ಎಲೆಕ್ಟ್ರಿಕ್ ವಾಹನಗಳ ಚಿಲ್ಲರೆ ಮಾರಾಟ ಮೂರು ಪಟ್ಟು ಜಿಗಿತ-ಎಫ್ಎಡಿಎ ವರದಿ

By Suvarna News  |  First Published Apr 12, 2022, 3:42 PM IST

ಕಳೆದ ಆರ್ಥಿಕ ವರ್ಷದಲ್ಲಿ , ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಿಲ್ಲರೆ ಮಾರಾಟ ಮೂರು ಪಟ್ಟು ಜಿಗಿತ ಕಂಡಿದೆ ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ-FADA) ತಿಳಿಸಿದೆ.


ಕಳೆದ ಆರ್ಥಿಕ ವರ್ಷದಲ್ಲಿ , ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಿಲ್ಲರೆ ಮಾರಾಟ ಮೂರು ಪಟ್ಟು ಜಿಗಿತ ಕಂಡಿದೆ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್ಎಡಿಎ-FADA) ಸಂಗ್ರಹಿಸಿದ ಮಾಹಿತಿಯಲ್ಲಿ ಈ ವಿಷಯ ತಿಳಿದುಬಂದಿದೆ. 2021-22ರಲ್ಲಿ ಒಟ್ಟು ಎಲೆಕ್ಟ್ರಿಕ್ ವಾಹನ (ಇವಿ-EV) ಚಿಲ್ಲರೆ ಮಾರಾಟವು 4,29,217ಕ್ಕೆ ತಲುಪಿದೆ. 2020-21ರ ಆರ್ಥಿಕ ವರ್ಷದಲ್ಲಿ ಇದು 1,34,821 ವಾಹನಗಳಷ್ಟಿತ್ತು ಎಂದು ಉದ್ಯಮ ಸಂಸ್ಥೆ ತಿಳಿಸಿದೆ.

ಎಫ್ಎಡಿಎ ಪ್ರಕಾರ, 2019-20ರ ಆರ್ಥಿಕ ವರ್ಷದಲ್ಲಿ ಒಟ್ಟು ಇವಿ (EV) ಮಾರಾಟ 1,68,300 ರಷ್ಟಿತ್ತು. ಕಳೆದ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನಗಳ ಚಿಲ್ಲರೆ ಮಾರಾಟ 17,802 ರಷ್ಟಿದೆ, ಇದು 2021ರಲ್ಲಿ 4,984 ವಾಹನಗಳ ಮಾರಾಟದಿಂದ ಮೂರು ಪಟ್ಟು ಹೆಚ್ಚಿನ ವಹಿವಾಟು ದಾಖಲಿಸಿದೆ.
ಸ್ವದೇಶಿ ಆಟೋ ಕಂಪನಿ ಟಾಟಾ ಮೋಟಾರ್ಸ್ (Tata Motors), 15,198 ವಾಹನಗಳ ಮಾರಾಟದಿಂದ ಶೇ. 85.37ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಮುಂಚೂಣಿಯ ಸ್ಥಾನದಲ್ಲಿಯೇ ಮುಂದುವರಿದಿದೆ. ಮುಂಬೈ ಮೂಲದ ಕಂಪನಿಯ ಚಿಲ್ಲರೆ ಮಾರಾಟ 2020-21ರಲ್ಲಿ 3,523 ವಾಹನಗಳಷ್ಟಿತ್ತು.

Tap to resize

Latest Videos

ಎಂಜಿ ಮೋಟಾರ್ ಇಂಡಿಯಾ (MG Motor India), ಕಳೆದ ಹಣಕಾಸು ವರ್ಷದಲ್ಲಿ 2,045 ವಾಹನಗಳ ಮಾರಾಟದೊಂದಿಗೆ ಶೇ.11.49ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದು 2020-21ರ ಆರ್ಥಿಕ ವರ್ಷದಲ್ಲಿ 1,115 ವಾಹನಗಳನ್ನು ಮಾರಾಟ ಮಾಡಿದೆ.

ಮಹೀಂದ್ರಾ ಮತ್ತು ಮಹೀಂದ್ರಾ (Mahindra and Mahindra) ಮತ್ತು ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಕ್ರಮವಾಗಿ 156 ಮತ್ತು 128 ವಾಹನಗಳ ಮಾರಾಟದೊಂದಿಗೆ ಮೂರನೇ ಮತ್ತು ನಾಲ್ಕನೇ ಸ್ಥಾನಗಳಲ್ಲಿವೆ, 2020-21ರ ಆರ್ಥಿಕ ವರ್ಷದಲ್ಲಿ M&M ಮತ್ತು ಹುಂಡೈ ಕ್ರಮವಾಗಿ 94 ಮತ್ತು 184 ಯುನಿಟ್ಗಳನ್ನು ಮಾರಾಟ ಮಾಡಿದೆ ಎಂದು ಎಫ್ಎಡಿಎ ದತ್ತಾಂಶ ತಿಳಿಸಿದೆ.

ಕಳೆದ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಚಿಲ್ಲರೆ ಮಾರಾಟವು 2,31,338 ವಾಹನಗಳಾಗಿದ್ದು, 2020-21ರಲ್ಲಿ 41,046 ವಾಹನಗಳಿಂದ ಐದು ಪಟ್ಟು ಹೆಚ್ಚಾಗಿದೆ ಎಂದು ಎಫ್‌ಎಡಿಎ (FADA) ಹೇಳಿದೆ. ಹೀರೋ ಎಲೆಕ್ಟ್ರಿಕ್ 65,303 ವಾಹನಗಳ ಮಾರಾಟದೊಂದಿಗೆ ವಿಭಾಗವನ್ನು ಮುನ್ನಡೆಸಿದೆ, ದೇಶೀಯ ಮಾರುಕಟ್ಟೆಯಲ್ಲಿ ಶೇ.28.23 ರಷ್ಟು ಪಾಲನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Electric Vehicle: ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಆರಂಭ

ಅದರ ನಂತರ ಓಕಿನಾವಾ ಆಟೋಟೆಕ್ ಕಳೆದ ಹಣಕಾಸು ವರ್ಷದಲ್ಲಿ 46,447 ವಾಹನಗಳನ್ನು ಮಾರಾಟ ಮಾಡಿದೆ. ಮೂರನೇ ಸ್ಥಾನವನ್ನು ಆಂಪಿಯರ್ ವೆಹಿಕಲ್ಸ್ 24,648 ವಾಹನಗಳ ಮಾರಾಟದೊಂದಿಗೆ ಪಡೆದುಕೊಂಡಿದೆ. ಹೀರೋ ಮೋಟೋಕಾರ್ಪ್ ಬೆಂಬಲಿತ ಏಥರ್ ಎನರ್ಜಿ 2021-22ರಲ್ಲಿ 19,971 ವಾಹನಗಳ ನೋಂದಣಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ 14,371 ವಾಹನಗಳ ಮಾರಾಟದೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಟಿವಿಎಸ್ ಮೋಟಾರ್ ಕಂಪನಿ 9,458 ವಾಹನಗಳ ನೋಂದಣಿಯೊಂದಿಗೆ ಕಳೆದ ಹಣಕಾಸು ವರ್ಷದಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Maruti Ertiga 11 ಸಾವಿರ ರೂಗೆ ಬುಕ್ ಮಾಡಿ 2022ರ ಹೊಚ್ಚ ಹೊಸ ಮಾರುತಿ ಎರ್ಟಿಗಾ!

ಒಟ್ಟು 1,605 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ 1,397 ದತ್ತಾಂಶವನ್ನು ಸಂಗ್ರಹಿಸಿರುವ FADA, ಕಳೆದ ಹಣಕಾಸು ವರ್ಷದಲ್ಲಿ ಒಟ್ಟು ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಮಾರಾಟ 1,77,874 ವಾಹನಗಳಷ್ಟಿದೆ. ಇದು  ಹಿಂದಿನ ಹಣಕಾಸು ವರ್ಷದಲ್ಲಿ 88,391 ವಾಹನಗಳಿಗಿಂತ ಎರಡು ಪಟ್ಟು ಹೆಚ್ಚಳವನ್ನು ದಾಖಲಿಸಿದೆ ಎಂದು ತಿಳಿಸಿದೆ.

ಅದೇ ರೀತಿ, 2021ರಲ್ಲಿ 400 ವಾಹನಗಳಿಗೆ ಹೋಲಿಸಿದರೆ ಕಳೆದ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಮಾರಾಟ 2,203 ವಾಹನಗಳಿಗೆ ಏರಿಕೆಯಾಗಿದೆ ಎಂದು ಎಫ್‌ಎಡಿಎ ತಿಳಿಸಿದೆ.

click me!