
ನವದೆಹಲಿ(ಆ.24): ಗ್ರಾಹಕರ ಪಿಜ್ಜಾ ಆರ್ಡರ್ ರದ್ದುಗೊಳಿಸಿದ್ದಕ್ಕೆ ಝೊಮ್ಯಾಟೊಗೆ 10,000ರೂ. ದಂಡ ಬಿದ್ದಿದೆ. ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಈ ಆದೇಶ ನೀಡಿದೆ. ಈ ಗ್ರಾಹಕನ ಪಿಜ್ಜಾ ಆರ್ಡರ್ ಅನ್ನು 2020ರಲ್ಲಿ ಝೊಮ್ಯಾಟೊ ರದ್ದುಗೊಳಿಸಿತ್ತು. ದಂಡದ ಜೊತೆಗೆ ಆ ಗ್ರಾಹಕನಿಗೆ ಉಚಿತವಾಗಿ ಪಿಜ್ಜಾ ಸರ್ವ್ ಮಾಡುವಂತೆಯೂ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಆರ್ಡರ್ ರದ್ದುಗೊಳಿಸಿರೋದು ಕಂಪನಿಯು ತನ್ನ ಪ್ರಚಾರದಲ್ಲಿ ಬಳಸಿರುವ 'ಝೋಮ್ಯಾಟೊ ಬಳಕೆದಾರರು ಈಗ ಸಮಯಕ್ಕೆ ಸರಿಯಾಗಿ ಅವರ ಆಹಾರ ಪಡೆಯುತ್ತಾರೆ ಇಲ್ಲವೆ ತಮ್ಮ ಹಣ ಹಿಂಪಡೆಯುತ್ತಾರೆ' ಎಂಬ ಘೋಷಣೆಯ ಉಲ್ಲಂಘನೆಯಾಗಿದೆ ಎಂದು ಕೂಡ ಗ್ರಾಹಕರ ಆಯೋಗ ತಿಳಿಸಿದೆ. ಅಜಯ್ ಶರ್ಮಾ ಎಂಬ ವ್ಯಕ್ತಿ 2020ರಲ್ಲಿ ಝೋಮ್ಯಾಟೊ ಮೂಲಕ ಪಿಜ್ಜಾ ಆರ್ಡರ್ ಮಾಡಿ ಪೇಟಿಎಂ ಮೂಲಕ 287ರೂ. ಪಾವತಿಸಿದ್ದರು. ಇವರ ಆರ್ಡರ್ 10:15ಕ್ಕೆ ಬರುತ್ತದೆ ಎಂದು ಝೋಮ್ಯಾಟೊಗೆ ತಿಳಿಸಿತ್ತು. ಅಲ್ಲದೆ, ಸಮಯಕ್ಕೆ ಸರಿಯಾಗಿ ಪಾರ್ಸೆಲ್ ತಲುಪಿಸಲು ಹೆಚ್ಚುವರಿ 10ರೂ. ಕೂಡ ಪಡೆದಿತ್ತು. ಆದರೆ, ಪಾರ್ಸೆಲ್ ಮಾತ್ರ ಬರಲಿಲ್ಲ. 10.30 ಕ್ಕೆ ಶರ್ಮಾ ಅವರಿಗೆ ಆರ್ಡರ್ ರದ್ದುಪಡಿಸಿರೋದಾಗಿ ಸಂದೇಶ ಬಂದಿತ್ತು.
