ಯಸ್‌ ಬ್ಯಾಂಕ್‌ ಗ್ರಾಹಕರಿಗೆ ರಿಲೀಫ್, ಇಲ್ಲಿದೆ ಗುಡ್‌ ನ್ಯೂಸ್!

By Suvarna NewsFirst Published Mar 15, 2020, 4:13 PM IST
Highlights

ಯಸ್‌ ಬ್ಯಾಂಕ್‌ ಗ್ರಾಹಕರಿಗೆ ರಿಲೀಫ್, ಇಲ್ಲಿದೆ ಗುಡ್‌ ನ್ಯೂಸ್!| 50,000 ಮಿತಿ ಹಿಂತೆಗೆತ: ಬ್ಯಾಂಕ್‌ನ ಗ್ರಾಹಕರು ನಿರಾಳ| 100ಕ್ಕಿಂತ ಹೆಚ್ಚು ಷೇರುಗಳಿದ್ದರೆ 3 ವರ್ಷ ಮಾರುವಂತಿಲ್ಲ| ಪುನಶ್ಚೇತನ ಯೋಜನೆ ಅಧಿಸೂಚನೆ ಹೊರಡಿಸಿದ ಕೇಂದ್ರ

ನವದೆಹಲಿ[ಮಾ.15]: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಸ್ವಾಮ್ಯದ ಯಸ್‌ ಬ್ಯಾಂಕ್‌ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ತಡರಾತ್ರಿ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಬ್ಯಾಂಕಿನ ಗ್ರಾಹಕರು ಮಾಸಿಕ 50 ಸಾವಿರ ರು.ಗಿಂತ ಹೆಚ್ಚು ನಗದನ್ನು ಹಿಂಪಡೆಯುವಂತಿಲ್ಲ ಎಂಬ ಮಿತಿ ಮಾ.18ರಿಂದ ರದ್ದಾಗಲಿದ್ದು, ಗ್ರಾಹಕರು ಪರಿಪೂರ್ಣವಾಗಿ ನಿರಾಳರಾಗುವಂತಾಗಿದೆ.

ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯಸ್‌ ಬ್ಯಾಂಕ್‌ ಪುನಶ್ಚೇತನ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಅಧಿಸೂಚನೆ ಹೊರಬಿದ್ದ ಮೂರು ಕಾರ್ಯನಿರ್ವಹಣಾ ದಿನಗಳಲ್ಲಿ ವಿತ್‌ ಡ್ರಾ ಮಿತಿ ಹಿಂಪಡೆಯಲಾಗುವುದು ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಶುಕ್ರವಾರ ತಡರಾತ್ರಿ ಈ ಕುರಿತಾದ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ.

ಅದರ ಪ್ರಕಾರ, ಮಾ.18ರಿಂದ ಯಸ್‌ ಬ್ಯಾಂಕ್‌ನಲ್ಲಿನ ಮಿತಿಗಳು ರದ್ದಾಗಲಿವೆ. ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ನೇತೃತ್ವದಲ್ಲಿ ಮಾಸಾಂತ್ಯಕ್ಕೆ ಹೊಸ ನಿರ್ದೇಶಕ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಈ ಮಂಡಳಿಯಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷ ಸುನಿಲ್‌ ಮೆಹ್ತಾ ಅವರು ಕಾರ್ಯನಿರ್ವಾಹಕೇತರ ಮುಖ್ಯಸ್ಥರಾಗಿರಲಿದ್ದಾರೆ. ಮಹೇಶ್‌ ಕೃಷ್ಣಮೂರ್ತಿ ಹಾಗೂ ಅತುಲ್‌ ಭೇಡ ಅವರು ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿರುತ್ತಾರೆ.

