ಝೆರೋಧಾ ಸಂಸ್ಥೆ ಈಗಾಗಲೇ ರೈನ್ ಮ್ಯಾಟರ್ ಎಂಬ ಅಂಗಸಂಸ್ಥೆ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಹಾಗೂ ಸ್ಟಾರ್ಟ್ ಅಪ್ ಗಳಿಗೆ ನೆರವು ನೀಡುತ್ತಿದೆ. ಈಗ ಈ ಸಂಸ್ಥೆ ಮೂಲಕ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಲು 1000 ಕೋಟಿ ರೂ. ಮೀಸಲಿಟ್ಟಿರುವ ಮಾಹಿತಿಯನ್ನು ಝೆರೋಧಾ ಸ್ಥಾಪಕ ನಿತಿನ್ ಕಾಮತ್ ನೀಡಿದ್ದಾರೆ.
ಬೆಂಗಳೂರು (ಆ.11): ಯುನಿಕಾರ್ನ್ ಬ್ರೋಕರ್ ಸಂಸ್ಥೆ ಝೆರೋಧಾ ಸ್ಥಾಪಕ ನಿಖಿಲ್ ಕಾಮತ್ ಇತ್ತೀಚೆಗಷ್ಟೇ ತಮ್ಮ ಆದಾಯದ ಬಹುಪಾಲನ್ನು ದಾನ ಮಾಡುವ ನಿರ್ಧಾರ ಕೈಗೊಂಡಿದ್ದರು. ಇದರ ನಿಟ್ಟಿನಲ್ಲಿ ಅವರು ದ ಗಿವಿಂಗ್ ಪ್ಲೆಡ್ಜ್ ಸಂಸ್ಥೆಯ ಜೊತೆ ಕೈಜೋಡಿಸಿದ್ದಾರೆ ಕೂಡ. ಇನ್ನು ಝೆರೋಧಾ ಸಂಸ್ಥೆ ದಾನ ನೀಡುವ ಹಾಗೂ ಹೂಡಿಕೆಯ ಉದ್ದೇಶಕ್ಕಾಗಿ ರೈನ್ ಮ್ಯಾಟರ್ ಕ್ಯಾಪಿಟಲ್ ಅನ್ನು 2016ರಲ್ಲಿ ಪ್ರಾರಂಭಿಸಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚುವರಿ 1 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದು ಝೆರೋಧಾ ಇನ್ನೊಬ್ಬ ಸ್ಥಾಪಕ ನಿಖಿಲ್ ಕಾಮತ್ ಸಹೋದರ ನಿತಿನ್ ಕಾಮತ್ ಗುರುವಾರ ತಿಳಿಸಿದ್ದಾರೆ. ರೈನ್ ಮ್ಯಾಟರ್ ಕ್ಯಾಪಿಟಲ್ ಅನ್ನು ಫಿನ್ ಟೆಕ್ ಸ್ಟಾರ್ಟ್ ಅಪ್ ಗಳಿಗೆ ನೆರವು ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿತ್ತು. ಕೆಲವು ವರ್ಷಗಳ ಬಳಿಕ ಈ ಸಂಸ್ಥೆ ತನ್ನ ಕಾರ್ಯಕ್ಷೇತ್ರವನ್ನು ಇತರ ವಲಯಗಳಾದ ಶಿಕ್ಷಣ ತಂತ್ರಜ್ಞಾನ, ಆರೋಗ್ಯ, ಹವಾಮಾನ ಬದಲಾವಣೆ ಹಾಗೂ ಇತರ ಕೆಲವು ಕ್ಷೇತ್ರಗಳಿಗೆ ವಿಸ್ತರಿಸಿದೆ. ರೈನ್ ಮ್ಯಾಟರ್ 80ಕ್ಕೂ ಅಧಿಕ ಸ್ಟಾರ್ಟ್ ಅಪ್ ಗಳ ಜೊತೆಗೆ ಸಹಭಾಗಿತ್ವ ಹೊಂದಿದ್ದು, ಒಟ್ಟು 400 ಕೋಟಿ ರೂ.ಗಿಂತಲೂ ಅಧಿಕ ಹೂಡಿಕೆ ಮಾಡಿದೆ.
'ನಾವು ಈಗ ನಮ್ಮ ಹೂಡಿಕೆ ಮೀಸಲನ್ನು ಹೆಚ್ಚುವರಿ 1,000 ಕೋಟಿ ರೂ. ಏರಿಕೆ ಮಾಡಿದ್ದು, ಆ ಮೂಲಕ ನಮ್ಮ ಬದ್ಧತೆಯನ್ನು ಕೂಡ ಹೆಚ್ಚಿಸಿಕೊಂಡಿದ್ದೇವೆ' ಎಂದು ಕಾಮತ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಟೆಕ್ ಉದ್ಯಮಿಗಳ ನೆರವಿನಿಂದ ನಾವು ಜನರಿಗೆ ತಮ್ಮ ಹಣವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ನೆರವು ನೀಡುವ ಸಂಸ್ಥೆ ಪ್ರಾರಂಭಿಸಿದೆವು. ಈಗ ನಾವು ಆ ಜನರಿಗೆ ಉತ್ತಮ ಆರೋಗ್ಯ ಸೇವೆ, ಶಿಕ್ಷಣ ಪಡೆಯಲು ನೆರವು ನೀಡುವ ಜೊತೆಗೆ ಹವಾಮಾನ ಬದಲಾವಣೆ ಸಮಸ್ಯೆಗಳು ಹಾಗೂ ಜನರಿಗೆ ಜೀವನ ರೂಪಿಸಲು ನೆರವು ನೀಡುವವರಿಗೆ ಸಹಾಯ ಹಸ್ತ ಚಾಚಲು ಪ್ರಾರಂಭಿಸುತ್ತಿದ್ದೇವೆ' ಎಂದು ಕಾಮತ್ ಬ್ಲಾಗ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಆದಾಯದ ಬಹುಪಾಲು ದಾನ ಮಾಡುವ ನಿರ್ಧಾರ ಮಾಡಿದ ಜಿರೋಧಾ ಸಂಸ್ಥಾಪಕ ನಿಖಿಲ್ ಕಾಮತ್!