ಝೊಮ್ಯಾಟೊ (Zomato) ನನಗೆ ಸೇವೆ ಒದಗಿಸುವಲ್ಲಿ ವಿಫಲವಾಗಿದೆ. ಪಾರ್ಸೆಲ್ ಅನ್ನು ಸಮಯಕ್ಕೆ ಸರಿಯಾಗಿ ತಲುಪಿಸೋದಾಗಿ ಹೆಚ್ಚುವರಿ 10ರೂ. ಕೂಡ ಪಡೆದಿದೆ. ಆದರೆ, ಏಕಾಏಕಿ ಆರ್ಡರ್ (Order) ರದ್ದುಗೊಳಿಸಿ ನನ್ನ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಶರ್ಮಾ ದೂರಿದ್ದಾರೆ. ಶರ್ಮಾರ ಖಾತೆಗೆ ಹಣ ರೀಫಂಡ್ (Refund) ಆಗಿದ್ದರು ಕೂಡ ಈ ಸಂಬಂಧ ಮೊದಲು ಜಿಲ್ಲಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆದ್ರೆ ಅದು ಪ್ರಾಥಮಿಕ ಹಂತದಲ್ಲೇ ತಿರಸ್ಕರಿಸಲ್ಪಟ್ಟಿತು. ಆ ಬಳಿಕ ಅವರು ರಾಜ್ಯ ಅಯೋಗಕ್ಕೆ ದೂರು ಸಲ್ಲಿಸಿದರು. ಅಲ್ಲದೆ, ನವದೆಹಲಿಯ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮುಖ್ಯಸ್ಥರ ಮೊರೆ ಹೋಗಿದ್ದರು ಕೂಡ. ಆದರೆ, ಈ ದೂರನ್ನು ನವದೆಹಲಿಯ ಗ್ರಾಹಕ ರಕ್ಷಣಾ ಪ್ರಾಧಿಕಾರ ವಜಾಗೊಳಿಸಿತ್ತು. ಆ ಬಳಿಕ ಶರ್ಮಾ ಚಂಡೀಗಢದ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಚಂಡೀಗಢದ (Chandigarh) ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಈ ಪ್ರಕರಣವನ್ನು ಕೈಗೆತ್ತಿಗೊಂಡು ವಿಚಾರಣೆ ನಡೆಸಿತು. ಅಧ್ಯಕ್ಷರಾದ ನ್ಯಾಯಮೂರ್ತಿ ರಾಜ್ ಶೇಖರ್ ಅತ್ರಿ ಹಾಗೂ ಸದಸ್ಯ ನ್ಯಾಯಮೂರ್ತಿ ಕೆ. ಆರ್ಯ ಈ ಪ್ರಕರಣದ ವಿಚಾರಣೆ ನಡೆಸಿದ್ದು,' ತಡರಾತ್ರಿ ಆಹಾರಕ್ಕಾಗಿ ಆರ್ಡರ್ ಮಾಡಿದ ವ್ಯಕ್ತಿಗೆ ಅದನ್ನು ನಿರಾಕರಿಸಲಾಗಿದೆ. ತನ್ನ ಮಕ್ಕಳಿಗಾಗಿ ಆತ ಈ ಆರ್ಡರ್ ಮಾಡಿದ್ದ. ಇದೇ ಕಾರಣಕ್ಕೆ ಆ ವ್ಯಕ್ತಿಗೆ ನೋವಾಗಿದೆ. ಇದೇ ನೋವಿನಿಂದ ಆತ ತನ್ನ ಮಕ್ಕಳಿಗೆ ಆರ್ಡರ್ ರದ್ದಾದ ವಿಷಯ ತಿಳಿಸಿರಬಹುದು' ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳು ಕೇಳಿರೋದನ್ನು ಆ ಕ್ಷಣಕ್ಕೆ ಕೊಡಿಸಲು ಆಗಿಲ್ಲ ಎಂಬ ನೋವಿನಿಂದ ಈ ವ್ಯಕ್ತಿ ನ್ಯಾಯ ಕೋರಿದ್ದಾನೆ ಎಂಬುದು ಆಯೋಗದ ಅಭಿಪ್ರಾಯವಾಗಿದೆ.
Provident Fraud: 1000 ಕೋಟಿ ರೂ. ಪಿಎಫ್ ಹಗರಣ ಬೆಳಕಿಗೆ: ಹಲವು ಮುಚ್ಚಿದ ಕಂಪನಿ ನೌಕರರ ಪಿಎಫ್ ಕ್ಲೇಮ್
ಈ ಪ್ರಕರಣದಲ್ಲಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸೇವಾ ಪೂರೈಕೆಯಲ್ಲಿ ವ್ಯತ್ಯಯ, ನ್ಯಾಯಸಮ್ಮತವಲ್ಲದ ವ್ಯಾಪಾರದ ಆಧಾರದಲ್ಲಿ ಝೊಮ್ಯಾಟೊಗೆ (Zomato) ದಂಡ (Fine) ವಿಧಿಸಿದೆ. ಗ್ರಾಹಕರಿಗೆ (Customers) ಸಮರ್ಪಕ ಸೇವೆಗಳನ್ನು (Services) ಒದಗಿಸದ ಅಥವಾ ಅನ್ಯಾಯದ ವ್ಯಾಪಾರ ನಡೆಸುವ ಸಂಸ್ಥೆ ವಿರುದ್ಧ ಗ್ರಾಹಕರ ಆಯೋಗಕ್ಕೆ ದೂರು ನೀಡಬಹುದು. ಇಂಥ ದೂರುಗಳನ್ನು ಗ್ರಾಹಕ ಆಯೋಗ ಪರಿಶೀಲಿಸಿ,ಗ್ರಾಹಕರು ತೊಂದರೆಗಳನ್ನು ಅನುಭವಿಸಿದರೆ ಸಂಬಂಧಪಟ್ಟ ಸಂಸ್ಥೆಗಳಿಗೆ ದಂಡ (Fine) ವಿಧಿಸುತ್ತದೆ.
ಮುಂಬೈನ ಅತೀ ಶ್ರೀಮಂತ ಗಣೇಶನಿಗೆ ಬಹುಕೋಟಿ ಮೊತ್ತದ ವಿಮೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.