#BoycottHyundai ಕಾಶ್ಮೀರ ಪ್ರತ್ಯೇಕಿಸುವ ಕುರಿತು ಹ್ಯುಂಡೈ ಟ್ವೀಟ್, ಪ್ರಶ್ನಿಸಿದ ಭಾರತೀಯರ ಖಾತೆ ಬ್ಲಾಕ್!

By Suvarna NewsFirst Published Feb 6, 2022, 8:41 PM IST
Highlights
  • ಭಾರತದಲ್ಲಿ ಬಾಯ್ಕಾಟ್ ಹ್ಯುಂಡೈ ಟ್ರೆಂಡಿಂಗ್
  • ಕಾಶ್ಮೀರ ಪ್ರತ್ಯೇಕಿಸುವ ಕುರಿತು ಹ್ಯುಂಡೈ ಟ್ವೀಟ್
  • ಭಾರತದಲ್ಲಿ ಹ್ಯುಂಡೈ ಕಾರುಗಳನ್ನು ಬಹಿಷ್ಕರಿಸಲು ಕರೆ

ನವದೆಹಲಿ(ಫೆ.06): ಅನಗತ್ಯ ವಿವಾದ ಮೈಮೇಲೆ ಎಳೆದುಕೊಂಡ ಹ್ಯುಂಡೈ ಇಂಡಿಯಾ(Hyundai India) ಇದೀಗ ದುಬಾರಿ ದಂಡ ತೆರಬೇಕಾಗಿದೆ. ಹೌದು, ಭಾರತದಲ್ಲಿ ಇದೀಗ ಹ್ಯುಂಡೈ ಕಾರುಗಳನ್ನು(Hyundai Car) ಬಹಿಷ್ಕರಿಸಿ(#BoycottHyundai)ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಇದಕ್ಕೆ ಕಾರಣ ಹ್ಯುಂಡೈ ಪಾಕಿಸ್ತಾನ ಮಾಡಿದ ಟ್ವೀಟ್ ಹಾಗೂ ಭಾರತದ ಹ್ಯುಂಡೈ ತೆಗೆದುಕೊಂಡ ನಿಲುವು ಕಾರಣವಾಗಿದೆ. 

ಪಾಕಿಸ್ತಾನವನ್ನು(Pakistan) ಬೆಂಬಲಿಸಿದ, ಕಾಶ್ಮೀರ(Kashmir) ಪ್ರತ್ಯೇಕತ ಬೆಂಕಿಗೆ ತುಪ್ಪ ಸುರಿದ ಹ್ಯುಂಡೈ ಇಂಡಿಯಾ ವಿರುದ್ಧ ಇದೀಗ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಾಯ್‌ಕಾಟ್ ಇಂಡಿಯಾ ಅಭಿಯಾನ ಆರಂಭಗೊಂಡಿದೆ. ಇಂದು ಟ್ವಿಟರ್‌ನಲ್ಲಿ(Twitter) ಗರಿಷ್ಠ ಟ್ರೆಂಡಿಂಗ್ ಪೈಕಿ ಬಾಯ್ಕಾಟ್ ಇಂಡಿಯಾ ಕೂಡ ಕಾಣಿಸಿಕೊಂಡಿದೆ. ಇದೀಗ ಹ್ಯುಂಡೈ ಮಾರ್ಕೆಟಿಂಗ್ ವಿಭಾಗಗಕ್ಕೆ ತೀವ್ರ ತಲೆನೋವಾಗಿದೆ. 

Latest Videos

'Boycott Amazon': ತ್ರಿವರ್ಣ ಧ್ವಜಕ್ಕೆ ಅವಮಾನ : ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೆಝಾನ್!

ಬಾಯ್ಕಾಟ್ ಇಂಡಿಯಾ ಟ್ರೆಂಡಿಂಗ್ ಕಾರಣವೇನು?
ಫೆಬ್ರವರಿ 5 ನೇ ದಿನವನ್ನು ಪಾಕಿಸ್ತಾನದಲ್ಲಿ ಕಾಶ್ಮೀರ ದಿನ(Kashmir Solidarity Day) ಎಂದು ಆಚರಿಸಲಾಗುತ್ತದೆ. ಕಾಶ್ಮೀರವನ್ನು ಪ್ರತ್ಯೇಕಿಸುವ ಕೂಗು ಹಾಗೂ ಹೋರಾಟದ ದಿನವನ್ನಾಗಿ ಪಾಕಿಸ್ತಾನದಲ್ಲಿ ಆಚರಿಸಲಾಗುತ್ತಿದೆ. ಈ ದಿನದಂದು ಹ್ಯುಂಡೈ ಪಾಕಿಸ್ತಾನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಭಾರತವನ್ನು ಕೆರಳಿಸುವ ಹಾಗೂ ಪಾಕ್ ಜನರ ವಿಶ್ವಾಸ ಗೆಲ್ಲಲು ವಿವಾದಾತ್ಮಕ ಟ್ವೀಟ್ ಮಾಡಿದೆ. 

ಕಾಶ್ಮೀರ ಸ್ವತಂತ್ರಕ್ಕಾಗಿ ಹೋರಾಡಿದ ನಮ್ಮ ಸಹೋದರರ ತ್ಯಾಗವನ್ನು ಸ್ಮರಿಸುತ್ತಾ, ಮುಂದಿನ ಅವರ ಹೋರಾಟ, ಪ್ರತಿಭಟನೆಗೆ ಬೆಂಬಲ ನೀಡೋಣ. ಕಾಶ್ಮೀರ ಪ್ರತ್ಯೇಕತಾ ಹೋರಾಟಕ್ಕೆ ಸದಾ ಬೆಂಬಲವಾಗಿರೋಣ ಎಂದು ಹ್ಯುಂಡೈ ಪಾಕಿಸ್ತಾನ ಟ್ವೀಟ್ ಮಾಡಿದೆ. ಇದರ ಜೊತೆಗೆ ಜನಪ್ರಿಯ ದಾಲ್ ಸರೋವರದ ಚಿತ್ರವನ್ನು ಹಾಕಲಾಗಿದೆ. ಇದರ ಜೊತೆಗೆ ಕಾಶ್ಮೀರ ಎಂಬ ಪದವನ್ನು ಮುಳ್ಳಿನ ಬೇಲಿಯ ಶೈಲಿಯಲ್ಲಿ ಬರೆಯಲಾಗಿದೆ. ಈ ಮೂಲಕ ಸದ್ಯ ಭಾರತದ ಬಂಧನದಲ್ಲಿರುವ ಕಾಶ್ಮೀರವನ್ನು ಪ್ರತ್ಯೇಕಿಸೋಣ ಎಂಬ ಅರ್ಥದಲ್ಲಿ ಚಿತ್ರವನ್ನು ಹಾಕಲಾಗಿದೆ.

ಡ್ರ್ಯಾಗನ್‌ಗೆ ಕನ್ನಡಿ ಹಿಡಿದ ಭಾರತ, ಚೀನಾ ಅಧ್ಯಕ್ಷತೆಯ ಸಭೆಗೆ ಜೈಶಂಕರ್ ಬಹಿಷ್ಕಾರ!

ಈ ಟ್ವೀಟ್ ಭಾರತೀಯರನ್ನು ಕೆರಳಿಸಿದೆ. ಈ ಕುರಿತು ಹಲವು ಭಾರತೀಯರು ಭಾರತದಲ್ಲಿನ ಹ್ಯುಂಡೈ ಇಂಡಿಯಾ ಗಮನಕ್ಕೆ ತಂದಿದ್ದಾರೆ. ಈ ಕುರಿತು ಹ್ಯುಂಡೈ ಇಂಡಿಯಾ ನಿಲುವೇನು? ಪಾಕಿಸ್ತಾನದ ಟ್ವೀಟ್ ಬೆಂಬಲಿಸುತ್ತೀರಾ? ತಕ್ಷಣವೇ ಈ ಟ್ವೀಟ್‌ ವಿರೋಧಿಸಿ ಎಂದು ನೆಟ್ಟಿಗರು ಹ್ಯುಂಡೈ ಇಂಡಿಯಾಗೆ ಸೂಚಿಸಿದ್ದಾರೆ. 

ಹ್ಯುಂಡೈ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಹ್ಯುಂಡೈ ಪಾಕಿಸ್ತಾನ ಟ್ವೀಟ್ ಕುರಿತು ಯಾರೆಲ್ಲಾ ಪ್ರಶ್ನೆ, ಸೂಚನೆ, ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ, ಅವರ ಖಾತೆಗಳನ್ನು ಹ್ಯುಂಡೈ ಇಂಡಿಯಾ ಬ್ಲಾಕ್ ಮಾಡಿದೆ. ಹ್ಯುಂಡೈ ಇಂಡಿಯಾ ಟ್ಯಾಗ್ ಮಾಡಿ ಕೇಳಿದ ಪ್ರಶ್ನೆಗಳ ಖಾತೆದಾರರನ್ನು ಟ್ವಿಟರ್ ಬ್ಲಾಕ್ ಮಾಡುವ ಮೂಲಕ ಪರೋಕ್ಷವಾಗಿ ಕಾಶ್ಮೀರ ಪ್ರತ್ಯೇಕತೆಯನ್ನು ಹಾಗೂ ಪಾಕಿಸ್ತಾನವನ್ನು ಪರೋಕ್ಷವಾಗಿ ಬೆಂಬಲಿಸಿದ ಹ್ಯುಂಡೈ ಇಂಡಿಯಾ ವಿರುದ್ಧ ಭಾರತೀಯರ ಆಕ್ರೋಶ ಹೆಚ್ಚಾಗಿದೆ.

ಪರಿಣಾಮ ಬಾಯ್ಕಾಟ್ ಇಂಡಿಯಾ ಟ್ರೆಂಡ್ ಆಗಿದೆ. ಭಾರತೀಯರು ಹ್ಯುಂಡೈ ಕಾರುಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ಹ್ಯುಂಡೈ ಇಂಡಿಯಾ ಸತತ ಟೀಕೆ, ಆಕ್ರೋಶ ಎದುರಿಸುವಂತಾಗಿದೆ.  

ಹ್ಯುಂಡೈ ಇಂಡಿಯಾ ತಪ್ಪನ್ನು ಕೂಡಲೇ ಸರಿಪಡಿಸಬೇಕು. ಭಾರತೀಯರಲ್ಲಿ ಕ್ಷಮೆ ಕೇಳಬೇಕು. ಅಖಂಡ ಭಾರತದಲ್ಲಿ ಪ್ರತ್ಯೇಕತೆ ಕೂಗು ಇಲ್ಲ, ಪಾಕಿಸ್ತಾನ ಪರ ಓಲೈಕೆ ಇಲ್ಲಿ ಅಗತ್ಯವಿಲ್ಲ.  ಪಾಕಿಸ್ತಾನವನ್ನು ಬೆಂಬಲಿಸುವ, ಅದರಲ್ಲೂ ಕಾಶ್ಮೀರ ಪ್ರತ್ಯೇಕಿಸುವ ವಾದಕ್ಕೆ ಬೆಂಬಲ ನೀಡುವ ಯಾವ ಕಂಪನಿ, ಸಂಸ್ಥೆಗೆ ಭಾರತದಲ್ಲಿ ಅವಕಾಶವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತ ಹ್ಯುಂಡೈ ರಾಯಭಾರಿ ಶಾರುಖ್ ಖಾನ್ ಕೂಡ ಟೀಕೆಗೆ ಗುರಿಯಾಗಿದ್ದಾರೆ. ಪಾಕ್ ಬೆಂಬಲಿಸುವ ಕಾರಣಕ್ಕೆ ಶಾರುಖ್ ಖಾನ್ ಹ್ಯುಂಡೈ ಇಂಡಿಯಾದ ರಾಯಭಾರಿಯಾಗಿದ್ದಾರೆ ಎಂದು ಹಲವರು ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

click me!