
ನವದೆಹಲಿ[ಮಾ.16]: ಸರ್ಕಾರಿ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಆಗಾಗ್ಗೆ ಉರಿದು ಬೀಳುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇತ್ತೀಚೆಗಷ್ಟೇ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ಅನ್ನು ‘ಹೃದಯಹೀನ ಬ್ಯಾಂಕ್’ ಎಂದು ಕಿಡಿಕಾರಿದ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿವೆ.
ಎಸ್‌ಬಿಐ ಮುಖ್ಯಸ್ಥ ರಜನೀಶ್ ಕುಮಾರ್ ವಿರುದ್ಧ ನಿರ್ಮಲಾ ಸೀತಾರಾಮನ್ ಅವರ ಆಕ್ರೋಶದ ನುಡಿಗಳ ಬಗ್ಗೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಫೆ.27ರಂದು ಅಸ್ಸಾಂ ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚಹಾ ತೋಟದ ಕಾರ್ಮಿಕರು ತಾವು ಬ್ಯಾಂಕ್ ಖಾತೆ ತೆರೆಯಲು ಹಾಗೂ ಬ್ಯಾಂಕ್ ಸಾಲ ಪಡೆಯಲು ಎಸ್‌ಬಿಐ ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂದು ಸಚಿವೆ ನಿರ್ಮಲಾ ಅವರಲ್ಲಿ ದೂರಿದ್ದರು.
ಭಾರತದ ಆರ್ಥಿಕತೆ ಮೇಲೆ ಕೊರೋನಾ ಎಫೆಕ್ಟ್ ಏನು?
ಇದರಿಂದ ಕೋಪಾಗ್ನಿಯಂತಾದ ನಿರ್ಮಲಾ ಅವರು ಸ್ಥಳದಲ್ಲೇ ಇದ್ದ ಎಸ್‌ಬಿಐ ಮುಖ್ಯಸ್ಥ ರಜನೀಶ್ ಕುಮಾರ್ ಅವರನ್ನು ಉದ್ದೇಶಿಸಿ, ನೀವು ದೇಶದ ಅತಿದೊಡ್ಡ ಬ್ಯಾಂಕ್ ಎಂದು ಹೇಳಬೇಡಿ. ನಿಮ್ಮದು ಹೃದಯಹೀನ ಬ್ಯಾಂಕ್. ರಾಷ್ಟ್ರೀಯ ಬ್ಯಾಂಕ್ ಒಂದು ಹೀಗೆ ಕಾರ್ಯ ನಿರ್ವಹಿಸಲ್ಲ ಎಂದು ಚಾಟಿ ಬೀಸಿದ್ದಾರೆ.
ಚಹಾ ತೋಟದ ಕಾರ್ಮಿಕರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ನಿಮ್ಮನ್ನೇ ಹೊಣೆ ಮಾಡುತ್ತೇನೆ. ಇಂಥ ಆಟಗಳೆಲ್ಲಾ ನಡೆಯಲ್ಲ ಎಂದೆಲ್ಲಾ ತರಾಟೆಗೆ ತೆಗೆದುಕೊಂಡ ಧ್ವನಿಮುದ್ರಣವಿದು ಎನ್ನಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.