ್ರಯಾಣವಾಗಿದೆ ಮತ್ತು ಬ್ರಾಂಡ್ನಲ್ಲಿ ಅಪಾರ ಬೆಂಬಲ ಮತ್ತು ನಂಬಿಕೆಗಾಗಿ ನಮ್ಮ ಎಲ್ಲಾ ಗ್ರಾಹಕರು, ವಿತರಕರು, ಪೂರೈಕೆದಾರರು, ಉದ್ಯೋಗಿಗಳಿಗೆ ಧನ್ಯವಾದಗಳು” ಎಂದಿದ್ದಾರೆ.
ಇದನ್ನೂ ಓದಿ: Top Cars of 2021: ಇಲ್ಲಿದೆ ಈ ವರ್ಷದ ಟಾಪ್ ಕಾರುಗಳ ಪಟ್ಟಿ: ನಿಮ್ಮ ಆಯ್ಕೆ ಯಾವುದು?
ರೆನಾಲ್ಟ್ನ ಇತ್ತೀಚಿನ ಕೈಗರ್ ಸಬ್-ಕಾಂಪ್ಯಾಕ್ಟ್ ಎಸ್ಯುವಿ ಕಳೆದ ವರ್ಷ ಬಿಡುಗಡೆಯಾಯಿತು. ಇದು ಕೂಡ ಕಂಪನಿಯ ಮಾರಾಟದ ಜಾಲವನ್ನು ವಿಸ್ತರಿಸಲು ಗಮನಾರ್ಹ ಕೊಡುಗೆ ನೀಡುತ್ತಿದೆ. ಕಂಪನಿಯು ಕಳೆದ ಎರಡು ವರ್ಷಗಳಲ್ಲಿ 150 ಕ್ಕೂ ಹೆಚ್ಚು ಸೌಲಭ್ಯಗಳನ್ನು ಸೇರಿಸುವ ಮೂಲಕ ತನ್ನ ನೆಟ್ವರ್ಕ್ ಅನ್ನು ಹೆಚ್ಚಿಸಿದೆ. ಪ್ರಸ್ತುತ, ಕಂಪನಿಯು 530 ಮಾರಾಟ ಮಳಿಗೆಗಳನ್ನು ಹೊಂದಿದೆ ಮತ್ತು ದೇಶಾದ್ಯಂತ 250+ ವರ್ಕ್ಶಾಪ್ ಆನ್ ವೀಲ್ಸ್ (WOW) ಮತ್ತು WOWLite ಸ್ಥಳಗಳು ಸೇರಿದಂತೆ 530 ಕ್ಕೂ ಹೆಚ್ಚು ಸೇವಾ ಟಚ್ಪಾಯಿಂಟ್ಗಳನ್ನು ಹೊಂದಿದೆ
.ಇದಲ್ಲದೆ, ಗ್ರಾಮೀಣ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಉದ್ದೇಶದಿಂದ ರೆನಾಲ್ಟ್, ವಿಸ್ತಾರ್ (VISTAAR) ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದರು. ಇದರಲ್ಲಿ ಡೀಲರ್ಶಿಪ್ ತಂಡಗಳು, ಗ್ರಾಮೀಣ ಮಾರುಕಟ್ಟೆಗಳಲ್ಲಿನ ಗ್ರಾಹಕರನ್ನು ತಲುಪಲು 650 ಕ್ಕೂ ಹೆಚ್ಚು ವಿಶೇಷ ಮಾರಾಟ ಸಲಹೆಗಾರರನ್ನು ನೇಮಿಸಿ ತರಬೇತಿ ನೀಡಿದೆ. ಜೊತೆಗೆ, ರೆನಾಲ್ಟ್ ಇಂಡಿಯಾ ತನ್ನ ಪೂರ್ಣ ಪ್ರಮಾಣದ ಹಿಂದಿ ವೆಬ್ಸೈಟ್ ಅನ್ನು ಸಹ ಪ್ರಾರಂಭಿಸಿದ್ದು, ದ್ವಿ-ಭಾಷಾ ವೆಬ್ಸೈಟ್(Bylingual website) ಅನ್ನು ಪ್ರಾರಂಭಿಸುವ ಮೊದಲ ನಾಲ್ಕು-ಚಕ್ರ ವಾಹನ ತಯಾರಕ ಕಂಪನಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ.