ದೀಪಾವಳಿಗೆ ದುಬಾರಿ ಗಿಫ್ಟ್ ಪಡೆದು ಸಂಭ್ರಮಿಸುತ್ತಿದ್ದೀರಾ? ಅದಕ್ಕೂ ಟ್ಯಾಕ್ಸ್ ಕಟ್ಟಬೇಕು ಗೊತ್ತಾ?

By Suvarna NewsFirst Published Oct 20, 2022, 1:17 PM IST
Highlights

ದೀಪಾವಳಿ ಅಂದ್ರೆ ಸಿಹಿ ತಿನಿಸು, ಉಡುಗೊರೆಗಳನ್ನು ಹಂಚಿಕೊಂಡು ಖುಷಿಯ ಹೆಚ್ಚಿಸಿಕೊಳ್ಳುವ ಹಬ್ಬ.ಆದ್ರೆ ದೀಪಾವಳಿಗೆ ಸ್ನೇಹಿತರು, ಬಂಧುಗಳು ನೀಡುವ ದುಬಾರಿ ಉಡುಗೊರೆಗಳ ಮೇಲೆ ಕೂಡ ತೆರಿಗೆ ವಿಧಿಸಲಾಗುತ್ತದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಹಾಗಾದ್ರೆ ಎಷ್ಟು ಮೌಲ್ಯದ ಉಡುಗೊರೆ ಸ್ವೀಕರಿಸಿದ್ರೆ ತೆರಿಗೆ ಬೀಳುತ್ತೆ? ಇಲ್ಲಿದೆ ಮಾಹಿತಿ. 
 

Business Desk:ಬೆಳಕಿನ ಹಬ್ಬ ದೀಪಾವಳಿಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿವೆ. ಹಬ್ಬದ ಸಂಭ್ರಮಕ್ಕೆ ಸ್ನೇಹಿತರು, ಬಂಧುಗಳು ಹಾಗೂ ನೆರೆಹೊರೆಯವರು ಉಡುಗೊರೆಗಳು ಹಾಗೂ ಸ್ವೀಟ್ಸ್ ಹಂಚಿಕೊಂಡು ಸಂಭ್ರಮಿಸೋದು ಸಾಮಾನ್ಯ. ಇನ್ನು ಉದ್ಯೋಗಿಗಳಿಗೆ ಅವರು ಕೆಲಸ ಮಾಡುವ ಸಂಸ್ಥೆ ಕಡೆಯಿಂದ ಹಬ್ಬದ ಉಡುಗೊರೆ ಬಂದೇ ಬರುತ್ತದೆ. ಉಡುಗೊರೆಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸೋದಂತೂ ನಿಜ. ಆದರೆ, ದುಬಾರಿ ಉಡುಗೊರೆಗಳು ನಿಮ್ಮ ಜೇಬಿಗೆ ಒಂದಿಷ್ಟು ಹೊರೆ ಕೂಡ ಆಗಬಲ್ಲವು. ಅದು ಹೇಗೆ ಅಂತೀರಾ? ಹಬ್ಬಕ್ಕೆ ನೀಡುವ ಉಡುಗೊರೆಗಳಿಗೆ ತೆರಿಗೆಯಿಲ್ಲ ಎಂದು ಭಾವಿಸಬೇಡಿ. ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮೊತ್ತದ ಉಡುಗೊರೆಗಳಿಗೆ ನೀವು ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾಗಿ ದೀಪಾವಳಿಗೆ ದುಬಾರಿ ಗಿಫ್ಟ್ ಸ್ವೀಕರಿಸುವ ಮುನ್ನ ಆದಾಯ ತೆರಿಗೆ ನಿಯಮಗಳ ಬಗ್ಗೆ ತಿಳಿದಿರೋದು ಅಗತ್ಯ. ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ಒಂದು ಆರ್ಥಿಕ ವರ್ಷದಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮೊತ್ತದ ಗಿಫ್ಟ್ ಗಳನ್ನು ಸ್ವೀಕರಿಸಿದ್ರೆ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. ನೀವು ಸ್ನೇಹಿತರು ಅಥವಾ ಸಂಬಂಧಿಗಳಿಂದ ಸ್ವೀಕರಿಸಿದ ಗಿಫ್ಟ್ ಗಳ ಮೊತ್ತ  50,000ರೂ. ಮೀರಿದ್ರೆ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. 
ಒಂದು ಆರ್ಥಿಕ ವರ್ಷದಲ್ಲಿ ವ್ಯಕ್ತಿಯೊಬ್ಬ ಸ್ನೇಹಿತರು ಅಥವಾ ಬಂಧುಗಳಿಂದ ಸ್ವೀಕರಿಸಿದ ಉಡುಗೊರೆ ಮೊತ್ತ  50,000ರೂ. ದಾಟಿದ್ರೆ ಆಗ ಆತ ಗಿಫ್ಟ್ ನ ತೆರಿಗೆ ಮೌಲ್ಯವನ್ನು ಆದಾಯ ತೆರಿಗೆ ರಿಟರ್ನ್ ನಲ್ಲಿ ನಮೂದಿಸಬೇಕು. ಉದಾಹರಣೆಗೆ ನಿಮಗೆ ಎ ಮತ್ತು ಬಿ ಎಂಬ ಇಬ್ಬರು ಸ್ನೇಹಿತರಿದ್ದಾರೆ ಎಂದು ಭಾವಿಸೋಣ. ಎ ನಿಮಗೆ ದೀಪಾವಳಿಗೆ 30,000ರೂ.ಮೌಲ್ಯದ ಗಿಫ್ಟ್ ನೀಡಿದ್ದಾರೆ. ಹಾಗೆಯೇ ಬಿ 25,000ರೂ. ಮೌಲ್ಯದ ಗಿಫ್ಟ್ ನೀಡಿದ್ದಾರೆ ಎಂದು ಭಾವಿಸೋಣ. ಇದು 50,000ರೂ. ಮಿತಿ ಮೀರಿದೆ. ಹೀಗಾಗಿ ಸಂಪೂರ್ಣ 55,000 ರೂ.ಗೆ ನೀವು ನಿಮ್ಮ ಕೈಯಿಂದ ತೆರಿಗೆ ಪಾವತಿಸಬೇಕಾಗುತ್ತದೆ. 

