ಸಿಟಿ ಬ್ಯಾಂಕ್‌ನ ಹಣ ವರ್ಗಾವಣೆ ಕೇಸಲ್ಲಿ ವಿಪ್ರೋ ನೌಕರರ ಪಾತ್ರ?

By Suvarna NewsFirst Published Feb 27, 2021, 12:10 PM IST
Highlights

ಸಿಟಿ ಬ್ಯಾಂಕ್‌ನ ಹಣ ವರ್ಗಾವಣೆ ಕೇಸಲ್ಲಿ ವಿಪ್ರೋ ನೌಕರರ ಪಾತ್ರ?| ಸಾಲ ಅನುಮೋದಿಸಿದ ಮೂವರಲ್ಲಿ ಇಬ್ಬರು ವಿಪ್ರೋ ಉದ್ಯೋಗಿಗಳು

ಬೆಂಗಳೂರು(ಫೆ.27): ಪ್ರಮುಖ ಜಾಗತಿಕ ಬ್ಯಾಂಕ್‌ಗಳ ಪೈಕಿ ಒಂದಾಗಿರುವ ಸಿಟಿ ಬ್ಯಾಂಕ್‌ ತನ್ನ ಸ್ವಯಂಕೃತ ತಪ್ಪಿನಿಂದಾಗಿ ಅಮೆರಿಕ ಮೂಲದ ರೆವ್ಲಾನ್‌ ಕಂಪನಿಗೆ 6,500 ಕೋಟಿ (900 ಮಿಲಿಯನ್‌ ಡಾಲರ್‌) ಮೊತ್ತದ ಹಣವನ್ನುವನ್ನು ವರ್ಗಾಯಿಸಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಇದರಲ್ಲಿ ವಿಪ್ರೋದ ಇಬ್ಬರು ಉದ್ಯೋಗಿಗಳು ಭಾಗಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ರೆವ್ಲಾನ್‌ ಕಂಪನಿ ಪಡೆದಿದ್ದ ಸಾಲಕ್ಕೆ ಏಜೆಂಟ್‌ ಆಗಿ ಕಾರ್ಯನಿರ್ವಹಿಸಿದ್ದ ಸಿಟಿ ಬ್ಯಾಂಕ್‌ ರೆವ್ಲಾನ್‌ ಕಂಪನಿಯ ಸಾಲದಾತರಿಗೆ 580 ಕೋಟಿ ರು. ಹಣವನ್ನು ವರ್ಗಾಯಿಸಬೇಕಿತ್ತು. ಸಾಮಾನ್ಯವಾಗಿ ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಸಿಟಿ ಬ್ಯಾಂಕ್‌ ಮೂರು ಹಂತದ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಹೋಣೆಯನ್ನು ಮೇಕರ್‌ (ಸಾಲದ ಪ್ರಸ್ತಾವನೆ ಸಲ್ಲಿಸುವವ), ಚೆಕರ್‌ (ತಪಾಸಣೆಗಾರ) ಹಾಗೂ ಅಪ್ರೂವರ್‌ (ಅನುಮೋದನೆ ನೀಡುವವ)ಎಂಬ ಮೂವರು ವ್ಯಕ್ತಿಗಳಿಗೆ ಸಾಲದ ನಿರ್ವಹಣೆ ಜವಾಬ್ದಾರಿ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ಮೂವರಲ್ಲಿ ಇಬ್ಬರು ವಿಪ್ರೋ ಟೆಕ್ನಾಲೊಜಿಸ್‌ನ ಉದ್ಯೋಗಿಗಳಾಗಿದ್ದಾರೆ.

ಆಗಿದ್ದೇನು?:

ವಿಪ್ರೋ ಉದ್ಯೋಗಿ ಸಾಲದ ಪ್ರಸ್ತಾವನೆ ಇಡುವ ಸಂದರ್ಭದಲ್ಲಿ 6,500 ಕೋಟಿ ರು. ಅನ್ನು ತಪ್ಪಾಗಿ ನಮೂದಿಸಿದ್ದರು. ಬಳಿಕ ಈ ಪ್ರಸ್ತಾವನೆಯನ್ನು ಇನ್ನೊಬ್ಬ ವಿಪ್ರೋ ಉದ್ಯೋಗಿ ಪರಿಶೀಲಿಸಿ ಅದನ್ನು ಅನುಮೋದನೆಗಾಗಿ ಸಿಟಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಿಗೆ ಕಳುಹಿಸಿಕೊಟ್ಟಿದ್ದರು. ಆದರೆ, ಅಂತಿಮ ಅನುಮೋದನೆ ನೀಡುವ ಅಧಿಕಾರ ಹೊಂದಿರುವ ಸಿಟಿ ಮ್ಯಾನೇಜರ್‌ ಕೂಡ ಸಾಲದ ಮೊತ್ತವನ್ನು ಮರು ಪರಿಶೀಲನೆ ಮಾಡದೇ ಹಣ ವರ್ಗಾವಣೆ ಮಾಡಿದ್ದರು. ಹೀಗಾಗಿ ಹಣದ ವರ್ಗಾವಣೆಯಲ್ಲಿ ಆಗಿರುವ ದೋಷಕ್ಕೆ ವಿಪ್ರೋದ ಸಿಬ್ಬಂದಿ ಹೊಣೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಬಗ್ಗೆ ವಿಪ್ರೋ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

click me!