ಇನ್ಮುಂದೆ LPG ಪಡೆಯಲು ಒಟಿಪಿ ಕಡ್ಡಾಯ!

Published : Oct 17, 2020, 07:30 AM IST
ಇನ್ಮುಂದೆ LPG ಪಡೆಯಲು ಒಟಿಪಿ ಕಡ್ಡಾಯ!

ಸಾರಾಂಶ

ಎಲ್ಪಿಜಿ ಪಡೆಯಲು ಒಟಿಪಿ ಕಡ್ಡಾಯ!| ಕರ್ನಾಟಕದ 6 ಸೇರಿ ದೇಶದ 100 ಸ್ಮಾರ್ಟ್‌ ನಗರಗಳಲ್ಲಿ ಜಾರಿ

ನವದೆಹಲಿ: ನವೆಂಬರ್‌ 1ರಿಂದ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ ಪಡೆಯಲು ನೀವು ನಿಮ್ಮ ಮೊಬೈಲ್‌ಗೆ ಬಂದ ಒಟಿಪಿಯನ್ನು ಡೆಲಿವರಿ ಬಾಯ್‌ಗೆ ನೀಡಬೇಕು. ನಂತರವಷ್ಟೇ ನಿಮಗೆ ಸಿಲಿಂಡರ್‌ ಸಿಗಲಿದೆ. ಹೀಗೊಂದು ಹೊಸ ವ್ಯವಸ್ಥೆಯನ್ನು ಕರ್ನಾಟಕದ 6 ಸೇರಿದಂತೆ ದೇಶದ 100 ಸ್ಮಾರ್ಟ್‌ ಸಿಟಿಗಳಲ್ಲಿ ಸರ್ಕಾರಿ ಸ್ವಾಮ್ಯದ ಎಲ್ಲಾ ಅಡುಗೆ ಅನಿಲ ಪೂರೈಕೆ ಕಂಪನಿಗಳು ಜಾರಿಗೊಳಿಸುತ್ತಿವೆ.

ಈಗಾಗಲೇ ಈ ವ್ಯವಸ್ಥೆ ಪ್ರಾಯೋಗಿಕವಾಗಿ ರಾಜಸ್ಥಾನದ ಜೈಪುರದಲ್ಲಿ ಜಾರಿಯಲ್ಲಿದೆ. ಅಲ್ಲಿ ಯಶಸ್ವಿಯಾಗಿರುವುದರಿಂದ ದೇಶದ 100 ಸ್ಮಾರ್ಟ್‌ ಸಿಟಿಗಳಲ್ಲಿ ಜಾರಿಗೆ ತರಲಾಗುತ್ತಿದೆ. ಇಲ್ಲೂ ಯಶಸ್ವಿಯಾದರೆ ಇನ್ನಿತರ ನಗರಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಇದೇ ವ್ಯವಸ್ಥೆ ಜಾರಿಗೆ ಬರಲಿದೆ. ಸದ್ಯಕ್ಕೆ 100 ಸ್ಮಾರ್ಟ್‌ ಸಿಟಿಗಳನ್ನು ಹೊರತುಪಡಿಸಿದ ಇನ್ನಿತರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಳೆಯ ವ್ಯವಸ್ಥೆಯೇ ಮುಂದುವರೆಯಲಿದೆ.

ಒಟಿಪಿ ಆಧಾರಿತ ಹೊಸ ವ್ಯವಸ್ಥೆ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ ಪಡೆಯುವುದಕ್ಕಷ್ಟೇ ಅನ್ವಯಿಸುತ್ತದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ ವಿತರಣೆಗೆ ಹಳೆಯ ವ್ಯವಸ್ಥೆಯೇ ಇರಲಿದೆ. ಹೊಸ ಡಿಎಸಿ ವ್ಯವಸ್ಥೆ ಜಾರಿಗೆ ಬಂದ ಮೇಲೆ ಸರಿಯಾದ ಮೊಬೈಲ್‌ ಸಂಖ್ಯೆಯನ್ನು ಎಲ್‌ಪಿಜಿ ಸಿಲಿಂಡರ್‌ ವಿತರಿಸುವ ಏಜೆನ್ಸಿಯಲ್ಲಿ ನೋಂದಣಿ ಮಾಡಿಕೊಂಡಿರದ ಅಥವಾ ಅಡ್ರೆಸ್‌ ಸರಿಯಾಗಿ ಇಲ್ಲದ ಗ್ರಾಹಕರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಡೆಲಿವರಿ ಬಾಯ್‌ಗಳೇ ಮೊಬೈಲ್‌ ನಂಬರ್‌ಗಳನ್ನು ಅಪ್‌ಡೇಟ್‌ ಮಾಡಿಕೊಡಲಿದ್ದಾರೆ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ ಜಾರಿ?

ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳಿ-ಧಾರವಾಡ, ತುಮಕೂರು, ದಾವಣಗೆರೆ ಸ್ಮಾರ್ಟ್‌ಸಿಟಿಗಳಾಗಿದ್ದು, ಇಲ್ಲಿ ಯೋಜನೆ ಜಾರಿಬರಲಿದೆ.

ಹೊಸ ವ್ಯವಸ್ಥೆ ಏಕೆ?

ಎಲ್‌ಪಿಜಿ ಸಿಲಿಂಡರ್‌ ಕಳವು ಹಾಗೂ ದುರ್ಬಳಕೆಯನ್ನು ತಪ್ಪಿಸಲು ಮತ್ತು ಸರಿಯಾದ ಗ್ರಾಹಕರನ್ನು ಗುರುತಿಸಿ ಸಿಲಿಂಡರ್‌ ವಿತರಿಸಲು ತೈಲ ಕಂಪನಿಗಳು ಡೆಲಿವರಿ ಅಥೆಂಟಿಕೇಶನ್‌ ಕೋಡ್‌ (ಡಿಎಸಿ) ಎಂಬ ಹೊಸ ವ್ಯವಸ್ಥೆ ಜಾರಿಗೆ ತರುತ್ತಿವೆ. ಅದರ ಭಾಗವಾಗಿ ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ಆಧಾರಿತ ಸಿಲಿಂಡರ್‌ ವಿತರಣೆ ವ್ಯವಸ್ಥೆ ಜಾರಿಗೆ ಬರುತ್ತಿದೆ.

ಹೊಸ ವ್ಯವಸ್ಥೆ ಹೇಗಿದೆ?

ನೀವು ಮೊಬೈಲ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬುಕ್‌ ಮಾಡಿದಾಗ ಒಂದು ಒಟಿಪಿ ಬರುತ್ತದೆ. ಸಿಲಿಂಡರ್‌ ವಿತರಿಸಲು ಡೆಲಿವರಿ ಬಾಯ್‌ ಬಂದಾಗ ಅದನ್ನು ಆತನಿಗೆ ಹೇಳಬೇಕು. ಆತ ಒಟಿಪಿ ಪಡೆದು ತನ್ನ ಉಪಕರಣದಲ್ಲಿ ನಮೂದಿಸಿದ ಬಳಿಕ ಸಿಲಿಂಡರ್‌ ವಿತರಿಸುತ್ತಾನೆ. ಒಟಿಪಿ ಕಳೆದುಕೊಂಡಿದ್ದರೆ ಅಥವಾ ತಪ್ಪು ಒಟಿಪಿ ನೀಡಿದರೆ ಸಿಲಿಂಡರ್‌ ಸಿಗುವುದಿಲ್ಲ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಭಾರತೀಯರ ಕ್ರೇಜ್, ದುಬೈನ ಶಾರುಖ್ ಖಾನ್ ಆಫೀಸ್ ಟವರ್ ಬರೋಬ್ಬರಿ 5000 ಕೋಟಿ ರೂ ಗೆ ಮಾರಾಟ!
ಹೊಸ ವರ್ಷದ ಆಫರ್‌ ನಲ್ಲಿ ಟಿವಿ, ಮೊಬೈಲ್ ಖರೀದಿಸಲು ಫ್ಲಾನ್ ಮಾಡಿದ್ರೆ ನಿಮಗಿದು ಶಾಕಿಂಗ್ ಸುದ್ದಿ!