ಬ್ಯಾಂಕಿನಲ್ಲಿ ಹಣ ತೊಡಗಿರುವ ಎಸ್‌ಬಿಐ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ತನ್ನ ಷೇರನ್ನು ಶೇ.26ಕ್ಕಿಂತ ಕೆಳಕ್ಕೆ ಇಳಿಸುವಂತಿಲ್ಲ. ಇತರೆ ಹೂಡಿಕೆದಾರರು ಹಾಗೂ ಷೇರುದಾರರಿಗೂ ಮೂರು ವರ್ಷಗಳ ಲಾಕ್‌ ಇನ್‌ ಅವಧಿ ಅನ್ವಯವಾಗಲಿದ್ದು, ತಮ್ಮ ಪಾಲಿನ ಪೈಕಿ ಶೇ.75ರಷ್ಟನ್ನು ಹಿಂಪಡೆಯುವಂತಿಲ್ಲ ಎಂದು ಸೂಚಿಸಲಾಗಿದೆ. ಈ ಲಾಕ್‌ ಇನ್‌ ಅವಧಿ 100ಕ್ಕಿಂತ ಕಡಿಮೆ ಷೇರುಗಳನ್ನು ಹೊಂದಿರುವವರಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ.

ಇದರಿಂದಾಗಿ 100ಕ್ಕಿಂತ ಹೆಚ್ಚಿನ ಷೇರುಗಳನ್ನು ಯಸ್‌ ಬ್ಯಾಂಕ್‌ನಲ್ಲಿ ಹೊಂದಿರುವವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. 100ಕ್ಕಿಂತ ಮೇಲೆ ಎಷ್ಟೇ ಷೇರುಗಳಿದ್ದರೂ ಶೇ.25 ಷೇರುಗಳನ್ನು ಮಾತ್ರವೇ ಮಾರಬಹುದು. ಉಳಿಕೆ ಶೇ.75 ಷೇರುಗಳ ಮಾರಾಟಕ್ಕೆ 3 ವರ್ಷ ಅನುಮತಿ ಇರುವುದಿಲ್ಲ.

ಯಸ್‌ ಬ್ಯಾಂಕ್‌ನ ನೂತನ ನಿರ್ದೇಶಕ ಮಂಡಳಿಗೆ ಶೇ.49ರಷ್ಟುಪಾಲು ಹೊಂದಿರುವ ಎಸ್‌ಬಿಐ ಇಬ್ಬರು ನಿರ್ದೇಶಕರನ್ನು ನೇಮಕ ಮಾಡಬಹುದು. ಆರ್‌ಬಿಐ ಒಂದು ಅಥವಾ ಅಥವಾ ಅದಕ್ಕಿಂತ ಹೆಚ್ಚಿನ ಹೆಚ್ಚುವರಿ ನಿರ್ದೇಶಕರನ್ನು ನೇಮಕ ಮಾಡಬಹುದು. ಶೇ.15ಕ್ಕಿಂತ ಹೆಚ್ಚು ಷೇರು ಹೊಂದಿರುವ, ಮತದಾನ ಹಕ್ಕು ಹೊಂದಿರುವ ಖಾಸಗಿ ಹೂಡಿಕೆದಾರರು ಒಬ್ಬರು ನಿರ್ದೇಶಕರನ್ನು ನೇಮಕ ಮಾಡಬಹುದು ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಬ್ಯಾಂಕಿನಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ನೌಕರರು ಅದೇ ಸಂಬಳ ಹಾಗೂ ಸೇವಾ ಷರತ್ತುಗಳೊಂದಿಗೆ ಮುಂದುವರಿಯಲಿದ್ದಾರೆ. ಆದರೆ ಪ್ರಮುಖ ಹುದ್ದೆಗಳನ್ನು ಹೊಂದಿರುವವರ ಸೇವೆಗಳಿಗೆ ನೂತನ ನಿರ್ದೇಶಕ ಮಂಡಳಿ ಯಾವಾಗ ಬೇಕಾದರೂ ಕೊಕ್‌ ನೀಡಬಹುದಾಗಿರುತ್ತದೆ ಎಂದು ತಿಳಿಸಲಾಗಿದೆ.

click me!