ಉದ್ಯೋಗದಾತರಿಂದ ಪಡೆದ ಗಿಫ್ಟ್ ಗೂ ತೆರಿಗೆ
ದೀಪಾವಳಿ (Deepavali) ಪ್ರಮುಖ ಹಬ್ಬವಾಗಿರುವ ಕಾರಣ ಬಹುತೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಗಿಫ್ಟ್ (Gift) ನೀಡೋದು ಸಾಮಾನ್ಯ. ಕೆಲವೊಮ್ಮೆ ದೀಪಾವಳಿ ಬೋನಸ್ (Bonus) ಹೊರತಾಗಿಯೂ ಗಿಫ್ಟ್ ನೀಡಲಾಗುತ್ತದೆ. ಆದಾಯ ತೆರಿಗೆ ಕಾನೂನಿನ (Income Tax law) ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಉದ್ಯೋಗದಾತ ವ್ಯಕ್ತಿ ಅಥವಾ ಸಂಸ್ಥೆಯಿಂದ ಉದ್ಯೋಗಿ ಪಡೆದ ಉಡುಗೊರೆ (Gift) ಮೊತ್ತ 5,000 ರೂ. ಮೀರದಿದ್ರೆ ಆಗ ಅದಕ್ಕೆ ಯಾವುದೇ ತೆರಿಗೆ (Tax) ವಿಧಿಸೋದಿಲ್ಲ.ಆದ್ರೆ ಉದ್ಯೋಗದಾತರಿಂದ ಪಡೆದ ಗಿಫ್ಟ್ ಮೌಲ್ಯ 5,000 ರೂ. ಮೀರಿದ್ರೆ ಆಗ ಆದಾಯ ಹಾಗೂ ವೇತನ ಶೀರ್ಷಿಕೆಯಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಗಿಫ್ಟ್ ಮೌಲ್ಯದಿಂದ 5,000 ರೂ. ಕಳೆದು ಅದಕ್ಕೆ ಬೋನಸ್ ಹಣವನ್ನು ಕೂಡಿಸಿ ಬಂದ ಮೊತ್ತಕ್ಕೆ ತೆರಿಗೆ ನಿಗದಿಪಡಿಸಲಾಗುತ್ತದೆ. ಬೋನಸ್ ಕೂಡ ತೆರಿಗೆಗೊಳಪಡುತ್ತದೆ.

ದುಬೈನ ದ್ವೀಪದಲ್ಲಿ 1053 ಕೋಟಿಯ ಮನೆ ಖರೀದಿಸಿದ ಮುಕೇಶ್‌ ಅಂಬಾನಿ

ಬಂಧುಗಳಿಂದ ಸ್ವೀಕರಿಸಿದ ಉಡುಗೊರೆಗಳು
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 56 (2) ಅನ್ವಯ ಸಂದರ್ಭ ಅಥವಾ ಮೊತ್ತದ ಹೊರತಾಗಿಯೂ ಕೆಲವು ಸಂಬಂಧಿಗಳಿಂದ ಪಡೆದ ಉಡುಗೊರೆಗಳಿಗೆ ತೆರಿಗೆ ಅನ್ವಯಿಸೋದಿಲ್ಲ. ಪತಿ ಅಥವಾ ಪತ್ನಿ, ಸಹೋದರ ಅಥವಾ ಸಹೋದರಿ ಹಾಗೂ ಅವರ ಸಂಗಾತಿಗಳು, ಪತಿ/ಪತ್ನಿ ಸಹೋದರ ಅಥವಾ ಸಹೋದರಿ ಹಾಗೂ ಅವರ ಸಂಗಾತಿಗಳು,  ಹೆತ್ತವರು, ಹೆತ್ತವರ ಸಹೋದರ ಅಥವಾ ಸಹೋದರಿ ಈ ಸಂಬಂಧಗಳಿಂದ ಪಡೆದ ಉಡುಗೊರೆಗಳಿಗೆ ಯಾವುದೇ ತೆರಿಗೆ ಇಲ್ಲ. ಇನ್ನು ಮದುವೆ ಸಂದರ್ಭದಲ್ಲಿ ಸ್ವೀರಿಸಿದ ಹಣದ ರೂಪದ ಉಡುಗೊರೆಗಳಿಗೆ ಯಾವುದೇ ತೆರಿಗೆ ಇರೋದಿಲ್ಲ. ಆದರೆ, ದೀಪಾವಳಿ ಸೇರಿದಂತೆ ಅನ್ಯ ಸಂದರ್ಭಗಳಲ್ಲಿ ಹಣದ ರೂಪದಲ್ಲಿ ಪಡೆದ ಉಡುಗೊರೆಗಳಿಗೆ ತೆರಿಗೆ ಪಾವತಿಸಬೇಕಾಗುತ್ತದೆ. 

ಈಗ ಪ್ರಯಾಣಿಸಿ, ನಂತರ ಪಾವತಿಸಿ;ಟಿಕೆಟ್ ಗೆ ಹಣ ನೀಡದೆ ರೈಲು ಪ್ರಯಾಣ ಸಾಧ್ಯ!

 

click me!