ಕಳೆದ ಏಳು ವರ್ಷಗಳಲ್ಲಿ ರೈನ್ ಮ್ಯಾಟರ್ ಕಾರ್ಯಕ್ರಮ ಅನೇಕ ವಿಧದಲ್ಲಿ ಯಶಸ್ಸು ಸಾಧಿಸಿದೆ. ಝೆರೋಧಾ ಸಂಸ್ಥೆಯ ಯಶಸ್ಸು ರೈನ್ ಮ್ಯಾಟರ್ ಮೀಸಲು ನಿಧಿ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಭಾರತೀಯ ಸ್ಟಾರ್ಟ್ ಅಪ್ ಗಳ ಪರಿಸರ ವ್ಯವಸ್ಥೆಯ ಬೆಳವಣಿಗೆಗೂ ನೆರವು ನೀಡುತ್ತಿದೆ.
ರೈನ್ ಮ್ಯಾಟರ್ ಅತ್ಯಂತ ಮಹತ್ವದ ವಿಚಾರವೆಂದರೆ ಹೂಡಿಕೆಗೆ ಅದು ಸಾಂಪ್ರದಾಯಿಕ ವಿಧಾನ ಅನುಸರಿಸುತ್ತಿಲ್ಲ. ವಿಶೇಷವೆಂದರೆ ಹೂಡಿಕೆಯ ವಿನಿಯೋಗಕ್ಕೆ ರೈನ್ ಮ್ಯಾಟರ್ ಸ್ಟಾರ್ಟ್ ಅಪ್ ಗಳಿಗೆ ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸೋದಿಲ್ಲ. ಇದನ್ನು ಪೇಶೆಂಟ್ ಕ್ಯಾಪಿಟಲ್ ಅಪ್ರೂಚ್ ಎಂದು ಕರೆಯಲಾಗುತ್ತದೆ. ಇದರಿಂದ ಸ್ಟಾರ್ಟ್ ಅಪ್ ಗಳಿಗೆ ಪ್ರಾರಂಭಿಕ ಹಂತದಲ್ಲಿ ಯಾವುದೇ ಒತ್ತಡಗಳಿಲ್ಲದೆ ಸುಸ್ಥಿರ ಹಾಗೂ ಸುಭದ್ರ ಉದ್ಯಮಗಳ ನಿರ್ಮಾಣದತ್ತ ಗಮನ ಕೇಂದ್ರೀಕರಿಸಲು ಸಾಧ್ಯವಾಗಲಿದೆ. ಭಾರತಕ್ಕೆ ಸಂಬಂಧಿಸಿದಂತೆ ಈ ಪೇಶೆಂಟ್ ಕ್ಯಾಪಿಟಲ್ ಅಪ್ರೋಚ್ ಮಹತ್ವದ ಬಗ್ಗೆ ಕಾಮತ್ ವಿವರಿಸಿದ್ದಾರೆ. ಭಾರತದಲ್ಲಿ ಸ್ಟಾರ್ಟ್ ಅಪ್ ಗಳು ಸುಭದ್ರ ಹಾಗೂ ಸುಸ್ಥಿರಗೊಳ್ಳಲು ದೀರ್ಘ ಸಮಯ ಬೇಕಾಗಿಲ್ಲ. ಆದರೆ, ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಸ್ಟಾರ್ಟ್ ಅಪ್ ಗಳು ನೆಲೆಯೂರಲು ಹೆಚ್ಚಿನ ಸಮ ಹಿಡಿಯುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನನಗಿಷ್ಟ,ಇನ್ನೊಬ್ಬರನ್ನು ತುಳಿದು ಬೆಳೆಯುವ ಮನಸ್ಥಿತಿ ಇಲ್ಲಿಲ್ಲ: ನಿಖಿಲ್ ಕಾಮತ್
ನಿತಿನ್ ಕಾಮತ್ ತಮ್ಮ ಸಹೋದರ ನಿಖಿಲ್ ಕಾಮತ್ ಜೊತೆಗೆ ಸೇರಿ 2010 ರಲ್ಲಿ ಝೆರೋಧಾ ಕಂಪನಿ ಪ್ರಾರಂಭಿಸಿದರು. ಅದರೊಂದಿಗೆ ಖಾಸಗಿ ಹೂಡಿಕೆಗಳಿಗಾಗಿ ಗೃಹಾಸ್, ಭಾರತದಲ್ಲಿ ಅಲ್ಟ್ರಾ HNI ಗಳಿಗೆ ಸಂಪತ್ತನ್ನು ನಿರ್ವಹಿಸುವ ಹೆಡ್ಜ್ ಫಂಡ್ ಟ್ರೂ ಬೀಕನ್, ಫಿನ್‌ಟೆಕ್ ಇನ್‌ಕ್ಯುಬೇಟರ್ ರೈನ್‌ಮ್ಯಾಟರ್ ಸಂಸ್ಥೆಗಳನ್ನು ಕೂಡ ಪ್ರಾರಂಭಿಸಿದ್ದಾರೆ.